ಮಂಗಳವಾರ, ಜೂನ್ 15, 2021
24 °C

ಗ್ಯಾಸ್ ಟ್ರಬಲ್: ಗ್ರಾಹಕರ ಗಾಯದ ಮೇಲೆ ಬರೆ!

ಚಿದಂಬರಪ್ರಸಾದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ಯಾಸ್ ಟ್ರಬಲ್: ಗ್ರಾಹಕರ ಗಾಯದ ಮೇಲೆ ಬರೆ!

ಯಾದಗಿರಿ: ಅಡುಗೆ ಅನಿಲ ಸಿಲಿಂಡರ್ ಇಲ್ಲದೇ ಪರಿತಪಿಸುತ್ತಿರುವ ಜಿಲ್ಲೆಯ ಗ್ರಾಹಕರಿಗೆ ಅಡುಗೆ ಅನಿಲ ಟ್ಯಾಂಕರ್‌ಗಳ ಮುಷ್ಕರದಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯ ದಿನಗಳಲ್ಲಿಯೇ ಸಿಲಿಂಡರ್ ಪಡೆಯಲು ಹರಸಾಹಸ ಮಾಡುತ್ತಿರುವ ಗ್ರಾಹಕರು, ಇದೀಗ ಸಿಲಿಂಡರ್ ಸಿಗದೇ, ಸೌದೆ, ಸೀಮೆ ಎಣ್ಣೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುವ ತಲಾ ಒಂದು ಏಜೆನ್ಸಿಗಳಿವೆ. ಈಗಾಗಲೇ ಯಾದಗಿರಿ ಹಾಗೂ ಗುರುಮಠಕಲ್ ಹೊರತು ಪಡಿಸಿ, ಉಳಿದ ಬಹುತೇಕ ಭಾಗಗಳಲ್ಲಿ ಸಿಲಿಂಡರ್‌ಗಳಿಗಾಗಿ ನಿತ್ಯವೂ ಹೋರಾಟ ನಡೆಯುತ್ತಲೇ ಇದೆ. ಸುರಪುರದಲ್ಲಂತೂ ಪರಿಸ್ಥಿತಿ ಗಂಭೀರವಾಗಿದ್ದು, ಕಿಲೋಮೀಟರ್ ಗಟ್ಟಲೆ ಸಿಲಿಂಡರ್‌ಗಾಗಿ ಸರದಿ ನಿಲ್ಲುವ ಚಿತ್ರಣವಿದೆ.ಇದೀಗ ಅಡುಗೆ ಅನಿಲ ಸಿಲಿಂಡರ್ ಟ್ಯಾಂಕರ್‌ಗಳ ಮುಷ್ಕರದಿಂದಾಗಿ ಜಿಲ್ಲೆಯಾದ್ಯಂತ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಜಿಲ್ಲೆಯ ಜನರು ಅಡುಗೆ ಮಾಡುವುದಕ್ಕೆ ಪರ್ಯಾಯ ಸಾಧನಗಳತ್ತ ಮುಖ ಮಾಡುವಂತಾಗಿದೆ. ನೋಂದಣಿ ಮಾಡಿಸಿದ 22 ದಿನಗಳ ನಂತರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸಿದ ಏಜೆನ್ಸಿಯವರು ಹೇಳುತ್ತಾರೆ.ಸುರಪುರದಲ್ಲಿ ಸಿಲಿಂಡರ್‌ಗಳಿಗಾಗಿ ನಿತ್ಯವೂ ಪರದಾಟ ನಡೆಯುತ್ತಲೇ ಇದೆ. ಸುರಪುರದ ಒಂದೇ ಏಜೆನ್ಸಿಯಿಂದ ಹುಣಸಗಿ, ಕೊಡೆಕಲ್, ಕಕ್ಕೇರಾ, ಕೆಂಭಾವಿ ಹಾಗೂ ಸುರಪುರ ಪಟ್ಟಣಗಳಿಗೆ ಸಿಲಿಂಡರ್ ಸರಬರಾಜು ಮಾಡಬೇಕು. ಸುಮಾರು 10 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಯಿಂದ ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇವೆ.`ದೊಡ್ಡ ಚಿಂತಿ ಆಗೇದ್ರಿ~: “ಸಿಲಿಂಡರ್ ಬೇಕಂದ್ರ ಸುರಪುರಕ್ಕ ಹೋಗಿ ಪಾಳಿ ಹಚ್ಚಬೇಕು. ಎರಡ-ಮೂರ ದಿನಾ ಆದ ಮ್ಯಾಲ ಸಿಕ್ಕರೂ ನಮ್ಮ ಪುಣ್ಯಾ ಅನ್ನಕೋ ಬೇಕ ನೋಡ್ರಿ. ಈಗಂತೂ ಲಾರಿ ಸ್ಟ್ರೈಕ್ ನಡದದ. ಹಿಂಗಾಗಿ ಕೇಳಾವ್ರ ಇಲ್ಲದ್ಹಂಗ ಆಗೇದ ನೋಡ್ರಿ. ಮನ್ಯಾಗ ಅಡಗಿ ಹೆಂಗ ಮಾಡೋದು ಅನ್ನೂದ ಒಂದು ದೊಡ್ಡ ಚಿಂತಿ ಆಗೇದ್ರಿ” ಎನ್ನುತ್ತಾರೆ ಸುರಪುರ ತಾಲ್ಲೂಕಿನ ವಜ್ಜಲದ ಸುಧಾಬಾಯಿ ಕುಲಕರ್ಣಿ.“ಸುರಪುರ ಏಜೆನ್ಸಿಯಿಂದ ಸಿಲಿಂಡರ್ ತಗೊಂಡ ಬರಬೇಕ್ರಿ. ಸಿಲಿಂಡರ್ ಮುಗೀತು ಅಂದ್ರ, ದೇವರ ಭೆಟ್ಟಿ ಆಗ್ತಾನ ನೋಡ್ರಿ. ಮನ್ಯಾಗ ಅಡಗಿ ಮಾಡೋದ ಬಂದ್ ಆಗತೈತಿ. ಇಷ್ಟೆಲ್ಲ ಇದ್ರು ಸಿಲಿಂಡರ್ ಏಜೆನ್ಸಿ ಚಾಲೂ ಮಾಡ್ರಿ ಅಂದ್ರ ಕೇಳವಾಲ್ರು. 15 ದಿನದ ಹಿಂದ ಲಾರಿ ಸ್ಟ್ರೈಕ್ ಆಗಿತ್ತು. ಈಗ ಟ್ಯಾಂಕರ್ ಸ್ಟ್ರೈಕ್ ಚಾಲೂ ಆಗೇತಿ. ಈಗಂತೂ ಏಜೆನ್ಸಿಯವರಿಗೆ ಹೇಳಾಕ ನೆವಾನೂ ಸಿಕ್ಕಿತು. ನಂಬರ್ ಹಚ್ಚಿದ ತಿಂಗಳಿಗೆ ಸಿಲಿಂಡರ್ ಸಿಗೋ ಪರಿಸ್ಥಿತಿ ಐತಿ ನೋಡ್ರಿ” ಎನ್ನುವುದು ಕೆಂಭಾವಿಯ ಬಸಲಿಂಗಮ್ಮ ಗೌಡತಿ ಹೇಳುವ ಮಾತು.“ನಮ್ಮ ಊರಾಗ ಇದ್ದದ್ರಾಗ ಸರಿಯಾಗಿ ಸಿಲಿಂಡರ್ ಸಿಗ್ತಾವ್ರಿ. ಮೊದಲ ನಂಬರ್ ಹಚ್ಚಿದ 10 ದಿನಕ್ಕ ಕೊಡತಿದ್ರು. ಈಗ ಟ್ಯಾಂಕರ್ ಸ್ಟ್ರೈಕ್ ಆಗಿದ್ದಕ್ಕ 20 ದಿನದ ಮ್ಯಾಲ ಆಗತೈತಿ ಅಂತ ಹೇಳ್ತಾರ. ಒಂದೊಂದ ಸಿಲಿಂಡರ್ ಇರೋ ನಮ್ಮಂಥಾವ್ರಿಗೆ ಭಾಳ ತ್ರಾಸ ಐತ್ರಿ. ಯಾರಿಗಂತೂ ಹೇಳೋದು ತಿಳಿವಾಲ್ತ ಬಿಡ್ರಿ” ಎಂದು ಹೇಳುತ್ತಾರೆ ಯಾದಗಿರಿಯ ಶಿವಲಿಂಗಮ್ಮ.ಯಾವುದೇ ತೊಂದರೆ ಇಲ್ಲ: ಪರಿಸ್ಥಿತಿ ಇಷ್ಟೊಂದು ಭೀಕರವಾಗಿದ್ದರೂ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆ.ಏಜೆನ್ಸಿಗಳಿಂದ ಯಾವುದೇ ಕಂಪ್ಲೆಂಟ್‌ಗಳು ಬಂದಿಲ್ಲ. ಟ್ಯಾಂಕರ್‌ಗಳ ಮುಷ್ಕರ ನಡೆಯುತ್ತಿದೆ. ಆದರೆ ಒಂದೆರಡು ಲಾರಿಗಳ ಮೂಲಕ ಜಿಲ್ಲೆಯ ಆಯಾ ಏಜೆನ್ಸಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ.

 

ಜಿಲ್ಲೆಯಲ್ಲಿ ಇದುವರೆಗೂ ಗಂಭೀರ ಪರಿಸ್ಥಿತಿ ನಿರ್ಮಾಣ ಆಗಿರುವ ಮಾಹಿತಿ ಸಿಕ್ಕಿಲ್ಲ. ಅಭಾವ ಉಂಟಾಗಿರುವ ಬಗ್ಗೆ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಟಿ. ಮಹ್ಮದ್ ಹೇಳುತ್ತಾರೆ.ಟ್ಯಾಂಕರ್‌ಗಳ ಮುಷ್ಕರ ಈಗ ನೆಪವಾಗಿದೆ. ಆದರೆ ಸಾಮಾನ್ಯ ದಿನಗಳಲ್ಲಿಯೂ ಜಿಲ್ಲೆಯ ಬಹುತೇಕ ಗ್ರಾಹಕರು ಸಿಲಿಂಡರ್‌ನ ಅಭಾವ ಎದುರಿಸುತ್ತಲೇ ಇದ್ದಾರೆ. ಸುರಪುರ, ಶಹಾಪುರಗಳಲ್ಲಿ ಇನ್ನೊಂದು ಏಜೆನ್ಸಿ ಆರಂಭಿಸಬೇಕೆಂಬ ಒತ್ತಾಯಗಳಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎನ್ನುವ ಆರೋಪ ಜಿಲ್ಲೆಯ ಜನರಿಂದ ಕೇಳಿ ಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.