ಮಂಗಳವಾರ, ಜೂನ್ 22, 2021
24 °C

ಗೋಲಗುಮ್ಮಟದಲ್ಲಿ ಶಿವ!

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಗೋಲಗುಮ್ಮಟದಲ್ಲಿ ಶಿವ!

ವಿಶ್ವವಿಖ್ಯಾತ ಪಿಸುಗುಟ್ಟುವ ಗ್ಯಾಲರಿಯ ಗೋಲಗುಮ್ಮಟದ ಎದುರು ಉರಿಯುವ ಬಿಸಿಲಿನಲ್ಲೂ ಶಿವಣ್ಣ ಹೆಜ್ಜೆ ಹಾಕುತ್ತಿದ್ದರು. ಗೋಲಗುಮ್ಮಟ ವಾಸ್ತು ವೈಭವದ ವಿವಿಧ ಮಜಲುಗಳ ಜೊತೆಗೆ ಶಿವಣ್ಣನ ನೃತ್ಯದ ಮೋಡಿಯನ್ನು ಸತ್ಯ ಹೆಗಡೆ ಸೆರೆಹಿಡಿಯುತ್ತಿದ್ದರು. ಅಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಘಾರ ಗೋಲಗುಮ್ಮಟದಲ್ಲೂ ಮಾರ್ದನಿಸುತ್ತಿತ್ತು.ಮುತ್ತಿಕೊಂಡಿದ್ದ ಅಭಿಮಾನಿಗಳ ಕೋಟೆ ಭೇದಿಸಿ ವಿಜಾಪುರ ಗೋಲಗುಮ್ಮಟ ಉದ್ಯಾನದಲ್ಲಿ ಮಾತಿಗಿಳಿದ ಶಿವರಾಜಕುಮಾರ್ ಖುಷಿ ಖುಷಿಯಾಗಿದ್ದರು. ಗೋಲಗುಮ್ಮಟದ ಸೊಬಗು ಅವರ ಖುಷಿಯನ್ನು ಇಮ್ಮಡಿಸಿತ್ತು.`ತುಂಬಾ ಅದ್ಭುತವಾಗಿದೆ ಈ ಸ್ಮಾರಕ~ ಎನ್ನುತ್ತ ಮಾತು ಆರಂಭಿಸಿದ ಶಿವಣ್ಣ, `ಗೋಲಗುಮ್ಮಟದ ಇತಿಹಾಸವನ್ನು ನನ್ನ ಮಗಳಿಗೆ ತಿಳಿಸಿದ್ದೆ. ಅಪ್ಪಾಜಿ ಜೊತೆ ವಿಜಾಪುರಕ್ಕೆ ಬಂದಿದ್ದರೂ ಇಲ್ಲಿಯವರೆಗೆ ಈ ಗೋಲಗುಮ್ಮಟ ನೋಡಲು ಆಗಿರಲಿಲ್ಲ~ ಎಂದು ಹಳಹಳಿಸಿದರು.`ಈ ಅದ್ಭುತ ಸ್ಮಾರಕ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು~ ಎಂಬ ತಮ್ಮ ಮನದಾಳದ ಅಭಿಲಾಷೆ ವ್ಯಕ್ತಪಡಿಸಿದರು.ಓಂ ಪ್ರಕಾಶ್ ನಿರ್ದೇಶನದ, ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿರುವ `ಶಿವ~ ಕನ್ನಡ ಚಲನ ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ 3 ದಿನಗಳ ಕಾಲ ಗುಮ್ಮಟ ನಗರಿಯಲ್ಲಿ ಬೀಡು ಬಿಟ್ಟಿದ್ದರು.

 

ಶಿವಣ್ಣ ವಿಜಾಪುರದಲ್ಲಿ ನಡೆಸಿದ ಮೊದಲ ಚಿತ್ರೀಕರಣವೂ ಇದಾಗಿತ್ತು. ಗೋಲಗುಮ್ಮಟ, ಬಾರಾಕಮಾನ, ಇಬ್ರಾಹಿಂರೋಜಾ, ಮಲೀಕ್-ಎ-ಮೈದಾನ ತೋಪುಗಳಲ್ಲಿ ಚಿತ್ರೀಕರಣ ನಡೆಯಿತು.`ಶಿವ ನನ್ನ 101ನೇ ಚಿತ್ರ. ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಲ್ಲ ಪಾತ್ರಗಳೂ ವಿಭಿನ್ನವಾಗಿವೆ. ಏಪ್ರಿಲ್ ಅಂತ್ಯ ಇಲ್ಲವೇ ಮೇ ಎರಡನೇ ವಾರದಲ್ಲಿ ತೆರೆ ಕಾಣಲಿದೆ~ ಎಂದ ಶಿವಣ್ಣ, ಚಿತ್ರದ ಕತೆಯ ಬಗ್ಗೆ ಕೇಳಿದರೆ, `ಅದನ್ನೆಲ್ಲ ಹೇಳಿದರೆ ಸ್ವಾರಸ್ಯ ಉಳಿಯಲ್ಲ. ಚಿತ್ರಮಂದಿರಕ್ಕೇ ಬಂದು ನೋಡಬೇಕು~ ಎಂದು ಮುಗುಳ್ನಕ್ಕರು.`ಲಕ್ಷ್ಮಿ ಮತ್ತು ಅಂದರ್-ಬಾಹರ್ ಎಂಬ ಇನ್ನೆರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಭಕ್ತ ಅಂಬರೀಷ ಅಂತಹ ಪೌರಾಣಿಕ ಚಿತ್ರ ಮಾಡುವ ಬಯಕೆ ಇದೆ~ ಎಂದೂ ಹೇಳಿದರು.ಮಾತು ಬರಗಾಲದ ಕಡೆಗೂ ಹೊರಳಿತು. `ಈ ಪ್ರದೇಶದಲ್ಲಿ ಬರ ಇಷ್ಟೊಂದು ತೀವ್ರವಾಗಿರುವುದು ನಾವು ಇಲ್ಲಿಗೆ ಬಂದ ನಂತರವಷ್ಟೇ ಮನವರಿಕೆಯಾಯಿತು. ಬರ ಪೀಡಿತ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ವಿಚಾರವಾಗಿ ಕನ್ನಡ ಚಿತ್ರ ತಂಡ, ಹಿರಿಯ ಕಲಾವಿದ ಅಂಬರೀಷ್ ಹಾಗೂ ಫಿಲಂ ಚೇಂಬರ್ ಜೊತೆಗೆ ಚರ್ಚಿಸುತ್ತೇನೆ. ವೈಯಕ್ತಿಕವಾಗಿ ನೆರವು ನೀಡಲು ನಾನು ಸಿದ್ಧ~ ಎಂದರು.`ಪಾಲಿಗೆ ಬಂದದ್ದು ಪಂಚಾಮೃತ. ಬರವನ್ನು ದಿಟ್ಟವಾಗಿ ಎದುರಿಸಿ, ಎಲ್ಲರೂ ಬದುಕಿನಲ್ಲಿ ನಂಬಿಕೆ ಇಡಿ. ಮಳೆ ಬಂದೇ ಬರುತ್ತದೆ. ನಿರಾಶರಾಗಿ ಯಾರೂ ಜೀವ ಕಳೆದುಕೊಳ್ಳುವುದು ಬೇಡ~ ಎಂದು ರೈತಾಪಿ ಜನತೆಯಲ್ಲಿ ಧೈರ್ಯ ತುಂಬಿದರು.`ಇದು ನನ್ನ 12ನೇ ಚಿತ್ರ. ಚಿತ್ರ ತುಂಬಾ ಉತ್ತಮವಾಗಿ ಮೂಡಿ ಬಂದಿದ್ದು, 2012ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಪ್ರೇಕ್ಷಕರ ಮನಗೆಲ್ಲಲಿದೆ~ ಎಂದರು ನಟಿ ರಾಗಿಣಿ.`ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಾಫಿ  ಮಾಡಿದ್ದು, ಸತ್ಯ ಹೆಗಡೆ ಅವರ  ಕ್ಯಾಮೆರಾ ಇದೆ. ಶಿವಾ ಚಲನಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದರಲ್ಲಿ ಒಂದನ್ನು ವಿಜಾಪುರದ ಈ ಸ್ಮಾರಕಗಳ ಎದುರು ಮಾಡುತ್ತಿದ್ದೇವೆ. ಇನ್ನೊಂದು ಹಾಡನ್ನು ಕಾಶ್ಮೀರದಲ್ಲಿ ಚಿತ್ರೀಕರಿಸುವ ಉದ್ದೇಶವಿದೆ~ ಎಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.