ಗುರುವಾರ , ಅಕ್ಟೋಬರ್ 17, 2019
22 °C

ಗೌರವ ಡಾಕ್ಟರೇಟ್: ಕವಿವಿ ಪರಿಷತ್ ಸಭೆ ಶಿಫಾರಸು

Published:
Updated:

ಧಾರವಾಡ: ಹಿರಿಯ ವಿಮರ್ಶಕ ಜಿ.ಎಸ್.ಆಮೂರ, ಚಿತ್ರನಟ ರಾಜೇಶ್, ಶಿಕ್ಷಣ ತಜ್ಞ ಎ.ಎಂ. ಪಠಾಣ್ ಸೇರಿ ಆರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸಭೆ ಮಂಗಳವಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.ಕವಿವಿ ಕುಲಪತಿ ಡಾ.ಎಚ್.ಬಿ. ವಾಲಿಕಾರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಗಣಿತ ತಜ್ಞ ಹೈದರಾಬಾದ್‌ನ ಸಿ.ಆರ್.ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್(ಸಾಂಸ್ಕೃತಿಕ ಕ್ಷೇತ್ರ), ಹಿರಿಯ ಶಿಕ್ಷಣ ತಜ್ಞ ಹೈದರಾಬಾದ್‌ನ ಕಾಂತಿಕನೇರಿ ತಾಹೀರ್‌ಮಾಹಿ ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಲಾದ ಇತರ ಮೂವರು.ಎಲ್ಲ ಆರು ಜನರಿಗೆ ಡಾಕ್ಟರೇಟ್ ಗೌರವ ನೀಡಲು ಸಭೆ ಅವಿರೋಧವಾಗಿ ಒಪ್ಪಿಗೆ ಸೂಚಿಸಿದ್ದು, ಅನುಮತಿ ನೀಡುವಂತೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. `ರಾಜ್ಯಪಾಲರ ಅನುಮತಿ ಸಿಕ್ಕರೆ ಇದೇ 9ರಂದು ನಡೆಯುವ 62ನೇ ಘಟಿಕೋತ್ಸವದಲ್ಲಿ  ಡಾಕ್ಟರೇಟ್ ಪ್ರದಾನ ಮಾಡಲಾಗುವುದು~ ಎಂದು ವಾಲಿಕಾರ ತಿಳಿಸಿದರು.ಒಟ್ಟಾರೆ 40,958 ಜನರಿಗೆ ಪದವಿ, 92 ಮಂದಿಗೆ ಪಿಎಚ್‌ಡಿ, 330 ಜನರಿಗೆ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಮತ್ತು ಬಂಗಾರದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಗಾಂಧಿ ಭವನದಲ್ಲಿ ಅಂದು ಘಟಿಕೋತ್ಸವ ನಡೆಯಲಿದ್ದು, ಡಾ.ಸಿ.ಆರ್. ರಾವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಭಾರದ್ವಾಜ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.ಹಿರಿಯ ಲೇಖಕರಾದ ದೇವನೂರ ಮಹಾದೇವ ಅವರ ಹೆಸರನ್ನೂ ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಲು ಉದ್ದೇಶಿಸಲಾಗಿತ್ತು. ಆದರೆ, ದೇವನೂರ ಈ ಪ್ರಸ್ತಾವವನ್ನು ನಿರಾಕರಿಸಿದರು ಎಂದು ಅವರು ತಿಳಿಸಿದರು.

 

Post Comments (+)