ಗೋ ಹತ್ಯೆ ನಿಷೇಧ: ಎಮ್ಮೆ ಹೊರಕ್ಕೆ

7

ಗೋ ಹತ್ಯೆ ನಿಷೇಧ: ಎಮ್ಮೆ ಹೊರಕ್ಕೆ

Published:
Updated:

ತುಮಕೂರು:  ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಗೋಹತ್ಯೆ ನಿಷೇಧ ಮಸೂದೆಯನ್ನು  ರಾಷ್ಟ್ರಪತಿಗಳು  ಸಣ್ಣ ಬದಲಾವಣೆಗೆ ಸೂಚಿಸಿ ವಾಪಸ್ ಕಳುಹಿಸಿದ್ದಾರೆ. ಅದರಂತೆ ಮುಂದಿನ ಅಧಿವೇಶನದಲ್ಲಿ  ಮಸೂದೆಗೆ ತಿದ್ದುಪಡಿ ತಂದು ಎಮ್ಮೆಯನ್ನು ಹೊರಗಿಟ್ಟು ಅನುಮೋದನೆಗಾಗಿ ಮತ್ತೆ ರಾಷ್ಟ್ರಪತಿಗಳಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ಸಿದ್ದಗಂಗಾ ಮಠದಲ್ಲಿ ಸೋಮವಾರ ಕೋಟಿಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಆಯೋಜಿಸಿದ್ದ 121 ಅಡಿ ಎತ್ತರದ ವಿಶ್ವದ ಅತಿ ಉದ್ದದ ಶಿವಲಿಂಗಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟ್ರಪತಿ ಅನುಮೋದನೆಗಾಗಿ ಕಳುಹಿಸಿದ್ದ ಮಸೂದೆಗೆ ಇದುವರೆಗೂ ಅಂಕಿತ ಸಿಕ್ಕಿರಲಿಲ್ಲ. ಹಲವು ಮಸೂದೆಗೆ ಸಣ್ಣ ತಿದ್ದುಪಡಿ ತಂದರೆ ಅನುಮತಿ ನೀಡುವುದಾಗಿ ಹಲವು ಒತ್ತಡಗಳ ಬಳಿಕ ರಾಷ್ಟ್ರಪತಿ ಕಾರ್ಯಾಲಯದಿಂದ ಸಲಹೆ ಬಂದಿದೆ. ಇದನ್ನು ಪಾಲಿಸಲಾಗುವುದು  ಎಂದರು.ಮಸೂದೆಯಲ್ಲಿ ಗೋವುಗಳ ಜೊತೆಗೆ ಎಮ್ಮೆಯನ್ನು ಸೇರಿಸಿರುವುದರಿಂದ ಅದನ್ನು ತೆಗೆದು ಹಾಕುವಂತೆ ಸಲಹೆ ನೀಡಲಾಗಿದೆ. ಎಮ್ಮೆಯನ್ನು ಮಸೂದೆಯಿಂದ ಹೊರಗಿಟ್ಟು ತಿದ್ದುಪಡಿ ತರುವುದಾಗಿ ಕಾರ್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಗೋ ಹತ್ಯೆ ನಿಷೇಧ, ಗೋ ಸಂರಕ್ಷಣೆಯಲ್ಲಿ ಇನ್ನಷ್ಟು ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಈ ಬಜೆಟ್‌ನಲ್ಲಿ ಗೋ ಸಭಾ ಆಯೋಗ ರಚನೆ ಪ್ರಕಟಿಸಲಾಗುವುದು. ಈಗಾಗಲೇ ಈ ಸಂಬಂಧ ಸಾಕಷ್ಟು ಚರ್ಚೆ, ಆಯೋಗದ ರೂಪುರೇಷೆ ನಡೆಯುತ್ತಿದೆ ಎಂದು ಅವರು    ಹೇಳಿದರು.ಬೃಹತ್ ಲಿಂಗ ನಿರ್ಮಾಣಕ್ಕೆ ಸರ್ಕಾರದಿಂದ ರೂ. 3 ಕೋಟಿ ನೆರವನ್ನು ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು. ಮತ್ತಷ್ಟು ನೆರವು ಕೋರಿದರೆ ಅದನ್ನು ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.ರೈತರ ಸಾಲ ಮನ್ನಾ ಬಗ್ಗೆ ಈಗ ಏನನ್ನೂ ಹೇಳಲಾಗದು. ಬಜೆಟ್ ವಿಷಯ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ರೈತರು ಸಂತಸ ಪಡುವಂತಹ ಬಜೆಟ್ ಇರಲಿದೆ ಎಂಬ ಸುಳಿವು ನೀಡಿದ ಅವರ, ಆದಾಯದ ಮೂಲಗಳ ಲೆಕ್ಕಾಚಾರ ನಡೆಯುತ್ತಿದ್ದು, ಆನಂತರ ಈ ವರ್ಷದ ಬಜೆಟ್ ಗಾತ್ರ ಗೊತ್ತಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry