ಗೋಲ್ಡ್‌ಫೀಲ್ಡ್ ಎಂ.ಇಡಿ ಕಾಲೇಜಿನಿಂದ ತೊಂದರೆ

7

ಗೋಲ್ಡ್‌ಫೀಲ್ಡ್ ಎಂ.ಇಡಿ ಕಾಲೇಜಿನಿಂದ ತೊಂದರೆ

Published:
Updated:

ಕೋಲಾರ: 2010-11ನೇ ಸಾಲಿನಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ ಕೌನ್ಸೆಲಿಂಗ್ ಮೂಲಕ ಆಯ್ಕೆಯಾಗಿ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಗೋಲ್ಡ್‌ಫೀಲ್ಡ್ ಎಂ.ಇಡಿ ಕಾಲೇಜಿಗೆ ಪ್ರವೇಶ ಪಡೆದಿರುವವರಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಎಸ್‌ಎಫ್‌ಐ ಜಿಲ್ಲಾ ಘಟಕದ ನೇತೃತ್ವದಲ್ಲಿ ದೂರು ನೀಡುವ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ವಿದ್ಯಾರ್ಥಿಗಳು ತಮಗೆ ಆಗುತ್ತಿರುವ ತೊಂದರೆ ಕುರಿತು ಹೇಳಿಕೊಂಡರು. ಕೌನ್ಸೆಲಿಂಗ್ ಮೂಲಕ ಆಯ್ಕೆಯಾದ ಬಳಿಕ ವಿಶ್ವವಿದ್ಯಾಲಯಕ್ಕೆ 14,685 ರೂಪಾಯಿ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಿದ್ದರೂ, ಕಾಲೇಜು ಆಡಳಿತ ಮಂಡಳಿ ಅಭಿವೃದ್ಧಿ ಶುಲ್ಕವೆಂದು ವಿದ್ಯಾರ್ಥಿಗಳಿಂದ 10 ಸಾವಿರ ರೂಪಾಯಿ ಶುಲ್ಕ ಪಡೆದಿದೆ. ಇದೀಗ ಅಪ್ರೂವಲ್ ಶುಲ್ಕ ರೂ 4.2 ಸಾವಿರ ಪಾವತಿಸದಿದ್ದರೆ ಅಂಕಪಟ್ಟಿ ನೀಡುವುದಿಲ್ಲ ಎಂದು ಬೆದರಿಸುತ್ತಿದೆ ಎಂದು ಆರೋಪಿಸಿದರು.ಕಾಲೇಜಿನಲ್ಲಿ ಪೂರ್ಣಕಾಲಿಕ ಉಪನ್ಯಾಸಕರಿಲ್ಲ. ಎಂ.ಇಡಿ ಕಾಲೇಜಿಗೆ ಪ್ರಾಂಶುಪಾಲರೂ ಇಲ್ಲ. ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಪೂರ್ಣಿಮಾ ಎಂಬುವವರು ಒರಟಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆರೋಪಿಸಿದರು.ವಿಶ್ವವಿದ್ಯಾಲಯಕ್ಕೆ ಪಾವತಿಸಿರುವ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಕೂಡ ನಿರ್ಲಕ್ಷ್ಯ ವಹಿಸಿದೆ. ಕೇವಲ ರೂ 750 ಅನ್ನು ಮಾತ್ರ ಮರುಪಾವತಿಸಲಾಗುವುದು ಎಂದು ತಿಳಿಸಿರುವುದು ಸರಿಯಲ್ಲ ಎಂದರು.ಎಸ್‌ಎಫ್‌ಐನ ವಿ.ಅಂಬರೀಶ್, ಸಂತೋಷ್, ವಿದ್ಯಾರ್ಥಿಗಳಾದ ವಿಜಯಕುಮಾರ್, ನಾಗರಾಜಪ್ಪ, ವೆಂಕಟರಮಣ, ಕೃಷ್ಣೋಜಿರಾವ್, ಸಲ್ಮ ಬೇಗಂ, ದೇವರಾಜ್, ಸಂತೋಷಕುಮಾರ್, ಗಣೇಶ್, ಚಿಕ್ಕಣ್ಣ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry