ಗೌಡರಿಂದ ತೆಂಗು ಪರಿಶೀಲನೆ: ಪರಿಹಾರಕ್ಕೆ ಆಗ್ರಹ

ಶನಿವಾರ, ಜೂಲೈ 20, 2019
22 °C

ಗೌಡರಿಂದ ತೆಂಗು ಪರಿಶೀಲನೆ: ಪರಿಹಾರಕ್ಕೆ ಆಗ್ರಹ

Published:
Updated:

ಕುಣಿಗಲ್: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ತೆಂಗು, ಅಡಿಕೆ ಬೆಳೆಗಳನ್ನು ಪರಿಶೀಲಿಸಿದರು.ತೆಂಗು-ಅಡಿಕೆ ರೈತರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿವೆ. ಬೆಳೆಹಾನಿಯಿಂದ ರೈತರು ಪರದಾಡುವಂತಾಗಿದೆ. ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಪರಿಹಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು. ತೆಂಗು ಬೆಳೆಗಾರರ ಸಂಕಷ್ಟ ಸ್ಥಿತಿ ಕುರಿತು ಲೋಕಸಭೆ ಅಧಿವೇಶನದಲ್ಲಿ ವಿಷಯ ಮಂಡಿಸಲಾಗುವುದು ಎಂದರು.ತಾಲ್ಲೂಕಿನ ತರೇದಕುಪ್ಪೆ, ಚಿಕ್ಕಶಾನಯ್ಯನಪಾಳ್ಯ, ಹೊಸೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹಾನಿಗೊಳಗಾಗಿರುವ ತೆಂಗು, ಅಡಿಕೆ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.ರೈತರ ಜಮೀನಿಗೆ ಸಂಬಂಧಿಸಿದ ಪಹಣಿ ದಾಖಲೆಯಲ್ಲಿ, ತೆಂಗು, ಅಡಿಕೆ ಬೆಳೆಗಳ ಬಗ್ಗೆ ಕಂದಾಯ ಇಲಾಖಾ ಸಿಬ್ಬಂದಿ ನಮೂದು ಮಾಡದಿರುವ ಕಾರಣ, ಬೆಳೆಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಬೇಕು. ತೆಂಗು, ಅಡಿಕೆ ಬೆಳೆದು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರಧನ ಕೊಡಿಸಬೇಕು ಎಂದು ಶಾಸಕ ಡಿ.ನಾಗರಾಜಯ್ಯ ಮನವಿ ಮಾಡಿದರು.ಶಾಸಕರಾದ ಎಂ.ಟಿ.ಕೃಷ್ಣಪ್ಪ, ಚೆಲುವರಾಯಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಲ್.ಹರೀಶ್, ಭಕ್ತರಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಸವರಾಜು, ತಹಶೀಲ್ದಾರ್ ಜಗದೀಶ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ರಾಮಚಂದ್ರಪ್ಪ, ಪುರಸಭೆ ಸದಸ್ಯರಾದ ಈ.ಮಂಜು, ಸತೀಶ, ಚಂದ್ರಶೇಖರ್, ಅನ್ಸರ್‌ಪಾಷ ಇತರರು ಇದ್ದರು.ಒಣಗಿದ ತೆಂಗು: ಕಳವಳ

ತುರುವೇಕೆರೆ: ಬಯಲುಸೀಮೆಯುದ್ದಕ್ಕೂ ರೈತರ ತೆಂಗಿನ ತೋಟಗಳು ಒಣಗಿ ನಿಂತಿರುವುದರ ಬಗ್ಗೆ ಮಂಗಳವಾರ ಮಾಜಿ ಪ್ರಧಾನಿ ದೇವೇಗೌಡ ತೀವ್ರ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತೆಂಗಿನ ತೋಟಗಳನ್ನು ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಮರಗಳು ನಾಶವಾಗಿವೆ. ನೀರಿನ ಅಭಾವದಿಂದ ರೈತರು ಪರ್ಯಾಯ ಬೆಳೆ ಬೆಳೆಯುವ ಸ್ಥಿತಿಯಲ್ಲೂ ಇಲ್ಲ ಎಂದು ವಿವರಿಸಿದರು.ತೆಂಗು ಅಭಿವೃದ್ಧಿ ಮಂಡಲಿಯು ತೆಂಗು ಬೆಳೆಯ ಪುನಶ್ಚೇತನ, ನಿರ್ವಹಣೆ ಹಾಗೂ ಹೊಸಗಿಡಗಳ ನಾಟಿಗೆ ಒಟ್ಟಾರೆ ಹೆಕ್ಟೇರ್‌ಗೆ ರೂ 21 ಸಾವಿರ ಪರಿಹಾರ ನಿಗದಿಪಡಿಸಿದೆ. ಈ ಅಂಶವೂ ಹಲವು ಅಧಿಕಾರಿಗಳಿಗೆ ಗೊತ್ತಿಲ್ಲ. ತೆಂಗು ಮಂಡಳಿಯ ಪುನಶ್ಚೇತನ ಪರಿಹಾರ ಯೋಜನೆ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ರೂಪಿಸಬೇಕು. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದರು.ದೇವೇಗೌಡರು ತಾಲ್ಲೂಕಿನ ಹೊಡಕೇಘಟ್ಟ, ಗೂರಲುಮಠ, ದಬ್ಬೇಘಟ್ಟ, ಕಡೇಹಳ್ಳಿ ಮೊದಲಾದ ಭಾಗದ ತೆಂಗಿನತೋಟಗಳನ್ನು ವೀಕ್ಷಿಸಿದರು. ಪ್ರಗತಿಪರ ಕೃಷಿಕ ಸಿದ್ದೇಗೌಡರ 200ಎಕರೆಗೂ ಮೀರಿದ ತೋಟದಲ್ಲಿದ್ದ 32 ಕೊಳವೆಬಾವಿಗಳ ಪೈಕಿ 26 ಕೊಳವೆಬಾವಿಗಳು ಒಣಗಿದ್ದು, 8 ಸಾವಿರ ಮರಗಳ ಪೈಕಿ 3000ಕ್ಕೂ ಹೆಚ್ಚು ತೆಂಗಿನ ಗಿಡಗಳು ಒಣಗಿ ನಿಂತಿರುವುದನ್ನು ನೋಡಿ ಗೌಡರು ದಿಗ್ಭ್ರಮೆ ವ್ಯಕ್ತಪಡಿದರು.ಶಾಸಕರಾದ ಎಂ.ಟಿ.ಕೃಷ್ಣಪ್ಪ, ಚೆಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್ ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್‌ಮುಖಂಡರಾದ ಸಿದ್ದೇಗೌಡ, ರಾಮಚಂದ್ರ,  ಡಿ.ಎನ್.ಶಂಕರೇಗೌಡ, ಡಿ.ಜೆ.ರಂಗಸ್ವಾಮಿ, ಆಂಜನಪ್ಪ, ಬೈತರಹೊಸಹಳ್ಳಿ ರಾಮಚಂದ್ರ, ಪಿ.ಎಚ್.ಧನಪಾಲ್, ಡಾ.ನಂಜಪ್ಪ ಹಾಜರಿದ್ದರು.ತೆಂಗಿನ ಮರಗಳಿಗೆ ಕೊಡಲಿ

ಇತ್ತ ದೇವೇಗೌಡರು ಮಂಗಳವಾರ ದಬ್ಬೇಘಟ್ಟ ಹೋಬಳಿಯಲ್ಲಿ ರೈತರ ಹಾಳುಬಿದ್ದ ತೆಂಗಿನ ತೋಟಗಳನ್ನು ವೀಕ್ಷಿಸುತ್ತಿದ್ದರೆ ಅತ್ತ ದಂಡಿನಶಿವರ ಹೋಬಳಿಯಲ್ಲಿ ಹಲವು ರೈತರು ಹಾಳಾದ ತೆಂಗಿನಮರಗಳನ್ನು ಕೂಲಿ ಕೊಟ್ಟು ಕಡಿಸಿ ಹಾಕುವುದರಲ್ಲಿ ತೊಡಗಿದ್ದರು.

ದಂಡಿನಶಿವರದ ಪ್ರಗತಿಪರ ಕೃಷಿಕ ಗಂಗಾಧರಗೌಡ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, ದಂಡಿನಶಿವರ, ಅರಕೆರೆ, ಅಮ್ಮಸಂದ್ರ ಸುತ್ತಮುತ್ತ ಸಾವಿರಾರು ಗಿಡಗಳು ಒಣಗಿ ನಿಂತಿವೆ. ನನ್ನ ತೋಟದ ನೂರಾರು ಮರಗಳು ಸುಳಿ ಒಣಗಿ ನಿಂತಿವೆ. ಸಾಕಿ ಸಲಹಿದ ಮರಗಳು ಹೀಗೆ ಒಣಗಿ ನಿಂತಿರುವುದನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಸರ್ಕಾರ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಒಂದು ಮರ ಕಡಿಯಲು ರೂ.250 ಕೊಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.ಕೊಬ್ಬರಿ ಖರೀದಿ ಕೌಂಟರ್ ತೆರೆಯಲು ಒತ್ತಾಯ

ತುರುವೇಕೆರೆ: ನ್ಯಾಫೆಡ್ ಮೂಲಕ ರೈತರ ಕೊಬ್ಬರಿ ಖರೀದಿಸಲು ಈಗಿರುವ ಎರಡು ಕೌಂಟರ್‌ಗಳು ಸಾಲದಾಗಿವೆ. ಶೀಘ್ರ ಇನ್ನೆರಡು ಕೌಂಟರ್ ತೆರೆಯಬೇಕೆಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅರಳೀಕೆರೆ ರವಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ನ್ಯಾಫೆಡ್ ಕೇಂದ್ರದಲ್ಲಿ ರೈತರ ಕೊಬ್ಬರಿ ಖರೀದಿಸಲು ಸೆಪ್ಟೆಂಬರ್ ಅಂತ್ಯದವರೆಗೆ ಮುಂಗಡ ದಿನಾಂಕ ನೀಡಿದೆ. ಈಗಾಗಲೇ ಕೊಬ್ಬರಿ ಸುಲಿಸಿರುವ ರೈತರ ಕೊಬ್ಬರಿ ತೂಕ ಕಳೆದುಕೊಳ್ಳುತ್ತಿದೆ. ಹಲ ತುರ್ತು ಅಗತ್ಯಗಳಿಗಾಗಿ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ರೈತರು ಖಾಸಗಿಯವರಲ್ಲಿ ಕೊಬ್ಬರಿ ಮಾರುತ್ತಿದ್ದಾರೆ. ಸಹಕಾರಿ ಮಹಾಮಂಡಲ ಕೂಡಲೇ ಇನ್ನೆರಡು ಖರೀದಿ ಕೌಂಟರ್ ಆರಂಭಿಸಿ ರೈತರ ಕೊಬ್ಬರಿ ಕೊಳ್ಳಲು ಏರ್ಪಾಡು ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಟಿ.ಎಸ್.ಬೋರೇಗೌಡ, ಸೋಮಣ್ಣ, ಯೋಗಾನಂದ್, ಅಶೋಕ್ ಇದ್ದರು.ಬರ: ಪರಿಹಾರಕ್ಕೆ ಕೆಜೆಪಿ ಆಗ್ರಹ

ತಿಪಟೂರು: ತಾಲ್ಲೂಕಿನಲ್ಲಿ ಸತತ ಬರದಿಂದ ನಲುಗಿರುವ ರೈತರಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಕೆಜೆಪಿ ಮುಖಂಡ ಲೋಕೇಶ್ವರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಪೂರ್ವ ಮುಂಗಾರು ವೈಫಲ್ಯದಿಂದ ತಾಲ್ಲೂಕಿನ ರೈತರು ಬಿತ್ತಿದ ಹೆಸರು, ತೊಗರಿ, ಉದ್ದು ಬೆಳೆಗಳು ಹಾಳಾಗಿವೆ. ತೆಂಗು ಸರ್ವನಾಶವಾಗುವ ಸ್ಥಿತಿ ತಲುಪಿದೆ. ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ಮೂಲಕ ರೈತರಿಗೆ ಧೈರ್ಯ ತುಂಬಬೇಕು ಎಂದರು.ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ನಾಲ್ಕು ತಿಂಗಳಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಸರ್ಕಾರ ಮೀಸಲು ಪಟ್ಟಿ ಪ್ರಕಟಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ನಗರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿವೆ ಎಂದು ದೂರಿದರು.

ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿರುವ ನ್ಯಾಫೆಡ್ ಕೇಂದ್ರದ ಖರೀದಿ ಕೌಂಟರ್ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಬೇಕು.ಹೇಮಾವತಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ಹೊನ್ನವಳ್ಳಿ ಏತನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು. ನಗರದ ಯುಜಿಡಿ ಕಾಮಗಾರಿ ಮುಗಿಸಿ ನಗರದ ಸಮಸ್ಯೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.ಕೆಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಘುಪತಿ, ಕಾರ್ಯದರ್ಶಿ ಮಲ್ಲೇಶ್, ನಗರಸಭೆ ಸದಸ್ಯರಾದ ಜಿ.ಬಿ.ರಾಜಶೇಖರ್, ಯದುನಂದನ್, ಗಂಗಮ್ಮ, ಮುಖಂಡರಾದ ಎಂ.ನಾಗರಾಜು, ನಾಸೀರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry