ಗೌರಿ ಎಂಬ ಗೆಳತಿ

7

ಗೌರಿ ಎಂಬ ಗೆಳತಿ

Published:
Updated:
ಗೌರಿ ಎಂಬ ಗೆಳತಿ

ಭಾರತೀಯ ಸಂಸ್ಕೃತಿಯ ಬಹುರೂಪಿ ಮತ್ತು ಬಹುಮುಖಿ ಲಕ್ಷಣಗಳನ್ನು ಹುಡುಕುವಾಗ ಮಾತೃಪ್ರಧಾನ ಅಥವಾ ಸ್ತ್ರೀಪ್ರಧಾನ ಪರಂಪರೆಯನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ನಮ್ಮ ಪುರಾಣ, ಇತಿಹಾಸ ಮತ್ತು ಸಾಹಿತ್ಯ ಇವೆಲ್ಲವೂ ಸಂಪೂರ್ಣವಾಗಿ ಪೌರುಷಮಯವೆಂದು ಮೇಲ್ನೋಟಕ್ಕೇ ಅನ್ನಿಸಿಬಿಡಬಹುದು; ಅದು ನಿಜವೂ ಇರಬಹುದು. ಆದರೆ ಆ ಪ್ರಧಾನ ಧಾರೆಗೆ ಪರ್ಯಾಯವಾಗಿ ಅಲ್ಲದಿದ್ದರೂ ಅದರ ಪಕ್ಕದಲ್ಲೇ ಸದ್ದಿಲ್ಲದೆ ಸಣ್ಣಗೆ ಹರಿಯುತ್ತಿರುವ ಸ್ತ್ರೀಮೂಲ ಚಿಂತನೆ, ಹೆಣ್ಣಿನ ಸ್ವಾಭಿಮಾನ, ತನ್ನತನದ ತಹತಹ ಮುಂತಾದುವು ಅಲ್ಲಲ್ಲಿ ನಮ್ಮ ಕಣ್ಣು ಸೆಳೆಯುತ್ತವೆ.

ಅವು ನಮ್ಮ ಸಾಂಸ್ಕೃತಿಕ ಸಂರಚನೆಯಲ್ಲಿ ಪುರುಷಾಧಿಕಾರದ ವಿರುದ್ಧ ಹೋರಾಡಿ ಗೆಲುವು ಪಡೆಯದೇ ಇರಬಹುದು- ಆದರೆ ಅದಕ್ಕೆ ಸವಾಲು ಹಾಕಿರುವುದಂತೂ ದಿಟ. ಈ ಕಾರಣಕ್ಕೇ ಅವುಗಳನ್ನು ಗುರುತಿಸುವುದು ಮತ್ತು ಮಾದರಿಗಳಾಗಿ ಪರಿಗಣಿಸುವುದು ಬಹಳ ಮುಖ್ಯ.ಭಾರತೀಯ ಸಂಸ್ಕೃತಿಯನ್ನು ಈ ದೃಷ್ಟಿಯಿಂದ ಅಧ್ಯಯನ ಮಾಡುವುದಕ್ಕೂ ಸಮೃದ್ಧ ಮೂಲ ಸಾಮಗ್ರಿಯನ್ನು ಒದಗಿಸುವುದು ಸಾಹಿತ್ಯವೇ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾವ ಕಾಲದ ಕವಿಯಾದರೂ ಆಗಿರಲಿ ಕೃತಿ ರಚಿಸುವಾಗ ಅದಕ್ಕೆ ತನ್ನ ಸಾಮಾಜಿಕ ವ್ಯಾಖ್ಯಾನವನ್ನೂ ಕೊಟ್ಟೇ ಇರುತ್ತಾನೆ. ರಾಮಾಯಣ, ಮಹಾಭಾರತಗಳನ್ನು ಎಷ್ಟು ಜನ ಕವಿಗಳು ಬರೆದರೂ ಅಷ್ಟು ಬಗೆಯ ವ್ಯಾಖ್ಯಾನಗಳು ಇರುತ್ತವೆ. ಮತ್ತು ಅವು ಬಹುತೇಕ ರಾಮನ ಕಥೆ, ಕೃಷ್ಣನ ಕಥೆಗಳಾಗಿಯೇ ಇರುತ್ತವೆ (ಅಪವಾದಕ್ಕೆ ಅದರಲ್ಲೊಂದು ಸೀತಾಯಣವೋ ದ್ರೌಪದೀಪುರಾಣವೋ ಇರಬಹುದು).ಪ್ರತೀ ಪಾತ್ರದಲ್ಲೂ ಏನೋ ವಿಶೇಷ ಕಂಡುಕೊಂಡು, `ನಾನು ಇವನಲ್ಲಿ ಇದನ್ನು ಮೆಚ್ಚಿದೆ, ಇವನೋ ಇದರ ಮೂರ್ತರೂಪ~ ಎಂದೆಲ್ಲ ಕವಿಗಳ ತೀರ್ಪಿನ ರೂಪದ ಉದ್ಗಾರ ಇರುವುದು ಅಲ್ಲಿನ ಪುರುಷ ಪಾತ್ರಗಳಿಗೆ ಮಾತ್ರ.`ಚಲಕ್ಕೆ ದುರ್ಯೋಧನ, ಸತ್ಯಕ್ಕೆ ಕರ್ಣ~ ಎಂದು ಎಲ್ಲರ ಶಕ್ತಿವಿಶೇಷಗಳನ್ನು ಹೇಳುವ ಪದ್ಯದಲ್ಲಿ ಮಹಾಭಾರತ ಯುದ್ಧ ಮಾಡಿಸಿದ ದ್ರೌಪದಿಯ ಹೆಸರೇ ಇಲ್ಲ.ಪ್ರತಿಯೊಂದು ಹಂತದಲ್ಲೂ ಹಟ ಹಿಡಿದು ಗಂಡಂದಿರನ್ನು ಯುದ್ಧಕ್ಕೆ ಅಣಿಮಾಡಿದ ದ್ರೌಪದಿಗೆ `ಸಾಮಾನ್ಯವೇ ನಿನ್ನ ಕೇಶಪಾಶಪ್ರಪಂಚ?~ ಎಂದು ಕೊನೆಗೂ ಒಂದು ಪ್ರಶಂಸೆ ಸಿಕ್ಕಿರಬಹುದು. `ಮಹಾಭಾರತದಲ್ಲಿ ಚಲ ಅನ್ನುವುದು ಯಾರಲ್ಲಾದರೂ ಇದ್ದರೆ ಅದು ದ್ರೌಪದಿಯಲ್ಲಿ ಮಾತ್ರ~ ಎಂದು ಆಧುನಿಕ ವಿಮರ್ಶಕರು ಗುರುತಿಸಿರಬಹುದು. `ಹೆಣ್ಣಿನ ಕಾರಣಕ್ಕಾಗಿಯೇ ರಾಮಾಯಣ, ಮಹಾಭಾರತ ಯುದ್ಧ ಆಗಿದ್ದಲ್ಲವೇ?~ ಎಂದು ಸುಮ್ಮನೆ ಜನ ದೂರಬಹುದು, ದೂಷಿಸಬಹುದು. ಆದರೆ ನಮ್ಮ ಪ್ರಾಚೀನ ಕವಿಗಳು ಸ್ತ್ರೀಪಾತ್ರದ ವಿಚಾರದಲ್ಲಿ `ಈ ಹೆಣ್ಣು ಇಂಥದಕ್ಕೆ ವಿಶೇಷ~ ಎಂದು ಎಲ್ಲಿ ಪ್ರಶಂಸೆ ಮಾಡಿದ್ದಾರೆ- ಪ್ರೇಮಕಾಮಕ್ಕೆ ಬಿಟ್ಟು! ಹಾಗಾದರೆ ನಮ್ಮ ಪುರುಷ ಕವಿಗಳೆಲ್ಲ ಸ್ತ್ರೀಪಾತ್ರಗಳ ಶಕ್ತಿಸಾಮರ್ಥ್ಯಗಳನ್ನು ಕಡೆಗಣಿಸಿದ್ದಾರೆಯೇ? `ಗಂಡಸಿಗ್ಯಾಕೆ ಗೌರೀದುಃಖ~ ಅಂದುಕೊಂಡು ಸುಮ್ಮನಿದ್ದಾರೆಯೇ? ನಿಜಕ್ಕೂ ನಿರಾಶರಾಗುವುದು ಬೇಡ- ಭಾರತೀಯ ಸಂಸ್ಕೃತಿಯ ಹೆಣ್ಣಿನ ಸ್ವಾಭಿಮಾನದ ಪ್ರತಿರೂಪವಾಗಿ ಸಾಹಿತ್ಯದಲ್ಲಿ ಸ್ವಾಭಿಮಾನಿ ಗೌರಿ ಇದ್ದಾಳೆ.ಕನ್ನಡವೂ ಸೇರಿ ಭಾರತದ ವಿವಿಧ ಭಾಷೆಗಳಲ್ಲಿ ಅವಳನ್ನು ಕುರಿತ ಕಾವ್ಯಗಳು ಸಾಕಷ್ಟಿವೆ. ಜನಪದ ಕಾವ್ಯದಲ್ಲಂತೂ ಅವಳು `ನಾನು ಈ ಗಂಡು ಒಲ್ಲೆ, ಆ ಗಂಡು ನನಗೆ ಬ್ಯಾಡ~ ಎಂದು ದಿಟ್ಟವಾಗಿ ಹೇಳಬಲ್ಲ ಹುಡುಗಿ. ಕನ್ನಡ ಕಾವ್ಯದಲ್ಲಿ ಕಂಡುಬರುವ ಗೌರಿಯಂತೂ ಯಾವ ಶತಮಾನಕ್ಕೂ ಮಾದರಿ ಹೆಣ್ಣು ಎಂದು ಹೊಗಳಿಸಿಕೊಳ್ಳುವಷ್ಟು ಗಟ್ಟಿಗಿತ್ತಿ.ಶಕ್ತಿವಂತೆ ಈ ಗೌರಿ 

ಹಲವು ಪುರಾಣಗಳನ್ನು ಹಾದು ಬರುವ ಪಾರ್ವತಿಯ ಕಥೆಗೆ ಇರುವ ಮಜಲುಗಳು, ಗೋಜಲುಗಳು ಅನೇಕ. ಅವಳ ಕಥೆ ಲಕ್ಷ್ಮಿ, ಸರಸ್ವತಿ ಕಥೆಗಳಿಗಿಂತ ಸಂಕೀರ್ಣವಾದದ್ದು. ಅವಳ ಹಾಗೆ ಅವತಾರಗಳು, ಜನ್ಮಾಂತರಗಳು ಇನ್ನಾವ ದೇವತೆಗೂ ಇಲ್ಲ. ಪಾರ್ವತಿ ಎಷ್ಟೊಂದು ಅವತಾರಗಳನ್ನು ತಾಳುತ್ತಾಳೆಂದರೆ ಎಲ್ಲವೂ ಅವಳೊಬ್ಬಳೇನಾ, ಹಲವರು ಸೇರಿ ಅವಳೊಬ್ಬಳಾದಳಾ ಎಂದೆಲ್ಲಾ ಸಂದೇಹ ಬರುವುದುಂಟು. ಶ್ಯಾಮಾ (ಕಪ್ಪು ಹುಡುಗಿ) ಎಂದು ಒಂದೆಡೆ ಕರೆಸಿಕೊಂಡ ಅವಳು ಗಂಡನನ್ನು ಮೆಚ್ಚಿಸಲು ಗೌರಿ (ಬಿಳಿ ಹುಡುಗಿ) ಆದಳೆಂಬ ಕಥೆ ಸ್ವಾಭಿಮಾನಿಯಾದ ಅವಳ ಗೌರವ ಕಳೆದಿರುವುದುಂಟು. `ಶಕ್ತಿ~ ಎಂಬ ಅವಳ ಹೆಸರೇ ಗಮನಾರ್ಹವಾಗಿ ಅರ್ಥಪೂರ್ಣ. ಚಂಡಿ, ಚಾಮುಂಡಿ ಸೇರಿ ಅವಳಿಗಿರುವಷ್ಟು ರಾಶಿ ಹೆಸರುಗಳು ಇನ್ನಾರಿಗೂ ಇಲ್ಲ. ಪಾರ್ವತಿ, ಗಿರಿಜೆ, ಶೈಲಜೆ, ಅಗಜೆ, ಹೈಮವತಿ ಎಂದು ಮುಂತಾಗಿ ತಂದೆಯ ಹೆಸರಿನಿಂದಲೂ ಭವಾನಿ, ಶಿವಾನಿ, ಶರ್ವಾಣಿ, ರುದ್ರಾಣಿ ಎಂದು ಗಂಡನ ಹೆಸರಿನಿಂದಲೂ ಕರೆಸಿಕೊಳ್ಳುವ ಅವಳ ನಿಜವಾದ ಹೆಸರು ಏನು?! ಹೆಣ್ಣಾದರೂ ಅವಳು ಗಂಡುದೇವತೆಗಳಿಗೆ ಸಮನಾಗಿ ರಾಕ್ಷಸರನ್ನು ಸಂಹರಿಸುವ, ಲೋಕವನ್ನು ಕಾಯುವ ಶಕ್ತಿವಂತೆ. ಲಕ್ಷ್ಮಿ, ಸರಸ್ವತಿ ಯಾರಾದರೂ ದುಷ್ಟರನ್ನು ಕೊಂದಿದ್ದಾರೆಯೇ- ಗೊತ್ತಿಲ್ಲ! ಭಾರತೀಯ ಪುರಾಣ ಪರಂಪರೆಯ ಸಮಾಜ ವಿಜ್ಞಾನ ಮೂಲದ ವ್ಯಾಖ್ಯಾನ ಹೇಗಾದರೂ ಇರಲಿ, ಈ ಪರಂಪರೆಯಲ್ಲಿ ಇವಳಂಥವಳು ಇನ್ನೊಬ್ಬಳಿಲ್ಲ. ಆದ್ದರಿಂದ ಸ್ತ್ರೀಶಕ್ತಿಗೆ ಗೌರಿಯೇ ಮಾದರಿ. ಮಿತಿಗಳ ನಡುವೆಯೂ ಪಾರ್ವತಿಯೇ ನಮ್ಮ ಹೆಣ್ಣುಮಕ್ಕಳಿಗೆ ಗೆಳತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry