ಬುಧವಾರ, ಮಾರ್ಚ್ 3, 2021
25 °C
ಇರಾನಿ ಕಪ್‌: 405 ರನ್‌ ಮುನ್ನಡೆ ಪಡೆದ ಆತಿಥೇಯರು, ಇನಿಂಗ್ಸ್‌ ಸೋಲಿನ ಭೀತಿಯಲ್ಲಿ ಭಜ್ಜಿ ಬಳಗ

ಗೌತಮ್‌ ಶತಕ, ಕರ್ನಾಟಕದ ಪ್ರಾಬಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌತಮ್‌ ಶತಕ, ಕರ್ನಾಟಕದ ಪ್ರಾಬಲ್ಯ

ಬೆಂಗಳೂರು: ರಣಜಿ ಚಾಂಪಿಯನ್‌ ಕರ್ನಾಟಕ ತಂಡ ಮತ್ತೊಂದು ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗುತ್ತಿದೆ. 405 ರನ್‌ಗಳ ಭಾರಿ ಮುನ್ನಡೆ ಗಳಿಸಿ ಭಾರತ ಇತರೆ ತಂಡವನ್ನು ಸಂಕಷ್ಟಕ್ಕೆ ದೂಡಿರುವ ಆತಿಥೇಯರು ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ತಮ್ಮ ಪ್ರಭುತ್ವ ಮುಂದುವರಿಸಿದ್ದಾರೆ.ಎರಡು ದಿನಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಿಯುತ್ತಿರುವ ರನ್‌ ಹೊಳೆ ಮಂಗಳವಾರವೂ ನಿಲ್ಲಲಿಲ್ಲ. ಸ್ಟುವರ್ಟ್‌ ಬಿನ್ನಿ ಜೊತೆ ಚೆಂದದ ಆಟವಾಡಿದ ಸಿ.ಎಂ. ಗೌತಮ್‌ ಶತಕ  ಕರ್ನಾಟಕ ತಂಡದ ಮುನ್ನಡೆಗೆ ಕಾರಣವಾಯಿತು. ಇದರಿಂದ ಆತಿಥೇಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 145 ಓವರ್‌ಗಳಲ್ಲಿ 606 ರನ್‌ ಕಲೆ ಹಾಕಿತು. ಇರಾನಿ ಟ್ರೋಫಿಯಲ್ಲಿ ಕರ್ನಾಟಕ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ. 1983–84ರಲ್ಲಿ ರಾಜ್‌ಕೋಟ್‌ನಲ್ಲಿ 405 ರನ್‌ ಪೇರಿಸಿದ್ದು ಇದುವರೆಗಿನ ಒಟ್ಟು ಗರಿಷ್ಠ  ಮೊತ್ತವಾಗಿತ್ತು.ಒತ್ತಡದೊಂದಿಗೆ ದ್ವಿತೀಯ ಇನಿಂಗ್ಸ್‌ನ  ಆರಂಭಿಸಿರುವ ಭಾರತ ಇತರೆ ತಂಡ 38 ಓವರ್‌ಗಳಲ್ಲಿ 114 ರನ್‌ ಗಳಿಸಿದ್ದು, ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿದೆ.ಗೌತಮ್‌ ಶತಕ: ಎರಡನೇ ದಿನದಾಟದ ಅಂತ್ಯಕ್ಕೆ ಆರು ರನ್‌ ಗಳಿಸಿದ್ದ ಸಿ.ಎಂ. ಗೌತಮ್‌ ತಾಳ್ಮೆಯ ಆಟದ ಮೂಲಕ ಶತಕ ಸಿಡಿಸಿದರು. ಆದರೆ, ಚುಟುಕು ಆಟವನ್ನು ನೆನಪಿಸುವಂತೆ ಸೋಮವಾರ 115 ರನ್‌ ಗಳಿಸಿದ್ದ ಸ್ಟುವರ್ಟ್‌ ಬಿನ್ನಿ (122, 122ಎಸೆತ, 15 ಬೌಂಡರಿ. 3 ಸಿಕ್ಸರ್‌) ಮೂರನೇ ದಿನ ಬೇಗನೇ ವಿಕೆಟ್‌ ಒಪ್ಪಿಸಿದರು.ಬಿನ್ನಿ ಔಟಾದರೂ ಗೌತಮ್‌ ವೇಗವಾಗಿ ರನ್‌ ಕಲೆ ಹಾಕಲು ಹಾತೊರೆಯಲಿಲ್ಲ. ವಿನಯ್‌ ಕುಮಾರ್‌ (31), ಶ್ರೇಯಸ್‌ ಗೋಪಾಲ್‌ (16) ಮತ್ತು ಅಭಿಮನ್ಯು ಮಿಥುನ್‌ (ಔಟಾಗದೆ 34) ಜೊತೆ ನಿಧಾನವಾಗಿ ಆಡಿ ಮೂರಂಕಿಯ ಗಡಿ ದಾಟಿದರು.168 ಎಸೆತಗಳನ್ನು ಎದುರಿಸಿದ ಬಲಗೈ ಬ್ಯಾಟ್ಸ್‌ಮನ್‌ ಗೌತಮ್ 17 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 122 ರನ್ ಗಳಿಸಿದರು. ಥರ್ಡ್‌ ಮ್ಯಾನ್‌ ಹಾಗೂ ರಿವರ್ಸ್‌ ಸ್ಲಿಪ್‌ ಮೂಲಕ ಸೊಗಸಾದ ಹೊಡೆತಗಳನ್ನು ಬಾರಿಸಿದರು. 104ನೇ ಓವರ್‌ನಲ್ಲಿ ಅನುರೀತ್‌ ಸಿಂಗ್‌ ಎಸೆತದಲ್ಲಿ ಫೈನ್‌ ಲೆಗ್‌ ಬಳಿ ಒಂದು ಸಿಕ್ಸರ್‌ ಸಿಡಿಸಿದರು.ಶತಕದ ಸಂಭ್ರಮ: ಈ ಸಲದ ರಣಜಿಯಲ್ಲಿ ಒಂದೇ ಶತಕ ಗಳಿಸಿದ್ದ ಗೌತಮ್‌ ಇಲ್ಲಿ ಮತ್ತೊಂದು ಚೆಂದದ ಇನಿಂಗ್ಸ್‌ ಕಟ್ಟಿದರು. 132.1ನೇ ಓವರ್‌ನ ಬಾಬಾ ಅಪರಾಜಿತ್‌ ಎಸೆತದಲ್ಲಿ ಕವರ್‌ ಬಳಿ ಬೌಂಡರಿ ಬಾರಿಸಿ ಮೂರಂಕಿಯ ಗಡಿ ದಾಟಿದರು. ಶತಕ ಗಳಿಸಿದಾಗ ಬ್ಯಾಟ್‌ ಎತ್ತಿ ಡ್ರೆಸ್ಸಿಂಗ್‌ ಕೊಠಡಿಯತ್ತ ತೋರಿಸಿ ಸಂಭ್ರಮಿಸಿದರು. ಕ್ರೀಡಾಂಗಣದಲ್ಲಿಯೇ ಇದ್ದ ಗೌತಮ್‌ ತಂದೆ ಮುರಳೀಧರನ್‌ ಕೂಡಾ ಎದ್ದು ನಿಂತು ಚಪ್ಪಾಳೆ ತಟ್ಟಿದರು.ಶತಕ ಗಳಿಸಿದ ನಂತರ ಗೌತಮ್‌ ವೇಗವಾಗಿ ರನ್‌ ಕಲೆ ಹಾಕಿದರು. 145ನೇ ಓವರ್‌ನ ಪಂಕಜ್‌ ಸಿಂಗ್‌ ಎಸೆತದಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದ್ದೇ ಇದಕ್ಕೆ ಸಾಕ್ಷಿ. ಇದರಿಂದ ಕರ್ನಾಟಕ ತಂಡಕ್ಕೆ 600ಕ್ಕೂ ಅಧಿಕ ರನ್‌ ಗಳಿಸಲು ಸಾಧ್ಯವಾಯಿತು. ಈ ಸಲದ ರಣಜಿಯ ಫೈನಲ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರಾಜ್ಯ ತಂಡ ಗಳಿಸಿದ್ದ 515 ರನ್‌ ಗರಿಷ್ಠ ಒಟ್ಟು ಮೊತ್ತ ಎನಿಸಿತ್ತು. ಆರು ವಿಕೆಟ್‌ ಪಡೆದ ಪಂಕಜ್‌ ಇತರೆ ತಂಡದ ಯಶಸ್ವಿ ಬೌಲರ್‌ ಎನಿಸಿದರು.ಮಿಥುನ್‌ ಅಬ್ಬರ: ಕರ್ನಾಟಕದ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಬಂದಿದ್ದ ಕ್ರಿಕೆಟ್‌ ಪ್ರೇಮಿಗಳಿಗೆ ಅಭಿಮನ್ಯು ಮಿಥುನ್ ‘ರನ್‌ ಕಾಣಿಕೆ’ ನೀಡಿದರು. ಮಿಥುನ್‌ 140ನೇ ಓವರ್‌ನಲ್ಲಿ ಒಂದು ಸಿಕ್ಸರ್‌ ಮತ್ತು ಎರಡು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 18 ರನ್‌ಗಳು ಬಂದವು.ಗಂಭೀರ್‌ ಮತ್ತೆ ವೈಫಲ್ಯ: ಅನುಭವಿ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ವೈಫಲ್ಯ ಮುಂದುವರಿಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 22 ರನ್ ಗಳಿಸಿದ್ದ ದೆಹಲಿಯ ಆಟಗಾರ ಎರಡನೇ ಇನಿಂಗ್ಸ್‌ನಲ್ಲಿ 9 ರನ್‌ ಗಳಿಸಿ ಔಟಾದರು.ಮೂರನೇ ಓವರ್‌ನ ಎರಡು ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಗಂಭೀರ್‌ ಐದನೇ ಎಸೆತದಲ್ಲಿ ಮನೀಷ್‌ ಪಾಂಡೆ ಕೈಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.ಯುವ ಆಟಗಾರ ಬಾಬಾ ಅಪರಾಜಿತ್‌ (ಬ್ಯಾಟಿಂಗ್‌ 42, 100ಎ., 5ಬೌಂ.) ಮತ್ತು ಕೇದಾರ್‌ ಜಾಧವ್‌ (44, 65ಎ., 7 ಬೌಂ.) ಗಳಿಸಿ ತಂಡಕ್ಕೆ ಆಸರೆಯಾದರು.ಈ ತಂಡ ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಬೇಕಾದರೆ, ಇನ್ನು 291 ರನ್‌ ಕಲೆ ಹಾಕಬೇಕಿದೆ. ಎರಡು ದಿನಗಳ ಆಟ ಬಾಕಿ ಇದ್ದು, ನಾಲ್ಕನೇ ದಿನದಾಟದಲ್ಲಿಯೇ ಉಳಿದ ಏಳು ವಿಕೆಟ್‌ಗಳನ್ನು ಉರುಳಿಸುವ ಲೆಕ್ಕಾಚಾರ ಕರ್ನಾಟಕ ತಂಡದ್ದಾಗಿದೆ. ಭಾರತ ಇತರೆ ತಂಡ ಸತತ ಎಂಟು ವರ್ಷಗಳಿಂದ ಇರಾನಿ ಕಪ್‌ ಜಯಿಸಿದೆ. ಆದರೆ ಈ ಬಾರಿ ಗೆಲುವಿನ ಓಟಕ್ಕೆ ತಡೆಬೀಳುವುದು ಬಹುತೇಕ ಖಚಿತವಾಗಿದೆ.ವಿನಯ್‌ ಮಿಂಚು: ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಉರುಳಿಸಿದ್ದ ವಿನಯ್‌ ಮತ್ತೊಮ್ಮೆ ಮಿಂಚಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೀವನ್‌ ಜ್ಯೋತ್‌ ಸಿಂಗ್‌ ಮತ್ತು ಗಂಭೀರ್‌ ವಿಕೆಟ್‌ ಕಬಳಿಸಿದರು. ಈ ಸಲದ ರಣಜಿಯಲ್ಲಿ 1000ಕ್ಕೂ ಅಧಿಕ ರನ್ ಗಳಿಸಿರುವ ಜಾಧವ್‌ ಅವರನ್ನು ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಔಟ್‌ ಮಾಡಿದರು.ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿರುವ ಇತರೆ ತಂಡ ಈಗಾಗಲೇ ಸೋಲಿನ ಸುಳಿಗೆ ಸಿಲುಕಿದೆ. ಆದ್ದರಿಂದ ಐದು ದಿನಗಳ ಪಂದ್ಯ ನಾಲ್ಕೇ ದಿನದಲ್ಲಿ ಮುಗಿಯುವ ಸಾಧ್ಯತೆ ಅಧಿಕವಾಗಿದೆ.ಸ್ಕೋರ್ ವಿವರ:

ಭಾರತ ಇತರೆ ತಂಡ: ಮೊದಲ ಇನಿಂಗ್ಸ್‌ 
65.4 ಓವರ್‌ಗಳಲ್ಲಿ 201

ಕರ್ನಾಟಕ: ಪ್ರಥಮ ಇನಿಂಗ್ಸ್‌ 145 ಓವರ್‌ಗಳಲ್ಲಿ 606

(ಸೋಮವಾರದ ಅಂತ್ಯಕ್ಕೆ  98 ಓವರ್‌ಗಳಲ್ಲಿ 5 ವಿಕೆಟ್‌ಗೆ 390)

ಸ್ಟುವರ್ಟ್‌ ಬಿನ್ನಿ ಬಿ ಪಂಕಜ್‌ ಸಿಂಗ್‌  122

ಗೌತಮ್‌ ಸಿ ಮನ್‌ದೀಪ್‌ ಸಿಂಗ್‌ ಬಿ ಪಂಕಜ್‌ ಸಿಂಗ್‌  122

ವಿನಯ್ ಕುಮಾರ್‌ ಸಿ ಕಾರ್ತಿಕ್‌ ಬಿ ಅಮಿತ್‌ ಮಿಶ್ರಾ  31

ಶ್ರೇಯಸ್‌ ಸಿ ದಿನೇಶ್‌ ಕಾರ್ತಿಕ್‌ ಬಿ ಪಂಕಜ್‌ ಸಿಂಗ್‌  16

ಅಭಿಮನ್ಯು ಮಿಥುನ್‌ ಔಟಾಗದೆ  34

ಎಚ್‌.ಎಸ್‌. ಶರತ್‌ ಬಿ. ಪಂಕಜ್ ಸಿಂಗ್‌  00ಇತರೆ: (ಬೈ-20, ಲೆಗ್‌ ಬೈ-9, ನೋ ಬಾಲ್‌-5)  34

ವಿಕೆಟ್‌ ಪತನ: 6-400 (ಬಿನ್ನಿ; 100.6), 7-488 (ವಿನಯ್‌; 121.2), 8-545 (ಶ್ರೇಯಸ್‌್; 134.1), 9-606 (ಗೌತಮ್‌; 144.4), 10-606 (ಶರತ್‌; 144.6)

ಬೌಲಿಂಗ್‌: ಅಶೋಕ್‌ ದಿಂಡಾ 31-5-138-1, ಪಂಕಜ್‌ ಸಿಂಗ್‌ 37-7-122-6, ಅನುರೀತ್‌್ ಸಿಂಗ್‌ 26-6-104-1, ಅಮಿತ್‌ ಮಿಶ್ರಾ 25-2-100-1, ಹರಭಜನ್‌ ಸಿಂಗ್‌ 18-2-82-1, ಬಾಬಾ ಅಪರಾಜಿತ್‌ 7-1-24-0, ಮನ್‌ದೀಪ್‌ ಸಿಂಗ್‌ 3-1-7-0.ಭಾರತ ಇತರೆ ತಂಡ: ದ್ವಿತೀಯ ಇನಿಂಗ್ಸ್‌ನ 38 ಓವರ್‌ಗಳಲ್ಲಿ 3 ವಿಕೆಟ್‌ಗೆ 114

ಜೀವನ್‌ಜ್ಯೋತ್‌ ಸಿಂಗ್‌ ಎಲ್‌ಬಿಡಬ್ಲ್ಯು ಬಿ ವಿನಯ್‌  07

ಗೌತಮ್‌ ಗಂಭೀರ್‌ ಸಿ ಮನೀಷ್‌್ ಪಾಂಡೆ ಬಿ ವಿನಯ್‌  09

ಬಾಬಾ ಅಪರಾಜಿತ್‌ ಬ್ಯಾಟಿಂಗ್‌  42

ಕೇದಾರ್‌ ಜಾಧವ್‌ ಸಿ ಮನೀಷ್‌ ಪಾಂಡೆ ಬಿ ಶ್ರೇಯಸ್‌  44

ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌  09ಇತರೆ: (ಬೈ-1, ಲೆಗ್‌ ಬೈ-2)  03

ವಿಕೆಟ್‌ ಪತನ: 1-11 (ಗಂಭೀರ್‌; 2.5), 2-20 (ಜೀವನ್‌ಜ್ಯೋತ್‌; 6.2), 3-91 (ಜಾಧವ್‌; 27.2).

ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 7-0-27-2, ಅಭಿಮನ್ಯು ಮಿಥುನ್‌ 9-0-29-0, ಎಚ್‌.ಎಸ್‌. ಶರತ್‌ 7-5-6-0, ಸ್ಟುವರ್ಟ್‌ ಬಿನ್ನಿ 6-1-13-0, ಶ್ರೇಯಸ್ ಗೋಪಾಲ್‌ 7-0-31-1, ರಾಬಿನ್‌ ಉತ್ತಪ್ಪ 1-0-1-0, ಕರುಣ್‌ ನಾಯರ್‌ 1-0-4-0.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.