ಗೋಬರ್ ಬಗ್ಗಡದಲ್ಲಿ ಜಾಯಿಕಾಯಿ

7

ಗೋಬರ್ ಬಗ್ಗಡದಲ್ಲಿ ಜಾಯಿಕಾಯಿ

Published:
Updated:

ಗೋಬರ್ ಅನಿಲ ಸ್ಥಾವರದ ಬಗ್ಗಡ (ಮಂದ ಸಗಣಿ ತ್ಯಾಜ್ಯ) ಮಾತ್ರ ಬಳಸಿ ಯಶಸ್ವಿಯಾಗಿ ಜಾಯಿಕಾಯಿಯ ಮಿಶ್ರಬೆಳೆ ಸಾಧ್ಯವೆಂದು ತೋರಿಸಿಕೊಟ್ಟ ರೈತ ಮಹಾಲಿಂಗ ಶರ್ಮ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದವರು.ಇಳಿಜಾರಾದ ಕಾಡಿನಿಂದ ತುಂಬಿದ ಗುಡ್ಡದಲ್ಲಿ ಸಾಲುಗಳನ್ನು ನಿರ್ಮಿಸಿ ಅಡಕೆ ಕೃಷಿ ಮಾಡಿದ್ದಲ್ಲದೆ ಬಾಳೆ, ಕೋಕೋಗಳ ಬದಲು ಕೇವಲ ಜಾಯಿಕಾಯಿ ಬೆಳೆಯುವುದು ಇದೆಲ್ಲಕ್ಕಿಂತ ಅಧಿಕ ಲಾಭದಾಯಕ ಎಂಬುದು ಅವರ ಅನುಭವ.ಜಾಯಿಕಾಯಿಯನ್ನು ಅಡಕೆಯೊಂದಿಗೆ ಬೆಳೆಯುವುದಾದರೆ ಒಂದು ಎಕರೆಗೆ ನೂರು ಗಿಡ ಹಾಕಬಹುದು. ನಾಲ್ಕು ಅಡಕೆ ಮರಗಳ ನಡುವೆ ಒಂದು ಗಿಡ ನೆಡುವುದು ಸೂಕ್ತ. ನಾಟಿಗೆ ಒಂದೂವರೆ ಅಡಿಗಿಂತ ಅಧಿಕ ಹೊಂಡ ಬೇಡ. ನೆಡುವಾಗ ಸ್ವಲ್ಪ ಸುಡುಮಣ್ಣು, ಕೊಟ್ಟಿಗೆ ಗೊಬ್ಬರದ ಹುಡಿಯನ್ನು ಹೊಂಡಕ್ಕೆ ತುಂಬಿಸಿದರೆ ಉತ್ತಮ.ಗಿಡಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. ತೋಟದಲ್ಲಿ ಮರಗಳ ಕೆಳಗೆ ಹುಟ್ಟಿದ ಗಿಡಗಳು ನಾಟಿಗೆ ಯೋಗ್ಯವೇ ಆದರೂ ಇದರಲ್ಲಿ ಗಂಡು ಗಿಡದ ಪರಿಚಯ ನಮಗೆ ಆಗುವುದಿಲ್ಲ. ಗಿಡ ಗಂಡಾದರೆ ಎಷ್ಟು ಕಾಲ ಸಾಕಿದರೂ ಕಾಯಿ ಆಗದೆ ರೈತನ ಶ್ರಮ ವ್ಯರ್ಥವಾಗುತ್ತದೆ.ಇದನ್ನು ತಪ್ಪಿಸಲು ನಾಟಿ ಗಿಡಕ್ಕೆ ಒಳ್ಳೆ ಫಸಲಿರುವ ಹೆಣ್ಣು ಮರದ ಕೊಂಬೆಯನ್ನು ಕಸಿ ಕಟ್ಟಲು ರೈತನಿಗೆ ತಿಳಿದಿರಬೇಕು. ಇಲ್ಲವಾದರೆ ಕಸಿ ಗಿಡವನ್ನೇ ನಾಟಿಗೆ ಉಪಯೋಗಿಸಬೇಕು ಎನ್ನುವುದು ಅವರ ಕಿವಿಮಾತು.ಅದಕ್ಕಾಗಿ ಅವರು 500 ರೂ ಕೊಟ್ಟು ಕಸಿ ಗಿಡಗಳನ್ನೆ ತಂದು ನೆಟ್ಟಿದ್ದಾರೆ. ಹೆಣ್ಣು ಮರ ಫಲ ಕೊಡಬೇಕಿದ್ದರೆ ಒಂದಾದರೂ ಗಂಡು ಮರ ಬೇಕಾಗುತ್ತದೆ. ಹೀಗಾಗಿ ಒಂದೆರಡು ನಾಟಿ ಗಂಡು ಮರಗಳನ್ನೂ ಬೆಳೆಸಿದ್ದಾರೆ.ಮಹಾಲಿಂಗ ಶರ್ಮರ ಬಳಿ ಗುಜರಾತಿನಿಂದ ತಂದು ಬೆಳೆಸಿದ ಕಾಂಕ್ರೇಜ್ ತಳಿಯ ಹತ್ತಾರು ಹಸುಗಳಿವೆ. ಒಂದು ಹಿಡಿ ಕೂಡ ರಸಗೊಬ್ಬರ ಬಳಸದೆ ಸೆಗಣಿ ಗೊಬ್ಬರದಿಂದಲೇ ಸಮೃದ್ಧ ಫಸಲು ಸಾಧ್ಯವೆಂಬುದಕ್ಕೆ ಅವರೇ ಉದಾಹರಣೆ. ಅಡಕೆ ಮರದ ಒಣಗಿದ ಹಾಳೆಯನ್ನು ಕತ್ತರಿಸಿ ಕೊಟ್ಟಿಗೆಗೆ ಹರಡಿ ವಿಶಿಷ್ಟವಾದ ಗೊಬ್ಬರ ತಯಾರಿಸಿ ಬಳಸುತ್ತಾರೆ.ಇಳಿಜಾರು ಗುಡ್ಡದಲ್ಲಿ ಅಡಕೆ ಮತ್ತು ಜಾಯಿಕಾಯಿಯ ಮಿಶ್ರ ಕೃಷಿ ಅವರ ನೂತನ ಪ್ರಯೋಗ. ಅಡಕೆ ಮರ ದೊಡ್ಡದಾಗಿ ಫಸಲು ಕೊಡುವ ಹಂತ ತಲುಪಿದ ಮೇಲೆಯೇ ಜಾಯಿಗಿಡ ಹಾಕಬೇಕು. ಏಕೆಂದರೆ ಅದಕ್ಕೆ ಕಡ್ಡಾಯವಾಗಿ ಅರ್ಧ ಬಿಸಿಲು, ಅರ್ಧ ನೆರಳು ಬೇಕೇಬೇಕು. ಬಿಸಿಲು ತೀವ್ರವಾದರೆ ಗಿಡ ಸಾಯುತ್ತದೆ; ನೆರಳು ಹೆಚ್ಚಾದರೆ ಫಸಲು ಕಡಿಮೆ. ಇದನ್ನು ಗಮನಿಸಿ ನಾಟಿ ಮಾಡಬೇಕು.ಗೋಬರ್ ಅನಿಲ ಸ್ಥಾವರದಿಂದ ಹೊರ ಹರಿಯುವ ಬಗ್ಗಡವನ್ನು ನೇರವಾಗಿ ಗುಡ್ಡದಲ್ಲಿರುವ ತೋಟಕ್ಕೆ ಸಾಗಿಸಲು ಶರ್ಮರಲ್ಲಿ ಶಕ್ತಿಶಾಲಿಯಾದ ಪಂಪ್‌ಸೆಟ್ ಇದೆ. ಪ್ರತೀ ಮರದ ಬುಡ ಭರ್ತಿಯಾಗುವಷ್ಟು ಬಗ್ಗಡ ತುಂಬಿಸಿ ಅಡಕೆ ಮರದ ಸೋಗೆಯನ್ನು ಸಣ್ಣದಾಗಿ ಕತ್ತರಿಸಿ ಹಾಕಿಬಿಡುವುದಷ್ಟೇ ಶರ್ಮರ ಕೃಷಿ ಪದ್ಧತಿ. ಜನವರಿ ತಿಂಗಳ ಬಳಿಕ ವಾರಕ್ಕೆರಡು ಸಲ ಬುಡ ನೆನೆಯುವಷ್ಟು ನೀರು ಬೇಕು.ಎಪ್ರಿಲ್ ತಿಂಗಳಲ್ಲಿ ಜಾಯಿಮರ ಹೂ ಬಿಡುವ ಕಾಲ. ಆಗ ನೀರು ಕಮ್ಮಿಯಾದರೆ ಫಸಲು ಕಡಮೆಯಾಗುತ್ತದೆ. ಜೂನ್‌ನಿಂದ ಅಕ್ಟೋಬರ್ ತನಕ ಜಾಯಿಕಾಯಿ ಸುಗ್ಗಿ. ಎರಡು ದಿನಕ್ಕೊಮ್ಮೆ ಮರದ ಬಳಿಗೆ ಹೋದರೆ ಬಲಿತ ಕಾಯಿಗಳು ಬಾಯಿ ಬಿರಿದಿರುವುದನ್ನು ಗುರುತಿಸಿ ಅದಕ್ಕಾಗಿ ತಯಾರಿಸಿದ ಕಬ್ಬಿಣದ ಕೊಕ್ಕೆಯಿಂದ ಕೊಯ್ಯಬೇಕು.

 

ಎಚ್ಚರ ವಹಿಸದಿದ್ದರೆ ಬಲಿಯದ ಕಾಯಿಗಳಿಗೂ ಪೆಟ್ಟಾಗುತ್ತದೆ. ಕಾಯಿ ತಾನಾಗಿ ಉದುರಿದರೆ ಒಳಗಿರುವ ಪತ್ರೆಯನ್ನು ಬಸವನ ಹುಳುಗಳು ತಿಂದುಬಿಡುತ್ತವೆ. ಹಾಗಾಗಿ ನೇರ ಕೊಯ್ಯುವುದು ಉತ್ತಮ.ಎಂಟು ವರ್ಷದ ಜಾಯಿ ಮರಗಳಿಂದ ಶರ್ಮರು 8 ರಿಂದ 15 ಕಿಲೊ ತನಕ ಕಾಯಿ ಕೊಯ್ಯುತ್ತಾರೆ. ಕಸಿಗಿಡಗಳಾದರೆ ಮೂರನೆಯ ವರ್ಷದಲ್ಲೆೀ ಫಸಲು ಕೊಯ್ಯಬಹುದಂತೆ. ಏಳು ಕಿಲೊ ಕಾಯಿಯಿಂದ ಒಂದು ಕಿಲೊ ಪತ್ರೆ ಲಭಿಸುತ್ತದೆ.

 

ಹೆಚ್ಚಾಗಿ ಫಸಲು ಬರುವುದು ಮಳೆಗಾಲದಲ್ಲಿ. ಆದ್ದರಿಂದ ಡ್ರೈಯರ್ ಇರಿಸಿಕೊಳ್ಳದಿದ್ದರೆ ಒಣಗಿಸಲು ಸಮಸ್ಯೆಯಾಗುತ್ತದೆ.ಹತ್ತನೇ ವರ್ಷದಿಂದ ಅಧಿಕ ಫಲ ನೀಡುತ್ತಲೇ ಹೋಗುವ ಜಾಯಿ ಮರ ಶತಮಾನದ ಕಾಲ ಬದುಕುತ್ತದೆ. ಇಂದಿನ ಧಾರಣೆಯಲ್ಲಿ ಒಂದು ಮರದಿಂದ ಕನಿಷ್ಠ ಮೂರು ಸಾವಿರ ರೂಪಾಯಿ ಗಳಿಸಬಹುದು. ಇದಕ್ಕೆ ರೋಗಬಾಧೆ, ಕೀಟಗಳ ಹಾವಳಿಯಿಲ್ಲ. ಅಧಿಕ ಖರ್ಚಿಲ್ಲದೆ ಮಿಶ್ರಬೆಲೆಯಲ್ಲಿ ಹೆಚ್ಚು ಲಾಭ ತರುವ ಕೃಷಿ ಇದೊಂದೇ.

 

ಜಾಯಿ ಹಣ್ಣಿನಿಂದ ಬೀಜ ಬೇರ್ಪಡಿಸಿದ ಬಳಿಕ ತೊಗಟೆಯಲ್ಲಿರುವ ತಿರುಳಿನಿಂದ ಉಪ್ಪಿನಕಾಯಿ, ಜಾಮ್ ತಯಾರಿಸಬಹುದು. ಆದರೆ ಅನೇಕ ರೈತರಿಗೆ ಇಂಥ ಉಪಯೋಗದ ಅರಿವಿಲ್ಲ ಎಂದು ಶರ್ಮ ಹೇಳುತ್ತಾರೆ.

 

ಅವರ ಮೊಬೈಲ್ ಸಂಖ್ಯೆ 94497 73151.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry