ಮಂಗಳವಾರ, ಮೇ 18, 2021
28 °C

ಗೌರೀಶ ಕಾಯ್ಕಿಣಿ ಜನ್ಮ ಶತಾಬ್ದಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ನಾಡು ನುಡಿಯ ಕುರಿತು ಅಭಿಮಾನ ಮೂಡಿಸಿದ  ಕನ್ನಡ ನವೋದಯ ಸಾಹಿತ್ಯ ಚಳವಳಿಯ ಜೊತೆಗೆ  ಸಾರಸ್ವತ ಲೋಕವನ್ನು ಪ್ರವೇಶಿಸಿದ ಹಿರಿಯ ಚಿಂತನಶೀಲ ಸಾಹಿತಿ ಗೌರೀಶ ಕಾಯ್ಕಿಣಿ ನವ್ಯರ ನಡುವೆ ನಡೆದಾಡಿದರೂ  ಜೀವನ ಪ್ರೇಮವನ್ನು ಉಳಿಸಿಕೊಂಡು,  ಕನ್ನಡ ಸಾಹಿತ್ಯಕ್ಕೆ ವೈಚಾರಿಕತೆಯ ಮೆರುಗು ನೀಡಿದರು.   ವೇದ ಘೋಷಗಳೊಂದಿಗೆ ಬೆಳಗು ಕಾಣುತ್ತಿದ್ದ  ಗೋಕರ್ಣದ ಕಡಲ ತೀರದ ಪರ್ಣಕುಟಿಯಲ್ಲಿ ಕುಳಿತು ಚಾರ್ವಾಕ, ಬೌದ್ಧ, ಜೈನ ಮುಂತಾದ ಅವೈದಿಕ ದರ್ಶನಗಳು, ಸಾಕ್ರೇಟಿಸ್, ಪ್ಲೇಟೋ, ಅರಿಸ್ಟಾಟಲ್, ಕಾರ್ಲಮಾರ್ಕ್ಸ್,  ಲೆನಿನ್ ಇತ್ಯಾದಿ ಆಧುನಿಕ ಚಿಂತಕರ ಜೊತೆಗೆ ತಮ್ಮ ಲೇಖನೀಯ ಮೂಲಕ ಅನುಸಂಧಾನ ನಡೆಸಿದ ಗೌರೀಶರು 60ಕ್ಕೂ ಹೆಚ್ಚು  ಕೃತಿಗಳನ್ನು  ಪ್ರಕಟಿಸುವ ಮೂಲಕ ಸಾಹಿತ್ಯ ಜಗತ್ತಿನಲ್ಲಿ `ಗೌರೀಶಂಕರ~ ಎಂಬ ಕೀರ್ತಿಗೆ ಪಾತ್ರರಾದರು.   12 ಸೆಪ್ಟೆಂಬರ್ 1912 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಗೋಕರ್ಣದಲ್ಲಿ, ಪ್ರೌಢ ಶಿಕ್ಷಣವನ್ನು ಕುಮಟಾದ ಪ್ರಸಿದ್ಧ ಗಿಬ್ ಹೈಸ್ಕೂಲ್‌ನಲ್ಲಿ ಪೂರೈಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಕೈಗೊಂಡರು.  1937 ರಿಂದ 1976 ರವರೆಗೆ ಬಂಕಿಕೊಡ್ಲದ ಆನಂದಶ್ರಾಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.  ಇದೇ ಶಾಲೆಯಲ್ಲಿ  ಕವಿ ಸು.ರಂ. ಎಕ್ಕುಂಡಿ ಅವರು ಗೌರೀಶರ ಸಹೋದ್ಯೊಗಿಗಳಾಗಿದ್ದರು.   ಶ್ರೀರಂಗ, ಡಾ. ಶಿವರಾಮ ಕಾರಂತ, ಡಾ. ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಪು.ತಿ.ನ. ಮುಂತಾದ ಸಾಹಿತಿಗಳನ್ನು ಆಹ್ವಾನಿಸುವ ಮೂಲಕ ಈ ಅಧ್ಯಾಪಕ ಜೋಡಿ  ಕೈಗೊಂಡ ಸಾಹಿತ್ಯ ಪರಿಚಾರಿಕೆ ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯಲ್ಲಿ ಸುವರ್ಣ ಅಧ್ಯಾಯವಾಗಿದೆ. ಬಂಕಿಕೊಡ್ಲ ಮತ್ತು  ಗೋಕರ್ಣದ ನಡುವೆ ತೆರೆದ ಪುಸ್ತಕದಲ್ಲಿ ಕಣ್ಣುಗಳನ್ನು ಕೀಲಿಸಿಕೊಂಡೇ ದಶಕಗಳ ಕಾಲ ದಾರಿ ಸವೆಸಿದ ಗೌರೀಶರು ಸ್ವಾಧ್ಯಾಯಕ್ಕೆ ಶ್ರೇಷ್ಠ ಮಾದರಿಯಾದರು.  ಸಂಗೀತ, ನಾಟಕ, ರಂಗಭೂಮಿ ಕ್ಷೇತ್ರಗಳಲ್ಲಿಯೂ ಅವರಿಗೆ ಅಪಾರ ಒಲವು ಇದ್ದಿತು. ನಾಡಿನ ಪತ್ರಿಕಾ ರಂಗವು ಅವರ ಪ್ರತಿಭೆಯನ್ನು ಬಳಸಿಕೊಂಡಿತು.  ಜಿಲ್ಲೆಯ  `ನಂದಿನಿ~, `ನಾಗರಿಕ~  ಸಾಪ್ತಾಹಿಕಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆದರು.  ಎಮ್.ಎನ್. ರಾಯ್ ಅವರ ನವಮಾನವತಾವಾದವನ್ನು `ಬೆಳಕು~ ಪತ್ರಿಕೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸಲು ದಾಮೋದರ ಚಿತ್ತಾಲ, ಎಮ್.ಇ. ನಿಲೇಕಣಿ, ಶಾಂತಿನಾಥ ದೇಸಾಯಿ, ಶಂಕರ ಮೊಕಾಶಿ ಪುಣೇಕರ, ಗಂಗಾಧರ ಚಿತ್ತಾಲ, ಎಸ್.ಆರ್. ಬೊಮ್ಮಾಯಿ ಅವರೊಂದಿಗೆ  ನಡೆಸಿದ ಪ್ರಯತ್ನ ಗಮನಾರ್ಹವಾಗಿದೆ.  ಮುಖ್ಯವಾಗಿ          ಡಾ. ದಿನಕರ ದೇಸಾಯಿಯವರು ಆರಂಭಿಸಿದ್ದ, ಅಂಕೋಲೆಯಿಂದ ಪ್ರಕಟವಾಗುತ್ತಿದ್ದ `ಜನಸೇವಕ~ ವಾರಪತ್ರಿಕೆಗೆ 18 ವರ್ಷಗಳ ಕಾಲ ಅಂಕಣ ಬರೆಹಗಳನ್ನು ಪೂರೈಸಿದರು. `ನಾಸ್ತಿಕನು ಮತ್ತು ದೇವರು~ .  `ಬಾಳಿನ ಗುಟ್ಟು~, `ಪ್ರೀತಿ~, `ಮನೋವಿಜ್ಞಾನದ ರೂಪುರೇಖೆಗಳು~, `ವಿಚಾರವಾದ~ ಇವರ  ಮಹತ್ವದ ಕೃತಿಗಳಾಗಿವೆ.  ವಿಮರ್ಶಾ ಕ್ಷೇತ್ರದಲ್ಲಿಯೂ ಕೃಷಿ ಮಾಡಿದ ಗೌರೀಶರು `ವಾಲ್ಮೀಕಿ ತೂಕಡಿಸಿದಾಗ~, ಬೇಂದ್ರೆ ಕಾವ್ಯ ಕುರಿತ `ಕಂಪಿನ ಕರೆ~,  `ದಿನಕರ ದೇಸಾಯಿಯವರ ಕಾವ್ಯ ಸಮೀಕ್ಷೆ~ ಮುಂತಾದ ಕೃತಿಗಳನ್ನು ನೀಡಿದ್ದಾರೆ. ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಗೌರವ ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದವು.  ಪತ್ನಿ ಶಾಂತಾ ಮತ್ತು ಪುತ್ರ ಜಯಂತ ಕಾಯ್ಕಿಣಿ ಅವರೊಂದಿಗೆ ತುಂಬು ಜೀವನ ನಡೆಸಿದ ಈ ಹಿರಿಯ ಚೇತನವು ನವೆಂಬರ್ 14, 2004 ರಂದು ನಮ್ಮನ್ನು ಅಗಲಿತು. ಜನ್ಮಶತಾಬ್ದಿ  ಪ್ರಯುಕ್ತ ಇದೇ 12 ರಂದು, ಬೆಳಿಗ್ಗೆ 10 ಗಂಟೆಗೆ ಗೋಕರ್ಣದ ಪರ್ಣಕುಟಿ ಚಪ್ಪರದಲ್ಲಿ ಆಪ್ತ ನೆನಪಿನ ಸಂಕಿರಣ ಮತ್ತು ಅಂಕೋಲೆಯ ರಾಘವೇಂದ್ರ ಪ್ರಕಾಶನವು ಹತ್ತು ಸಂಪುಟಗಳಲ್ಲಿ ಪ್ರಕಟಿಸಿದ ಗೌರೀಶ ಸಮಗ್ರ ಸಾಹಿತ್ಯದ ಸಮೀಕ್ಷಾ ಗ್ರಂಥ ಎಮ್.ಜಿ. ಹೆಗಡೆ ಸಂಪಾದಿತ `ಕಟಾಂಜನ~ ದ ಬಿಡುಗಡೆ, ಡಾ. ಶ್ರೀಪಾದ ಭಟ್ ತಂಡದವರಿಂದ ಗೀತ ರೂಪಕ, ರೇಶ್ಮಾ ಭಟ್ ಅವರ ಹಿಂದುಸ್ಥಾನಿ ಗಾಯನ ಏರ್ಪಡಿಸಲಾಗಿದೆ.ಹಿರಿಯ ಕವಿಗಳಾದ ಚೆನ್ನವೀರ ಕಣವಿ, ವಿಮರ್ಶಕ ಗಿರಡ್ಡಿ ಗೋವಿಂದರಾಜ ಪ್ರಮುಖರಾದ ಎಮ್.ಜಿ. ವೇದೇಶ್ವರ, ವಿ.ಜೆ. ನಾಯಕ, ಶಾಂತಾ ಕಾಯ್ಕಿಣಿ,        ವಿಷ್ಣು ನಾಯ್ಕ, ಕಾಯ್ಕಿಣಿ ಪ್ರತಿಷ್ಠಾನದ ವಿ.ಎನ್. ಹೆಗಡೆ, ಪರ್ಣಕುಟಿ ಬಳಗದ  ವಿ. ಆರ್. ಮಲ್ಲನ್ ಮತ್ತು ಗೌರೀಶ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿರುವರು.  ಗೌರೀಶರು ನಡೆದಾಡಿದ ಗೋಕರ್ಣದ ರಥಬೀದಿ ಮತ್ತು  ಕಡಲ ಕಿನಾರೆಗಳಲ್ಲಿ ಅವರ ನೆನಪಿನ ಅಲೆಗಳು ತೇಲಿ ಬರಲಿವೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.