ಗೋವಿಂದ ವರದಿ-ರವದಿ: ಪಾಪು

7

ಗೋವಿಂದ ವರದಿ-ರವದಿ: ಪಾಪು

Published:
Updated:

ಧಾರವಾಡ: `ರಾಜ್ಯದಲ್ಲಿ 12,470 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಶಿಫಾರಸು ನೀಡಿದ ಪ್ರೊ. ಗೋವಿಂದ ವರದಿ ಅದು ವರದಿಯಲ್ಲ, ರವದಿ ಇದ್ದಂತೆ~ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ವ್ಯಂಗ್ಯವಾಡಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಪ್ರೊ.ಗೋವಿಂದ ವರದಿ ಕುರಿತು ಚರ್ಚಿಸಲು ಭಾನುವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಈ ವರದಿಯ ಕುರಿತು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವರದಿಯಿಂದ ಸಂಬಂಧಗಳು ಸರಿಯಾಗಿ ಉಳಿಯದೇ ಗೊಂದಲಗಳು ಸೃಷ್ಟಿಯಾಗುತ್ತವೆ.

ಈ ಗೋವಿಂದ ವರದಿ ನಮ್ಮ ಶಿಕ್ಷಕರಿಗೆ ಗೋವಿಂದಾಯನಮಃ ಎಂದು ಹೇಳುವ ರೀತಿಯಲ್ಲಿದೆ. ಇದನ್ನು ಅಗ್ನಿಗೆ ಆಹುತಿ ಮಾಡಬೇಕು~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಕರ್ನಾಟಕ ರಾಜ್ಯ ಸ್ವಯಂ ಸ್ವತಂತ್ರ ರಾಜ್ಯವಾಗಬೇಕು. ರಾಜ್ಯದಲ್ಲಿ ಕನ್ನಡ ಭಾಷೆ ಮತ್ತೆ ಸಿಂಹಾಸನವನ್ನು ಏರಬೇಕು. ಈ ಕೆಲಸವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾಡಬೇಕು.

ಮುಖ್ಯಮಂತ್ರಿಯಾಗಿದ್ದಾಗಲೇ ಇಂಥ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಎಲ್ಲ ದೇಶದ ಜನರು ತಮ್ಮ ತಾಯಿ ಭಾಷೆಯ ಬಗ್ಗೆ ಉತ್ತಮ ಅಭಿಮಾನ ಹೊಂದಿದ್ದಾರೆ. ಅದೇ ರೀತಿ ಕರ್ನಾಟಕದವರಾದ ನಾವು ಕನ್ನಡದ ಬಗ್ಗೆ ಉತ್ತಮ ಅಭಿಮಾನ ಹೊಂದಬೇಕು~ ಎಂದರು.ವಿಧಾನ ಪರಿಷತ್ ಸದಸ್ಯ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, `ಪ್ರೊ.ಗೋವಿಂದ ವರದಿಯಲ್ಲಿ ಕೆಲವು ತಪ್ಪು ವರದಿಗಳನ್ನು ನೀಡಲಾಗಿದೆ. ಈ ವರದಿ ಇಡೀ ರಾಜ್ಯವನ್ನೇ ಗೊಂದಲದಲ್ಲಿ ನೂಕಿದಂತಾಗಿದೆ.

ರಾಜ್ಯದಲ್ಲಿ ಶೇ 32ರಷ್ಟು ಕನ್ನಡ ಓದುಗ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಈ ವರದಿಯನ್ನು ಸರ್ಕಾರ ಅನುಸರಿಸಿದರೆ ಕನ್ನಡ ಶಾಲೆಗಳು ಒಂದೆಡೆ ಇರಲಿ, ಕನ್ನಡ ಭಾಷೆಯೇ ಇಲ್ಲದಂತಾಗುತ್ತದೆ. ರಾಜ್ಯ ಸರ್ಕಾರದ ತಪ್ಪು ನೀತಿಗಳಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಸದ್ಯ ಕನ್ನಡ ಶಾಲೆಗಳ ಪರಿಸ್ಥಿತಿ ಗಂಭೀರವಾಗಿದೆ. ಪ್ರತಿ ಹಳ್ಳಿಗಳಲ್ಲಿಯೂ ಸಿಬಿಎಸ್‌ಸಿ ಶಾಲೆಗಳು ಹುಟ್ಟಿಕೊಳ್ಳುತ್ತಿವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry