ಗ್ರಂಥಾಲಯ, ಮಾರಾಟ ಕೇಂದ್ರ ಆರಂಭ

7
ಓದುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಸಾಪ ದಿಟ್ಟ ಹೆಜ್ಜೆ

ಗ್ರಂಥಾಲಯ, ಮಾರಾಟ ಕೇಂದ್ರ ಆರಂಭ

Published:
Updated:
ಗ್ರಂಥಾಲಯ, ಮಾರಾಟ ಕೇಂದ್ರ ಆರಂಭ

ಮಂಡ್ಯ: ದೃಶ್ಯ ಮಾಧ್ಯಮದಿಂದಾಗಿ ಕಡಿಮೆಯಾಗುತ್ತಿರುವ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು, ನಗರದ ವಾರ್ತಾ ಇಲಾಖೆ ಕಚೇರಿ ಮುಂಭಾಗದಲ್ಲಿ `ಗ್ರಂಥಾಲಯ, ವಾಚನಾಲಯ ಹಾಗೂ ಪುಸ್ತಕ ಮಾರಾಟ ಕೇಂದ್ರ' ಆರಂಭಿಸಿದೆ.`ದೇಶ ಸುತ್ತಬೇಕು, ಇಲ್ಲವೇ ಕೋಶ ಓದಬೇಕು' ಎಂಬ ಮಾತಿದೆ. ಜ್ಞಾನದ ಅರಿವನ್ನು ಹೆಚ್ಚಿಸುವ ದಿಸೆಯಲ್ಲಿ ಕಸಾಪವು ಕೋಶ ಓದಿಸಲು ಮುಂದಾಗಿದೆ. ಆ ಮೂಲಕ ಜನರಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಸಂಕಲ್ಪ ಮಾಡಿದೆ.ಕಸಪಾ ಜಿಲ್ಲಾ ಘಟಕದ ಕಟ್ಟಡವು ಬಂದೀಗೌಡ ಬಡಾವಣೆಯಲ್ಲಿದೆ. ಅಲ್ಲಿ, 16 ಸಾವಿರದಷ್ಟು ಪುಸ್ತಕಗಳಿದ್ದವು. ಆದರೆ, ಅವುಗಳ ಅಧ್ಯಯನಕ್ಕೆ ಅಲ್ಲಿಗೆ ಹೆಚ್ಚಿನ ಜನರು ಹೋಗುವುದಿಲ್ಲ. ಇದನ್ನು ಗಮನಿಸಿದ ಕಸಾಪದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು, ನಾವೇ ಜನರ ಮಧ್ಯಕ್ಕೆ ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದ ಪರಿಣಾಮವೇ ನೂತನ ಗ್ರಂಥಾಲಯ ಹಾಗೂ ಮಾರಾಟ ಮಳಿಗೆ ಆರಂಭವಾಗಿದೆ.ಈ ಕಟ್ಟಡವು ಈ ಹಿಂದೆ ಪೊಲೀಸ್ ಇಲಾಖೆಯ ಮಹಿಳಾ ಕುಂದುಕೊರತೆ ಆಲಿಕೆ ವಿಭಾಗದ ಕಚೇರಿಯಲ್ಲಿತ್ತು. ಅದು ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗೆ ಸ್ಥಳಾಂತರವಾದ ನಂತರ ಹಾಗೆಯ ಇತ್ತು. ಅದನ್ನು ತೆಗೆದುಕೊಂಡಿರುವ ಕಸಾಪವು, 2 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿ ಕಟ್ಟಡವನ್ನು ಸುಸಜ್ಜಿತಗೊಳಿಸಿದೆ.ದಿನ ಹಾಗೂ ವಾರ ಪತ್ರಿಕೆಗಳನ್ನು ಗ್ರಂಥಾಲಯದ ವತಿಯಿಂದ ಪಡೆಯುವ ಮೂಲಕ ಓದುಗರಿಗೆ ವಾಚನಾಲಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಕಸಾಪ ವತಿಯಿಂದ ಇನ್ನಷ್ಟು ಪತ್ರಿಕೆಗಳನ್ನು ತರಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.ಹಲವು ವರ್ಷಗಳಿಂದ ಕಸಾಪವು ಲೇಖಕರು, ಪ್ರಕಾಶಕರು ಹಾಗೂ ದಾನಿಗಳಿಂದ ಪುಸ್ತಕಗಳನ್ನು ಸಂಗ್ರಹಿಸುತ್ತಿದೆ. ಹಿಂದಿನ ಅವಧಿಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎಸ್. ಮುದ್ದೇಗೌಡ ಅವರು, 10 ಸಾವಿರದಷ್ಟು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆ ಸಂಗ್ರಹ ಕಾರ್ಯ ಮುಂದುವರಿಯಲಿದೆ ಎನ್ನುತ್ತಾರೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ.ಕಾವ್ಯ, ಕಥಾ ಸಂಕಲನ, ಇತಿಹಾಸ ಸೇರಿದಂತೆ ಹಲವು ಬಗೆಯ ಪುಸ್ತಕಗಳಿವೆ. ಮಕ್ಕಳ ಪುಸ್ತಕಗಳ ಸಂಖ್ಯೆ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಅವುಗಳ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಜತೆಗೆ ಸಂಶೋಧನೆಗೆ ನೆರವಾಗುವಂತಹ ಪುಸ್ತಕಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಗ್ರಂಥಾಲಯವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯಕ್ಕಾಗಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು. ಡಿ.25 ರಿಂದ ಈ ಅಭಿಯಾನ ಆರಂಭವಾಗಲಿದೆ. ಸದಸ್ಯತ್ವ ಪಡೆದವರಿಗೆ ಮನೆಗಳಿಗೆ ಪುಸ್ತಕ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು ಮೀರಾ ಶಿವಲಿಂಗಯ್ಯ.ಗ್ರಂಥಾಲಯವು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಹಣದ ಕೊರತೆ ಇದೆ. ಶಾಸಕರು, ಸಂಸದರ ಅನುದಾನದಲ್ಲಿ ನೆರವು ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ಅವರು.ಮುಂದಿನ ದಿನಗಳಲ್ಲಿ ಭಾನುವಾರವೂ ಗ್ರಂಥಾಲಯ ಕಾರ್ಯ ನಿರ್ವಹಿಸಲಿದೆ. ಜತೆಗೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪುಸ್ತಕ ಪ್ರಾಧಿಕಾರ, ವಿವಿಧ ವಿಶ್ವವಿದ್ಯಾಲಯದ ಪ್ರಸಾರಂಗಗಳು ಪ್ರಕಟಿಸುವ ಪುಸ್ತಕಗಳನ್ನು ತರಿಸಿಕೊಂಡು, ಮಾರಾಟ ಮಾಡಲಾಗುವುದು.ಮೊಬೈಲ್ ಗ್ರಂಥಾಲಯ ಆರಂಭಿಸುವ ಮೂಲಕ ಪ್ರತಿ ಬಡಾವಣೆಗೂ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೀರಾ ಶಿವಲಿಂಗಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry