ಸೋಮವಾರ, ಜೂನ್ 21, 2021
20 °C

ಗೋವಾ: ಬಿಜೆಪಿಗೆ ಕ್ರೈಸ್ತರ ಒಲವು, ಕೊಚ್ಚಿಹೋದ ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಚುನಾವಣೆ ನಡೆದ ಇತರ ರಾಜ್ಯಗಳಿಗಿಂತ ವ್ಯತಿರಿಕ್ತವಾಗಿ ಎಲ್ಲರ ನಿರೀಕ್ಷೆಯನ್ನೂ ಹುಸಿಗೊಳಿಸಿದ ಗೋವಾದ ಜನತೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯತ್ತ ಒಲವು ವ್ಯಕ್ತಪಡಿಸಿ ರಾಜ್ಯದಲ್ಲಿ ಕಮಲ ಅರಳಿಸಿದ್ದಾರೆ.ಮಾರ್ಚ್ 3ರಂದು ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ- ಎಂಜಿಪಿ ಮೈತ್ರಿಕೂಟ ಅಪ್ರತಿಮ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊಡೆದೋಡಿಸಿದೆ. ಕಳೆದ 32 ವರ್ಷಗಳ ಅವಧಿಯಲ್ಲಿ ಕಂಡಿರದ ಹೀನಾಯ ಸೋಲನ್ನು ಕಾಂಗ್ರೆಸ್ ಈ ಬಾರಿ ಕಂಡಿದೆ.ರಾಜ್ಯದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ 21 ಕ್ಷೇತ್ರಗಳಲ್ಲಿ ಜಯ ಸಾಧಿಸಿ ನಿಚ್ಚಳ ಬಹುಮತ ಗಳಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಅಲ್ಪಸಂಖ್ಯಾತರ ಮತಗಳತ್ತ ಕಣ್ಣಿಟ್ಟಿದ್ದ ಪಕ್ಷ ಈ ಬಾರಿ ಕ್ಯಾಥೊಲಿಕ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಲ್ಲದೆ ಹೊಸ ಮುಖಗಳಿಗೂ ಅವಕಾಶ ನೀಡಿದ್ದು ಪಕ್ಷದ ಜಯಭೇರಿಗೆ ಕಾರಣವಾಗಿದ್ದರೆ, `ಕುಟುಂಬ ರಾಜಕಾರಣ~ ಎಂಬ ಹಳೆಯ ತಂತ್ರಕ್ಕೆ ಜೋತುಬಿದ್ದದ್ದೇ ಕಾಂಗ್ರೆಸ್ ನೆಲಕಚ್ಚಲು ಕಾರಣವಾಯಿತು.ಇದರೊಂದಿಗೆ ಗಣಿ ವಿವಾದವನ್ನೇ ಚುನಾವಣಾ ಪ್ರಣಾಳಿಕೆಯನ್ನಾಗಿಸಿ ಪಕ್ಷದ ಗೆಲುವಿಗೆ ಮುಖ್ಯ ಕಾರಣರಾದ, ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಮನೋಹರ ಪರಿಕ್ಕರ್ ನೂತನ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳೂ ಕಂಡುಬಂದಿವೆ.ಎಲ್ಲಕ್ಕಿಂತ ಮುಖ್ಯವಾಗಿ ಗೋವಾದ ಕ್ಯಾಥೊಲಿಕ್ ಸಮುದಾಯ ಬಿಜೆಪಿಯತ್ತ ವಾಲಿದ್ದು ಈ ಬಾರಿಯ ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿದೆ. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಸಾಲ್‌ಸೆಟ್ಟೆಯಲ್ಲಿ ಕಾಂಗ್ರೆಸ್ ಎಂಟರಲ್ಲಿ ಕೇವಲ ಎರಡೇ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಬಿಜೆಪಿ ಕಣಕ್ಕಿಳಿಸಿದ್ದ ಆರು ಕ್ಯಾಥೊಲಿಕ್ ಅಭ್ಯರ್ಥಿಗಳ ಅಭೂತಪೂರ್ವ ಜಯ ಗೋವಾದ ಕ್ರೈಸ್ತರಿಗೆ `ಬಿಜೆಪಿ ಅಸ್ಪೃಶ್ಯ~ ಎಂಬ ಹಳೆಯ ಮಾತನ್ನು ಸುಳ್ಳಾಗಿಸಿದೆ.ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ಏಳು ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರೆ, ಮಿತ್ರ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಕಳೆದ ಬಾರಿಗಿಂತ ಒಂದು ಹೆಚ್ಚಿನ ಸ್ಥಾನ ( ಮೂರು ಸ್ಥಾನ)  ಪಡೆಯುವಲ್ಲಿ ಯಶಸ್ವಿಯಾಗಿದೆ.ಕೊಚ್ಚಿ ಹೋದ ಕಾಂಗ್ರೆಸ್: ಕಳೆದ ಬಾರಿ 16 ಸ್ಥಾನಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್-ಎನ್‌ಸಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಪ್ರಭಾವಿ ಅಲೆಮಾವೊ ಕುಟುಂಬದ ಮೂರು ಮಂದಿ ಸೇರಿದಂತೆ ಎಲ್ಲ ಅಭ್ಯರ್ಥಿಗಳೂ ಸಾಮೂಹಿಕ ಸೋಲು ಅನುಭವಿಸಿರುವುದು ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಗೋವಾದ ಜನತೆ ರೋಸಿಹೋಗಿರುವುದಕ್ಕೆ  ಸ್ಪಷ್ಟ ನಿದರ್ಶನವಾಗಿದೆ.ಕಳೆದ ಬಾರಿ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಮಿತ್ರ ಪಕ್ಷ ಎನ್‌ಸಿಪಿ, ಈ ಬಾರಿ ತನ್ನ ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ.`ಗೋವಾದ ಜನತೆ ಈ ಬಾರಿ ನೀಡಿರುವ ಮತಗಳು ಕೇವಲ ಬಿಜೆಪಿಗೆ ನೀಡಿದ ಮತಗಳಲ್ಲ, ಬದಲಾಗಿ ಕಾಂಗ್ರೆಸ್ ಅನ್ನು ತಿರಸ್ಕರಿಸಲು ನೀಡಿದ ಮತಗಳು~ ಎಂದು ಪರಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.