ಗೋ ಹತ್ಯೆ ನಿಷೇಧ ಜಾರಿಯಾದರೆ ಕೃಷಿಗೆ ಪೆಟ್ಟು!

7
ಹೈಕೋರ್ಟ್ ವಕೀಲ ಎ.ಕೆ.ಸುಬ್ಬಯ್ಯ ಅಭಿಮತ

ಗೋ ಹತ್ಯೆ ನಿಷೇಧ ಜಾರಿಯಾದರೆ ಕೃಷಿಗೆ ಪೆಟ್ಟು!

Published:
Updated:

ಮಡಿಕೇರಿ: ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ತಿದ್ದುಪಡಿ ಮಸೂದೆ ಜಾರಿಯಾದರೆ ಕೃಷಿ ಹಾಗೂ ಕೃಷಿಕರಿಗೆ ಮಾರಕವಾಗಲಿದ್ದು, ಈ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರನ್ನು ಹೈಕೋರ್ಟ್ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮನವಿ ಮಾಡಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗಾಗಿ ಹಾಗೂ ಮಾಂಸಕ್ಕಾಗಿ ನಮ್ಮಲ್ಲಿ ಜಾನುವಾರುಗಳನ್ನು ಸಾಕುವುದು ವಾಡಿಕೆ. ಜಮೀನುಗಳಲ್ಲಿ ಕೆಲಸ ಮಾಡಲು ನಿಸ್ಸಹಾಯಕವಾದ ಮೇಲೆ ರೈತರು ಕೂಡ ತಮ್ಮ ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡಿ ಒಂದಿಷ್ಟು ಹಣ ಮಾಡಿಕೊಳ್ಳುತ್ತಾರೆ. ಇದು ಲಾಭ ತರವುದರಿಂದ ಹಲವು ಜನರು ಜಾನುವಾರುಗಳನ್ನು ಸಾಕುತ್ತಿದ್ದಾರೆ ಎಂದು ಅವರು ವಿವರಣೆ ನೀಡಿದರು.ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿ ಬಿಟ್ಟರೆ ರೈತರಾಗಲಿ ಅಥವಾ ಮಾಂಸಕ್ಕಾಗಿ ಜಾನುವಾರು ಸಾಕುವವರಾಗಲಿ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವಂತಿಲ್ಲ.

ತಮ್ಮ ಜಾನುವಾರುಗಳನ್ನು ಉಚಿತವಾಗಿ ಗೋ ಶಾಲೆಗಳಿಗೆ ನೀಡಬೇಕಾಗುತ್ತದೆ.

ಕಷ್ಟಪಟ್ಟು ಬೆಳೆಸಿ ಹೀಗೆ ಉಚಿತವಾಗಿ ನೀಡಿದರೆ ರೈತರಿಗೆ ಕೊನೆಯ ಕಂತಿನ ಲಾಭವೂ ದೊರಕದಂತಾಗುತ್ತದೆ. ಹೀಗಾದರೆ ಯಾರು ತಾನೇ ಜಾನುವಾರುಗಳನ್ನು ಸಾಕಲು ಮುಂದೆ ಬರುತ್ತಾರೆ ಎಂದು ಅವರು ಪ್ರಶ್ನಿಸಿದರು.ಜಾನುವಾರುಗಳು ಇಲ್ಲವೆಂದ ಮೇಲೆ ಸಹಜವಾಗಿ ಕೃಷಿ ಹಾಗೂ ಕೃಷಿಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಈ ಕಾಯ್ದೆ ಜಾರಿಯಿಂದ ಗೋಶಾಲೆ ನಡೆಸುತ್ತಿರುವವರಿಗೆ ಮಾತ್ರ ಲಾಭವಾಗುತ್ತದೆ.ಇವರಿಗೆ ಉಚಿತವಾಗಿ ಜಾನುವಾರುಗಳು ದಕ್ಕುತ್ತವೆ. ಕೆಲವು ದಿನಗಳವರೆಗೆ ಅವುಗಳನ್ನು ಸಾಕಿದಂತೆ ಮಾಡಿ ನಂತರ ಅವುಗಳನ್ನು ಸಾಯಿಸಿ, ಅವುಗಳಿಂದ ಮಾಂಸ, ಮೂಳೆ, ಚರ್ಮ ಪಡೆದು ಮಾರಾಟ ಮಾಡುತ್ತಾರೆ ಎಂದು ಅವರು ಆರೋಪಿಸಿದರು.ಬಿಸಿನೆಸ್ ಮಂತ್ರ

ಗೋ ಮೂತ್ರ ಬಳಸಿದರೆ ಒಳ್ಳೆಯದು ಎಂದು ಕೆಲವು ಕಂಪೆನಿಗಳು ಈಗ ಎಲ್ಲೆಡೆ ಪ್ರಚಾರ ಪಡಿಸುತ್ತಿವೆ. ಗೋ ಮೂತ್ರವನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ಈ ಕಂಪೆನಿಗಳು ಎಲ್ಲಿಂದ ಗೋ ಮೂತ್ರವನ್ನು ಸಂಗ್ರಹಿಸುತ್ತವೆ?  ಈ ಕಂಪೆನಿಗಳೇನು ರೈತರ ಮನೆಗೆ ಹೋಗಿ ಅಥವಾ ಹಳ್ಳಿಹಳ್ಳಿಗಳಿಗೆ ಹೋಗಿ ಗೋ ಮೂತ್ರ ಸಂಗ್ರಹಿಸುತ್ತವೆಯೇ? ಅಂತಹ ಯಾವುದಾದರೂ ಪ್ರಸಂಗವನ್ನು ನಾವು ನೋಡಿದ್ದೇವೆಯೇ? ಎಂದು ಅವರು ಪ್ರಶ್ನಿಸಿದರು.ಗೋ ಶಾಲೆಗಳಲ್ಲಿ ಉಚಿತವಾಗಿ ಬಿಡಲಾದ ಗೋವುಗಳಿಂದ ಮೂತ್ರವನ್ನು ಸಂಗ್ರಹಿಸಿ ಈ ಕಂಪೆನಿಗಳು ದುಡ್ಡು ಮಾಡುತ್ತವೆ. ನಿಜವಾದ ಕಾಳಜಿ ಇದ್ದರೆ ಕಂಪೆನಿಗಳು ರೈತರ ಮನೆಗೆ ಹೋಗಿ ದುಡ್ಡು ಕೊಟ್ಟು ಗೋಮೂತ್ರ ಸಂಗ್ರಹಿಸಲಿ. ಇದರಿಂದ ರೈತರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂದು ಸವಾಲು ಹಾಕಿದರು. 

ಜಾನುವಾರು ಸಂಖ್ಯೆ ವೃದ್ಧಿಯಾಗಬೇಕು, ಕೃಷಿ ಚಟುವಟಿಕೆ ಜೋರಾಗಿ ನಡೆಯಬೇಕು ಹಾಗೂ ರೈತರ ಬದುಕು ಹಸನಾಗಬೇಕಾದರೆ ಈ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಬಾರದು. ಚಿಕನ್, ಮೀನು ಮಾಂಸ ಮಾರಾಟದಂತೆ ಜಾನುವಾರು ಮಾಂಸ ಮಾರಾಟವನ್ನು ಮುಕ್ತಗೊಳಿಬೇಕು. ಜಾನುವಾರು ಮಾಂಸ ಮಾರಾಟ ಕ್ಷೇತ್ರ ಲಾಭದಾಯಕ ಎಂದಾದರೆ ಜಾನುವಾರು ಸಾಕಲು ಎಲ್ಲರೂ ಮುಂದಾಗುತ್ತಾರೆ ಎಂದು ಅವರು ಹೇಳಿದರು.ಕಾಂಗ್ರೆಸ್ ಹೊಣೆಗೇಡಿತನ

ವಿಧಾನಮಂಡಲದಲ್ಲಿ ಈ ತಿದ್ದುಪಡಿ ಮಸೂದೆ ಚರ್ಚೆಗೆ ಬಂದಾಗ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದು ಹೊಣೆಗೇಡಿತನ ಪ್ರದರ್ಶಿಸಿದ್ದಾರೆ. ಈಗಲೂ ಸಮಯ ಮಿಂಚಿಲ್ಲ. ರಾಜ್ಯಪಾಲರ ಬಳಿ ಹೋಗಿ ತಿದ್ದುಪಡಿ ಮಸೂದೆಗೆ ಅಂಕಿತ ಹಾಕದಂತೆ ಮನವೊಲಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸುಬ್ಬಯ್ಯ ಸಲಹೆ ನೀಡಿದ್ದಾರೆ.ಸಮಾವೇಶಕ್ಕೆ ವಿರೋಧ; ಪೂಜೆಗೂ ವಿದೇಶಿ ಹಣ!

ಹೂಡಿಕೆದಾರರ ಸಮಾವೇಶವನ್ನು ವಿರೋಧಿಸಿ ದೇವರಿಗೆ ಮೊರೆ ಹೋದ ಕೆಲವು ಸಂಘಟನೆಗಳು ಪೂಜೆಗೆ, ತೆಂಗಿನಕಾಯಿಗೆ ಬಳಸಿದ ಹಣವೂ ವಿದೇಶಗಳಿಂದ ಬಂದಿದ್ದು ಎಂದು ಎ.ಕೆ. ಸುಬ್ಬಯ್ಯ ವ್ಯಂಗ್ಯವಾಡಿದರು.ಪರಿಸರದ ಹೆಸರಿನಲ್ಲಿ ಜಿಲ್ಲೆಯ ಅಭಿವೃದ್ಧಿಯನ್ನು ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಎಂದರೆ ಇಲ್ಲಿನ ಜನರ ಅಭಿವೃದ್ಧಿ, ಇದನ್ನು ತಡೆಗಟ್ಟುವವರನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸುವವರು ಒಂದು ಕೋಮಿಗೆ ಸೇರಿದವರು ಎನ್ನುವುದು ದುರದೃಷ್ಟಕರ.ಕೊಡಗು ಈ ಒಂದೇ ಕೋಮಿಗೆ ಸೇರಿದ ಪ್ರದೇಶವಲ್ಲ. ಅರೆಗೌಡ, ಮುಸ್ಲಿಂ, ದಲಿತರು, ಆದಿವಾಸಿಗಳು ಸೇರಿದಂತೆ ಎಲ್ಲ ಜನಾಂಗಕ್ಕೂ ಸೇರಿದ ಪ್ರದೇಶವಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry