ಮಂಗಳವಾರ, ಏಪ್ರಿಲ್ 13, 2021
29 °C

ಗೋಳಿಯಂಗಡಿ; ಅಡಗಿದ ಅಕ್ರಮ ಕೆಂಪು ಕ್ವಾರಿ ಸದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಉಡುಪಿ ತಾಲ್ಲೂಕಿನ ಅವರ್ಸೆ ಪಂಚಾಯಿತಿ ವ್ಯಾಪ್ತಿಯ ಹಿಲಿಯಾಣ ಗ್ರಾಮ(ಸರ್ವೆ ನಂ 77/ಪಿ/1)ದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಕೆಂಪು ಕ್ವಾರಿಗಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಹಲವು ದಿನಗಳಿಂದ ನಿರಂತರ ದಾಳಿ ನಡೆಸುವ ಮೂಲಕ ಸ್ಥಗಿತಗೊಳಿಸಿದ್ದಾರೆ.ಗೋಳಿಯಂಗಡಿ ಪ್ರೌಢಶಾಲೆ ಕೂಗಳತೆಯಲ್ಲಿ ಮೂರು ಅಧಿಕೃತ ಕೆಂಪುಕಲ್ಲಿನ ಕ್ವಾರಿ ಸೇರಿದಂತೆ 18 ಕ್ವಾರಿಗಳು, ಆವರ್ಸೆ ಪಂಚಾಯಿತಿಯ ಸರ್ಕಾರಿ ಅರಣ್ಯ, ಗೋಮಾಳ, ಸಾರ್ವಜನಿಕ ಉಪಯೋಗ, ಸ್ಮಶಾನಕ್ಕೆ ಮೀಸಲಿಟ್ಟ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಲ್ಲುಕ್ವಾರಿಗಳಿದ್ದವು. ಪ್ರೌಢಶಾಲೆ ವಿದ್ಯಾರ್ಥಿಗಳು ಪಾಠ ಕೇಳಲು ಭಂಗ ಉಂಟಾದರೆ, ಗ್ರಾಮಸ್ಥರು ಕ್ವಾರಿಗಳ ಸದ್ದು ಮತ್ತು ನಿರಂತರ ಸಂಚರಿಸುವ ಕಲ್ಲು ಸಾಗಣೆ ಲಾರಿಗಳಿಂದ ತೊಂದರೆಗೊಳಗಾಗಿದ್ದರು.ಸ್ಥಳಿಯ ಪ್ರಭಾವಿ ಮತ್ತು ಪ್ರಬಲ ವ್ಯಕ್ತಿಗಳ ಕಲ್ಲುಕ್ವಾರಿಗಳ ಬಗ್ಗೆ ಅಧಿಕೃತ ದೂರು ನೀಡಲು ಜನ ಹಿಂಜರಿಯುತ್ತಿದ್ದರು. ಸಾರ್ವಜನಿಕರಿಗೆ ತೀವ್ರ ತೊಂದರೆಯಾದ ಬಗ್ಗೆ ಆವರ್ಸೆ ಗ್ರಾಮಸಭೆಯಲ್ಲಿ ಪ್ರತಿಧ್ವನಿಸಿ ಖಾಸಗಿ ವ್ಯಕ್ತಿಗಳು ಮತ್ತು ಸಾರ್ವಜನಿಕರು ಭೂ ಮತ್ತು ಗಣಿವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.ಜನವರಿ ಪ್ರಥಮ ದಾಳಿ: ಸಾರ್ವಜನಿಕ ದೂರು ಪರಿಗಣಿಸಿ ಜ. 25ರಂದು ಅಧಿಕಾರಿಗಳು ದಾಳಿ ಮಾಡಿ ಎರಡು ಪವರ್‌ ಟಿಲ್ಲರ್‌ ವಶಪಡಿಸಿಕೊಂಡು ಅಕ್ರಮವಾಗಿ ಕ್ವಾರಿ ನಡೆಸುತ್ತಿರುವ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಾಸಕ ಪ್ರತಾಪಚಂದ್ರ ಶೆಟ್ಟಿ ಅಕ್ರಮ ಕ್ವಾರಿ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿಧಾನಪರಿಷತ್‌ನಲ್ಲಿ ಅಗ್ರಹಿಸಿದ್ದರು. ಅಧಿಕಾರಿಗಳ ದಿಢೀರ್‌ ದಾಳಿಯಿಂದ ಸ್ವಲ್ಪ ಸಮಯ ಅಕ್ರಮ ಗಣಿಗಾರಿಕೆ ನಿಂತಿತ್ತು. ಆದರೆ, ಕಲ್ಲಿಗಿರುವ ದುಬಾರಿ ದರ, ಅದರಿಂದ ಬರುವ ಅಪಾರ ಹಣದ ಮರ್ಮ ಅರಿತ ಅಕ್ರಮ ಕಲ್ಲುಕ್ವಾರಿ ವ್ಯಕ್ತಿಗಳು ಮತ್ತೆ ಕಲ್ಲು ತೆಗೆಯಲು ಆರಂಭಿಸಿದ್ದರು.ಮತ್ತೆ ದಾಳಿ: ಏ. 12ರ ರಾತ್ರಿ ಉಡುಪಿ ಎಸ್‌ಪಿ ರವಿ ಕುಮಾರ್‌, ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ವಿಜ್ಞಾನಿ ಗಿರೀಶ್‌ ಮೋಹನ್‌, ಉಡುಪಿ ಅಧಿಕಾರಿ ಲತಾ, ಕುಂದಾಪುರ ಉಪ ವಿಭಾಗ ಎಎಸ್‌ಪಿ ರಾಮ್‌ ನಿವಾಸ್‌ ಸೇಪಾಠ್‌, ಶಂಕರನಾರಾಯಣ ಠಾಣೆ ಅಧಿಕಾರಿ ಜಯಂತ್‌ ಮತ್ತು ಸಿಬ್ಬಂದಿ ದಾಳಿ ನಡೆಸಿ ಐದು ಪವರ್‌ ಟಿಲ್ಲರ್‌, ಡೀಸೆಲ್‌ ಟ್ಯಾಂಕ್‌ ವಶಪಡಿಸಿಕೊಂಡು ಕ್ವಾರಿ ನಡೆಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದರು.ಆರೋಪಿಗಳಾದ ನಾಲ್ಕೂರು ಪ್ರತಾಪ್‌ ಹೆಗ್ಡೆ, ಹಿಲಿಯಾಣ ಹರೀಶ್‌ ಶೆಟ್ಟಿ, ಸಿದ್ದ ನಾಯ್ಕ್‌, ಬೆಳ್ವೆ ಕೃಷ್ಣ ನಾಯ್ಕ್‌, ವೆಂಕಟೇಶ ಕುಲಾಲ್‌, ಆವರ್ಸೆ ವೆಂಕಟೇಶ ಕುಲಾಲ್‌, ಹೆಸ್ಕುಂದ ನಾಗ ನಾಯ್ಕ್‌, ಆನಂದ ಹಾಲ್ಡಿ, ಅಲ್ಬಾಡಿ ಮಹಾಬಲ್‌ ನಾಯ್ಕ್‌ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.ಪರವಾನಗಿ ರದ್ದು: `ಗೋಳಿಯಂಗಡಿ ಪರಿಸರದ ಅಧಿಕೃತ ಕಲ್ಲಿನ ಕ್ವಾರಿಗಳಿಗೆ ತಾಲ್ಲೂಕು ದಂಡಾಧಿಕಾರಿ ನಿರಕ್ಷೇಪಣಾ ಪತ್ರದ ನಂತರ 2008ರಲ್ಲಿ ನಮ್ಮ ಇಲಾಖೆಯಿಂದ 5ವರ್ಷದ ಅವಧಿಗೆ ಅನುಮತಿ ಪತ್ರ ನೀಡಲಾಗಿತ್ತು. ಸಾರ್ವಜನಿಕರು ಮತ್ತು ಖಾಸಗಿ ವ್ಯಕ್ತಿಗಳಿಂದ ಲಿಖಿತ ದೂರು ಬಂದ ನಂತರ ಕಲ್ಲಿನ ಕ್ವಾರಿಗಳಿಗೆ ಹಲವು ಬಾರಿ ದಾಳಿ ಮಾಡಲಾಗಿದೆ.

 

ಸರ್ಕಾರಕ್ಕೆ ರಾಜಸ್ವ ಧನ ಪಾವತಿಸಿ ಮತ್ತು ವಂಚಿಸಿ ಅಕ್ರಮ ನಡೆಸುತ್ತಿರುವ ಕ್ವಾರಿಗಳ ಪರವಾನಿಗೆ ಪತ್ರ ರದ್ದುಗೊಳಿಸಲಾಗಿದೆ. ಕಲ್ಲು ಕ್ವಾರಿ ಚಟುವಟಿಕೆ ನಿಲ್ಲಿಸುವಂತೆ ಸಂಬಂಧಿಸಿದವರಿಗೆ ನೋಟಿಸ್‌ ಜಾರಿ ಮಾಡಿ ಏ. 12ರಂದು ದಾಳಿ ಮಾಡಲಾಗಿದೆ~ ಎಂದು ಉಡುಪಿ ತಾಲ್ಲೂಕು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಲತಾ `ಪ್ರಜಾವಾಣಿ~ಗೆ  ಪ್ರತಿಕ್ರಿಯಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.