ಗೌತಮ್ ದ್ವಿಶತಕ; ವಿದರ್ಭಕ್ಕೆ ನಡುಕ

7
ರಣಜಿ ಕ್ರಿಕೆಟ್: ಮಿಂಚಿದ ಸ್ಟುವರ್ಟ್ ಬಿನ್ನಿ ಬೃಹತ್ ಮೊತ್ತ ದಾಖಲಿಸಿದ ಕರ್ನಾಟಕ ತಂಡ

ಗೌತಮ್ ದ್ವಿಶತಕ; ವಿದರ್ಭಕ್ಕೆ ನಡುಕ

Published:
Updated:

ಮೈಸೂರು:  ಭಾನುವಾರ ಇಡೀ ದಿನ ಕಾಡಿದ ಚಳಿ ಮತ್ತು ಸಿ.ಎಂ. ಗೌತಮ್ ದ್ವಿಶತಕದ ಬಿರುಗಾಳಿಯಲ್ಲಿ ವಿದರ್ಭದ ಆಟಗಾರರು ಗಡಗಡ ನಡುಗಿದರು!ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ `ಬಿ' ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ  ದಾಖಲೆಯ ದ್ವಿಶತಕ ಗಳಿಸಿದ ಗೌತಮ್ (257; 576ನಿ, 394ಎಸೆತ, 20ಬೌಂಡರಿ),  ಕರ್ನಾಟಕ ತಂಡವು 155 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 619 ರನ್ನುಗಳ ಬೃಹತ್ ಮೊತ್ತ ಪೇರಿಸಿ, ಡಿಕ್ಲೆರ್ ಮಾಡಿಕೊಳ್ಳಲು ಕಾರಣರಾದರು.ಈ ಋತುವಿನಲ್ಲಿ ಕರ್ನಾಟಕ ಗಳಿಸಿರುವ ಅತಿ ಹೆಚ್ಚಿನ ಮೊತ್ತವಿದು. ತಮಿಳುನಾಡು ವಿರುದ್ಧ ಗಳಿಸಿದ್ದ 562 ರನ್ ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದರೊಂದಿಗೆ ಗಂಗೋತ್ರಿ ಗ್ಲೇಡ್ಸ್ ವೇಗಿಗಳ ಸ್ವರ್ಗ  ಎಂಬ `ಹಣೆಪಟ್ಟಿ' ಕೂಡ ಕಳಚಿ ಬಿತ್ತು.ನಂತರ ಬ್ಯಾಟಿಂಗ್ ಆರಂಭಿಸಿರುವ ವಿದರ್ಭ 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 48 ರನ್ ಗಳಿಸಿದೆ. ಫಯಾಜ್ ಫಜಲ್ (21; 115ನಿ, 71ಎಸೆತ, 3ಬೌಂಡರಿ) ಮತ್ತು ಶಿವಸುಂದರ್‌ದಾಸ್ (26; 115ನಿ, 79ಎಸೆತ, 3ಬೌಂಡರಿ) ಕ್ರೀಸ್‌ನಲ್ಲಿದ್ದಾರೆ.ದಾಖಲೆಯ ದ್ವಿಶತಕ: ಗ್ಲೇಡ್ಸ್‌ನಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ದಾಖಲಿಸಿದ ಶ್ರೇಯವೂ ಗೌತಮ್ ಪಾಲಾಯಿತು. 2009-10ರಲ್ಲಿ ಇದೇ ಮೈದಾನದಲ್ಲಿ ಪಶ್ಚಿಮ ಬಂಗಾಳ ವಿರುದ್ಧದ ಪಂದ್ಯದಲ್ಲಿ ಅಮಿತ್ ವರ್ಮಾ ಹೊಡೆದಿದ್ದ ಶತಕ (157) ಇಲ್ಲಿಯವರೆಗಿನ ದಾಖಲೆಯಾಗಿತ್ತು. ಪಂದ್ಯದ ಮೊದಲ ದಿನ ಚೊಚ್ಚಲ ಶತಕ ದಾಖಲಿಸಿದ್ದ ಕೆ.ಎಲ್. ರಾಹುಲ್  ಭಾನುವಾರ ಅಮಿತ್ ವರ್ಮಾ ದಾಖಲೆಯನ್ನೂ ಸರಿಗಟ್ಟಿದರು.ಶನಿವಾರ 145 ರನ್ ಗಳಿಸಿದ್ದ ರಾಹುಲ್, ಸುಂದರ ಕವರ್ ಡ್ರೈವ್ ಮತ್ತು ಪುಲ್‌ಗಳ ಮೂಲಕ ಗಮನ ಸೆಳೆದರು. ಶತಕೋತ್ತರ ಅರ್ಧಶತಕ ಪೂರೈಸಿದರು. ತಮ್ಮ ಮೊತ್ತಕ್ಕೆ ಇನ್ನೂ 12 ರನ್ ಸೇರಿಸಿದ್ದ ಅವರು, ದಿನದ ಏಳನೇ ಓವರ್‌ನಲ್ಲಿ ರವಿ ಠಾಕೂರ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ಸ್ಲಿಪ್ ಫೀಲ್ಡರ್ ಹೇಮಂಗ್ ಬದಾನಿಗೆ ಕ್ಯಾಚ್ ನೀಡಿದಾಗ ಸುಂದರ ಇನಿಂಗ್ಸ್‌ಗೆ ತೆರೆ ಬಿತ್ತು.ಆದರೆ, ಗೌತಮ್  ಮೊದಲ ದಿನ 129 ರನ್ ಗಳಿಸಿ ಔಟಾಗದೇ ಉಳಿದಿದ್ದ ಗೌತಮ್ ,  ವರ್ಮಾ ಮತ್ತು ರಾಹುಲ್ ಅವರ ದಾಖಲೆಯನ್ನೂ ಮೀರಿ ನಿಂತರು. ಮನೀಶ್ ಪಾಂಡೆ ಮತ್ತು ಸ್ಟುವರ್ಟ್ ಬಿನ್ನಿ ಜೊತೆ ಎರಡು ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಬೃಹತ್ತ ಮೊತ್ತ ನೀಡುವುದರ ಜೊತೆಗೆ, ತಾವೂ  ದ್ವಿಶತಕ ದಾಖಲಿಸಿದ ಕರ್ನಾಟಕದ 14ನೇ ಆಟಗಾರನ ಶ್ರೇಯ ಗಳಿಸಿದರು.

ರಾಹುಲ್ ನಂತರ ಕ್ರೀಸ್‌ಗೆ ಮನೀಶ್ ಪಾಂಡೆ ತಮ್ಮ ಎಂದಿನ ಶೈಲಿಯ ಬ್ಯಾಟಿಂಗ್ ಆರಂಭಿಸಿದರು. ಗೌತಮ್ ಜೊತೆಗೆ ಸೇರಿದ ಅವರು ರನ್ ಗಳಿಗೆ ರಾಕೆಟ್ ವೇಗ ನೀಡಿದರು. ಪ್ರಸಕ್ತ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವಿದರ್ಭದ ಸಂದೀಪ್ ಸಿಂಗ್ ಮತ್ತು ಶ್ರೀಕಾಂತ್ ವಾಘ್ ಸೇರಿದಂತೆ ಒಂಬತ್ತು ಬೌಲರ್‌ಗಳು ಇವರ ಮುಂದೆ ಬಸವಳಿದರು.   ಸಾಯಿರಾಜ್ ಬೌಲಿಂಗ್‌ನಲ್ಲಿ ಗೌತಮ್ ಪೆಡಲ್ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಆಡಿದ ರೀತಿ ಮನಮೋಹಕವಾಗಿತ್ತು. ರವಿ ಠಾಕೂರ್ ಬೌಲಿಂಗ್‌ನಲ್ಲಿ ಗೌತಮ್ ಬ್ಯಾಟಿಗೆ ಬಡಿದು ಚಿಮ್ಮಿದ ಚೆಂಡನ್ನು ಕ್ಯಾಚ್ ಮಾಡುವಲ್ಲಿ ಸ್ಲಿಪ್ ಫೀಲ್ಡರ್ ಗೌರವ್ ಉಪಾಧ್ಯಾಯ ನೆಲಕ್ಕೆ ಚೆಲ್ಲಿದರು. ಅಲ್ಲಿಗೆ ಕರ್ನಾಟಕವನ್ನು 450ರ ಗಡಿಯೊಳಗೆ ಕಟ್ಟಿಹಾಕುವ ವಿದರ್ಭದ ಕನಸೂ ಮಣ್ಣುಪಾಲಾಯಿತು. ಮುಂದಿನ ಕೆಲವೇ ಎಸೆತಗಳಲ್ಲಿ ಗೌತಮ್ ಶತಕೋತ್ತರ ಅರ್ಧಶತಕ ಗಳಿಸಿದರು.ಇನ್ನೊಂದೆಡೆ ಪಾಂಡೆ ಕೇವಲ 42 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಸ್ಟ್ರೇಟ್ ಡ್ರೈವ್  ಮತ್ತು ಪುಲ್‌ಗಳ ಮೂಲಕ ಅವರು ಬಾರಿಸಿದ 8 ಬೌಂಡರಿಗಳಿಗೆ ಗ್ಯಾಲರಿಯಲ್ಲಿದ್ದ ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗರೆದರು. ಆದರೆ, 112ನೇ ಓವರ್‌ನಲ್ಲಿ ಫಯಾಜ್ ಎಸೆತವನ್ನು ಬೌಂಡರಿ ದಾಟಿಸುವ ಪ್ರಯತ್ನದಲ್ಲಿ ಶ್ರೀಕಾಂತ್ ವಾಘ್ ಹಿಡಿದ ಆಕರ್ಷಕ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ಮನೀಶ್ ಮತ್ತು ಗೌತಮ್ 4ನೇ ವಿಕೆಟ್‌ಗೆ 81 ರನ್ ಸೇರಿಸಿದರು. 161 ರನ್ ಗಳಿಸಿದ್ದ ಗೌತಮ್ ಅವರೊಂದಿಗೆ ಸೇರಿದ ಸ್ಟುವರ್ಟ್ ಬಿನ್ನಿ ಕೂಡ ಬೌಲರ್‌ಗಳ ಮೇಲೆ ಪ್ರಹಾರ ಆರಂಭಿಸಿದರು. ಬಹುತುಳೆಯ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಲಾಂಗ್ ಆಫ್‌ನಲ್ಲಿ ಒಂದು ಸಿಕ್ಸರ್  ಎತ್ತಿದರು. ಊಟದ ವೇಳೆಗೆ  ತಂಡದ ಮೊತ್ತ 459ಕ್ಕೆ ಮುಟ್ಟಿತ್ತು. ಇದೊಂದೇ  ಅವಧಿಯಲ್ಲಿ 158 ರನ್ನುಗಳು  ಹರಿದುಬಂದವು.ವಿರಾಮದ ನಂತರ ಬಿನ್ನಿ ಚುರುಕಿನಿಂದ ರನ್ ಗಳಿಕೆಗೆ ಮುಂದಾದರೆ ಗೌತಮ್ ಸ್ವಲ್ಪ ನಿಧಾನವಾದರು.  ಶಲಭ್ ಶ್ರೀವಾಸ್ತವ್ ಬೌಲಿಂಗ್‌ನಲ್ಲಿ ಬಿನ್ನಿ ಮತ್ತೊಂದು ಆಕರ್ಷಕ ಸಿಕ್ಸರ್ ಎತ್ತಿದರು. 64 ಎಸೆತಗಳಲ್ಲಿ  ಅರ್ಧಶತಕದ ಗಡಿ ದಾಟಿದರು.ಇದಕ್ಕೂ ಮುನ್ನ ಒಂದ ಬಾರಿ ರನೌಟ್ ಅಪಾಯದಿಂದ ಗೌತಮ್ ಪಾರಾಗಿದ್ದರು. ಫೀಲ್ಡರ್‌ಗಳ ಮನವಿಯನ್ನು ಪರಿಶೀಲಿಸಿದ್ದ ರೆಫರಿ ಅಮಿತ್ ಶರ್ಮಾ ನಾಟೌಟ್ ತೀರ್ಪು ನೀಡಿದ್ದರು.ಅದೃಷ್ಟದೊಂದಿಗೆ ಕೈಗೂಡಿಸಿದ್ದ ಗೌತಮ್ ದ್ವಿಶತಕದ ಗಡಿ ಮುಟ್ಟಲು ತಡ ಮಾಡಲಿಲ್ಲ. 138ನೇ ಓವರ್‌ನಲ್ಲಿ ಬದಾನಿ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ ಬೌಂಡರಿ ಗೆರೆಯನ್ನು ದಾಟಿಸುವ ಮೂಲಕ  200ರ ಗಡಿ ದಾಟಿದರು. ಜಿಗಿದು ಗಾಳಿ ಗುದ್ದಿದ ಅವರು, ಬ್ಯಾಟ್ ಮತ್ತು ಹೆಲ್ಮೆಟ್ ಅನ್ನು ಎತ್ತಿ ಪೆವಿಲಿಯನ್‌ನತ್ತ ತೋರಿಸಿದರು. ಪ್ರೇಕ್ಷಕರತ್ತ ಬ್ಯಾಟ್ ತೋರಿಸಿ ಹರ್ಷಿಸಿದರು.

ನಂತರ 145ನೇ ಓವರ್‌ನಲ್ಲಿ ಶಲಭ್ ಬೌಲಿಂಗ್‌ನಲ್ಲಿ ವಾಘ್‌ಗೆ ಕ್ಯಾಚ್ ನೀಡಿದ ಬಿನ್ನಿ, ಗೌತಮ್ ಜೊತೆಗೆ 5ನೇ ವಿಕೆಟ್‌ಗೆ 154 ರನ್ ಸೇರಿಸಿದರು. ಕೊನೆಯಲ್ಲಿ ಅಭಿಮನ್ಯು ಮಿಥುನ್ ಕೂಡ ಬಿರುಸಿನ ಆಟವಾಡಿ ಮೊತ್ತವನ್ನು 600ರ ಗಡಿ ಮುಟ್ಟಿಸಿದರು.  257 ರನ್ ಗಳಿಸಿದ್ದ  ಗೌತಮ್ ಶಲಭ್ ಎಸೆತವನ್ನು ಕಟ್ ಮಾಡುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ಉಬರಾಂದೆಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

ಸ್ಕೋರ್ ವಿವರ

ಕರ್ನಾಟಕ: 155 ಓವರ್‌ಗಳಲ್ಲಿ 8 ವಿಕೆಟ್‌ಗೆ 619ಡಿಕ್ಲೆರ್ಡ್‌

(ಪ್ರಥಮ ದಿನ: 90 ಓವರ್‌ಗಳಲ್ಲಿ 2 ವಿಕೆಟ್‌ಗೆ 308 )

ಕೆ. ಎಲ್. ರಾಹುಲ್ ಸಿ ಹೇಮಂಗ್ ಬದಾನಿ ಬಿ ರವಿ ಠಾಕೂರ್  157

ಸಿ.ಎಂ. ಗೌತಮ್ ಸಿ ಅಮೋಲ್ ಉಬರಾಂದೆ ಬಿ ಶಲಭ್ ಶ್ರೀವಾಸ್ತವ್  257

ಮನೀಶ್ ಪಾಂಡೆ ಸಿ ಶ್ರೀಕಾಂತ್ ವಾಘ್ ಬಿ ಫಯಾಜ್  53

ಸ್ಟುವರ್ಟ್ ಬಿನ್ನಿ ಸಿ ವಾಘ್ ಬಿ ಶಲಭ್ ಶ್ರೀವಾಸ್ತವ್  85

ಆರ್. ವಿನಯಕುಮಾರ್ ರನೌಟ್  01

ಅಭಿಮನ್ಯು ಮಿಥುನ್ ಸಿ ಫಯಾಜ್ ಬಿ ಗೌರವ್ ಉಪಾಧ್ಯಾಯ  20

ಕುನಾಲ್ ಕಪೂರ್ ಔಟಾಗದೇ  8

ಇತರೆ: (ಬೈ 1, ಲೆಗ್‌ಬೈ 6, ವೈಡ್ 7)  14

ವಿಕೆಟ್ ಪತನ: 3-324 (96.6 ರಾಹುಲ್), 4-405 (111.6 ಪಾಂಡೆ), 5-559 (144.1 ಬಿನ್ನಿ), 6-560 (144.6 ವಿನಯಕುಮಾರ್), 7-607 (151.5 ಮಿಥುನ್), 8-619 (154.6 ಗೌತಮ್).ಬೌಲಿಂಗ್: ಸಂದೀಪ್‌ಸಿಂಗ್ 26-7-66-2 (ವೈಡ್ 5), ಶ್ರೀಕಾಂತ್ ವಾಘ್ 27-1-95-0 (ವೈಡ್ 1), ರವಿ ಠಾಕೂರ್ 31-4-125-1 (ವೈಡ್ 1), ಫಯಾಜ್ ಫಜಲ್ 8-0-56-1, ಸಾಯಿರಾಜ್ ಬಹುತುಳೆ 18-0-87-0, ಗೌರವ್ ಉಪಾಧ್ಯಾಯ 29-1-105-1, ಹೇಮಂಗ್ ಬದಾನಿ 4-0-22-0, ಅಪೂರ್ವ್ ವಾಂಖೆಡೆ 1-0-3-0, ಶಲಭ್ ಶ್ರೀವಾಸ್ತವ 11-0-53-2 ವಿದರ್ಭ: 25 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 48

ಫಯಾಜ್ ಫಜಲ್ ಬ್ಯಾಟಿಂಗ್  21

ಶಿವಸುಂದರ್ ದಾಸ್ ಬ್ಯಾಟಿಂಗ್  26

ಬೌಲಿಂಗ್: ಆರ್. ವಿನಯಕುಮಾರ್ 6-3-7-0, ಅಭಿಮನ್ಯು ಮಿಥುನ್ 8-3-4-0, ಸ್ಟುವರ್ಟ್ ಬಿನ್ನಿ 5-1-15-0 (ವೈ ಡ್1), ಎಚ್.ಎನ್. ಶರತ್ 5-1-15-0, ಕೆ.ಪಿ. ಅಪ್ಪಣ್ಣ 1-1-0-0

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry