ಗುರುವಾರ , ಅಕ್ಟೋಬರ್ 17, 2019
22 °C

ಗ್ಯಾಂಗ್ರಿನ್

Published:
Updated:

ಕಥೆ

ಅವ ಕಾರ್ಪೋರೇಷನ್ನಿನ ಹೆಲ್ತ್ ಸೆಂಟರನ ಅಟ್ಟದ ಮೇಲಿಂದ ಕಷ್ಟಪಟ್ಟು ಕೆಳಗಿಳಿದು ಮುಂಜಾನೆ ಮುಂಜಾನೆ ಬಯಕೆಗಳ ಬೆಂಕಿ ಕಿಡಿ ಹೊತ್ತಿ ಧಗ ಧಗ ಉರಿಯುತ್ತಿರುವ ಆ ಸರ್ಕಲ್‌ನ ಒಂದು ಬಾಜು ನಿಂತ.ಯಾಕೋ ಕಣ್ಣು ಮಂಜಾದಂತನಿಸಿತು. ತನ್ನೆದುರಿನ ಗದ್ದಲ-ಗೌಜು ಎಲ್ಲೋ ದೂರದ ಯಾವುದೋ ಅಜ್ಞಾತ ದೇಶ ಕಾಲದಲ್ಲಿ ಜರುಗುತಿರುವಂತೆ ಎಲ್ಲಾ ಮಸುಕು ಮಸಕಾಗಿ ಕಾಣಿಸಿತು.ಅವನು ವೃದ್ಧಾಪ್ಯದ ಅಂಚಿಗೆ ಬಂದು ನಿವೃತ್ತಿಯ ಕಟ್ಟಕಡೆಯ ಮೆಟ್ಟಲ ಮೇಲೆ ನಿಂತಿರುವ ಆರೋಗ್ಯ ಶಿಕ್ಷಕ. ಈಗೀಗ ತನ್ನ ಚತುರ ಮಾತು ವಾಕ್ ಪ್ರೌಢಿಮೆಗಳೆಲ್ಲಾ ತಮ್ಮ ಹಿಂದಿನ ಮೊನಚು ಕಳಕೊಂಡು ತಾನು ಜನರಿಗೆ ಭೋದಿಸಿದ ಹಲವು ಆರೋಗ್ಯ ಸಮಸ್ಯೆಗಳು ಹೊರಳಿ ತನಗೇ ಬಂದಿರಬಹುದೇ ಎಂಬ ಸಂಶಯಾಕುಲಿತ ತ್ರಸ್ತ ಮನಸ್ಸಿನಾತ.ಎಲ್ಲಾದರೊಂದು ಗುಟುಕು ಚಹಾ ಕುಡಿಯೋಣವೆಂದು ಸುತ್ತೂ ನೋಡಿದ. ಆ ಸರ್ಕಲ್ ಸುತ್ತಾ ಅಸಂಖ್ಯಾತ ಅಂಗಡಿಗಳು ಗುಬ್ಬಿ ಗೂಡುಗಳಂತೆ ಸಣ್ಣ ಸಣ್ಣ ಜಾಗೆಗಳಿಗೆ ಕಟ್ಟಡಗಳಿಗೆ ಅಂಟಿಕೊಂಡು ಗದ್ದಲವೆಬ್ಬಿಸಿದ್ದವು. ವಡಾ, ಮಿರ್ಚಿ, ಪೂರಿ, ಬಜಿ, ಕರಿದ ಎಣ್ಣಿಯ  ಸೊಗಡು, ಸ್ಟೌ ಮೇಲೆ ಕುದಿವ ಕಡು ಚಹಾದ ಸ್ವಾದ, ಅಷಾಢಗಾಳಿಯ ಶೀತಲ ಗಾಳಿ, ಬಾಜು ಇರುವ ಸುಲಭ ಶೌಚಾಲಯ ತುಂಬಿ ಹೊರಕ್ಕೆ ತೆವಳಿದ ಮೂತ್ರದ ಚುಂಗು ನಾತ- ಇವೆಲ್ಲ ಪರಸ್ಪರ ಕಲೆತು ಮಲೆತು ಕರುಳ ಉದ್ವಿಗ್ನತೆಗೆ ಉರಿ ಸುರಿಯಲು ಪೈಪೋಟಿ ನಡೆಸಿದ್ದವು. ಆಕಾಶ ಇನ್ನೂ ನಿದ್ರೆಯ ಮಂಪರಿನಲ್ಲಿ ತೂಗಡಿಸುತ್ತಿತ್ತು. ಇಡೀ ಜಗತ್ತಿನ ಸರ್ವ ಕ್ರಿಯೆಗಳನ್ನು ಸಾಂದ್ರಗೊಳಿಸಿ ಅದನ್ನು ಈ ಸರ್ಕಲ್‌ನಲ್ಲಿ ಮರು ಅನಾವರಣಗೊಳಿಸಿರಬಹುದೇ ಎಂಬ ಭ್ರಮೆ ಅವನನ್ನು ಆವರಿಸಿಕೊಂಡಿತು.`ಸರ್ ನೀವು ಕಾರ್ಪೋರೇಷನ್ನಿನವರ, ನೋಡ್ರಿ ಸರ್ ಈ ಲ್ಯಾಟ್ರನ್ ಕಟ್ಟಿಕೊಂಡು ಒಂದು ವಾರಾಯಿತು. ಯಾರೂ ಸರಿ ಮಾಡಕ ಬರವಲ್ಲರು. ಚರಂಡಿ ತುಂಬಿಕೊಂಡು ಗಬ್ಬುನಾತ ಹೊಡೆಯಕತ್ತದೆ. ಹುಳುಗಳು ಹೆಂಗ ಪಿತ ಪಿತ ಅನ್ತವೆ~- ಸುಲಭ ಶೌಚಾಲಯ ನಿರ್ವಹಣೆಯ ಭಂಗಿ ಒಮ್ಮೆಲೇ ಅವನ ಗಮನ ತನ್ನತ್ತ ಸೆಳೆದ. ಅವನನ್ನು ಚಂಡಿಡಿದು ಚರಂಡಿಯಲ್ಲಿ ಬಗ್ಗಿ ನೋಡಲು ಒತ್ತಾಯಿಸುವನಂತೆ ಮುಂದೆ ಬಂದ.ಆ ಸುಲಭ ಶೌಚಾಲಯದ ಮುಂದೆ ಕಾಯಿಪಲ್ಲೆ ಮಾರುವವರು ಕೊಳ್ಳುವವರು ತಮ್ಮ ಪಂಚೇಂದ್ರಿಯಗಳ ಸಂವೇದನಾ ಶಕ್ತಿಯನ್ನು ಕಳಕೊಂಡವರಂತೆ ನಿರುದ್ವಿಗ್ನವಾಗಿ ತಮ್ಮ ಕಾಯಕದಲ್ಲಿ ಮುಳುಗಿ ಹೋಗಿದ್ದರು. ಈಗ ಅವರ ಮ್ಯಾಲ ಆಷಾಢದ ಹನಿ ಹನಿ ಮಳೆ ಮಂಜಿನಂತೆ ಗಾಳಿಯಲ್ಲಿ ಹಾರಿ ಬರುವ ಬಿಳಿ ಹೊಗೆಯಂತೆ ತೇಲಿ ಬಂದು ಅವರ ತಲೆಗಳನ್ನು ಸೋಕಿತು.

 

ಅವರು ತಮ್ಮ ಆಜುಬಾಜು ಅಡಗಿಸಿಟ್ಟಿದ್ದ ಗೋಣಿಚೀಲ, ಪ್ಲಾಸ್ಟಿಕ್ ಚೀಲ, ಕೊಡೆಗಳನ್ನು ಹೊರಗೆಳೆದು ತಮ್ಮ ನೆತ್ತಿಯ ಮೇಲೆ ಎತ್ತಿಕೊಂಡು ಕುಂತರು. ಮೆಂತೆ, ಪಾಲಕ, ಸಬ್ಬಸಕಿ, ರಾಜಗಿರಿ ಕರಿಬೇವು, ಕೊತಂಬರಿ- ಇತ್ಯಾದಿ ಹಸಿರು ಮುಕ್ಕುವ ಸೊಪ್ಪುಗಳು ತೇಲಿ ಬಂದ ತುಂತುರ ಮಳೆಗೆ ಮೈಕೊಟ್ಟು ಇನ್ನಷ್ಟು ಮುದುಡಿದವು.ಅವನತ್ತ ಧಾವಿಸಿದ ಭಂಗಿ ಖಾಕಿ ಚಣ್ಣ ತೊಟ್ಟಿದ್ದ. ಹರಿದ ನೂಲು ನೂಲಾದ ಕಪ್ಪನೆಯ ಬನೀನು ಉಟ್ಟಿದ್ದ. ಕಾಲಲ್ಲಿ ತುಂಡಾದ ಪ್ಲಾಸ್ಟಿಕ್ ಚಪ್ಪಲಿಗಳು. ಗಟ್ಟ ನೆರೆತು ವಯಸ್ಸು ಅವನ ಮುಂದಣ ನಾಲ್ಕು ಹಲ್ಲುಗಳನ್ನು ಅಪಹರಿಸಿಕೊಂಡು ಹೋಗಿತ್ತು. ಇರುವ ಇನ್ನಷ್ಟು ದುರ್ಬಲ ಹಲ್ಲುಗಳಲ್ಲೇ ಅವ ಎಲಿ ಅಡಿಕೆ ತಂಬಾಕು ನುರಿಸಿ ಉಕ್ಕಿ ಬರುವ ಎಂಜಲನ್ನು ತನ್ನ ಕೆಂಪು ನಾಲಗೆಯಿಂದ ಹೊರ ಉಗಿಯುತ್ತಿದ್ದ. ತಾನು ಮಾತಾಡಿಸಿದ್ದು ಯಾರೋ ಅಪರಿಚಿತ ವ್ಯಕ್ತಿಯೆಂದು ಹೊಳೆದು ಆ ಭಂಗಿ, ಲೊಚಗುಟ್ಟುತ್ತಾ ಇದು ತನಗೆ ಬಿಡದ ಕರ್ಮವೆಂಬಂತೆ ಸುಲಭ ಶೌಚಾಲಯದಿಂದ ಹಣುಕುತ್ತಿದ್ದ ಮೂತ್ರವನ್ನು ಕಸಬರಿಕೆಯಿಂದ ಬೀದಿಗೆ ತಳ್ಳಿದ.ಆ ಮೂತ್ರ ಮುಂದೆ ಸಾಗಲಾರದೆ ಮಿಳಿಮಿಳಿಗುಟ್ಟಿ ತುಂತುರು ಮಳೆಯೊಳಗೆ ಮೈತೂರಿಸಿ ತರಕಾರಿ ಮಾರುವವರ ಮುಂದೆ ಸರಾಗ ಹರಿಯಲಾರದೆ ಅಲ್ಲಲ್ಲಿ ನಿಂತು... ಉಬ್ಬಿಕೊಂಡು ಮಂದ್ರವಾಗಿ ಚಲಿಸಲಾರದೆ ಚಲಿಸತೊಡಗಿತು. ಅಲ್ಲಿ ಅಲೆದಾಡುತ್ತಿದ್ದ ತೃಷಾಂಕಿತ ಮಂದಿಯ ಚಪ್ಪಲಿ, ಬೂಟು ಬರಿಗಾಲುಗಳ ಅಡಿಗೆ ಸಿಕ್ಕು ಅತ್ತಿತ್ತ ಚಿಲ್ಲನೆ ಸಿಡಿಯಿತು. ಹೀಗೆ ಸಿಡಿದಿದ್ದು ಮಳೆಹನಿಯೋ ಮೂತ್ರದ ಹನಿಯೋ ಎಂಬ ಗಾಬರಿಗೆ ಬಿದ್ದ ಕಾಯಿಪಲ್ಲೆ ಮಾರುವ ಹೆಂಗಸರು ಕೂತಲ್ಲೇ ಸೀರೆ ಒದರಿದರು.ಮೂಗು ಮುಖ ಒರೆಸಿಕೊಂಡು ಎಂಥದ್ದೋ ಒಗರು ವಾಸನೆಯ ಕಪಿಮುಷ್ಠಿಗೆ ಸಿಕ್ಕು- `ಇದೇನು ಹೊಲಸ ನಾತವ್ವ... ಉಂಡದ್ದೆಲ್ಲಾ ಗಂಟಲಿಗೆ ಬಂದಂಗಾತು... ಈ ಕಾರ್ಪೋರೇಷನ್ನಿನವರೇನು ತೂಗಡಿಸಕತ್ಯಾರ... ಇದನ್ನೋಟು ಬಳಕಂಡೋಗಿ ಗಂಟಲಿಗೆ ಸುರದ್ರ ಅವಕ್ಕೆ ಬುದ್ಧಿ ಬರ‌್ತದ~ ಅಂತ ಗಾಳಿಯಲ್ಲಿ ಮಾತುಗಳ ತೂರಿದರು. ರೈನ್ ಕೋಟ್ ಕರಿ ಹ್ಯಾಟ್ ಕರಿಬೂಟು ವೇಷಧಾರಿಯಾಗಿ ಗುಂಪೆ ಗುಂಪೆಗಳ ಮುಂದೆ ನಿಂತು ತನ್ನ ಕೈಯ ರಸೀದಿ ಪುಸ್ತಕದ ಮೇಲೆ ಒಂದು ಬಾಲ್ ಪೆನ್ನು ಇಟ್ಟುಕೊಂಡು `ತಗಿ ತಾಯಿ ರೊಕ್ಕ~ ಎನ್ನುತ್ತಿದ್ದ ಕಾರ್ಪೋರೇಷಿನ್ನಿನ ಟ್ಯಾಕ್ಸ್ ಕಲೆಕ್ಟರ್ ಒಬ್ಬ ಆ ಹೆಂಗಸರ ಮಾತು ಕೇಳಿ- `ಯಾಕ್ರವ್ವ, ನಾ ನಿಮ್ಮ ಮುಂದ ದೆವ್ವ ನಿಂತಂಗೆ ನಿಂತಿನಿ, ಕಾಣಕ್ಕಿಲ್ಲೇನು...ಅನ್ನಾದಾದರ ಎಲ್ಲರಿಗೂ ಅನ್ರಿ. ಈಗ ಯಾರ ಶುದ್ಧ ಅದರಾ ಅದನ್ನಾರ  ಹೇಳ್ರಿ~ ಅಂದ ಅವ, ಚಕ ಚಕ ರಸೀದಿಗಳ ಬರೆದು ರೊಕ್ಕ ಎತ್ತಿಕೊಂಡು ಮುಂದಿನ ಗುಂಪೆಯ ಹತ್ತಿರ ನಿಂತು, `ಅಕ್ಕ ತಗಿಯವ್ವ ರೊಕ್ಕ~ ಅಂತ ಪ್ರಾಸಬದ್ಧವಾಗಿ ಮಾತಾಡುತ್ತಿದ್ದ.

ಮೂಕನಂತೆ ಆ ದೃಶ್ಯಗಳನ್ನು ನೋಡಿದ ಆತ ಹೊರಳಿ ಅಟ್ಟ ಏರಿದ.ಪಾಟಣಿಗೆಗಳ ತುಂಬಾ ಕಸ ಕವಿದು ಗೋಡೆಯ ಮೇಲೆ `ಇಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು~ ಎಂಬ ಬರೆಹದ ಮೇಲೆ ಎಲಿ ಅಡಿಕೆಯ ಉಗುಳು ದಾರ ದಾರವಾಗಿ ಇಳಿಬಿದ್ದಿದ್ದ ಕಂಡು ತನ್ನ ಹೆಲ್ತ್ ಎಜ್ಯುಕೇಷನ್ನಿನ್ನ ಪರಿಣಾಮ ತಾನು ಕೆಲಸ ಮಾಡುವ ಆವರಣದಲ್ಲಿಯೇ ನಿಷ್ಫಲವಾಗಿರುವುದನ್ನು ಕಂಡು ಕನಲಿದ. ಕನಲಿದ ಮನಸ್ಸಿನಲ್ಲಿಯೇ ಒಳ ಹೋದ ಅವನ ಕಣ್ಣೆದರು ಇಮ್ಯುನೈಜೇಷನ್ನು ಕೆಲಸ ಜೋರು ನಡೆದಿತ್ತು. ಬೋಳು ತಲಿಯ ಹೆಲ್ತ್ ಅಸಿಸ್ಟೆಂಟ್ ಪಾಂಡುರಂಗ ಪಾಟೀಲ ಇಮ್ಯುನೈಜೇಷನ್ ಕಾರ್ಡ್‌ಗಳನು ಭರ್ತಿ ಮಾಡುತ್ತಿದ್ದ.ಅವನ ಎದುರು ಕಂಕುಳ ಹಸುಗೂಸುಗಳನ್ನು ಅಂಗೈನಲ್ಲಿ ಹಿಡಕೊಂಡ ಬುರ್ಖಾಧಾರಿ ಮುಸ್ಲಿಂ ಹೆಂಗಸರು ತಮ್ಮ ಪಾಳಿ ಈ ದಿನ ಬಂದೀತೆ ಎಂದು ಕೇಳುವವರಂತೆ ನಿಂತಿದ್ದರು. ಅವರ ಕೈಯೊಳಗಿನ ಕೂಸುಗಳು ಕುಂಯ್ ಅಂತ ರಾಗ ಹಚ್ಚಿದ್ದವು. ಅವುಗಳನ್ನು ಸಮಾಧಾನ ಮಾಡುವ ಸಲುವಾಗಿ ಕೆಲ ತಾಯಂದಿರು ಪಾಳಿಯಿಂದ ಸರಿದು ದೂರದ ಬೆಂಚ ಮೇಲೆ ಕೂತು ಹಾಲುಣಿಸುತ್ತಿದ್ದರು.ಲಸಿಕೆ ನೀಡುವ ಕೆಲಸ ಆರಂಭಿಸುವ ಮುನ್ನ ಹೆಲ್ತ್ ಅಸಿಸ್ಟೆಂಟ್ ಪಾಂಡುರಂಗ ಪಾಟೀಲ- `ನೀವು ಅದೇನು ಫ್ಯಾಮಿಲಿ ಪ್ಲಾನಿಂಗ ಬಗ್ಗೆ ಹೆಲ್ತ್ ಎಜ್ಯುಕೇಷನ್ ಕೊಡ್ತಿರೋ... ಈಗ ನೋಡ್ರಿ ನಮ್ಮ ದೇಶದ ಜನಸಂಖ್ಯ ನೂರ ಇಪ್ಪತ್ತು ಕೋಟಿ ದಾಟಿ ಹೋತಲ್ರಿ... ಫ್ಯಾಮಿಲಿ ಪ್ಲಾನಿಂಗ್ ಕಡ್ಡಾಯ ಮಾಡದ ಹೊರ‌್ತು ಏಟು ಹೆಲ್ತ್ ಎಜ್ಯುಕೇಷನ್ ಕೊಟ್ಟರೂ ಅಷ್ಟೇಯಾ~ ಅಂತ ಪಾಳಿ ಹಚ್ಚಿ ನಿಂತ ಹೆಂಗಸರನ್ನು ಕಂಡು ಗುರುಗುಟ್ಟಿದ. ಕೆಲಸ ಶುರು ಮಾಡುವ ಮುನ್ನವೇ ಕೆಲಸ ಮಾಡಿ ದಣಿದವನಂತೆ ಆಯಾಸದ ನಿಟ್ಟುಸಿರ ಬಿಟ್ಟ.ಪಾಟೀಲ ತುಂಬಿಕೊಟ್ಟ ಇಮ್ಯುನೈಜೇಷನ್ ಕಾರ್ಡ್ ತಕ್ಕೊಂಡ ನರ್ಸ ಮೀನಾಕ್ಷಿ ತನ್ನ ಪ್ರಶ್ನೆಗೆ ಉರ್ದುವಿನಲ್ಲಿ ಉತ್ತರಿಸಿದ ತಾಯಿಯೊಬ್ಬಳನ್ನು `ನಿನ್ಗೆ ಕನ್ನಡ ಬರೊದಿಲ್ಲೇನು~ ಅಂತ ತರಾಟಿಗೆ ತಕ್ಕೊಂಡಳು. ಆಕೆಯೋ ತನಗೆ ಕನ್ನಡ ಬರುವುದಿಲ್ಲವೆಂದು, ತಾನು ಹುಟ್ಟಿದಂದಿನಿಂದ ಮನೆಬಿಟ್ಟು ಹೊರಗೆಲ್ಲೂ ಹೋಗಿಲ್ಲವೆಂದು, ಅದೇನಿದ್ದರೂ ಅದು ತಮ್ಮ ಮನಿಯ ಗಂಡಸರ ಕೆಲ್ಸವೆಂದು, ಹಂಗಾಗಿ ತನಗೆ ಉರ್ದು ಬಿಟ್ಟರೆ ಯಾವ ಭಾಷೆಯೂ ಬರುವುದಿಲ್ಲವೆಂದು... ಅದನ್ನು ತನ್ನ ಹರಕು ಮುರಕು ಕನ್ನಡದಲ್ಲಿ ಹೇಳಲು ಪ್ರಯತ್ನಿಸಿ ಸೋತಳು.`ನಾಟಕ ಆಡದ ಚಲೋ ಕಲ್ತಿರಿ... ತಗ~ ಅಂತ ಮೀನಾಕ್ಷಿ ಆ ಹೆಂಗಸಿನ ಮೇಲಿನ ಸಿಟ್ಟನ್ನು ಆಕೆಯ ಮಗುವಿನ ಮೇಲೆ ತೀರಿಸಿಕೊಳ್ಳುವವಳಂತೆ ಅದರ ಕುಂಡೆಯ ಮೇಲೆ ರಭಸದಿಂದ ಇಂಜೆಕ್ಷನ್ ಪ್ರಿಕ್ ಮಾಡಿದಳು. `ಅಯ್ಯೋ ನಾನೇನು ತಪ್ಪು ಮಾಡಿದೆ~ ಎಂದು ಕೇಳುವಂತೆ ಆ ಕೂಸು ಆ ಕೊಠಡಿಯ ಕಿಟಕಿ ಬಾಗಿಲುಗಳು ಗಡ ಗಡ ನಡುಗುವಂತೆ ರೋದಿಸಿತು.

ಇದನ್ನೆಲ್ಲಾ ನೋಡುತ್ತಾ ಅವ ಸುಮ್ಮನೆ ಕೂತ. ಹೊರಗೆ ಜಡಿ ಮಳೆ ಇನ್ನೂ ಜೋರಾಯಿತು. ಮಳೆಗೆ ಮನಸ್ಸು ಮಿಂದಂತೆ ಅವನ ಆತ್ಮ ವಿನಾಕಾರಣ ತಪ್ತವಾಯಿತು.ಮನಸ್ಸು ತನ್ನ ಸಂವೇದನಾ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿತೇ ಅಂತ ಅವನಿಗೆ ಸಂಶಯವೂ ಆಯಿತು. ಅಥವಾ ಕಣ್ಣಿದಿರಿನ ಜಗತ್ತೇ ತನ್ನ ಸ್ಪಂದನ ಗುಣ ಕಳಕೊಂಡು ಜಡವಾಗುತ್ತಿರುವುದರಿಂದ ತನಗೆ ಹೀಗಾಗುತ್ತಿದ್ದೆಯೇ... ದುಃಖಗಳನ್ನು ಸಂಕಟಗಳನ್ನು ಜನ ಯಾವುದೋ ಸಿನೇಮಾ ನೋಡಿ ಹೇಗೆ ಅಲಿಪ್ತರಾಗಿ ಉಳಿಯುವುದು ಎಂಬ ಕಲೆ ಕರಗತ ಮಾಡಿಕೊಳ್ಳುವ ಪ್ರಾವೀಣ್ಯತೆ ಗಳಿಸಿದ್ದಾರೋ? ತಟಸ್ಥರಾಗಿ ಉಳಿದು ಅನ್ಯರ ಕಷ್ಟಗಳನ್ನು ಕಂಡು ಆನಂದಿಸುವ ಗುಣವನ್ನು ತಾವು ನಿತ್ಯ ಕಣ್ತೆರೆದು ನೋಡುವ ಧಾರಾವಾಹಿಗಳಿಂದ, ರಿಯಾಲಿಟಿ ಶೋಗಳಿಂದ ಜನ ಈಗ ಕಲಿತಿರಬಹುದೇ?

 

ಅವ ಕೂತ ಆರೋಗ್ಯ ಕೇಂದ್ರವನ್ನು ಬ್ರಿಟಿಶರ ಕಾಲದಲ್ಲಿ ಕಟ್ಟಿದ್ದರಿಂದ ಅದೊಂದು ದನದ ಕೊಟ್ಟಿಗೆಯಂತಿತ್ತು. ಕಪ್ಪಿಡಿದ ಬಿದಿರಿನ ಕಟಾಂಜನ, ರೆಡ್ ಆಕ್ಸಯ್ಡ ನೆಲ, ಮಂಗಳೂರು ಹಂಚಿನ ಮಾಡು, ಮಾಡಿಗೆ ತೂಗಿ ಬಿದ್ದ ಪುರಾತನ ಕಾಲದ ಫ್ಯಾನುಗಳು, ಕಾರ್ಪೋರೇಷಿನಿನ್ನಲ್ಲಿ ಸಕಾಲಕ್ಕೆ ಪಗಾರ ಸಿಗಲ್ಲಾಂತ ಇಲ್ಲಿಗೆ ಬರಲೊಪ್ಪದ ವೈದ್ಯರು, ಬಂದರೂ ಸದಾ ಹೊರಗೆ ಪ್ರಾಕ್ಟಿಸ್ ಚಟ ಅಂಟಿಸಿಕೊಂಡವರು, ಇರುವ ಮುದಿ ನರ್ಸಗಳು, ಕುಡುಕ ವಾರ್ಡ್ ಅಟೆಂಡರುಗಳು, ಡ್ರಗ್ ಕದಿಯುವ ಫಾರ್ಮಸಿಸ್ಟ್‌ಗಳು...

 

ಅವರೇ ಎಲ್ಲ... ಯಾವುದೋ ದರಿದ್ರ ಮೈ ಹೊಕ್ಕವರಂತೆ ಬರಬೇಕಿನಿಸಿದಾಗ ಬಂದು, ಕೆಲಸ ಮಾಡಬೇಕಿನಿಸಿದಾಗ ಮಾಡಿ ಅಂತೂ ಇಂತೂ ತಿಂಗಳ ನೂಕುವ ಶಾಪಗ್ರಸ್ತ ನೌಕರರು! ಏನೋ ಮಂಕು... ಉದಾಸೀನ, ಉಪೇಕ್ಷೆ. ಇಂತಲ್ಲಿ ಅವ ಇಪ್ಪತ್ತು ವರ್ಷಗಳ ಮಗುಚಿ ಹಾಕಿ, ಮಾತುಗಳ ನೇಯಲು ಹೋಗಿ ಭೀಕರ ಮೌನಕ್ಕೆ ಗುರಿಯಾಗಿದ್ದ.ಈಗ ಈ ಆರೋಗ್ಯ ಕೇಂದ್ರದ ಕೆಳ ಅಂತಸ್ತಿನಲ್ಲೊಂದು ಏಡ್ಸ್ ರೋಗಿಗಳಿಗಾಗಿ ಕೌನ್ಸಲಿಂಗ್ ಸೆಂಟರ್ ಹೊಸದಾಗಿ ಕದ ತೆಗೆದು ಕೂತಿದೆ. ಬಾಗಿಲಲ್ಲಿಯೇ `ಕಾಂಡೊಮ್ ಒಂದು; ಲಾಭ ಮೂರು~ ಎಂಬ ಬೋರ್ಡ್ ನೇತಾಡುತಿದೆ. ಒಳಗೆ ಇರುವ ಮೂರು ಲಡಾಸು ಕುರ್ಚಿಗಳಲ್ಲಿ ಕಂಟ್ರಾಕ್ಟು ಆಧಾರದ ಮೇಲೆ ರಕ್ತ ಪರೀಕ್ಷಿಸುವ ಒಬ್ಬ ಟೆಕ್ನಿಷಿಯನ್ ಹಾಗೂ ಕೌನ್ಸಲಿಂಗ್ ಮಾಡಲು ಎಂ.ಎಸ್‌ಡಬ್ಲ್ಯೂ ಮಾಡಿರುವ ಓರ್ವ ಹದಿ ಹರೆಯದ ಹುಡುಗಿ ಕೂತು `ಏಡ್ಸ್ ರೋಗಿಗಳ ಸಂಖ್ಯೆ ಹೆಚ್ಚಾಗಲಿ... ನಮ್ಮ ಉದ್ಯೋಗ ಖಾಯಂ ಆಗಲಿ~ ಎಂದು ಪ್ರಾರ್ಥಿಸುತ್ತಾ ಕೂತಿದ್ದಾರೆ.ಅಟ್ಟದ ಮೇಲಣ ಬೇಸರದಿಂದ ತಗಿ ಹೊಸ ಕಚೇರಿಯಲ್ಲಿ ಹೊಸ ಕೆಲಸ ಏನಿದೆ ಎಂಬ ಕುತೂಹಲದಿಂದ ಅವ ಕೆಳಗಿಳಿದು ಬಂದ. ಇನ್ನೂ ಮಳೆ ತಪ ತಪ ಸುರಿಯುತಿತ್ತು. ಹಂಚುಗಳ ಒಳಲೆಗಳಿಂದ ನೀರ ಹನಿಗಳು ಟಪ್ ಟಪ್ ಎಂದು ಕೆಳಕ್ಕುರುಳಿ ಕೆಳಗೆ ಆಗಲೇ ನಿಂತ ನೀರನ್ನು ಅವುಗಳ ಸ್ಥಾನದಿಂದ ಹೊರದೂಡುತ್ತಿದ್ದವು. ಗಾಳಿ ಬರ್ಫದ ಮೇಲೆ ಹಾದು ಬಂದಂತೆ ಚಳಿ ಚಳಿ ಅನ್ನಿಸುತ್ತಿತ್ತು. ಟಿಕ್ನಿಷಿಯನ್ ಎಲ್ಲಿ ಹೋಗಿದ್ದನೋ ಕೌನ್ಸಲರ್ ಆಗಿ ನೇಮಕಗೊಂಡ ಪ್ರಾಯದ ಹುಡುಗಿ ಒಬ್ಬಳೇ ತನ್ನ ಮುಂದೊಂದು ಉದ್ದನೆಯ ರಿಜಿಸ್ಟರ್ ಇಟ್ಟುಕೊಂಡು ಕೂತಿದ್ದಳು. ಆಕೆ ತೆಳ್ಳಗೆ ಅಸ್ಥಿಪಂಜರದಂತಿದ್ದಳು. ಯಾರಿಗಾದರೂ ಏಡ್ಸ್ ರೋಗಿಯೊಬ್ಬನ ದೇಹ ಅಂತಿಮವಾಸ್ಥೆಯಲ್ಲಿ ಹೇಗಿರುತ್ತದೆ ಎಂಬುದನ್ನು ತೋರಿಸಲು ತಕ್ಕ ಉದಾಹರಣೆಯಂತಿದ್ದಳು. ಗಲ್ಲಗಳು ಒಳ ಹೋಗಿ ಕಪಾಲದ ಎಲುಬುಗಳು ಉಬ್ಬಿದ್ದವು.ಅವಳ ಉಬ್ಬು ಹಲ್ಲುಗಳು ವಸಡ ಒಡಿದು ಹೊರ ಇಣುಕಿದ್ದವು. ಅವಳು ಕೂತ ಕುರ್ಚಿಯ ಹಿಂದೆ ಒಂದು ಬೆಂಚಿನ ಮೇಲೆ ರಾಶಿ ರಾಶಿ ನಿರೋಧದ ಬಂಡಲ್‌ಗಳಿದ್ದವು.

ಕಪ್ಪಿಡಿದ ಗೋಡೆ ತುಂಬ ಈಗ ತಾನೇ ಮುದ್ರಣಾಲಯದಿಂದ ಅಚ್ಚುಮಾಡಿ ತಂದ ಏಡ್ಸ್ ರೋಗ ಜಾಗೃತಿಯ ನವೀನ ಪೋಸ್ಟರ್‌ಗಳು ನೇತಾಡುತ್ತಿದ್ದವು. `ನಮಗೇಕೆ ಈ ಶಿಕ್ಷೆ~ ಎಂದು ನೋಡುವವರನ್ನು ಕೇಳುವಂಗೆ ನಾಲ್ವರು ಹೆಂಗಸರು ತಮ್ಮ ಬಲಗಾಲನ್ನು ಒಂದು ಹೆಜ್ಜೆ ಮುಂದಿಟ್ಟು ಕೈಯನ್ನು ಪ್ರಶ್ನಾರ್ಥಕ ಅರ್ಥ ಬರುವಂತೆ ಎತ್ತಿ ನಿಂತ ಭಂಗಿಯ ಒಂದು ಪೋಸ್ಟರ್ ಆ ಹುಡುಗಿಯ ಬೆನ್ನ ಹಿಂದೆ ತೂಗುತಿತ್ತು.ಮದುವೆಯಾಗದ, ಪ್ರೀತಿ ಪ್ರೇಮ ಕಾಮ ಏನೊಂದನ್ನೂ ಅರಿಯದ ತನ್ನನ್ನು ಈ ಕೆಲಸಕ್ಕೆ ಹಚ್ಚಿದವರನ್ನು ಕೇಳುವಂಗೆ ಆ ಹುಡುಗಿ ಅವನಿಗೆ ಕಾಣಿಸಿದಳು. ಅವ ಕರುಣೆಯಿಂದ `ಹೆಂಗಿದೆ ಕೆಲ್ಸ~ ಅಂದ. ಆಕೆ ಇದೊಂದು ಕೆಲಸವೇ? ಜಗತ್ತಿನಲ್ಲಿ ಏನಾದರೊಂದು ಕೆಟ್ಟ ಕೆಲಸ ಎಂಬುದೊಂದು ಇದ್ದರೆ ಅದು ಇದೇ ಎಂಬುದನ್ನು ಹೇಳುವಂತೆ- `ಹೆಂಗ ಹೇಳೋದು ಸರ್, ಇದು ಬಾಯಿ ಬಿಟ್ಟು ಹಿಂಗೆ ಅಂತ ಭುಜ ಹಾರ‌್ಸಿಕೊಂಡು ಹೇಳೋ ಕೆಲ್ಸನಾ~ ಅಂದು ಮುದುಡಿದಳು.`ಈ ಏರಿಯಾದಾಗ ಪ್ರಾಸ್ಟಿಟ್ಯೂಟ್ಸ್ ಜಾಸ್ತಿ ಅದಾರ ಅಂತ ಈ ಸೆಂಟರ್ ಕೊಟ್ಟಾಂಗ ಕಾಣ್ತಾದ~ ಅಂದ ಅವ. ಸೂಳೆಯರು, ವೇಶ್ಯೆಯರು, ದಂಧೆಯವರು ಎಂಬ ಶಬ್ದ ಅವನ ಬಾಯಿಗೆ ಬಂದರೂ ಅವ ಪ್ರಾಸ್ಟಿಟ್ಯೂಟ್ಸ್ ಅಂದ. ಆಕೆ ಆ ಶಬ್ದವನ್ನೂ ಒಪ್ಪದವಳಂತೆ `ಸೆಕ್ಸ್ ವರ್ಕರ್ಸ್‌ ಅಂದ್ರಾ~ ಅಂದು, `ಗಂಡಸರು ಮಾಡೋ ದುಶ್ಚಟಕ್ಕೆ ಪಾಪ ಹೆಂಗ್ಸರೂ ಮಕ್ಕಳು ಅನುಭವಿಸಬೇಕು ನೋಡ್ರಿ ಸರ್~ ಅಂದಳು. `ನಿಂಗೊತ್ತಲ್ಲಮ್ಮ ಈ ಏರಿಯಾದಲ್ಲಿ ಸೆಕ್ಸ್ ವರ್ಕರ್ಸ್‌ ಜಾಸ್ತಿ ಅದಾರ. ಏನು ಮಾಡೋದು, ಬಡತನ ಅಜ್ಞಾನ...~ ಅಂದ ಅವ. ಆಕೆ ಅವನ ಮಾತಿಗೆ ಏನೂ ಪ್ರತಿಕ್ರಿಯಿಸದೆ ಹೊರಗೆ ಸುರಿವ ಮಳೆಯ ನೋಡಿದಳು. ಅವಳ ಕಣ್ಣಾಲಿಗಳಲ್ಲೂ ಧಾರೆ ಧಾರೆಯಾಗಿ ಯಾವುದೋ ಮಳಿ ಸುರಿಯುತ್ತಿದೆಯೋನೋ ಅನ್ನಿಸಿ-`ನಿಮ್ಗ ಈ ವಿಷಯ ಮಾತಾಡ್ಲಿಕ್ಕೆ ಬೇಸರವೇನೋ~ ಅಂದ.

`ಹಂಗೇನಿಲ್ಲ ಸಾರ್... ನಂಗೂ ಹೊಸದಾಗಿ ಕೆಲ್ಸಕ್ಕೆ ಸೇರಿದಾಗ ಯಾಕಪ್ಪ ಈ ಕೆಲ್ಸಕ್ಕೆ ಬಂದೆ ಅಂತ ಬೇಸರ ಬರ‌್ತಿತ್ತು. ಬಿಟ್ಟು ಬಿಡನಾ ಅನಿಸ್ತಿತ್ತು. ಈಗ ಕೆಲ್ಸರಾ ಎಲ್ಲಿ ಸಿಕ್ತಾವ. ಮೊದ ಮೊದ್ಲು ಹೆದ್ರಿಕೆ ಅಗ್ತಾ ಇತ್ತು. ನಾಚಿಕೆ ಅಗ್ತಾ ಇತ್ತು. ಈಗ ರೂಢಿಯಾಗೈತಿ. ನೀವೆಳಿದಂಗ ಈ ಏರಿಯಾದಾಗ ಭಾಳ ಬಡತನ. ಹೆಣ್ಣಮಕ್ಕಳ ಪರಿಸ್ಥಿತಿ ತೀರಾ ಖರಾಬ್ ಐತಿ. ವೇಶ್ಯಾ ದಂಧೆಯಾಗ ಆ ಜಾತಿ ಈ ಜಾತಿ ಅಂಥ ಹೆಂಗ ಹೇಳಾದು. ಒಟ್ಟ ಕೆಟ್ಟ ಹೊಟ್ಟಿ, ಯಾರರ ಏನ ಮಾಡ್ತರಾ~ ಅಂತ ತಾನೂ ಹೊಟ್ಟಿ ಪಾಡಿಗಾಗಿಯೇ ಈ ಕೆಲ್ಸಕ್ಕೆ ಬಂದಿದ್ದೇನೆ ಎಂದು ಪರೋಕ್ಷವಾಗಿ ಸಮರ್ಥಿಸುವಳಂತೆ ಮಾತು ಮುಗಿಸಿದಳು.ಹೊರಗೆ ಬಾಗಿಲ ಹತ್ತಿರ ಯಾರೋ ಒಳ ಇಣುಕಿ... ಅವ ಒಳಗೆ ಕೂತದ್ದನ್ನ ಕಂಡು ಒಳಬರಲು ಭಯಗೊಂಡಂತೆ ಕ್ಷಣಾರ್ಧದಲ್ಲಿ ನೆರಳೊಂದು ಹಿಂದೆ ಸರಿದು ಕಂಡು ಕಾಣದಂತೆ ಅದೃಶ್ಯವಾಯಿತು. ಆ ನೆರಳಿಗೊಂದು ರೂಹು ಕೊಡುವಂತೆ ಆಕೆ, `ಯಾರೋ ಕೌನ್ಸಲಿಂಗ್‌ಗೆ ಬಂದಂಗ ಕಾಣ್ತಾರ. ಸರ್ ಕೌನ್ಸಲಿಂಗ್ ಅಂದ್ರೆ ಇನ್ನೇನು ಕತಿ ಕೇಳಾದು... ಹೆಂಗ ಕಂಟಾಕ್ಟ್ ಆಯ್ತು, ಯಾವಾಗ ಆಯ್ತು, ಎಲ್ಲಿ ಆಯ್ತು, ಎಷ್ಟು ಸಾರಿ ಆಯ್ತು... ಹಿಂಗ ಕೇಳ್ತಿದಂಕಲೇ ಎಷ್ಟೋ ಮಂದಿ ತಮ್ಮ ಕತಿನಾ ಸುರು ಮಾಡ್ತಾರ, ಅಳ್ತಾರ...ಯಾರಿಗೂ ಹೇಳಬ್ಯಾಡ್ರಿ ಅಂತ ಕೈಮುಗಿತಾರ... ಅವರ ಕತಿ ಕೇಳಿ ಕೇಳಿ ಈಗ ನನ್ನ ಕಿವಿ ಕಿವುಡಾಗ್ಯವ, ಎದಿ ಕಲ್ಲಾಗದ. ಹಿಂಗ ಕತಿ ಹೇಳೋ ಮಂದೀನ ನೀವು ದಾರಿ ಮ್ಯಾಗ ನೋಡಿದ್ರ ಸತಿ ಸಾವಿತ್ರಿಯರಂಗ ಕಾಣ್ತಾರ. ಶ್ರೀರಾಮಚಂದ್ರನಂಗ ಕಾಣ್ತಾರ. ಕಾಮಕ್ಕೆ ಕಣ್ಣಿಲ್ಲ ಅಂಬೋದು ನಂಗ ಇಲ್ಲಿ ಬಂದ ಮ್ಯಾಕ ಗೊತ್ತಾತ್ರಿ ಸರ~ ಅಂದಳು. ಏನೋ ಅದ್ಭುತವಾದದನ್ನು ಶೋಧಿಸಿದವಳಂತೆ.`ಕಾಮಕ್ಕೇನಮ್ಮ ಈಗ ಯಾವುದಕ್ಕೂ ಕಣ್ಣಿಲ್ಲ~ ಅಂದ. ಅವ ಮೇಲೆಳಲು ನೋಡಿದ. ಆಕೆ ಇನ್ನೂ ತನ್ನ ಮಾತು ಮುಗಿದಿಲ್ಲ ಅನ್ನುವಂತೆ- `ಸರ್ ನನ್ನ ಕೆಲ್ಸ ಹಿಂಗ ಅಂತ ಮನಿಯಾಗ ಹೇಳಿಲ್ಲ. ನನ್ನ ಕೆಲ್ಸ ಇಂತಾದ್ದು ಅಂದ್ರ, ನಮ್ಮಪ್ಪ ಮೊದ್ಲು ಬಿಟ್ಟಾಕು ಅಂತಾನೆ. ನಾನು ಓದಿದ್ದೇನೋ ಇಲ್ಲಿ ಮಾಡೋದೇನೋ...~- ಬೇಸರದ ಭಾವದಿಂದ ಮಾತನಾಡಿದ ಆಕೆ, ತನ್ನ ಮಾತು ಏನು ಪ್ರಭಾವ ಬೀರಿದೆಯೆಂಬುದು ಅಳೆಯುವವಳಂತೆ `ನಿಮ್ಗೂ ನಿಮ್ಮ ಕೆಲ್ಸ ಹಿಂಗ ಅನಿಸ್ತದ ಸರ್?~ ಅಂದಳು.`ಅದ್ನ ಏನಂತಾ ಹೇಳ್ಲಿ. ಸರ‌್ಕಾರಿ ಕೆಲ್ಸ ಅಂತ ಕಣ್ಣು ಮುಚ್ಕಂಡು ಬಂದೆ. ಎಷ್ಟೋ ಸಾರಿ ಇದ್ನ ಬಿಸಾಕಿ ಹೊಂಟೋಗನಾ ಅಂತ ಮನಸ್ಸು ಮಾಡಿದೆ. ಈ ಕೆಲ್ಸ, ಈ ಸಂಸಾರ, ಈ ಪ್ರಪಂಚ... ಒಂದು ನಮೂನಿ ಕೆಸರ ಮಡು ಇದ್ದಂಗ. ಒಮ್ಮಿ ಕಾಲಿಕ್ಕಿದರ ಅಷ್ಟು ಸುಲಭಕ್ಕೆ ಹೊಳ್ಳಿ ತಕ್ಕೋಳಕ್ಕ ಬರೋದಿಲ್ಲ. ಹಂಗ ಮಾಡಕ ಹೋದವಿ ಅಂತ ತಿಳಿ, ಆ ಕೆಸರು ಮತ್ತೋಟು ಒಳಕ್ಕೆ ಎಳಕಂತದ~ ಅಂದು ಮೇಲೆದ್ದ.ಹೊಳ್ಳಿ ಅಟ್ಟ ಹತ್ತುವಾಗ ತೇಕು ಅವನ ಎದಿಯನ್ನು ಹಿಂಡಿದಂತಾಯ್ತು. ಆ ಅಟ್ಟದ ಮೇಲೋ ಅದೇ ಮಕ್ಕಳ ಅಳು ಕೆಟ್ಟ ಮಳೆಯಂತೆ ಆ ಕೋಣೆಯನ್ನು ಕಣ್ಣೀರಿನಲ್ಲಿ ಅದ್ದಿತ್ತು. ಈ ಗದ್ದಲದಿಂದ ತನ್ನ ಸಹನೆಯನ್ನು ಕಳಕೊಂಡವನಂತೆ ಪಾಂಡುರಂಗ ಪಾಟೀಲ-

`ಎಲ್ಲಿ ಹೋಗಿದ್ರಿ ಸರ~ ಅಂದವ ಅವನ ಮುಖವನ್ನು ಮಿಕಿಮಿಕಿ ನೋಡಿ ಏನೋ ಕಾಣಬಾರದ್ದನ್ನ ಕಂಡವನಂತೆ `ಮೂಗಿಗೇನಾದ್ರು ಬಡ್ಸಗಂಡು ಬಂದ್ರ. ಕೆಂಪಗ ರಕ್ತ ಅಡಾಕತ್ಯದ~ ಅಂದ. ಅದಕ್ಕೆ ಅವ ಪಾಟೀಲನ ಬಾಜು ಕೂರುತ್ತಾ `ಏನು ಸುಮ್ಕ ನಗೆ ಚಾಟಿಕೆ ಮಾಡ್ತಿಯಾ ಪಾಟೀಲ~ ಅಂದು ತನ್ನ ಮೂಗಿನ ತುದಿಯನ್ನ ತನ್ನ ಬೆರಳಿನಿಂದ ಜೋಪಾನವಾಗಿ ಸವರಿಕೊಂಡ. ತಣ್ಣನೆಯ ಕೀವಿನಂತ ದ್ರವವೊಂದು ಬೆರಳ ತಾಕಿ ಅವನ ಮೈಕಂಪಿಸಿತು.`ನಿಮಗ ಏನಾದರೂ ಡಯಾಬಿಟಿಸ್ ಅದ ಏನ್ರಿ ಸಾರ್... ಯಾವಾಗರ ಯೂರಿನ್, ಬ್ಲಡ್ ಚೆಕಪ್ ಮಾಡ್ಸಿಗಂಡು ಇದ್ದೀರೋ ಇಲ್ಲೋ~ ಅಂದ ಪಾಟೀಲ.`ಏ, ನಂಗ ಎಲ್ಲಿ ಡಯಾಬಿಟಿಸ್ ಮಾರಾಯ. ನಮ್ಮ ವಂಶದಾಗ ಅದರ ಸುದ್ದಿ ಇಲ್ಲ. ತಡಿ ಒಳಗೋಗಿ ಕನ್ನಡಿಯಾಗ ಮೂಗ ನೋಡ್ಕಂಡು ಬರ‌್ತಿನಿ~ ಅಂದ ಅವ ಒಳಕೋಣೆಯಲ್ಲಿ ಕನ್ನಡಿ ಅಂದು ಕರೆಯಬಹುದಾದ ಪುರಾತನ ಮಿರರ್ ಮುಂದೆ ಒಂದು ಹಾರರ್ ಸಿನೇಮಾ ನೋಡುವವನಂತೆ ನಿಂತ. ಭಯಭೀತ ಕಣ್ಣುಗಳಲ್ಲಿ ಕಂಡದ್ದೆಲ್ಲ ಅಯೋಮಯ ಜಗತ್ತು! ತುಣುಕು ತುಣುಕು ಚಿತ್ರ ವಿಚಿತ್ರಗಳು. ತಾನು ಯಾವುದನ್ನು ಬೇಡವೆಂದು ಯಾರಿಗೋ ತೋರಬಾರದೆಂದು, ಯಾರ ಕಿವಿಗೂ ಕೇಳಬಾರದೆಂದು ಅವಿತಿಟ್ಟ ಗುಪ್ತ ಸಂಗತಿಗಳು, ಅಸಂಗತಗಳು, ಬೆಚ್ಚಿಸುವ ದಿಗ್ಬ್ರಮೆಗೊಳಿಸುವ ನಿಗೂಢ ಚಿತ್ರಗಳು, ದುಃಖಮಯ ವಿಷಾದಮಯ ಛಾಯೆಗಳು, ಬಡತನ ಅವಮಾನ ದೈನ್ಯ ಹೊಟ್ಟೆಪಾಡಿಗೆ ನಡೆಸಿದ ನಾಟಕಗಳು, ದುರ್ಬಲ ಮನಸ್ಸಿನ ಮೇಲೆ ಧುತ್ ಎಂದು ಎರಗಿದ ಆಘಾತಗಳು- ಒಂದೊಂದೇ ಮರು ಜೀವ ಧರಿಸಿ ಪುನರ್ ಸಂಭವಿಸಿದಂತಾಗಿ ಅವ ಬೆಚ್ಚಿ ಬಿದ್ದು ಕಣ್ಣುಮುಚ್ಚಿದ.`ಸರ ಡಯಾಬೀಟಿಸು ಹಂಗ... ಸೈಲೆಂಟ್ ಕಿಲ್ಲರ್~ ಪಾಟೀಲ ಯಾವಾಗಲೋ ಬಂದವ ಅವನನ್ನು ಮುಟ್ಟಿ ಎಚ್ಚರಿಸಿದ.

2

ಅವ ಆ ಊರಿನ ಪ್ರತಿಷ್ಠಿತ ಆಸ್ಪತ್ರೆಯ ಪ್ರವೇಶಿಸಿದ. ಅಲ್ಲಿ ಇಡೀ ಜಗತ್ತಿನ ಅರ್ಧಕ್ಕರ್ಧ ಜನ ಪಾಳಿ ಹಚ್ಚಿ ನಿಂತಿದ್ದಾರೋ ಎಂಬುವಷ್ಟು ಜನ ಸಂದಣಿ. ಒ.ಪಿ.ಡಿ.ಯ ರೂಂ ನಂಬರ್ ಅರವತ್ತರ ವೈದ್ಯಕೀಯ ವಿಭಾಗಕ್ಕೆ ಒಂದು ಚೀಟಿ ಮಾಡಿಸಿದ. ತನ್ನೊಟ್ಟಿಗೆ ಹೀಗೆ ಚೀಟಿ ಮಾಡಿಸಲು ನಿಂತ ಜನರನ್ನು ಅವ ನೋಡಿದ. ಬಹಳ ಜನ ಈ ಲೋಕ ತೊರೆಯಲು ಪರವಾನಗಿ ಚೀಟಿ ಪಡೆಯಲು ಸಾಲು ನಿಂತಂತೆ ಕಂಡರು. ಇಲ್ಲಿಯೂ ಅದೇ ಮಳಿ ಬಿಟ್ಟು ಬಿಟ್ಟು ಭೂಮಿಯನ್ನು ತಟ್ಟುತಿತ್ತು. ಜನರೆಲ್ಲಾ ಈ ಶನಿಮಳೆಯಿಂದ ತಬ್ಬಿಬ್ಬಾಗಿದ್ದರು. ಈ ಮಳಿಯಿಂದಲೇ ತಮಗೆ ಈ ಕಾಯಿಲೆ ಕಸಾಲೆ ಬಂದಿರಬಹುದೆಂದು ಅದನ್ನು ಉದಾಸದಿಂದ ನೋಡುತ್ತಿದ್ದರು.ಅವ ಮೆಡಿಸಿನ್ ವಿಭಾಗ ಹೊಕ್ಕ. ಅಲ್ಲಿ ಡಾ.ಸ್ವಾಮಿ ಅನ್ನುವವರೊಬ್ಬರು. ಆ ಸ್ವಾಮಿಯ ಶಿಷ್ಯವೈದ್ಯ ಸಮೂಹವೆಂದು ಕರೆಯಬಹುದಾದ ಹತ್ತಾರು ಯುವ ವೈದ್ಯರು ನೆರೆದಿದ್ದರು. ಆ ಗದ್ದಲದಲ್ಲೂ ಹೇಗೋ ನುಸುಳಿ ಅವ ಡಾ.ಸ್ವಾಮಿ ಅವರ ಮುಂದೆ ತನ್ನ ಚೀಟಿ ಇಟ್ಟ. ಡಾ. ಸ್ವಾಮಿ ಆ ಚೀಟಿಯನ್ನು ಅವನನ್ನು ಒಂದು ಸುತ್ತು ಅವಲೋಕಿಸಿ `ಏನಾಗಿದೆ~ ಅಂದರು. ಎದುರಿನಲ್ಲಿದ್ದ ಇನ್ನೊಬ್ಬ ವೈದ್ಯರು `ಡಯಾಬೀಟಿಸೋ ಬಿ.ಪಿ.ನೋ ಇರಬೇಕು ಸರ. ನಲ್ವತ್ತು ವರ್ಷಾದವರ ಮುಖ ನೋಡಿದ್ರೆ ಅವರನ್ನ ಏನಾಗಿದೆ ಅಂತ ಕೇಳ ಮೊದ್ಲೆ ಇದೇ ಬ್ಯಾನೆ ಅಂತ ಹೇಳಬಹುದು~ ಅಂದು ಅವರೂ ಅವನ ಕಡೆ ತಿರುಗಿದರು.ಡಾ. ಸ್ವಾಮಿ ತೆಳ್ಳಗೆ ಇದ್ದರು. ಈ ಕಾಲದಲ್ಲಿ ಇಷ್ಟು ಸಣ್ಣ ಇದ್ದಾರೆಂದರೆ ಅವರಿಗೂ ಡಯಾಬೀಟಿಸ್ ಇರಬೇಕಿನಿಸಿತು ಅವನಿಗೆ. ತನ್ನನ್ನೇ ನೋಡುತ್ತಿದ್ದ ಅವನನ್ನು ಗಮನಿಸಿದ ಡಾ.ಸ್ವಾಮಿಯವರು- `ಏನು ಕೆಲ್ಸ ಮಾಡ್ತೀರಿ~ ಅಂದರು.ಸ್ವಾಮಿಯವರ ಬಿಳಿಬಿಳಿಯಾದ ಏಪ್ರನ್ ಮತ್ತು ಅವರ ಕೊರಳ ಸುತ್ತಿಕೊಂಡಿದ್ದ ಸ್ಟೆತ್ ನೋಡುತ್ತಾ ಅವ `ಕಾರ್ಪೋರೇಷನ್ ದವಾಖಾನೆಯಾಗ ಹೆಲ್ತ್ ಎಜ್ಯುಕೇಟರ ಅಂತ ವರ್ಕ ಮಾಡ್ತೀನಿ~ ಅಂದ.`ಹೆಲ್ತ್ ಎಜ್ಯುಕೇಟರ್ ಅನ್ತೀರಾ... ನಿಮ್ಮ ಹೆಲ್ತನ್ನೇ ಸರಿಯಾಗಿ ನೋಡಿಕೊಳ್ಳಲ್ಲಾ ಅಂದ್ರಾ ಮಂದಿಗೇನು ಹೆಲ್ತ್ ಬಗ್ಗೆ ಹೇಳ್ತೀರಿ~ ಅಂದ ಸ್ವಾಮಿಯವರು- `ಎಲ್ಲಿ ನಿಮ್ಮ ನಾಲಗೆ ತೋರ‌್ಸಿ... ಕೈ ತೋರ‌್ಸಿ, ಕಾಲು ತೋರ‌್ಸಿ~ ಅನ್ನುತ್ತಾ ಅವನ ಅಂಗಾಂಗಳನ್ನೆಲ್ಲಾ ಮುಟ್ಟಿ ತಟ್ಟಿ ನೋಡಿದರು.ಎದುರಿಗಿದ್ದ ದಪ್ಪನೆಯ ಡಾಕ್ಟರ್ ಈಗ ನನ್ನ ಸರದಿ ಅನ್ನುವಂತೆ- ಸರಿಯಾಗಿ ಹಸಿವಾಗ್ತದ, ರಾತ್ರಿ ನಿದ್ದಿ ಬರ‌್ತಾದ, ಮೈ ಕಡಿತಾ ಐತಾ, ಮಲಮೂತ್ರ ಮಿಸರ್ಜನೆ ಬರೋಬರಿ ಆಗ್ತಾದ... ಅಂತ ಅವ ಮುಂಜಾನೆಯಿಂದ ಸಂಜಿತನಕ ತಿನ್ನುವ, ಕುಡಿಯುವ, ಬಯಲ ಕಡೆ ಹೋಗುವ ಸರ್ವ ಕ್ರಿಯೆಗಳ ಮಾಹಿತಿ ಸಂಗ್ರಹಿಸಿದ. ಆ ಇಬ್ಬರೂ ಹಿರಿಯ ವೈದ್ಯರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಪರಸ್ಪರ ಹೊಂದಿಸಿ... ಅವುಗಳನ್ನ ತರ್ಕದ ಗರಗಸಕ್ಕೆ ಉಜ್ಜಿ... ಏಕಾಭಿಪ್ರಾಯಕ್ಕೆ ಒದ್ದಾಡುತ್ತಿದ್ದಾಗ ಅವ ಇವರು ತನ್ನ ಮುಖ್ಯ ಸಮಸ್ಯೆಯನ್ನೇ ಗಮನಿಸಲಿಲ್ಲವಲ್ಲ ಎಂಬಂತೆ-`ಸರ, ನನ್ನ ಮೂಗ ಸ್ವಲ್ಪ ನೋಡ್ರಿ... ಮೂಗಿನ ಮ್ಯಾಲ ಎಂಥದ್ದೋ ಗುಳ್ಳೆಯಾಗಿ ಈಗ ಎರಡು ದಿನದಿಂದ ಒಂದೇ ಸಮ ಸೋರಕತ್ತದ...~ ಅಂದು ಡಾ.ಸ್ವಾಮಿಯವರ ಮುಖಕ್ಕೆ ತನ್ನ ಮೂಗ ಒಡ್ಡಿದ. ಸ್ವಾಮಿಯವರು ತಮ್ಮ ಚರ್ಚೆ ಬದಿಗಿರಿಸಿ `ಎಲ್ಲಿ ತೋರಿಸಿ~ ಅಂದು ಅವನ ಮೂಗ ನೋಡಿ- ಇದುತನಕ ಸರಿಯಾಗಿ ಅವನ ಮುಖ ನೋಡದೆ ಇದ್ದ ಅವರು ಈಗ ಅದನ್ನು ಕಂಡು ಗಾಬರಿ ಬಿದ್ದರು.`ಏನ್ರಿ ಇದು... ಆಗಲೆ ಗ್ಯಾಂಗ್ರಿನ್ ಆಗಿ ಕೊಳೆಯಕತ್ಯಾದ. ಇಷ್ಟು ದಿನ ಏನ್ ಮಾಡ್ತಾ ಇದ್ದಿರಿ. ನಿಮ್ಮ ಮೂಗು ನಿಮ್ಗೆ ಕಾಣಲಿಲ್ವೆ... ದಿನಾ ಕನ್ನಡಿ ನೋಡಿಕೊಳ್ತೀರೋ ಇಲ್ಲೋ~ ಅಂದು ತಮ್ಮ ಎದುರು ಕೂತ ಯುವ ವೈದ್ಯರಿಗೆಲ್ಲಾ- `ಲಿಸನ್ ಹಿಯರ್, ಒಂದು ಅನ್ಯೂಸಿಯಲ್ ಕೇಸ್ ಬಂದದ... ಇದನ್ನ ಕಂಪ್ಲೀಟ್ ಸ್ಟಡಿ ಮಾಡಿ... ಡಿಟೈಲ್ ಹಿಸ್ಟರಿ ತಗೊಂಡು ನಂಗೆ ಪ್ರಸೆಂಟ್ ಮಾಡಿ~ ಎಂದು ಆಜ್ಞಾಪಿಸಿ ಅವನನ್ನು ಆ ವೈದ್ಯರ ಸುಪರ್ದಿಗೆ ಕೊಟ್ಟರು.ಆ ವೈದ್ಯಗಣ ಅವನನ್ನು `ಈ ಕಡೆ ಬನ್ನಿ~ ಎಂದು ಪಕ್ಕದ ರೋಗ ಪರೀಕ್ಷಾ ಕೋಣೆಗೆ ಎಳೆದುಕೊಂಡು ಹೋಗಿ ಹಾಸಿಗೆಯ ಮೇಲೆ ಅಂಗಾತ ಮಲಗಿಸಿ ಪ್ರಶ್ನೆಗಳ ಕೂರಂಬುಗಳಿಂದ ದಾಳಿ ನಡೆಸತೊಡಗಿತು. ಅವನ ಜಾತಿ, ಧರ್ಮ, ವಯಸ್ಸು, ಅವನ ಕೆಲಸ, ಆದಾಯ, ಮದುವೆ ಮಕ್ಕಳು, ಹಿಂದೆ ಬಂದ ರೋಗಗಳು, ಅವುಗಳಿಗೆ ಪಡೆದ ಚಿಕಿತ್ಸೆ, ಅದರ ಇತಿಹಾಸ, ಈಗಿನ ರೋಗದ ಲಕ್ಷಣ, ಅವನ ಆಹಾರ ವಿಹಾರ, ವಿಚಾರ... ಹಿಂಗೆ ಬರ‌್ಕೋಳತಾ ಬರ‌್ಕೋಳತಾ ಯಾವುದೋ ಪರೀಕ್ಷೆಗೆ ಸಿದ್ಧವಾಗುವವರಂತೆ ಅವರೆಲ್ಲಾ ಕೇಸ್‌ಶೀಟ್‌ಗಳನ್ನು ತುಂಬಿಸಿ ಮಧ್ಯೆ ಮಧ್ಯೆ ಮತ್ತೇನನ್ನೋ ಮರೆತವರಂತೆ ಅವನಿಗ ಅದೇನು ಇದೇನು ಎಂದು ಮುಗಿಬೀಳುತ್ತಿದ್ದರು. ಅವ ಅವರ ಕಾಟ ತಾಳಲಾರದೆ ಆಗಾಗ ಮೌನವಾಗಿ ದವಾಖಾನೆಯ ಕಿಟಕಿಯಲ್ಲಿ ಕಣ್ಣಹಾಕಿ ಹೊರಗೆ ದಬ ದಬ ಸುರಿವ ಮಳೆ ನೋಡುವುದರಲ್ಲಿ ಗರ್ಕನಾಗುತಿದ್ದ.`ಬನ್ನಿ~ ಎಂದು ಎಷ್ಟೋ ಹೊತ್ತಾದ ಮೇಲೆ ಅವನನ್ನು ಅವರು ಡಾ. ಸ್ವಾಮಿಯ ಮುಂದೆ ಅಪರಾಧಿಯನ್ನು ತಂದು ನಿಲ್ಲಿಸುವಂತೆ ನಿಲ್ಲಿಸಿದರು. ಡಾ.ಸ್ವಾಮಿಯೋ ಈ ಅಪರಾಧಿಯ ತನಿಖೆಯನ್ನು ಇವರು ಸರಿಯಾಗಿ ಮಾಡಿದರೋ ಇಲ್ಲವೋ ಎಂಬುದನು ಪರೀಕ್ಷಿಸುವರಂತೆ `ಟೆಲ್ ಮಿ... ವಾಟ್ ಡಿಡ್ ಯು ಫೈಂಡ್? ಏನ್ ಪ್ರಾಬ್ಲಮ್ ಅಂತ ಗೊತ್ತಾಯ್ತೇನ್ರಿ?~ ಅಂದರು. ಈಗ ಅವರು ಮುಂದೆ ಆ ಠೊಣಪ ವೈದ್ಯ ಇರಲಿಲ್ಲ. ರೋಗಿಗಳು ಕಡಿಮೆಯಾಗಿದ್ದರು. ಆ ಯುವ ವೈದ್ಯರು ಸುಮ್ಮನೆ ನಿಂತವು. ಡಾ.ಸ್ವಾಮಿ ಮತ್ತೆ- `ವೈ ಯು ಆರ್ ಅಲ್ ಕೆಪ್ಟ್ ಸೈಲೆನ್ಸ್, ಟೆಲ್ ಸಂಥಿಂಗ್~ ಅಂದರು.ಅವರಲ್ಲೊಬ್ಬ ವೈದ್ಯ ಮುಂದೆ ಬಂದು `ಎಲ್ಲಾ ಹಿಸ್ಟರಿ ತಗೊಂಡ್ವಿ... ಬಟ್ ವಿ ಡಿಡಿಂಟ್ ಫೈಂಡ್ ನಂಥಿಂಗ್~ ಅಂದ. ಡಾ.ಸ್ವಾಮಿಯು ಅವನ ಮಾತು ಕೇಳಿ... ಆ ಮಾತಿನ ಮೇಲೆ ಬಹು ಹೊತ್ತು ಧ್ಯಾನ ಮಾಡುವವರಂತೆ ಸುಮ್ಮನಿದ್ದು,`ಇದಾ ನೋಡ್ರಿ ನೀವು ಕಲೀಬೇಕಾದ್ದು. ಈಗ ಕಾಯಿಲೆಗಳು ತಮ್ಮ ಟ್ರೆಂಡ್ ಬದ್ಲಾಯಿಸಿ ಬಿಟ್ಟಾವ. ವ್ಯಕ್ತಿಯನ್ನ ನೋಡಿದ್ರ ಅವನ ಮಾತ ಕೇಳಿದ್ರ ಎಲ್ಲಾ ನಾರ‌್ಮಲ್ ಅನಿಸ್ತದ. ಬಟ್ ಈ ನಾರ‌್ಮಲ್ ಒಳಗೆ ಅಬ್‌ನಾರ‌್ಮಲ್ ಅಡಗಿರ‌್ತದೆ. ಪರ್ಸನಾಲಿಟಿ ಅಂದ್ರ ಏನು ಗೊತ್ತಾ... `ಪರ್ಸೋನ~ ಎಂಬ ಶಬ್ದದಿಂದ ಪರ್ಸನಾಲಿಟಿ ಶಬ್ದ ಹುಟ್ಟಿಕೊಂಡಿದೆ. ಪರ್ಸೋನ ಅಂದ್ರೆ ಮುಖವಾಡ. ಇವೊತ್ತು ಮನುಷ್ಯ ಮುಖವಾಡ ಹಾಕ್ಕೊಂಡು ಓಡಾಡದರಲ್ಲಿ ಪಳಗಿಬಿಟ್ಟಾನ. ಆದ್ರೇ ಎಷ್ಟೇ ಮುಖವಾಡ ಹಾಕ್ಕೊಂಡರೂ ಮನಸ್ಸು ಅನ್ನೋದಿರುತ್ತಲ್ಲ, ಅದು ಮೊದ್ಲ ಕೊಳೆಯಾಕ ಶುರುವಾಗ್ತದ, ಅಮ್ಯಾಕ ಹಿಂಗ ಮುಖದ ಮ್ಯಾಗ ಮೈಮ್ಯಾಗ ಕಾಣಿಸ್ತದ. ಮಾಲ್ ಅಡ್ಜಸ್ಟಮೆಂಟ್ ಟೂ ದ ಗೀವನ ಸೊಶಿಯಲ್ ಆರ್ಡರ ಕಾಯಿಲೆ ಇದು~ ಅಂತ ದೀರ್ಘ ಉಪನ್ಯಾಸ ಶುರುಮಾಡಿ ಅದನ್ನು ಕುಟುಂಬಕ್ಕೂ, ಸಮಾಜಕ್ಕೂ ವಿಸ್ತರಿಸುತ್ತಾ... ತನ್ನ ಎದುರಿನ ಅವನನ್ನೇ ಡಾ.ಸ್ವಾಮಿಯವರು ಮರೆತುಬಿಟ್ಟರು.ಅವರ ಉಪನ್ಯಾಸದ ನಡುವೆಯೇ ಅವರ ಗಮನ ತಪ್ಪಿಸಿ- ಅವ ಹೊರ ಬಂದು  ನಿಂತ. ಮಳೆಯು ಇಳೆಯ ಮೇಲಿನ ಗ್ಯಾಂಗ್ರಿನ್ ತೊಳೆಯುವೋಪಾದಿಯಲ್ಲಿ ಅವಿರತ ಸುರಿಯುತಿತ್ತು. ಒ.ಪಿ.ಡಿ.ಯ ಕಟಾಂಜನದಲ್ಲಿ, ಬಸ್ ನಿಲ್ದಾಣದಲ್ಲಿ, ಕ್ಯಾಂಟಿನಿನಲ್ಲಿ ಎಲ್ಲೆಂದರಲ್ಲಿ ಜನವೋ ಜನ. ನೆರೆದ ಎಲ್ಲ ಜನರ ಮೂಗಿನ ತುದಿಯಲ್ಲೊಂದು ವ್ರಣ ಸಕಾಲದಲ್ಲಿ ಮೊಳಕೆಯೊಡೆದು ಹೊರ ಬರಲು ಅದೃಶ್ಯ ರೂಪದಲ್ಲಿ ಅವಿತು ಕೂತಿದೆಯೇನೋ ಎಂದು ಅವನಿಗೆ ಅನ್ನಿಸಿ, ಅವ ತನ್ನ ಮೂಗ ಮುಟ್ಟಿಕೊಂಡ.

 

Post Comments (+)