ಶುಕ್ರವಾರ, ಮಾರ್ಚ್ 5, 2021
16 °C
ದಲಿತರು, ಮುಸ್ಲಿಮರ ಮೇಲಿನ ಹಲ್ಲೆಗೆ ಪ್ರಧಾನಿ ಪ್ರತಿಕ್ರಿಯೆ

ಗೋರಕ್ಷಕರಿಗೆ ಚಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋರಕ್ಷಕರಿಗೆ ಚಾಟಿ

ನವದೆಹಲಿ (ಪಿಟಿಐ): ಗೋರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ನಡೆದ ಹಲ್ಲೆಗಳ ಬಗ್ಗೆ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ರೀತಿ ಹಲ್ಲೆ ನಡೆಸುವ ಬಹುಪಾಲು ಜನ ಸಮಾಜ ವಿರೋಧಿಗಳು’ ಎಂದು ಗುಡುಗಿದ್ದಾರೆ.‘ಇವರು ಗೋರಕ್ಷಣೆ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇದು ನನ್ನಲ್ಲಿ ಕೋಪ ಮೂಡಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇಂದ್ರದ ‘MyGov’ ವೆಬ್‌ಸೈಟ್‌ಗೆ ಎರಡು ವರ್ಷ ಪೂರ್ಣಗೊಂಡಿರುವ ಕಾರಣಕ್ಕೆ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ‘ಗೋರಕ್ಷಣೆ ಹೆಸರಿನಲ್ಲಿ ಕೆಲಸ ಮಾಡುವ ಶೇಕಡ 80ರಷ್ಟು ಜನ ರಾತ್ರಿ ಹೊತ್ತಿನಲ್ಲಿ ಅಕ್ರಮ ಎಸಗುತ್ತಾರೆ. ಹಗಲಿನಲ್ಲಿ ಗೋವಿನ ಸಂರಕ್ಷಕರಾಗಿಬಿಡುತ್ತಾರೆ. ಇಂತಹ ಸ್ವಘೋಷಿತ ಗೋರಕ್ಷಕರ ಪಟ್ಟಿಯನ್ನು ರಾಜ್ಯ ಸರ್ಕಾರಗಳು ಸಿದ್ಧಪಡಿಸಬೇಕು’ ಎಂದು ತಾಕೀತು ಮಾಡಿದರು.ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಗೋರಕ್ಷಕರು ಎಂದು ಹೇಳಿಕೊಂಡವರು ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಕಟು ಮಾತುಗಳು ಮಹತ್ವ ಪಡೆದಿವೆ.‘ಗೋರಕ್ಷಣೆಯ ಹೆಸರಿನಲ್ಲಿ ಜನ ವ್ಯಾಪಾರ ನಡೆಸುತ್ತಿರುವುದು ನನ್ನಲ್ಲಿ ಕೋಪ ಮೂಡಿಸುತ್ತದೆ. ಹೀಗೆ ಮಾಡುತ್ತಿರುವವರಲ್ಲಿ ಬಹುತೇಕ ಜನ ಗೋ ರಕ್ಷಣೆ ಮುಖವಾಡ ಧರಿಸಿರುವ ಸಮಾಜ ವಿರೋಧಿಗಳು’ ಎಂದು ಪ್ರಧಾನಿ ಮೋದಿ ಮಾತಿನ ಚಾಟಿ ಬೀಸಿದರು.‘ಇಂಥವರಲ್ಲಿ ಬಹುತೇಕ ಮಂದಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಇದನ್ನು ಯಾವ ಸಮಾಜವೂ ಒಪ್ಪುವುದಿಲ್ಲ. ಇವರ ಬಗ್ಗೆ ಮಾಹಿತಿ ಸಿದ್ಧಪಡಿಸುವಂತೆ ನಾನು ರಾಜ್ಯ ಸರ್ಕಾರಗಳಿಗೆ ಸೂಚಿಸುವೆ’ ಎಂದು ಹೇಳಿದರು.ಕಸಾಯಿಖಾನೆಗಳಲ್ಲಿ ಜೀವ ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಗೋವುಗಳು ಪ್ಲಾಸ್ಟಿಕ್‌ ಸೇವಿಸಿ ಸಾಯುತ್ತಿವೆ. ಗೋಸೇವೆ ಮಾಡುವ ಉದ್ದೇಶ ಹೊಂದಿರುವ ಜನ, ಗೋವಿನ ಆಹಾರದಲ್ಲಿ ಪ್ಲಾಸ್ಟಿಕ್‌ ಅಂಶ ಸೇರದಂತೆ ನಿಗಾ ಇಡಬೇಕು. ಇದು ಗೋವಿಗೆ ಮಾಡುವ ದೊಡ್ಡ ಸೇವೆ ಎಂದು ಮೋದಿ ಕಿವಿಮಾತು ಹೇಳಿದರು.ಗೋವುಗಳಿಗಾಗಿ ಆಯೋಜಿಸಿದ್ದ ಒಂದು ಆರೋಗ್ಯ ಶಿಬಿರದಲ್ಲಿ, ಹಸುವೊಂದರ ಹೊಟ್ಟೆಯಿಂದ ಎರಡು ಬಕೆಟ್‌ಗಳಿಗೆ ಆಗುವಷ್ಟು ಪ್ಲಾಸ್ಟಿಕ್‌ ಸಿಕ್ಕಿತ್ತು ಎಂದು ನೆನಪಿಸಿಕೊಂಡರು.ಹಳ್ಳಿಗಳ ಅಭಿವೃದ್ಧಿ: ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ಡಿಜಿಟಿಲ್ ಸಂಪರ್ಕ ಕ್ಷೇತ್ರಗಳ ಅಭಿವೃದ್ಧಿ ಕೇಂದ್ರಗಳಾಗಿ ದೇಶದ 300 ಹಳ್ಳಿಗಳನ್ನು  ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಪ್ರಕಟಿಸಿದರು.ನಗರಗಳಲ್ಲಿ ದೊರಕುವ ಎಲ್ಲಾ ಸೌಲಭ್ಯಗಳೂ ಹಳ್ಳಿಗಳಲ್ಲಿ ದೊರಕಬೇಕು  ಎಂಬ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆ ಮಾದರಿಯಲ್ಲೇ 300 ಹಳ್ಳಿಗಳನ್ನು ಪರಿವರ್ತಿಸಲಾಗುತ್ತಿದೆ ಎಂದರು.

*

ದೇಶಕ್ಕಾಗಿ ಖಾದಿ

‘ನಾವು ಬಳಸುವ ಬಟ್ಟೆಯಲ್ಲಿ ಖಾದಿ ಮತ್ತು ಕೈಮಗ್ಗದ ಬಟ್ಟೆ ಪ್ರಮಾಣ ಶೇ 5ರಷ್ಟಿದ್ದರೂ, ಕೈಮಗ್ಗ, ಖಾದಿ ಕ್ಷೇತ್ರ ಅಭಿವೃದ್ಧಿ ಹೊಂದಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಆಗುತ್ತದೆ’ ಎಂದು ಮೋದಿ ಹೇಳಿದರು. ಖಾದಿ ಬಳಕೆಯನ್ನು ಉತ್ತೇಜಿ ಸಲು ‘ದೇಶಕ್ಕಾಗಿ ಖಾದಿ, ಫ್ಯಾಷನ್‌ ಗಾಗಿ ಖಾದಿ’ ಎಂಬ ಘೋಷವಾಕ್ಯ ಬಳಸಿದರು.

*

ಗೋ ಸಂರಕ್ಷಣೆ ಹೆಸರಿನಲ್ಲಿ ಗುಂಪು ಕಟ್ಟಿಕೊಳ್ಳುವುದು ಇನ್ನೊಬ್ಬರಿಗೆ ತೊಂದರೆ ಕೊಡಲಿಕ್ಕಲ್ಲ.

ನರೇಂದ್ರ ಮೋದಿ,

ಪ್ರಧಾನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.