ಗೌಡಹಳ್ಳಿ: ಸಮಸ್ಯೆಗಳ ಆಗರ

7

ಗೌಡಹಳ್ಳಿ: ಸಮಸ್ಯೆಗಳ ಆಗರ

Published:
Updated:

ಯಳಂದೂರು: ಕೆಸರು ತುಂಬಿದ ರಸ್ತೆಗಳು, ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಳ್ಳುವ ದೇಗುಲ, ಪುಟ್ಟ ಕಟ್ಟಡದಲ್ಲೇ ನಡೆಯುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಿಯಾಗಿ ತೆರೆಯದ ಗ್ರಂಥಾಲಯ, ಅಂನವಾಡಿ ಕಟ್ಟಡದ ಬಳಿಯಲ್ಲೇ ನಿಲ್ಲುವ ಕಲುಷಿತ ನೀರು!ಇವು ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಗೌಡಹಳ್ಳಿಯ ಸಮಸ್ಯೆಗಳು. ಈ ಗ್ರಾಮದ ಆಸ್ಪತ್ರೆ ಹಾಗೂ ಅಂಗನವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ರಸ್ತೆಯಲ್ಲಿ ಕೇವಲ ಮಣ್ಣು ಸುರಿಯಲಾಗಿದ್ದು ಮಂಡಿಯುದ್ದದ ಹಳ್ಳಗಳು ಬಿದ್ದಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮುಂಭಾಗ ತಿಪ್ಪೆ ಸುರಿಯಲಾಗಿದೆ. ಪಕ್ಕದಲ್ಲೇ ಇರುವ ಸರ್ಕಾರಿ ಜಮೀನು ಅಭಿವೃದ್ಧಿಗೊಳಿಸುವ ಗೋಜಿಗೆ ಯಾರೋ ಹೋಗಿಲ್ಲ. ಹಾಗಾಗಿ ಈ ಸ್ಥಳ ಎಂಎನ್‌ಸಿ ಮುಳ್ಳು ಬೆಳೆಯುವ ಜೊಂಡಾಗಿ ಮಾರ್ಪಟ್ಟಿದ್ದು ಹಂದಿಗಳ ಆವಾಸಸ್ಥಾನವಾಗಿ ರೋಗಜನ್ಯ ಪ್ರದೇಶವಾಗಿದೆ.ಇಲ್ಲಿಂದ ಮಹಾಲಿಂಗೇಶ್ವರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹದಗೆಟ್ಟಿದೆ. ಕಾಲುವೆಯ ಮುಂಭಾಗದಲ್ಲಿರುವ ಈ ದೇಗುಲಕ್ಕೆ ಸೇತುವೆಯೂ ನಿರ್ಮಾಣಗೊಂಡಿಲ್ಲ. ಹಾಗಾಗಿ ಭಕ್ತರು ಇಲ್ಲಿಗೆ ತೆರಳಬೇಕಾದರೆ ಹರಸಾಹಸ ಪಡಬೇಕಾದ ಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿ ಮಹದೇವಸ್ವಾಮಿ ದೂರುತ್ತಾರೆ.ಗ್ರಾಮದ ಅಂಗನವಾಡಿ ಹಾಗೂ ಗ್ರಂಥಾಲಯದ ಮುಂಭಾಗ ಕಲುಷಿತ ನೀರು ನಿಂತು ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿರುವುದರಿಂದ ಇಲ್ಲಿ ಕಲಿಯುವ ಚಿಣ್ಣರಿಗೆ ತೊಂದರೆಯಾಗುತ್ತದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಂದಿನಿಂದ ಸಣ್ಣ ಕೋಣೆಯಲ್ಲೇ ಇದು ನಡೆಯುತ್ತಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸುಸಜ್ಜಿತ ಹಾಸಿಗೆಯುಳ್ಳ ನೂತನ ಕಟ್ಟಡ ನಿರ್ಮಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಸೋಮಪ್ಪ, ಮಹೇಶ್‌, ಸತೀಶ್‌ ಸೇರಿದಂತೆ ಹಲವು ನಾಗರೀಕರ ದೂರಾಗಿದೆ. ಅಲ್ಲದೆ ಇಲ್ಲಿರುವ ಗ್ರಂಥಾಲಯ ಸರಿಯಾಗಿ ತೆರೆಯದೆ ಇರುವುದರಿಂದ ಓದುಗರಿಗೆ ತೊಂದರೆಯಾಗಿದೆ ಹಾಗಾಗಿ ನಿತ್ಯ ಇದು ತೆರೆಯುವಂತೆ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry