ಸೋಮವಾರ, ನವೆಂಬರ್ 18, 2019
27 °C

ಗ್ರಂಥಾಲಯ ಭವಿಷ್ಯದ ಸವಾಲು?

Published:
Updated:

ದೃಶ್ಯ ಮಾಧ್ಯಮ ಹಾಗೂ ಅಂತರ್ಜಾಲ ನಮ್ಮ ಸಾಂಪ್ರದಾಯಿಕ ಓದಿನ ದಿಕ್ಕು ತಪ್ಪಿಸುತ್ತಿವೆ ಎಂದು ಹಳೆಯ ಪೀಳಿಗೆಯ ವಿದ್ವಾಂಸರು, ಶಿಕ್ಷಣ ತಜ್ಞರು, ಹಾಗೂ ಪೋಷಕರು ಆತಂಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗಾದರೆ ಈಗಿನ ಪೀಳಿಗೆಯವರಿಗೆ, ಅದರಲ್ಲೂ ಯುವ ಜನಾಂಗದ ಆಯ್ಕೆಗಳಿಗೆ ನಮ್ಮ ಸಾಂಪ್ರದಾಯಿಕ ಓದು ಎಷ್ಟರಮಟ್ಟಿಗೆ ಪೂರಕವಾಗಿದೆ ಎಂಬ ಪ್ರಶ್ನೆ ಮೂಡುತ್ತದೆ.ಕಳೆದ ಎರಡು ಮೂರು ಶತಮಾನಗಳಲ್ಲಿ ವಿಶ್ವದಾದ್ಯಂತ ಸಾಂಪ್ರದಾಯಿಕ ಶೈಲಿಯ ಪುಸ್ತಕಗಳು, ನಿಯತಕಾಲಿಕಗಳು, ದಿನಪತ್ರಿಕೆಗಳು, ಚಿತ್ರಗಳು, ಪತ್ರಗಳಂತಹ ವಿಧವಿಧವಾದ ಕಲಿಕಾ ಸಾಮಗ್ರಿಗಳು ದಿನನಿತ್ಯ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಮುದ್ರಿತವಾಗಿವೆ.ಇವುಗಳನ್ನೆಲ್ಲ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳು, ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯಗಳು, ವಿಶೇಷ ಗ್ರಂಥಾಲಯಗಳು, ವೈಜ್ಞಾನಿಕ ಹಾಗೂ ಸಾಮಾಜಿಕ ಸಂಸ್ಥೆಗಳು ನಡೆಸುವ ಗ್ರಂಥಾಲಯಗಳಲ್ಲಿ ಸಾಂಪ್ರದಾಯಿಕವಾದ ಮಾದರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ.ಆದರೆ ಇವನ್ನೆಲ್ಲ ಹೀಗೆ ಎಷ್ಟು ವರ್ಷ ಸಂಗ್ರಹಿಸಿಡಲು ಸಾಧ್ಯ? ಓದುಗರು ಅವುಗಳನ್ನು ಎಷ್ಟರಮಟ್ಟಿಗೆ ಉಪಯೋಗಿಸುತ್ತಿದ್ದಾರೆ? ಈ ಅಮೂಲ್ಯ ಜ್ಞಾನ ಸಂಪತ್ತು ಈಗಿನಂತೆ ಮುದ್ರಿತ ಆಕಾರದಲ್ಲಿಯೇ ಅಡಗಿದ್ದರೆ, ಅವುಗಳನ್ನು ಸದಾ ಕಾಲ ಅಚ್ಚುಕಟ್ಟಾಗಿ ಸಂಗ್ರಹಿಸಿ ಹಾಳಾಗದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರವಾದ ಜವಾಬ್ದಾರಿಯನ್ನು ನಮ್ಮ ವ್ಯವಸ್ಥೆ ನಿರ್ವಹಿಸಬಲ್ಲದೇ ಎಂಬಂತಹ ಸಂದೇಹಗಳು ನಮಗೆ ಎದುರಾಗುತ್ತವೆ.ಅಭಿವೃದ್ಧಿಶೀಲ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಅಥವಾ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇಂತಹ ಮಾಹಿತಿಯನ್ನು ಜೋಪಾನವಾಗಿ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಒದಗಿಸಲು ಅವಶ್ಯವಾದ ಕ್ರಮ ಮತ್ತು ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ.ಆದರೆ ನಮ್ಮಲ್ಲೂ ಅಂತಹ ಪರಿಸ್ಥಿತಿ ಇದೆಯೇ? ಉದಾಹರಣೆಗೆ ಯಾವುದಾದರೂ ಸಾರ್ವಜನಿಕ ಗ್ರಂಥಾಲಯದಲ್ಲಿ `ಪ್ರಜಾವಾಣಿ'ಯಂತಹ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ದಿನನಿತ್ಯ ಅನೇಕ ಓದುಗರು ಕೇಳುತ್ತಾರೆ ಎಂದುಕೊಳ್ಳೋಣ. ಅಂತಹವರಿಗೆ `ಈ ಪತ್ರಿಕೆಗಳ ಪ್ರತಿಗಳು ನಮ್ಮಲ್ಲಿಲ್ಲ. ಪತ್ರಿಕಾ ಕಚೇರಿಯನ್ನೇ ಸಂಪರ್ಕಿಸಿ' ಎಂದು ಸಿಬ್ಬಂದಿ ಕೈ ತೋರುವ ಸಾಧ್ಯತೆಯೇ ಹೆಚ್ಚು.ಇದರಿಂದ ಒಬ್ಬ ಸಕ್ರಿಯ ಓದುಗ/ ಮಾಹಿತಿ ನಿರೀಕ್ಷಿಸಿದ ಗ್ರಾಹಕನನ್ನು ಗ್ರಂಥಾಲಯಗಳು ಕಳೆದುಕೊಳ್ಳುವುದು ಮಾತ್ರವಲ್ಲದೆ, ಅವನ ಹಕ್ಕನ್ನು ಪೂರೈಸುವುದರಲ್ಲೂ ವಿಫಲವಾಗುತ್ತವೆ.ಇಂತಹದ್ದೊಂದು ಪ್ರಜ್ಞೆಯ ಸವಾಲುಗಳು ನಮ್ಮನ್ನು ಇನ್ನೂ ಕಾಡತೊಡಗಿಲ್ಲ. ನಮ್ಮ ಜ್ಞಾನಭಂಡಾರದ ತಜ್ಞರು ಅಥವಾ ವ್ಯವಸ್ಥಾಪಕರು ಇನ್ನೂ ಕ್ರಮಬದ್ಧವಾದ ಯೋಜನೆಗಳನ್ನು ಹಾಕಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.ದೇಶದ ಅನೇಕ ಸಾರ್ವಜನಿಕ ಗ್ರಂಥಾಲಯಗಳು ಹಾಗೂ ಮಠ ಮಂದಿರಗಳು ಅಮೂಲ್ಯವಾದ ಗ್ರಂಥಗಳ ಸಂಗ್ರಹವನ್ನು ಹೊಂದಿವೆ. ಇವುಗಳಲ್ಲಿ ಬಹುತೇಕವು ನಗರಪಾಲಿಕೆಗಳಂತಹ ಸ್ಥಳೀಯ ಸಂಸ್ಥೆಗಳು ನಡೆಸುತ್ತಿದ್ದ ಹಳೆಯ ಗ್ರಂಥಾಲಯಗಳು. ಕೆಲವು ರಾಜ್ಯಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾಯ್ದೆಯ ಚೌಕಟ್ಟಿನಲ್ಲಿ ಅವುಗಳನ್ನು ಈ ಸಂಸ್ಥೆಗಳಿಗೆ ಹಸ್ತಾಂತರಿಸಿವೆ. ವಿಷಾದದ ಸಂಗತಿಯೆಂದರೆ, ಅನೇಕ ರಾಜ್ಯಗಳು ಇನ್ನೂ ಇಂತಹದ್ದೊಂದು ಕಾಯ್ದೆಯನ್ನು ಅಳವಡಿಸಿಕೊಂಡಿಲ್ಲ.ಆ ಮಟ್ಟಿಗೆ ಹೇಳುವುದಾದರೆ ದಕ್ಷಿಣದ ರಾಜ್ಯಗಳು ಮುಂಚೂಣಿಯಲ್ಲಿದ್ದು, ಪ್ರಗತಿಪರ ಕಾಯ್ದೆಗಳನ್ನು ಹೊಂದಿವೆ. ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು 1965ರಲ್ಲೇ ಜಾರಿಗೆ ತರಲಾಗಿದೆ. ಈ ಕಾಯ್ದೆಯ ಅನುಷ್ಠಾನದಿಂದ ಸಾರ್ವಜನಿಕ ಗ್ರಂಥಾಲಯಗಳು ಸ್ಥಾಪನೆಯಾಗಿದ್ದರ ಜೊತೆಗೆ, ಶಿಥಿಲಗೊಂಡ ಅನೇಕ ಐತಿಹಾಸಿಕ ಗ್ರಂಥಾಲಯಗಳು ಸರ್ಕಾರದ ತೆಕ್ಕೆಗೆ ಬಂದು ಅಭಿವೃದ್ಧಿ ಹೊಂದಿವೆ.ಇವುಗಳಲ್ಲಿ ಪ್ರಮುಖವಾಗಿ ಮಹಾರಾಜರ ಕಾಲದ ಜ್ಯುಬಿಲಿ ಗ್ರಂಥಾಲಯಗಳು ಇಂದು ಸಾರ್ವಜನಿಕ ಗ್ರಂಥಾಲಯಗಳಾಗಿ ಜಿಲ್ಲಾ ಕೇಂದ್ರಗಳಲ್ಲಿ ಉಳಿದುಕೊಂಡಿರುವುದನ್ನು ನಾವು ನೋಡಬಹುದು.ಇದರಲ್ಲಿ ಮುಖ್ಯವಾದದ್ದು ಬೆಂಗಳೂರಿನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯ. ಈ ವರ್ಷ (2013-14) ಈ ಗ್ರಂಥಾಲಯಕ್ಕೆ 100 ವರ್ಷದ ಸಂಭ್ರಮ. ಇಲ್ಲಿರುವ ಅಮೂಲ್ಯ ಗ್ರಂಥಗಳು ಸುಮಾರು 200 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿವೆ. ಇದೇ ರೀತಿ ತುಮಕೂರು, ಚಿತ್ರದುರ್ಗದಲ್ಲೂ ಇಂತಹ ಜ್ಯುಬಿಲಿ ಗ್ರಂಥಾಲಯಗಳ ಐತಿಹಾಸಿಕ ಕಟ್ಟಡಗಳು ನಮಗೆ ಸಿಗುತ್ತವೆ.ಇವು ಐತಿಹಾಸಿಕ ವಾಸ್ತುಶಿಲ್ಪವನ್ನು ಹೊಂದಿದ್ದರೂ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿವೆ. ಯಾವುದೇ ವಿಸ್ತರಣೆಗೂ ಅವಕಾಶ ಇಲ್ಲದಿರುವುದು ಪ್ರಮುಖ ಅಡಚಣೆಯಾಗಿದೆ. ಇದರಿಂದ ಅನೇಕ ಹೊಸ ಗ್ರಂಥಗಳ ಸೇರ್ಪಡೆಗೆ ಅವಕಾಶ ದೊರೆಯದಿರುವುದು ಒಂದು ಕಡೆಯಾದರೆ, ಈ ಹಳೆಯ ಕಟ್ಟಡಗಳಲ್ಲಿ ಪ್ರಾಚೀನ ಗ್ರಂಥಗಳ ಸಂರಕ್ಷಣೆ ಒಂದು ಸವಾಲೇ ಆಗಿದೆ. ಗೆದ್ದಲು, ಕ್ರಿಮಿಗಳು, ಮಳೆ- ಗಾಳಿ, ಸೋರುವಿಕೆ, ವಿದ್ಯುತ್ ಅಲಂಕಾರಕ್ಕೆ ಹಳೆಯ ವಿನ್ಯಾಸಗಳು ತೊಡಕಾಗಿವೆ.ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಆಧುನಿಕ ಗ್ರಂಥಾಲಯ ಕಟ್ಟಡದ ಅವಶ್ಯಕತೆ ಹೆಚ್ಚಾಗಿದೆ. ಏಕೆಂದರೆ ಈಗಿರುವ ಕಟ್ಟಡದ ಶತಮಾನದ ಇತಿಹಾಸದಲ್ಲಿ ಸುಮಾರು ಎರಡು ಲಕ್ಷ ಗ್ರಂಥಗಳು ಸಂಗ್ರಹವಾಗಿವೆ. ಕನ್ನಡ ಭಾಷೆಯಲ್ಲಿ ಪ್ರತಿ ವರ್ಷ ಸರಾಸರಿ 2000 ಶೀರ್ಷಿಕೆಗಳು ಪ್ರಕಟವಾಗುತ್ತಿವೆ. ಆಂಗ್ಲ ಮತ್ತು ಇತರ ಭಾಷೆಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಕನಿಷ್ಠ ತಲಾ ಒಂದು ಪ್ರತಿಯಂತೆ ಪ್ರತಿ ವರ್ಷ 10,000 ಪ್ರತಿಗಳ ಸಂಗ್ರಹ ಕಾರ್ಯ ಆಗಬೇಕು.ರಾಜ್ಯದ ಮಧ್ಯ ಭಾಗದ ಯಾವುದಾದರೂ ಸ್ಥಳದಲ್ಲಿ, ಕನ್ನಡದಲ್ಲಿ ಪ್ರಕಟವಾಗಿ ಅನೇಕ ಕಡೆಗಳಲ್ಲಿ ಸಂಗ್ರಹವಾಗಿರುವ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿಡುವ ಒಂದು ಅತ್ಯಾಧುನಿಕ ಕಟ್ಟಡ ನಿರ್ಮಾಣ ಆಗಬೇಕು. ಕನಿಷ್ಠ 50 ಲಕ್ಷದಿಂದ ಒಂದು ಕೋಟಿ ಗ್ರಂಥಗಳ ಸಂಗ್ರಹಕ್ಕೆ ಅವಕಾಶ ಇರುವ ಕಟ್ಟಡ ಇದಾಗಿರಬೇಕು.ಈ ಮೂಲಕ, ಸಾಂಪ್ರದಾಯಿಕವಾದ ರೀತಿಯಲ್ಲಿ ಮುದ್ರಣವಾಗುವ ಅನೇಕ ಗ್ರಂಥಗಳ ವಿವಿಧ ಪ್ರಕಾರಗಳನ್ನು ಸಂಗ್ರಹಿಸಿಡುವ ಸವಾಲನ್ನು ಎದುರಿಸಲು ಸಾಧ್ಯ.

 

ಪ್ರತಿಕ್ರಿಯಿಸಿ (+)