ಭಾನುವಾರ, ಡಿಸೆಂಬರ್ 8, 2019
24 °C

ಗೋಪಾಲನ ಹಳ್ಳಿ ಬರಿದಾಗುತ್ತಿಲ್ಲ

Published:
Updated:
ಗೋಪಾಲನ ಹಳ್ಳಿ ಬರಿದಾಗುತ್ತಿಲ್ಲ

`ಐದೂವರೆ ಎಕರೆ ಹೊಲದಲ್ಲಿ ಎದೆಯುದ್ದ ಹಾರಕ ಬೆಳೆದು ನಿಂತಾಗ, ಮನದಲ್ಲೊಂದು ಆತಂಕ. ಬೆಳಗಾದರೆ ಕೊಯ್ಲು ಮಾಡೋದು ಹೇಗಪ್ಪಾ? ಕಣ ಮಾಡೋದು ಹೆಂಗೆ ? ಎಲ್ಲಿ ಬಡಿಯೋದು, ತೂರೋಕೆ, ಹಸನು ಮಾಡೋಕೆ....ಏನ್ಮಾಡ್ಲಿ, ಫುಲ್ ಟೆನ್ಷನ್ ಆಗ್ಬಿಟ್ಟಿತ್ತು. ಆದರೆ ನಮ್ಮೂರು ಹುಡುಗರೆಲ್ಲ ಒಟ್ಟಾಗಿ ಸೇರ‌್ಕೊಂಡ್ರು ನೋಡಿ, ಎರಡು ದಿನಗಳಲ್ಲಿ ಚಕ ಚಕ ಅಂತ ಕೆಲಸ ಮುಗಿಸಿಬಿಟ್ಟರು, ನಮ್ ಕೆಲಸ ಹಗೂರ ಮಾಡಿಬಿಟ್ರು..~ ನಮ್ಮೂರಿನಲ್ಲಿ ಇಂಥ ಕೆಲ್ಸ ಅಂಥ ಬೊಟ್ಟು ಮಾಡಿದರೆ, ಅಲ್ಲಿ ಈ ಹುಡುಗರ ಶ್ರಮವಿರುತ್ತದೆ. ಕೆರೆ ಏರಿ ಕಟ್ಟುವಾಗ, ಹೂಳೆತ್ತಿದಾಗ, ಕೆರೆ ಅಂಗಳದಂಚಿನಲ್ಲಿ ಗಿಡ ನೆಡುವಾಗ, ಕೂಲಿ ಕಾರ್ಮಿಕರ ಕೊರತೆಯಾದಾಗ... ಹೆಗಲಿಗೆ ಹೆಗಲು ಕೊಟ್ಟು ಸಂಭ್ರಮದಿಂದ ಕೆಲಸ ಮಾಡಿದ್ದಾರೆ. ಊರಿನ ಕೆಲಸ ಅಂದ್ರೆ ತಮ್ ಕೆಲ್ಸಾ ಅಂತ ಪ್ರೀತಿಯಿಂದ ಮಾಡ್ತಾರೆ!ಹೀಗೆ ದೃಷ್ಟಾಂತಗಳನ್ನು ಪೋಣಿಸುತ್ತಲೇ ತಮ್ಮೂರಿನ ಯುವಕರ ಒಗ್ಗಟ್ಟಿನ ಕಥೆಗಳನ್ನು ಹೆಮ್ಮೆಯಿಂದ ಬಿಚ್ಚಿಡುತ್ತಾರೆ ಗೋಪಾಲಹಳ್ಳಿಯ ರಘು ಮೇಷ್ಟ್ರು. ಅವರು ಹೇಳುವ ಒಂದೊಂದು ಘಟನೆಯಲ್ಲಿ ಗ್ರಾಮದ ಯುವಕರ ಒಗ್ಗಟ್ಟಿನ ಪ್ರತಿಬಿಂಬವಿರುತ್ತದೆ. ಈ `ಯುವಕರ ಒಗ್ಗಟ್ಟು~, ಹಳ್ಳಿಗಳೇ ಬರಿದಾಗುತ್ತಿವೆ ಎಂಬ ಸೋಲಿನ ಕತ್ತಲಲ್ಲಿ-ಗೆಲುವಿನ ಸಣ್ಣ ಹಣತೆ ಹಚ್ಚಿಟ್ಟಂತಾಗಿದೆ!ಗೋಪಾಲನಹಳ್ಳಿ ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ. 110 ಕುಟುಂಬಗಳು, 430 ಜನಸಂಖ್ಯೆ. ಕೃಷಿ ಮೂಲ ಕಸುಬು. ಬಹುತೇಕ ಕುಟುಂಬಗಳಿಗೆ ಜಮೀನಿದೆ. ಗ್ರಾಮದಲ್ಲಿ 30-40 ಮಂದಿ ಯುವಕರಿದ್ದಾರೆ. ಒಂದಿಬ್ಬರು ಪದವೀಧರರು.ಕೆಲವರು ವೃತ್ತಿಪರ ಶಿಕ್ಷಣ ಕಲಿತಿದ್ದಾರೆ. ಪಿಯುಸಿ-ಎಸ್ಸೆಸ್ಸೆಲ್ಸಿಗೆ ಓದು ನಿಲ್ಲಿಸಿದವರೂ ಇದ್ದಾರೆ. ಎಲ್ಲ ಯುವಕರು ಬೇಸಾಯ ಮಾಡ್ತಾರೆ. ಜಮೀನಿನಲ್ಲಿ ಬೆವರು ಹರಿಸಿ ದುಡಿಯುತ್ತಾರೆ. ಕೃಷಿ ಕೆಲಸವೆಂದರೆ `ಮುಯ್ಯೊಳಾಗ್ತಾರೆ~. ಊರಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ತಗ್ಗಿಸಿದ್ದಾರೆ.ಇದು ದಿಢೀರ್ ಬದಲಾವಣೆಯಲ್ಲ..!


2008ರಲ್ಲಿ ಸಮುದಾಯಾಧಾರಿತ ಕೆರೆ ನಿರ್ವಹಣೆ ಯೋಜನೆ ಜಾರಿಗೆ ಬಂತು. ಕೆರೆ ಬಳಕೆದಾರರ ಸಂಘದ ಸ್ಥಾಪನೆಯಾಯಿತು. ಸಮುದಾಯದ ಸಹಭಾಗಿತ್ವದಡಿ ನಡೆದ ಕೆರೆ ಪುನರುಜ್ಜೀವನ ಕಾರ್ಯಕ್ರಮ, ಯುವಕರ ನಡುವೆ ಬಾಂಧವ್ಯ ಬೆಸೆಯಿತು. ವಾರಕ್ಕೊಮ್ಮೆ ಶ್ರಮದಾನ. ಹದಿನೈದು ದಿನಗಳಿಗೊಮ್ಮೆ ಸಭೆ.

 

ಅಭಿವೃದ್ಧಿಯ ಆಗು-ಹೋಗುಗಳ ಚರ್ಚೆ ನಡೆಯುತ್ತಲೇ ಕೆರೆಗೆ ಪುನರ್ಜನ್ಮ ನೀಡಿದರು. ಹಳ್ಳಕ್ಕೆ ಸೇತುವೆ ಕಟ್ಟಿಸಿದರು. ಯುವ ಸಂಘಟನೆ ಬಲಗೊಂಡಿತು. ಗ್ರಾಮದಲ್ಲಿ ರಚನಾತ್ಮಕ ಕಾರ್ಯಗಳು ರೂಪುಗೊಂಡವು. ಈ ಯೋಜನೆಯ ನಂತರ ಹೊಸ ಹೊಸ ಆಲೋಚನೆಗಳು, ಸಂಘಟನಾತ್ಮಕ ಕೆಲಸಗಳು ಟಿಸಿಲೊಡೆದವು. ಎರಡೂವರೆ ವರ್ಷಗಳಾಗುವಷ್ಟರಲ್ಲಿ ಇಲ್ಲಿನ ಕೆರೆ ಅಭಿವೃದ್ಧಿ ಕಾರ್ಯ ರಾಜ್ಯಾದ್ಯಂತ ಸುದ್ದಿಯಾಯಿತು.ಹಳ್ಳಿಯಲ್ಲಾದ ಈ ಬದಲಾವಣೆಗಳು ಪಟ್ಟಣದಲ್ಲಿ ನೌಕರಿಯಲ್ಲಿದ್ದ ಗ್ರಾಮದ ಯುವಕರನ್ನು ಆಕರ್ಷಿಸಿತು. ಊರು ಬಿಟ್ಟು ಹೊರಡುವ ಯುವಕರ ಮನಸ್ಸನ್ನೂ ಪರಿವರ್ತಿಸಿತು. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹರ್ಷ, ಮಂಜುನಾಥ, ಪ್ರಕಾಶ ಹಳ್ಳಿಗೆ ಮರಳಿದರು. ಈಗ ಸುಮಾರು 20 ಯುವಕರು ಒಂದು ತಂಡವಾಗಿ ಊರಿನಲ್ಲಿ ದುಡಿಯುತ್ತಿದ್ದಾರೆ.ಸಹಕಾರ ತತ್ವ- ಒಗ್ಗಟ್ಟಿನ ಗುಟ್ಟು

`ಸಂಘಟನೆ ಅಂದ್ರೆ ಸುಮ್ನೆ ಕಟ್ಟೆ ಮೇಲೆ ಕುಂತು ಕ್ರಾಂತಿಕಾರಿ ಭಾಷಣ ಕೊಚ್ಚುವುದಲ್ಲ. ಶ್ರಮವನ್ನು ಹಂಚಿಕೊಳ್ಳುವುದು. ಒಬ್ಬರ ಕೆಲಸಕ್ಕೆ ಮತ್ತೊಬ್ಬರು ನೆರವಾಗುವುದು..~ ಎಂದು ಹೇಳುವುದಷ್ಟೇ ಅಲ್ಲದೆ ಮಾಡಿಯೂ ತೋರಿಸಿದವರು ಈ ಊರಿನ ಯುವಕರು.  ಒಬ್ಬ ಆರು ಗಂಟೆ ಮಾಡುವ ಕೆಲಸವನ್ನು ಆರು ಮಂದಿ ಹಂಚಿಕೊಂಡು ಮಾಡುತ್ತಾರೆ. `ಗುಂಪು ಗುಂಪಾಗಿ ಕೆಲಸ ಮಾಡೋದ್ರಿಂದ ಹಣ, ಶ್ರಮ, ಸಮಯ ಉಳಿಯುತ್ತದೆ~ ಎನ್ನುವ ಮಂಜುನಾಥ್, ಅಂಥದ್ದೊಂದು ಅನುಭವನ್ನು ಹೀಗೆ ಹಂಚಿಕೊಳ್ಳುತ್ತಾರೆ.`ಒಮ್ಮೆ ನಮ್ಮ ತೋಟದಲ್ಲಿ ನೂರೈವತ್ತು ಅಡಿಕೆ ಗಿಡಗಳನ್ನು ನೆಡಬೇಕಿತ್ತು. ಒಂದು ಗುಂಡಿ ತೆಗೆಯಲು 25 ರಿಂದ 28 ರೂ. ಕೂಲಿ ಕೊಡಬೇಕು. ಹಣ ಕೊಟ್ಟರೂ ಆಳು ಸಿಗೋದಿಲ್ಲ. ಕೊನೆಗೆ ಆರು ಮಂದಿ ಗೆಳೆಯರು ಸೇರಿ ಮೂರ‌್ನಾಲ್ಕು ದಿನಗಳಲ್ಲಿ ನಾವೇ ಗುಂಡಿ ತೆಗೆದು ಅಡಿಕೆ ಸಸಿ ನೆಟ್ಟೆವು. ಹೆಚ್ಚೂ ಕಡಿಮೆ 10 ಸಾವಿರ ರೂ. ಉಳಿಯಿತು. ಮುಂದೆ ನಾನು ಅವರ ತೋಟಗಳಲ್ಲಿ ಬಾಳೆ, ತರಕಾರಿ ಬೆಳೆ ಮಾಡಿಕೊಟ್ಟೆ~ಮತ್ತೊಂದು ಘಟನೆಯನ್ನು ರಘು ನೆನಪಿಸಿಕೊಳ್ಳುತ್ತಾರೆ; `ಶಕುಂತಲಮ್ಮ ಅವರ ತೋಟದಲ್ಲಿ ಕಾಯಿ ಕೀಳಿಸಿದ್ದರು. ಅದನ್ನು ಮನೆಗೆ ಸಾಗಿಸುವುದಕ್ಕೆ ಆಳು ಸಿಗುತ್ತಿಲ್ಲ. ಅವರಿಗೆ ಯಜಮಾನ್ರಿಲ್ಲ. ಮಗ ಚಿಕ್ಕವನು. ಈ ಕಷ್ಟವನ್ನು ನಮ್ಮಂದಿಗೆ ಹೇಳಿಕೊಂಡರು.ನಮ್ಮ ಹುಡುಗರು ಎರಡನೇ ಮಾತು ಆಡದೇ ತೋಟದಿಂದ ಕಾಯಿಗಳನ್ನು ಎರಡು ಗಂಟೆಗಳಲ್ಲಿ ಅವರ ಮನೆಗೆ ಸಾಗಿಸಿದರು. ಈ ಕೆಲಸಕ್ಕೆ ಹುಡುಗರು ನಿರೀಕ್ಷಿಸ್ದಿದು ಏನ್ ಗೊತ್ತಾ?  ಮುಂದೆ ಹಿಂಗೆ ಕೆಲಸ ಮಾಡುವಾಗ ಒಂದಿಷ್ಟು ತಿನ್ನೋದಕ್ಕೆ ಏನಾದ್ರೂ ಮಾಡ್ಕೊಟ್ರೆ ಅಷ್ಟು ಸಾಕು ಅಂದ್ರು~. ಇಂಥ ಹತ್ತಾರು ಘಟನೆಗಳು ಊರಿನ ಯುವಕರ ಒಗ್ಗಟ್ಟನ್ನು ವಿಸ್ತರಿಸುವ ಜೊತೆಗೆ ಗ್ರಾಮದಲ್ಲಿ ಹೊಸ ವಾತಾವರಣವನ್ನು ನಿರ್ಮಿಸುತ್ತಿವೆ.ಹೀಗೆ ಒಗ್ಗಟ್ಟಾಗಿ ಕೆಲಸ ಮಾಡುವುದರಲ್ಲಿ ಊರಿನಲ್ಲಿ ಬೇಧ ಭಾವ ಇಲ್ಲ. ಸಾವಿರಾರು ರೂಪಾಯಿ ಸಂಬಳ ಪಡೆಯುವ ಉಪನ್ಯಾಸಕ ರಘು ಅವರಿಂದ ಆರಂಭಿಸಿ ಜನರೇ ಆರಿಸಿದ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜುವರೆಗೂ ಊರಿನ ಕೆಲಸ ಮಾಡ್ತಾರೆ.ಅಂಥ ವ್ಯಕ್ತಿಯನ್ನೇ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ ಕೀರ್ತಿಯೂ ಈ ಊರಿನ ಯುವಕರಿಗೇ ಸಲ್ಲುತ್ತದೆ. ಊರಿನಲ್ಲಿನ ಒಗ್ಗಟ್ಟಿನ ಮಂತ್ರ ಶುರುವಾಗಿದ್ದು ಕೂಡ  ಚುನಾವಣೆಯ  ಸಂದರ್ಭದಲ್ಲೆೀ ಎನ್ನುತ್ತಾರೆ ಊರಿನ ಗ್ರಾಮಸ್ತರು.ಕೃಷಿಯಲ್ಲೆೀ ಖುಷಿ ಕಂಡವರು

ಪಟ್ಟಣ ಬಿಟ್ಟು ಊರಿಗೆ ಬಂದು ಒಕ್ಕಲು ಬದುಕು ಮಾಡುತ್ತಿರುವ ಯುವಕರಿಗೆ `ಇದೊಂದು ಖುಷಿಕೊಡುವ ಉದ್ಯೋಗ~ ಎನ್ನಿಸಿದೆಯಂತೆ. ಬಿ.ಎ. ಪದವೀಧರ ಮಂಜುನಾಥ್ ಬೆಂಗಳೂರಿನ ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಷಿಯರ್ ಆಗಿದ್ದು, ನಂತರ ಮೆಡಿಕಲ್ ರೆಪ್ರೆಸೆಂಟೆಟಿವ್ ಆಗಿ, ಉದ್ಯೋಗ ಬದಲಾಯಿಸುತ್ತಾ, ನಾಲ್ಕಂಕೆ ಸಂಬಳ, ಬಡ್ತಿ ಎಲ್ಲ ಪಡೆದರು ಆದರೆ ಒಂದು ದಿನ  ಗಡಿಯಾರ ನೋಡ್ಕೊಂಡೇ ತಿಂಡಿ- ಊಟ ಮಾಡುತ್ತಾ ಬದುಕುವ ಧಾವಂತದ ಜೀವನವೇ ಬೇಡ ಎಂದು ಊರಿಗೆ ವಾಪಸಾಗಿ ಕೃಷಿ ಮಾಡುತ್ತಿದ್ದಾರೆ.  ಆ ಉದ್ಯೋಗಕ್ಕೆ ಹೋಲಿಸಿದರೆ, ಕೃಷಿ ಕೆಲಸ ನಿಜಕ್ಕೂ ಖುಷಿ ಕೊಡುತ್ತದೆ~ ಎನ್ನುತ್ತಾರೆ ಮಂಜು.ಊರಿಗೆ ಬಂದು ಜಮೀನಿಗೆ ಕಾಲಿಟ್ಟ ಮಂಜುನಾಥ್ ಅವರಿಗೂ ಅಕಾಲಿಕ ಮಳೆ, ಬೆಳೆಗೆ ರೋಗ-ರುಜಿನ. ಕೂಲಿ ಕಾರ್ಮಿಕರ ಕೊರತೆ, ಮಾರ್ಕೆಟ್ ಅವ್ಯವಸ್ಥೆಯಂತಹ ಕೃಷಿ ಬದುಕಿನ ಸಮಸ್ಯೆಗಳು ರೆಡ್ ಕಾರ್ಪೆಟ್ ತೋರಿಸಿ ಬೆದರಿಸಿವೆ. `ಸ್ನೇಹಿತರ ಸಹಕಾರದಿಂದ ಅದೃಷ್ಟವಶಾತ್ ನಾಲ್ಕು ವರ್ಷಗಳಿಂದ ಅಂಥ ಸಮಸ್ಯೆಗಳು ಉದ್ಭವವಾಗಿಲ್ಲ~ ಕೂಡಿ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸಿಲ್ಲ  ಎಂಬುದು ಅವರ ಅನಿಸಿಕೆ.ಮಂಜುವಿಗಿಂತ ಮೊದಲೇ ಹಳ್ಳಿಗೆ ವಾಪಾಸಾದವರು ಹರ್ಷ. ಎಸ್ಸೆಸ್ಸೆಲ್ಸಿ ಓದಿ ಊರು ಬಿಟ್ಟು, ಎಸ್‌ಟಿಡಿ ಬೂತ್ ಇಟ್ಟರು. ಪೇಂಟಿಂಗ್ ಕಾಂಟ್ರಾಕ್ಟ್, ಎಲೆಕ್ಟ್ರಿಕ್ ವರ್ಕ್ ಮಾಡಿದರು. ಹೀಗೆ ಎಂಟು ವರ್ಷ ಪಟ್ಟಣದಲ್ಲಿ ಅಲೆದಾಡಿ ಸಾಕಾಗಿ ನಂತರ ಕೃಷಿಗೆ ಮರಳಿದವರು.ಊರಿಗೆ ಬಂದಾಗ ಮೊದಲು ಹಾಲು ಕರೆಯೋಕೆ, ಉಳುಮೆ ಮಾಡುವುದಕ್ಕೆ ಬರುತ್ತಿರಲಿಲ್ಲ. ಹುಡುಗರೆಲ್ಲ ಅವನನ್ನು ಹಾಸ್ಯ ಮಾಡುತ್ತಿದ್ದರು.  `ಹರ್ಷ ಇವತ್ತು ನಮಗೇ ಕೃಷಿ ಪಾಠ ಹೇಳ್ಕೊಡ್ತಾನೆ. ಉತ್ತಮ ತರಕಾರಿ ಬೆಳೆಗಾರನಾಗಿದ್ದಾನೆ. ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದಾನೆ~ ಎಂದು ಹರ್ಷನ ಯಶೋಗಾಥೆಯನ್ನು ಆತನ ಗೆಳೆಯರು ಹೆಮ್ಮೆಯಿಂದ ಕೊಂಡಾಡುತ್ತಾರೆ.ಊರ ಮುಂದೆ ಸಂತೆ

ಯುವಕರು ಊರಲ್ಲೊಂದು ಸಂತೆ ನಡೆಸುತ್ತಾರೆ. ಪ್ರತಿ ಭಾನುವಾರ ಬೆಳಿಗ್ಗೆ 7.30ರಿಂದ 9.30ವರೆಗೆ ಸಂತೆ ಸಮಯ. ಪ್ರತಿವಾರ ಇಬ್ಬರು ಯುವಕರಿಗೆ ಸಂತೆಯ ಜವಾಬ್ದಾರಿ. `ಈ ಸಂತೆ ಕೇವಲ ಲಾಭಕ್ಕಷ್ಟೇ ಅಲ್ಲ, ಯುವಕರಿಗೆ ಉದ್ಯೋಗ ನೀಡುವುದಕ್ಕಾಗಿ, ಊರಿನ ಸಮಯ ಉಳಿಸುವುದಕ್ಕಾಗಿ, ವ್ಯರ್ಥವಾಗಿ ಪಟ್ಟಣ ಸುತ್ತುವವರಿಗೆ ಕಡಿವಾಣ ಹಾಕುವುದಕ್ಕಾಗಿ~ - ರಘು ಸಂತೆಯ ಪರಿಕಲ್ಪನೆಯನ್ನು ವಿವರಿಸುತ್ತಾರೆ.ಸಂತೆಯಲ್ಲಿ ಊರಿನ ಬೆಳೆಗಾರರಿಗೆ ಆದ್ಯತೆ. ಇಲ್ಲಿ ಬೆಳೆಯದಿರುವುದನ್ನು ಮಾತ್ರ ಪಟ್ಟಣದಿಂದ ಖರೀದಿಸುತ್ತಾರೆ. ಅಕ್ಕಿ ಒಂದು ಬಿಟ್ಟು ಬೇಳೆ, ಕಾಳು, ಹಣ್ಣು, ತರಕಾರಿ. ಎಲ್ಲವೂ ಸಂತೆಯಲ್ಲಿ ಲಭ್ಯ. ಇಲ್ಲಿ ಬೆಳೆಯುವವರೇ ಮಾರಾಟ ಮಾಡುತ್ತಾರೆ. ಪಟ್ಟಣದಿಂದ ಖರೀದಿಸಿದ್ದನ್ನು ಮಾರುವುದು ಆ ವಾರದ ಪಾಳಿಯ ಯುವಕರ ಜವಾಬ್ದಾರಿ. ಮಾರುಕಟ್ಟೆಗಿಂತ ಒಂದು ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು. ಇದು ಸಂತೆಯ ನಿಯಮ.ರಘು ಸಂತೆಗೆ ಸಂಬಂಧಿಸಿದಂತೆ ಒಂದು ಲೆಕ್ಕಾಚಾರ ಹೇಳುತ್ತಾರೆ. `ನಮ್ಮೂರಿನ 60 ಜನ 10 ರೂ. ಬಸ್ ಚಾರ್ಜ್ ಕೊಟ್ಟು ಪಟ್ಟಣಕ್ಕೆ ಹೋಗಿ ಬಂದರೆ 600 ರೂ. ಖರ್ಚಾಗುತ್ತೆ. ಜೊತೆಗೆ ಕನಿಷ್ಠ ಅರ್ಧ ದಿನ ವ್ಯರ್ಥ. ಊರಲ್ಲೆೀ ಸಂತೆ ಮಾಡಿದ್ದರಿಂದ ಅವರಿಗೆ ಹಣ ಉಳಿತು. ಹುಡುಗರಿಗೆ ಉದ್ಯೋಗ ಸಿಕ್ತು. ನಮ್ಮೂರಿನ ಬೆಳೆಗಾರರಿಗೆ ಸುಲಭವಾದ ಮಾರ್ಕೆಟ್ ಸಿಕ್ತು. ಎಲ್ಲದಕ್ಕಿಂತ ಹೆಚ್ಚಾಗಿ ಆರೋಗ್ಯ ಪೂರ್ಣ, ತಾಜಾ ತರಕಾರಿಗಳು ಸಿಕ್ಕಂತಾಯಿತು..~ - ಕ್ಲಿಕ್ ಆದ ತಮ್ಮ ಐಡಿಯಾವನ್ನು ಹುಡುಗರೊಂದಿಗೆ ಅವರು ನಗು ನಗುತ್ತಲೇ ವಿವರಿಸುತ್ತಾರೆ.ಶುಭ-ಅಶುಭಕ್ಕೂ ಹೆಗಲು ಕೊಡ್ತಾರೆ !


ಊರಲ್ಲಿ ಶುಭ- ಅಶುಭ ಎರಡೂ ಸಮಾರಂಭಕ್ಕೂ ಹೆಗಲು ಕೊಡುತ್ತಾರೆ ಈ ಯುವಕರು . ಸಾವು- ನೋವಿನ ವಿಷಯದಲ್ಲಿ ಸ್ವಲ್ಪ ಹೆಚ್ಚು ಕನಿಕರ. ಸತ್ತ ಸುದ್ದಿ ತಿಳಿಯುತ್ತಲೇ ಆ ಮನೆಯವರ ನೆರವಿಗೆ ನಿಲ್ಲುತ್ತಾರೆ. ಸಂಬಂಧಿಕರನ್ನು ಕರೆಸುವುದು, ಶಾಮಿಯಾನ ಹಾಕಿ, ಬಳಗದವರನ್ನು ವಿಚಾರಿಸಿಕೊಳ್ಳುತ್ತಾ  ಶವ ಸಂಸ್ಕಾರ ಮುಗಿಯುವವರೆಗೂ ಜೊತೆಗಿದ್ದು ಸಾಂತ್ವನ ಹೇಳುತ್ತಾರೆ.  ಊರಿನ ಉಪಯೋಗಕ್ಕಾಗಿಯೇ ಅಡುಗೆಗೆ ಬೇಕಾದ ಎಲ್ಲ ಸೌಲಭ್ಯವನ್ನು ನಮ್ಮ ಸಂಘದಲ್ಲಿ ಮಾಡಿಕೊಂಡಿದ್ದೇವೆ.ಇದು ಹಿರಿಯರು ಕಲಿಸಿದ ಪಾಠ~ - ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು ತಮ್ಮ ಸೇವೆಯನ್ನು ನೆನಪಿಸಿಕೊಳ್ಳುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಹಬಾಳ್ವೆಯೊಂದಿಗೆ ಹೆಜ್ಜೆ ಹಾಕುತ್ತಿರುವ ಗೋಪಾಲನಹಳ್ಳಿಯ ಯುವಕರ ಸಹಕಾರ ತತ್ವವನ್ನು `ಸಾಧನೆ~ ಎಂದು ಬಣ್ಣಿಸಿದರೆ, ಅದನ್ನು ಅವರು ಒಪ್ಪುವುದಿಲ್ಲ. `ಇದು ಸಾಧನೆಯೂ ಅಲ್ಲ, ಆದರ್ಶವೂ ಅಲ್ಲ. ಇದು ಕೇವಲ ಬದುಕಷ್ಟೇ~ ಎನ್ನುತ್ತಾರೆ.ಹಳ್ಳಿಗೆ ಹಿಂದಿರುಗುವವರಿಗೆ...

ಹಳ್ಳಿಗೆ ಹೆಣ್ಣೇ ಕೊಡೋದಿಲ್ಲ ಅಂತಾರಲ್ರೀ?


ನಾವು ನಮಗಿಂತ ಎತ್ತದಲ್ಲಿರುವವರನ್ನು ನೋಡುವುದನ್ನು ಬಿಟ್ಟು, `ಕೆಳಸ್ತರ~ದವರನ್ನು ನೋಡಬೇಕು. ಆಗ ಈ ಸಮಸ್ಯೆ ಬರೋದಿಲ್ಲ. ಹಳ್ಳಿಯಲ್ಲಿದ್ದುಕೊಂಡೇ ನಾವು ಕೈತುಂಬಾ ಸಂಪಾದನೆ ಮಾಡ್ತಿದ್ದೇವೆ. ಯಾರಿಗೂ ಕಡಿಮೆ ಇಲ್ಲವೆನ್ನುವಂತೆ ಜೀವನ ಮಾಡುತ್ತಿದ್ದೇವೆ.ಇಂದಲ್ಲ ನಾಳೆ, ಹುಡುಕಿಕೊಂಡು ಬಂದು ನಮಗೆ ಹೆಣ್ಣು ಕೊಟ್ಟೇ ಕೊಡ್ತಾರೆ ಎಂಬ ನಂಬಿಕೆ ಇದೆ. ಭಗವಂತಾ ಒಂದು ಗಂಡಿಗೆ ಒಂದು ಹೆಣ್ಣು ಅಂತ ಫಿಕ್ಸ್ ಮಾಡಿರ‌್ತಾನೆ. ನೋಡ್ತಾ ಇರಿ, ಭವಿಷ್ಯದಲ್ಲಿ ಯುವ ರೈತರೇ ಹೀರೋಗಳು.ನಮ್ಮೂರಿಗೆ ಹೆಣ್ಣು ಕೋಡೋದಿಲ್ಲ ಅಂತ ಯಾರೂ ಹೇಳಿಲ್ಲ. ನಮ್ಮ ಕಾಲೇಜಿನ ನಾಲ್ಕೈದು ಹೆಣ್ಣುಕ್ಕಳು ನಮ್ಮೂರಿಗೆ ಸೊಸೆಯರಾಗಿದ್ದಾರೆ. ನಮ್ಮ ಹುಡುಗರ ಗುಣ ನೋಡಿ ಹೆಣ್ಣು ಕೊಡ್ತಾರೆ. ಇಷ್ಟಕ್ಕೂ ಈ ಹುಡುಗರು ಸರಳವಾಗಿ ಸಾಮೂಹಿಕ ವಿವಾಹವಾಗುವುದಕ್ಕೆ ಸಿದ್ಧರಿದ್ದಾರೆ. ಕಂಕಣ ಕೂಡಿ ಬಂದ್ರೆ ಎಲ್ಲರೂ ಒಟ್ಟಿಗೆ ಮದುವೆ ಆಗ್ತೀವಿ ಎನ್ನುತ್ತಿದ್ದಾರೆ. ಅದು ಆಗ್ಬಿಡ್ಲಿ ಬಿಡಿ. ಇವರ ಮದುವೆಗೂ `ಸಹಕಾರ ತತ್ವ~ದಲ್ಲೆೀ ಖರ್ಚು ಮಾಡ್ತೀವಿ.ಅಕ್ಕಪಕ್ಕದವರು ಅಣಕಿಸುವುದಿಲ್ಲವಾ?

ಅಣಿಕಿಸುತ್ತಿದ್ದರು. ನಮ್ಮ ಕೆಲಸವನ್ನು ವಿರೋಧಿಸುತ್ತಿದ್ದರು. ಅಂಥವರೆಲ್ಲ ನಮ್ಮ ಒಗ್ಗಟ್ಟು ನೋಡಿ ಬದಲಾಗುತ್ತಿದ್ದಾರೆ. ಇದೇ ವಿಧಾನಗಳನ್ನು ಅವರವರ ಊರುಗಳಲ್ಲೂ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

 

ಹಳ್ಳಿಯಲ್ಲಿ ಬೆಳವಣಿಗೆ ನಿಧಾನ ಅಂತಾರೆ, ನೀವು ಹೇಗೆ ಇರ್ತೀರಿ?

ಹಳಿಯಲ್ಲಿ ಅಭಿವದ್ಧಿ ನಿಧಾನ, ನಿಜ. ಆದರೆ ಅದು ಸುಸ್ಥಿರವಾಗಿರುತ್ತದೆ ಅನ್ನೋದು ಅಷ್ಟೇ ನಿಜ. ಪಟ್ಟಣದಲ್ಲಿ ರೋಗ ಬಂದ್ರೆ ಬೇಗ ಆಸ್ಪತ್ರೆಗೆ ಹೋಗಿ ರೋಗ ವಾಸಿ ಮಾಡ್ಕೊಬಹುದು. ಹಳ್ಳಿಯಲ್ಲಿ ರೋಗ ಬರೋದಿಲ್ಲ. ಮೈಮುರಿದು ದುಡಿದು, ಹೊಟ್ಟೆ ತುಂಬ ಉಂಡು, ಕಣ್ತುಂಬ ನಿದ್ದೆ ಮಾಡಿದ್ರೆ ರೋಗ ಸುಳಿಯೋದಿಲ್ಲ. ಇದು ವೇದಾಂತ ಅಲ್ಲ, ಹತ್ತು ವರ್ಷಗಳ  ನಗರವಾಸದಲ್ಲಿದ್ದು ನಾನು ಕಂಡು ಕೊಂಡ ಬದುಕಿನ ವ್ಯತ್ಯಾಸ.ಮಂಜುನಾಥ್, ಹರ್ಷ,ರಘು, ನಿರಂಜನ, ಆತ್ಮಾನಂದ,

ಗುರುಸಿದ್ದರಾಮ, ಪ್ರಕಾಶ, ಗ್ರಾ.ಪಂ. ಸದಸ್ಯ ಬಸವರಾಜ, ಜಿ.ಎನ್.ಬಸವರಾಜು, ರಮೇಶ, ಅನಿಲ್‌ಕುಮಾರ, ರವಿಚಂದ್ರ, ಅಜ್ಜೇಗೌಡ, ಸಿದ್ದೇಶ.

ಪ್ರತಿಕ್ರಿಯಿಸಿ (+)