ಗ್ರಾ.ಪಂನಲ್ಲಿ ಹಣ ದುರ್ಬಳಕೆ: ಲೋಕಾಯುಕ್ತ ಕ್ರಮ

7

ಗ್ರಾ.ಪಂನಲ್ಲಿ ಹಣ ದುರ್ಬಳಕೆ: ಲೋಕಾಯುಕ್ತ ಕ್ರಮ

Published:
Updated:

ರೋಣ: ತಾಲ್ಲೂಕಿನ ಮಲ್ಲಾಪೂರ ಗ್ರಾ.ಪಂ. ವ್ಯಾಪ್ತಿಯ ಮಲ್ಲಾಪೂರದಲ್ಲಿ ಬಡ ಜನತೆಗೆ ವಿತರಿಸಬೇಕಾದ ಇಂದಿರಾ ಅವಾಸ್ ವಾಂಬೆ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣವಾಗಬೇಕಾದ ಮನೆಗಳಿಗೆ ನಿಗದಿಯಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ಆ ಅವಧಿಯಲ್ಲಿದ್ದ ಗ್ರಾ.ಪಂ. ಅಧ್ಯಕ್ಷ ಮತ್ತು  ಕಾರ್ಯದರ್ಶಿ ಮೇಲೆ ಅಪರಾಧ ಪ್ರಕರಣವನ್ನು ಶೀಘ್ರದಲ್ಲಿ ದಾಖಲಿಸಿ ಕ್ರಮ ಕೈಕೊಳ್ಳುವುದಾಗಿ ಲೋಕಾಯುಕ್ತ ಡಿ.ವಾಯ್.ಎಸ್.ಪಿ. ಜಿ.ಆರ್.ಪಾಟೀಲ ಹೇಳಿದರು.ಬುಧವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಸಾರ್ವಜನಿಕರಿಂದ ಅರ್ಜಿ ಅಹವಾಲುಗಳನ್ನು ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಲ್ಲಾಪೂರ ಗ್ರಾಮದಲ್ಲಿ 2007-08ನೇ ಸಾಲಿನಲ್ಲಿ ವಿವಿಧ ಯೋಜನೆ ಅಡಿಯಲ್ಲಿ 129 ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿ ಹಣವನ್ನು ನಿಗದಿಪಡಿಸಲಾಗಿತ್ತು. ಅದರಲ್ಲಿ 56 ಮನೆಗಳನ್ನು ನಿರ್ಮಿಸದೆ ಇದಕ್ಕೆ ಸಂಬಂಧಿಸಿದ ಅನುದಾನ ಮೊತ್ತವನ್ನು ಗ್ರಾ.ಪಂ. ಅಂಧಿನ ಅಧ್ಯಕ್ಷ-ಕಾರ್ಯದರ್ಶಿ ಶಾಮೀಲಾಗಿ ದುರ್ಬಳಕೆ ಮಾಡಿಕೊಂಡಿರುವ ಕುರಿತು ಗ್ರಾಮದ ಮಲ್ಲಪ್ಪ ಅರಳಿ  ಸಲ್ಲಿಸಿರುವ ದೂರನ್ನು ಪರಿಶೀಲಿಸಿ ತನಿಖೆ ಕೈಕೊಂಡಾಗ ಹಣ ದುರ್ಬಳಕೆ ಮಾಡಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ರೋಣ ತಾಪಂ. ಕಾರ್ಯನಿರ್ವಾಹಕಾಧಿಕಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.ಪಟ್ಟಣದ ಡಾ. ಗಿರೀಶ ಕೊಳ್ಳಿಯವರ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಅಧಿಕಾರಿಗಳು, ದೂರಿನ ಕುರಿತು ಪುರಸಭೆ ಮುಖ್ಯಾಧಿಕಾರಿ ವಿವರಣೆ ನೀಡಲು ಹಾಜರಾಗುವಂತೆ ಹೇಳಿದರು. ಮುಖ್ಯಾಧಿಕಾರಿ ಪರವಾಗಿ ಆಗಮಿಸಿದ ಅಧಿಕಾರಿ ಹೊಸಮನಿ, ಪುರಸಭೆಯ ಮುಂದಿನ ಸಭೆಯಲ್ಲಿ ಈ ಕುರಿತು ಮುಖ್ಯಾಧಿಕಾರಿಯವರ ಗಮನಕ್ಕೆ ತಂದು ಕ್ರಮ ಕೈಕೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ನಂತರ ಲೋಕಾಯುಕ್ತ ಡಿವಾಯ್‌ಎಸ್‌ಪಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿದರು. ಅವರಿಗೆ ನೀಡಲಾಗುವ ಸೌಕರ್ಯಗಳ ಕುರಿತು ವಿವರಣೆ ಪಡೆದುಕೊಂಡರು ಹಾಗೂ ಆಸ್ಪತ್ರೆ ಶೌಚಾಲಯ ಅವ್ಯವಸ್ಥೆ ನೋಡಿ ಶೌಚಾಲಯವನ್ನು ಸ್ವಚ್ಛವಾಗಿ ಇಡುವಂತೆ ಅಧಿಕಾರಿಗೆ ಸೂಚಿಸಿದರು.ಆಸ್ಪತ್ರೆಗೆ ಮಂಜೂರಾದ ಅನುದಾನ ಮೊತ್ತದಲ್ಲಿ ರೂ. 7ಲಕ್ಷ  ಅನುದಾನ ಬಳಕೆಯಾಗದೆ ಉಳದಿರುವುದು ಬೆಳಕಿಗೆ ಬಂದಿತು. ಆಸ್ಪತ್ರೆಗೆ ಪ್ರತಿನಿತ್ಯ 400 ರೋಗಿಗಳು ಭೇಟಿ ನೀಡಬೇಕಾಗಿದ್ದು, ಇದರ ಬದಲಾಗಿ ಕೇವಲ 250 ರೋಗಿಗಳು ಮಾತ್ರ ಭೇಟಿ ನೀಡುತ್ತಿದ್ದಾರೆ. ಅದರಿಂದ ಔಷಧಿ ಹಾಗೂ ಮಾತ್ರೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಉಳಿದಿರುವ ಮಾತ್ರೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಿ ವಿತರಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ಆಸ್ಪತ್ರೆ ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry