ಗ್ರಾಪಂಗೆ ಮತ್ತೆ ಬಂದ ಕಾರ್ಯದರ್ಶಿ

7
2 ಬಾರಿ ಸಸ್ಪೆಂಡ್,4 ಕ್ರಿಮಿನಲ್ ಕೇಸ್

ಗ್ರಾಪಂಗೆ ಮತ್ತೆ ಬಂದ ಕಾರ್ಯದರ್ಶಿ

Published:
Updated:

ಶಹಾಪುರ: ತಾಲ್ಲೂಕಿನ ಗೋಗಿ(ಪಿ) ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹಣ ದುರ್ಬಳಕೆ ಆರೋಪದ ಮೇಲೆ ಎರಡು ಬಾರಿ ಅಮಾನತು ಶಿಕ್ಷೆ. ನಾಲ್ಕು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಕಾರ್ಯದರ್ಶಿ ಹೊನ್ನಪ್ಪಗೌಡ ಮತ್ತೆ ಅದೇ ಗ್ರಾಮ ಪಂಚಾಯಿತಿಗೆ ಪ್ರಭಾರಿ ಕಾರ್ಯದರ್ಶಿಯಾಗಿ ಒಕ್ಕರಿಸಿದ್ದು ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮದ  ಸಾಹೇಬಗೌಡ ಬಿಳ್ವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೆ  ಗೋಗಿ(ಪಿ) ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ  ಮಳಿಗೆಯ ಹಣವನ್ನು ಪಂಚಾಯಿತಿ ಖಾತೆಗೆ ಜಮಾ ಮಾಡದೆ ಹಣ ದುರ್ಬಳಕೆ ಮಾಡಿಕೊಂಡ ಕಾರ್ಯದರ್ಶಿ ಹೊನ್ನಪ್ಪಗೌಡ ಅವರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೋಕಾಸು ನೋಟಿಸು ನೀಡಿದ್ದಾರೆ.ಗ್ರಾಮ ಪಂಚಾಯಿತಿ ಅಧೀನದ ಮಳಿಗೆ ಹಣ 1,26,000 ರೂಪಾಯಿ ಗುಳುಂ ಮಾಡಿದ್ದಾರೆ ಎಂಬ ಆರೋಪ ಕಾರ್ಯದರ್ಶಿ ಎದುರಿಸುತ್ತಿದ್ದಾರೆ.ಮಳಿಗೆ ನಂಬರ 1-41 ಎರಡು ಅಂಗಡಿಗಳನ್ನು ಮಲ್ಲಯ್ಯ ಧೋತ್ರೆ ಎನ್ನುವರಿಗೆ ಐದು ವರ್ಷದ ಬಾಡಿಗೆ ಮೊತ್ತ 1.26ಲಕ್ಷ ರೂಪಾಯಿ. ಯಾವುದೇ ರಸೀದಿ ನೀಡಿರುವುದಿಲ್ಲ. ಖಾತೆ ಜಮಾವಣೆಯಲ್ಲಿ ನಮೂದಿಸಿಲ್ಲ. ವಿಚಿತ್ರವೆಂದರೆ ಕಾರ್ಯದರ್ಶಿ ಹಾಗೂ ಅಧ್ಯಕ್ಷ ಸೇರಿಕೊಂಡು ಹಣ ಪಡೆದಿರುವ ಬಗ್ಗೆ ಛಾಪಾ ಕಾಗದಲ್ಲಿ ಬಾಡಿಗೆ ಕರಾರು ಪತ್ರ ನೀಡಿರುವ ಬಗ್ಗೆ ಪಿಡಿಓ ಬಹಿರಂಗಪಡಿಸಿದ್ದಾರೆ.ಅಲ್ಲದೆ ಮೂರು ಮಳಿಗೆಯನ್ನು 10 ವರ್ಷಗಳ ಹಿಂದೆ ಅನಧಿಕೃತವಾಗಿ ಆನಂದ ಎನ್ನುವರು ಪಡೆದುಕೊಂಡಿದ್ದು ಇಂದಿಗೂ ನಯಾ ಪೈಸೆ ಹಣ ಬಾಡಿಗೆ ನೀಡಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೋಟಿಸು ನೀಡಿದರು ಕ್ಯಾರೇ ಅನ್ನುತ್ತಿಲ್ಲ. ಅನಧಿಕೃತವಾಗಿ ವಾಸವಾಗಿರುವ ವ್ಯಕ್ತಿಯನ್ನು ಹೊರ ಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿಯ ರೈತಮೋರ್ಚಾದ ತಾಲ್ಲೂಕು ಉಪಾಧ್ಯಕ್ಷ ಮಹ್ಮದ ಇಸ್ಮಾಯಿಲ್ ಚೌದ್ರಿ ಆಗ್ರಹಿಸಿದ್ದಾರೆ.ಎರಡು ಬಾರಿ ಅಮಾನತು:  ಗೋಗಿ(ಪಿ) ಗ್ರಾಮ ಪಂಚಾಯಿತಿ ಪ್ರಭಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನಪ್ಪಗೌಡರನ್ನು ಜಿಲ್ಲಾಧಿಕಾರಿ 2009 ಜನವರಿ 21ರಂದು ಅಮಾನತುಗೊಳಿಸಿದ್ದರು.ಅಲ್ಲದೆ 2009-10ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಗೋಗಿ(ಕೆ) ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಹಾಗೂ ಹಣ ದುರ್ಬಳಕೆ ಆರೋಪದ ಮೇಲೆ ಜಲಾನಯನ ಇಬ್ಬರು ಅಧಿಕಾರಿ ಸೇರಿ ಹೊನ್ನಪ್ಪಗೌಡರನ್ನು ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಫ್.ಪಾಟೀಲ್ 2010 ಮೇ 15ರಂದು ಅಮಾನತುಗೊಳಿಸಿದ್ದರು.ನಾಲ್ಕು ಕ್ರಿಮಿನಲ್: ತಾಲ್ಲೂಕಿನ ಗೋಗಿ(ಪಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜೀವಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ  ಮನೆ ನಿರ್ಮಿಸದೆ ಇರುವ ಫಲಾನುಭವಿಗಳಿಗೆ ಹಣ ಪಾವತಿಸಿದ ಆರೋಪ. ಅಲ್ಲದೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರಿಗೆ ದೂರು. ವಸತಿ ಅಕ್ರಮದ ಬಗ್ಗೆ ಜಿಲ್ಲಾ ಸೇಷನ್ಸ್ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ಫಿರ್ಯಾದಿ ಸಲ್ಲಿಸಿದ್ದು ಲೋಕಾಯುಕ್ತರು ತನಿಖೆ ನಡೆಸಿದ್ದಾರೆ.. ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಕೆ ಆರೋಪದ ಮೇಲೆ ಶಹಾಪುರ ಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಗ್ರಾಮದ ಸಾಹೇಬಗೌಡ ವಿವರಿಸಿದ್ದಾರೆ.ಒಕ್ಕರಿಸು: ಎರಡು ಬಾರಿ ಅಮಾನತು ಹಾಗೂ ನಾಲ್ಕು ಕ್ರಿಮಿನಲ್ ಮೊಕದ್ದಮೆ ಆರೋಪ ಎದುರಿಸುತ್ತಿರುವ ಕಾರ್ಯದರ್ಶಿ ಹೊನ್ನಪ್ಪಗೌಡ ಮತ್ತೆ ಗೋಗಿ ಗ್ರಾಮ ಪಂಚಾಯಿತಿ ಪ್ರಭಾರಿ ಕಾರ್ಯದರ್ಶಿಯಾಗಿ ಒಕ್ಕರಿಸಿದ್ದಾರೆ. ಈಗಾಗಲೇ ತಾಲ್ಲೂಕಿನ ಹೊಸಕೇರಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಹೆಚ್ಚುವರಿಯಾಗಿ ಎರಡು ಗ್ರಾಮ ಪಂಚಾಯಿತಿ ಹುದ್ದೆ ನೀಡಿದ್ದು ಲಜ್ಜೆಗೆಟ್ಟ ಆಡಳಿತದ ಪರಮಾವಧಿ ಎಂದು ಸಾಹೇಬಗೌಡ ಬಿಳ್ವಾರ ಆಕ್ರೋಶ ವ್ಯಪ್ತಡಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿಯವರು ಭ್ರಷ್ಟ ಅಧಿಕಾರಿಯಾಗಿದ್ದು  ಹಲವಾರು ಅಕ್ರಮಗಳನ್ನು ಎದುರಿಸುತ್ತಿರುವ ಕಾರ್ಯದರ್ಶಿಯನ್ನು ಅದೇ ಸ್ಥಳದಲ್ಲಿ ನಿಯೋಜನೆಗೊಳಿಸಿದ್ದು ಅಧಿಕಾರಿ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಾಗಿದೆ ಎಂಬುವುದು ಜನರ ಅನಿಸಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry