ಭಾನುವಾರ, ಅಕ್ಟೋಬರ್ 20, 2019
27 °C

ಗೌಳೇರಹಟ್ಟಿ: ನೀರಿನ ಸಂಪರ್ಕ ಕಡಿತ

Published:
Updated:

 ದಾವಣಗೆರೆ: ಕಲ್ಲು ಗಣಿಗಾರಿಕೆಯಿಂದ ನಲುಗಿಹೋಗಿರುವ ಹರಪನಹಳ್ಳಿ ತಾಲ್ಲೂಕಿನ ಗೌಳೇರಹಟ್ಟಿಯಲ್ಲಿ ಕುಡಿಯುವ ನೀರಿನ ಸಂಪರ್ಕವನ್ನು  ದುಷ್ಕರ್ಮಿಗಳು ಕಿತ್ತುಹಾಕಿ ನೀರು ಪೂರೈಕೆ ವ್ಯತ್ಯಯವಾದ ಘಟನೆ ಭಾನುವಾರ ನಡೆದಿದೆ.ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ್ದರು. ಈ ಕುರಿತು `ಪ್ರಜಾವಾಣಿ~ ಜ. 7ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಪ್ರತಿಭಟನೆ ನಡೆದ ಬಳಿಕ ಶನಿವಾರ ತಡರಾತ್ರಿ ರಾತ್ರಿ ಗಣಿ ಮಾಲೀಕರ ಕಡೆಯವರೆನ್ನಲಾದ ದುಷ್ಕರ್ಮಿಗಳು ಗ್ರಾಮದ ಕುಡಿಯುವ ನೀರಿನ ಏಕೈಕ ಮೂಲವಾದ ಕೊಳವೆ ಬಾವಿಯ ಪಂಪ್ ಸಂಪರ್ಕವನ್ನು ಹಾಳುಗೆಡವಿದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ


ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು, ಗ್ರಾಮಕ್ಕೆ ಕೂಡಲೇ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮಸ್ಯೆ ಬಗೆಹರಿಸಿದರು. ಸಂಜೆ ವೇಳೆಗೆ ಪಂಪ್ ದುರಸ್ತಿಗೊಳಿಸಿ ನೀರು ಪೂರೈಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.ನೀರಿನ ವ್ಯವಸ್ಥೆ ಹಾಳುಗೆಡವಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಅಥವಾ ನೇರವಾಗಿ ತಮಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಗ್ರಾಮಸ್ಥರು ವಿವರಿಸಿದರು. ಕೊನೆಗೆ ಅರಸಿಕೆರೆ ಠಾಣೆಯ ಪಿಎಸ್‌ಐ ಲಕ್ಷ್ಮಣ್ ಅವರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಅರಸಿಕೆರೆ ಕಂದಾಯ ನಿರೀಕ್ಷಕ ಅಜ್ಜಪ್ಪ ಪತ್ರಿ, ಚಟ್ನಿಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚನ್ನವೀರಯ್ಯ, ಗ್ರಾಮಕರಣಿಕ ಗುರುಪ್ರಸಾದ್ ಇತರರು ಸ್ಥಳಕ್ಕೆ ಭೇಟಿ ನೀಡಿದ್ದರು.

Post Comments (+)