ಗೋಮಾಳ ಜಮೀನಿನ ಪರಭಾರೆ ಸಲ್ಲ -ಹೈಕೋರ್ಟ್

7

ಗೋಮಾಳ ಜಮೀನಿನ ಪರಭಾರೆ ಸಲ್ಲ -ಹೈಕೋರ್ಟ್

Published:
Updated:

ಬೆಂಗಳೂರು:  ಗೋಮಾಳ ಭೂಮಿಯನ್ನು ಮಾರಾಟ ಮಾಡಿ, ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ತಿಳಿಸಿದೆ.‘ಈ ಜಮೀನಿನಲ್ಲಿ ಬಡವರು ದನ-ಕರುಗಳನ್ನು ಮೇಯಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಗೋಮಾಳ ಜಮೀನು ದಾನ ಮಾಡುವುದಕ್ಕಾಗಿ ಇರುವುದು ಅಲ್ಲ. ಈ ರೀತಿ ಮಾಡಿ ಅದನ್ನು ಗೋಲ್‌ಮಾಲ್ ಜಮೀನು ಮಾಡಬೇಡಿ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿತು.ದೊಡ್ಡಬಳ್ಳಾಪುರ ಬಳಿಯ ಸುಮಾರು 60 ಎಕರೆ ಜಮೀನನ್ನು ಪರಭಾರೆ ಮಾಡ ಹೊರಟಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸ್ಥಳೀಯರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಸರ್ವೇ ನಂ. 5ರಲ್ಲಿನ ಜಮೀನಿನಲ್ಲಿ ಈಗಾಗಲೇ 30 ಎಕರೆ ನಿವೇಶನ ಮಾಡಿ ಖಾಸಗಿ ವ್ಯಕ್ತಿಗಳಿಗೆ ಮಾರಲಾಗಿದೆ. ಉಳಿದವುಗಳನ್ನು ಮಾರಲು ಸಿದ್ಧತೆ ನಡೆಸಲಾಗಿದೆ.ಗೋವುಗಳನ್ನು ಮೇಯಿಸಲು ಈಗ ಇರುವುದು ಇದೊಂದೇ ಜಮೀನು. ಈ ಹಿನ್ನೆಲೆಯಲ್ಲಿ ಅದನ್ನು ಮಾರಾಟ ಮಾಡದಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಬಗ್ಗೆ ಕೋರ್ಟ್‌ನಲ್ಲಿ ಹಾಜರಿದ್ದ ದೊಡ್ಡಬಳ್ಳಾಪುರದ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದಾಗ, ಅವರು  ಈಗ ಉಳಿದಿರುವ ಜಮೀನನ್ನು ಮಾರಾಟ ಮಾಡುವುದಿಲ್ಲ ಎಂದರು. ಈ ಹಿನ್ನೆಲೆಯಲ್ಲಿ, ಮಾತನ್ನು ಉಳಿಸಿಕೊಳ್ಳುವಂತೆ ತಿಳಿಸಿದ ಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry