ಗುರುವಾರ , ಜೂನ್ 17, 2021
22 °C

ಗೌರಿ ಖಾನ್‌ ವಿನ್ಯಾಸ ಕ್ಷೇತ್ರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್ ಸ್ಟಾರ್ ಶಾರುಖ್ ಖಾನ್‌ ಪತ್ನಿ ಗೌರಿ ಖಾನ್ ಮುಂಬೈನಲ್ಲಿ ತಮ್ಮದೇ ಡಿಸೈನ್ ಸ್ಟುಡಿಯೊ ತೆರೆದಿದ್ದಾರೆ. ಈ ಸಂದರ್ಭದಲ್ಲಿ ಗೌರಿ ತಮ್ಮ ಜೀವನ, ಕುಟುಂಬ ಮತ್ತು ಹೊಸ ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ...*ಗೌರಿ, ನಿಮ್ಮದೇ ಆದ ವ್ಯವಹಾರವೊಂದರಲ್ಲಿ ತೊಡಗಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡಿರಿ. ಇದಕ್ಕೆ ಕಾರಣ ಏನು?

ಹೌದು, ನಾನಿರುವುದೇ ಹಾಗೆ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತುಂಬ ಸಮಯ ತೆಗೆದುಕೊಳ್ಳುತ್ತೇನೆ. ಅಂದಹಾಗೆ, ನಾನು ಇದುವರೆಗೂ ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಅವರನ್ನು ನೋಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದೆ. ಅದೇ ರೀತಿ ಮುಂಬೈ, ದುಬೈ ಮತ್ತು ಲಂಡನ್‌ನಲ್ಲಿ ಇರುವ ಮನೆಗಳ ಉಸ್ತುವಾರಿಯ ಹೊಣೆಯೂ ನನ್ನ ಮೇಲಿತ್ತು. ಕೆಲಸ ಇಲ್ಲದೇ ಕುಳಿತುಕೊಳ್ಳುವುದೆಂದರೆ ನನಗೆ ಉಸಿರುಕಟ್ಟಿದ ಅನುಭವ. ಆಗೆಲ್ಲಾ ಸ್ವಂತ ಉದ್ಯೋಗ/ ವ್ಯವಹಾರ ಆರಂಭಿಸಲು ನನಗೆ ಭಯವೆನಿಸುತ್ತಿತ್ತು. ಏಕೆಂದರೆ ಒಂದು ವಿಷಯವನ್ನು ಕೈಗೆತ್ತಿಕೊಂಡರೆ ಅತಿ ಬೇಗನೆ ನನಗೆ ಆ ವಿಷಯದ ಬಗ್ಗೆ ಬೇಜಾರೆನಿಸಿಬಿಡುತ್ತದೆ. ಆದ್ದರಿಂದ ಮುಂದಡಿಯಿಟ್ಟಿರಲಿಲ್ಲ. ಈಗ ಸೂಕ್ತ ಕಾಲ ಒದಗಿಬಂದಿದೆ.*ಸೂಪರ್‌ ಸ್ಟಾರ್‌ ಹೆಂಡತಿ ಗೌರಿ ಖಾನ್‌ ಅವರ ನಿಜ ವ್ಯಕ್ತಿತ್ವ ಯಾವ ಬಗೆಯದ್ದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಹಾಗಾಗಿ, ನೀವು ನಿಮ್ಮ ವ್ಯಕ್ತಿತ್ವವನ್ನು ಹೇಗೆ ವಿವರಿಸಲು ಇಚ್ಛಿಸುತ್ತೀರಿ?

ನಾನು ನನ್ನದೇ ಜಗತ್ತಿನಲ್ಲಿ ತುಂಬ ಖುಷಿಯಾಗಿದ್ದೇನೆ. ನನ್ನ ಗಂಡ ಒಬ್ಬ ಸೂಪರ್‌ ಸ್ಟಾರ್‌ ಅಥವಾ ಅವರೊಬ್ಬ ಜನಪ್ರಿಯ ವ್ಯಕ್ತಿ ಎಂಬ ನೆರಳು ನನ್ನನ್ನು ಯಾವತ್ತಿಗೂ ಬಾಧಿಸಿಲ್ಲ. ನಾನು ಪತಿ ಶಾರುಖ್‌ ಅವರಿಗಿಂತಲೂ ಗಟ್ಟಿ ಮನಸ್ಸಿನ ಹೆಣ್ಣು. ನಾನು ಶಾರುಖ್‌ ಜತೆ ಮನೆಯಲ್ಲಿರುವಾಗ ಅವರೊಬ್ಬ ಸೂಪರ್‌ ಸ್ಟಾರ್‌ ಅಂತ ಈವರೆಗೂ ಭಾವಿಸಿಲ್ಲ. ಮನೆಯಲ್ಲಿದ್ದಾಗ ಅವರು ನನ್ನ ಗಂಡ ಅಷ್ಟೇ. ಗಂಡನಿಗೆ ಕೊಡಬೇಕಾದ ಪ್ರೀತಿ, ಗೌರವ ಕೊಡುತ್ತೇನೆ.*ಸೂಪರ್ ಸ್ಟಾರ್ ಹೆಂಡತಿಯಾಗಿರುವುದು ನಿಮ್ಮ ಪ್ರಕಾರ ಎಷ್ಟು ಸುಲಭ ಅಥವಾ ಕಷ್ಟ?

ಜನಪ್ರಿಯ ನಟನೊಬ್ಬನ ಹೆಂಡತಿಯಾಗಿ ನಾನು ರೋಮಾಂಚಿತಳಾಗಿದ್ದೇನೆ, ಆ ಪುಳಕವನ್ನು ಮನಃಪೂರ್ವಕವಾಗಿ ಅನುಭವಿಸಿದ್ದೇನೆ. ಹಾಗಾಗಿ, ನಮ್ಮದು ಪರಿಪೂರ್ಣ ಜೀವನ ಅನ್ನಬಹುದು. ಪ್ರತಿಯೊಂದು ಮದುವೆಯಲ್ಲೂ ಏರಿಳಿತಗಳು ಇದ್ದೇ ಇರುತ್ತವೆ. ಆದರೆ, ಅದು ಬೆಳವಣಿಗೆಯ ಸಂಕೇತ ಎಂದುಕೊಳ್ಳಬೇಕು.*ನಿಮ್ಮ ಈ ಹೊಸ ಯೋಜನೆ, ಮತ್ತು ಬ್ಯುಸಿ ಜೀವನದ ಬಗ್ಗೆ ಶಾರುಖ್ ಹೇಗೆ ಪ್ರತಿಕ್ರಿಯಿಸುತ್ತಾರೆ?

ನಾನೇನೋ ಹೊಸತನ್ನು ಮಾಡುತ್ತಿದ್ದೇನೆ ಎನ್ನುವ ಸಂಗತಿ ಅವರಿಗೆ ಖುಷಿ ನೀಡಿದೆ. ಕೆಲಸದ ಸಲುವಾಗಿ ಹೊರಗೆ ಹೋಗಬೇಕಾಗುತ್ತದೆ. ಅಲ್ಲಿಂದ ಇಲ್ಲಿಗೆ ಓಡಾಡುತ್ತಿರಬೇಕಾಗುತ್ತದೆ. ಹಾಗಾಗಿ, ನಾನು ಹೊರಗೆ ತಿರುಗಾಡುವುದನ್ನು ತಿಂಗಳಿಗೆ ಒಮ್ಮೆ ಮಾತ್ರ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಸಾಮಾನ್ಯವಾಗಿ ನಾನು ಸಂಜೆ 6ಕ್ಕೆ ಮನೆಯಲ್ಲಿರುತ್ತೇನೆ. ಶಾರುಖ್‌ ಮನೆಗೆ ಬಂದಾಗೆಲ್ಲಾ ಆತ ನಾನು ಮನೆಯಲ್ಲೇ ಇರುವುದನ್ನು ನೋಡಿ ಖುಷಿಯಾಗುತ್ತಾರೆ.*ನಿಮ್ಮದು ಯಶಸ್ವಿ ವೈವಾಹಿಕ ಜೀವನ. ಇದರ ಹಿಂದಿರುವ ರಹಸ್ಯ ಏನು?

ಪ್ರತಿಯೊಂದು ಮದುವೆಗೂ ಒಂದೊಂದು ಸವಾಲು ಇರುತ್ತದೆ. ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಪ್ರತಿ ಕ್ಷಣವೂ ಎಲ್ಲರೊಂದಿಗೂ ಬೆರೆಯುವುದನ್ನು ಕಲಿಯಬೇಕು. ಮನೆಯಲ್ಲಿ ಒಂಟಿ ಕೂರಬಾರದು. ಗಂಡ ಹೆಂಡತಿ ಇಬ್ಬರೂ ಬ್ಯುಸಿ ಇದ್ದರೆ ಆಗ ಬದುಕು ಇನ್ನಷ್ಟು ಸುಲಭವಾಗುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಪ್ರತಿಯೊಬ್ಬರ ಜೀವನವೂ ಅವರ ವೇಳಾಪಟ್ಟಿಯ ಮೇಲೆ ಅವಲಂಬಿತವಾಗಿರುತ್ತದೆ. ಸಂಸಾರ ಮತ್ತು ಕೆಲಸ ಇವೆರಡನ್ನು ನಿಭಾಯಿಸುವ ಕಲೆ ಗೊತ್ತಿದ್ದರೆ ಜೀವನ ಸುಂದರ. ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ.*ಶಾರುಖ್ ಖಾನ್ ನಿಮ್ಮ ಮೇಲೆ, ನೀವು ಅವರ ಮೇಲೆ ಅವಲಂಬಿತರಾಗಿದ್ದೀರಾ?

ನನಗನ್ನಿಸಿದ ಪ್ರಕಾರ ಶಾರುಖ್ ಭಾವನಾತ್ಮಕವಾಗಿ ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ನಾನು ಆ ರೀತಿ ಇಲ್ಲ ಅನಿಸುತ್ತದೆ. ನಾನು ಈವರೆಗೂ ಯಾರೊಬ್ಬರನ್ನು ಅವಲಂಬಿಸಿಲ್ಲ. ನಾನು ಒಂದು ರೀತಿ ಸ್ವತಂತ್ರ ಸ್ವಭಾವದವಳು ಅಂತಲೇ ಹೇಳಬಹುದು.*ಶಾರುಖ್ ಅವರ ಸುತ್ತ ಏಳುವ ವಿವಾದಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಬೇರೆಯವರು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ನಾನು ಮತ್ತು ನನ್ನನ್ನು ಪ್ರೀತಿಸುವವರು ಹೇಗೆ ಎಂಬ ಸಂಗತಿ ನನಗೆ ಚೆನ್ನಾಗಿ ತಿಳಿದಿದೆ. ಕಳೆದ ಮೂರು ವರ್ಷಗಳಿಂದ ನನ್ನ ಕೆಲಸದಲ್ಲೇ ನಾನು ಸಾಕಷ್ಟು ಬ್ಯುಸಿಯಾಗಿದ್ದರಿಂದ ಯಾವುದರ ಬಗ್ಗೆಯೂ ಚಿಂತಿಸಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಒಂಟಿಯಾಗಿ ಕುಳಿತುಕೊಂಡಾಗಲೇ ವಿವಾದಗಳು ನಮ್ಮ ತಲೆಕೆಡಿಸುವುದು ಮತ್ತು ಹುಚ್ಚು ಹಿಡಿಸುವುದು. ಚಟುವಟಿಕೆಯಿಂದ ಇದ್ದರೆ ಯಾವ ವಿಷಯವೂ ನಿಮ್ಮನ್ನು ಕಂಗೆಡಿಸಲು ಸಾಧ್ಯವಿಲ್ಲ.‘‘ನನ್ನ ಗಂಡ ಒಬ್ಬ ಸೂಪರ್‌ ಸ್ಟಾರ್‌ ಅಥವಾ ಅವರೊಬ್ಬ ಜನಪ್ರಿಯ ವ್ಯಕ್ತಿ ಎಂಬ ನೆರಳು ನನ್ನನ್ನು ಯಾವತ್ತಿಗೂ ಬಾಧಿಸಿಲ್ಲ. ನಾನು ಪತಿ ಶಾರುಖ್‌ ಅವರಿಗಿಂತಲೂ ಗಟ್ಟಿ ಮನಸ್ಸಿನ ಹೆಣ್ಣು’’

–ಗೌರಿ ಖಾನ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.