ಶುಕ್ರವಾರ, ಮೇ 20, 2022
26 °C

ಗ್ರಾ.ಪಂ. ಅಧ್ಯಕ್ಷೆ ಸೇರಿ 8 ಮಂದಿ ವಿರುದ್ಧ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಉದ್ಯೋಗಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ವಂಚನೆ ಮಾಡಿರುವ ದೂರಿನ ಮೇರೆಗೆ ತಾಲ್ಲೂಕಿನ ಐತರಾಸನಹಳ್ಳಿ ಗ್ರಾಮ ಪಂಚಾಯಿತಿ  ಅಧ್ಯಕ್ಷೆ ವನಿತಾ, ಕಾರ್ಯದರ್ಶಿ ನಂಜುಂಡಪ್ಪ ಮತ್ತು ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಕಾಮತ್ ಸೇರಿದಂತೆ 8 ಮಂದಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಫೆ.27ರಂದು ಮೊಕದ್ದಮೆ ದಾಖಲಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡಾಲದಲ್ಲಿ ಖಾತ್ರಿ ಯೋಜನೆಯಡಿ ನಡೆಸಲಾಗಿರುವ ಕಾಮಗಾರಿಯ ಹಣ ದುರ್ಬಳಕೆ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಆರಂಭಿಸಿದ್ದಾರೆ. ಬಾಲಕೃಷ್ಣಪ್ಪ, ಖಾತ್ರಿ ಯೋಜನೆ ಸಮಿತಿ ಸದಸ್ಯರಾದ ಆಂಜಿನಪ್ಪ, ಸರೋಜಮ್ಮ, ಮುನಿನಾರಾಯಣ ಮತ್ತು ವೆಂಕಟರಾಮಪ್ಪ ಎಂಬುವವರ ಮೇಲೂ ಪ್ರಕರಣ ದಾಖಲಾಗಿದೆ.ವಿವರ:
ಗ್ರಾಮದ ವಿ.ನಾರಾಯಣಪ್ಪ ಎಂಬುವವರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನ ವಿವರ ಹೀಗಿದೆ. ತೊಂಡಾಲ ಗ್ರಾಮದ ನಾರಾಯಣಪ್ಪ ಜಾಬ್ ಕಾರ್ಡ್ ಸಂಖ್ಯೆ: ಕೆಎನ್ 19-007=041-010/481. ಅದಮ್ಮು ಮಾಸ್ಟರ್ ರೋಲ್‌ನಲ್ಲಿ ಸೇರಿಸಿಕೊಂಡು, ಅವರು ಯೋಜನೆ ಅಡಿ ಕೆಲಸ ಮಾಡದಿದ್ದರೂ, ಕೆಲಸ ಮಾಡಿದಂತೆ ಹಾಜರಾತಿ ದಾಖಲೆ ಸೃಷ್ಟಿಸಿ, ಅವರಿಗೆ 1875 ರೂಪಾಯಿ ಪಾವತಿಯಾದಂತೆ ಅವರ ಸಹಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಅದಕ್ಕೆ ಗ್ರಾಪಂ ಅಧ್ಯಕ್ಷೆ ವನಿತಾ ಅವರ ಪತಿ ವಿ.ವೆಂಕಟರಾಮಪ್ಪ, ಕಾರ್ಯದರ್ಶಿ ನಂಜುಂಡಪ್ಪ ಮತ್ತು ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಕಾಮತ್ ಕಾರಣ ಎಂದು ದೂರಲಾಗಿದೆ.ತಮ್ಮದೂ ಸೇರಿದಂತೆ ಎಲ್ಲ ಕೂಲಿಗಾರರ ಸಹಿಗಳನ್ನು ಸೃಷ್ಟಿಸಲಾಗಿದೆ. ಮಾಸ್ಟರ್ ರೂಲ್‌ಪ್ರಕಾರ ಯಾವುದೇ ಕಾಮಗಾರಿ ನಡೆದಿಲ್ಲ. ಪಟ್ಟಿಯಲ್ಲಿರುವ ಯಾರೂ ಕಾಮಗಾರಿಯಲ್ಲಿ ಕೆಲಸವನ್ನೂ ಮಾಡಿಲ್ಲ. ಖಾತ್ರಿ ಯೋಜನೆ ಸಮಿತಿ ಸದಸ್ಯರಾದ ಬಾಲಕೃಷ್ಣಪ್ಪ, ಆಂಜನಪ್ಪ, ಸರೋಜಮ್ಮ, ಮುನಿನಾರಾಯಣ, ವಿ.ವೆಂಕಟರಾಮಪ್ಪ ಅವ್ಯವಹಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಕಾಮಗಾರಿ ಹೆಸರು:
ತೊಂಡಾಲ ಗ್ರಾಮದಲ್ಲಿ ಕಳೆದ ಜ.13ರಿಂದ 27ರವರೆಗೆ ಎರಡು ಕಡೆ ಕಾಲುವೆ ನಿರ್ಮಾಣ ನಡೆದಂತೆ ನಕಲಿ ಹಾಜರಾತಿ ಮತ್ತು ಪಟ್ಟ ಸೃಷ್ಟಿಸಲಾಗಿದೆ. ಅಲ್ಲಿ ನಡೆದ ಹಳೇಕಾಮಗಾರಿಯನ್ನೆ ಹೊಸದು ಎಂದು ತಪ್ಪು ಮಾಹಿತಿ ನೀಡಲಾಗಿದೆ. ಅದಕ್ಕೆ ಕಾರಣರಾದ ಎಂಟು ಮಂದಿ ವಿರುದ್ಧ  ಕಾನೂನು ಕ್ರಮಕೈಗೊಳ್ಳಬೇಕು ಎಂದು ನಾರಾಯಣಪ್ಪ ಕೋರಿದ್ದಾರೆ.ತಾ.ಪಂ.ಗೂ ದೂರು: ಹಳೇ ಕಾಮಗಾರಿಗಳನ್ನೆ ಹೊಸ ಕಾಮಗಾರಿಗಳೆಂದು ಮಾಹಿತಿ ನೀಡಿ ಉದ್ಯೋಗಖಾತ್ರಿ ಹಣವನ್ನು ಪಡೆಯಲಾಗುತ್ತಿದೆ ಎಂದು ಆರೋಪಿಸಿ ಐತರಾಸನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ನಾರಾಯಣಸ್ವಾಮಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಫೆ.23ರಂದು ದೂರು ನೀಡಿದ್ದಾರೆ.ನಾಯಕರಹಳ್ಳಿ, ಗಂಗರಸನಹಳ್ಳಿ, ಕೃಷ್ಣರಾಜಪುರ ಮತ್ತು ಚಿಲ್ಲಪ್ಪನಹಳ್ಳಿಯಲ್ಲಿ ಕಳೆದ ವರ್ಷ ಯೋಜನೆ ಅಡಿ ನಡೆದ ಕಾಮಗಾರಿಗಳನ್ನೆ ಈ ವರ್ಷ ಹೊಸ ದಾಖಲೆಗಳಲ್ಲಿ ನಮೂದಿಸಿ ಗ್ರಾಪಂ ಅಧ್ಯಕ್ಷೆಯ ಪತಿ, ಗುತ್ತಿಗೆದಾರ ವೆಂಕಟರಾಮ್ ಹಣ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಒತ್ತಡ ಹೇರಿ ಚೆಕ್‌ಗಳಿಗೆ ಸಹಿ ಮಾಡಿಸಲಾಗುತ್ತಿದೆ ಎಂದೂ ದೂರಲಾಗಿದೆ.ನಾಯಕರಹಳ್ಳಿಯ ಹೊನ್ನಮ್ಮನ ಕೆರೆಯ ಕೆಂಪಯ್ಯ ಹಳ್ಳದಿಂದ ಫೀಡರ್ ಚಾನಲ್ ಅಭಿವೃದ್ಧಿ (ಅಂದಾಜು ಮೊತ್ತ 3 ಲಕ್ಷ), ಗಂಗರಸನಹಳ್ಳಿಯ ಮಣಿಘಟ್ಟ ಕಡೆಯಿಂದ ಗಂಗರಸನಹಳ್ಳಿ ಕಡೆಗೆ ಫೀಡರ್ ಚಾನೆಲ್ ಅಭಿವೃದ್ಧಿ -ರೂ 4 ಲಕ್ಷ, ಕೃಷ್ಣರಾಜಪುರದ ವಿಟ್ಟಪ್ಪನಹಳ್ಳಿ ರಸ್ತೆ ಕಾಮಗಾರಿ ರೂ 1.44 ಲಕ್ಷ ಮತ್ತು ತೊಂಡಾಲದ ದನಮಂದೆ ರಸ್ತೆ ಎರಡೂ ಕಡೆ ಕಾಲುವೆ ನಿರ್ಮಾಣ ರೂ 1.67 ಲಕ್ಷ- ಇವು 2009-10ನೇ ಸಾಲಿನಲ್ಲಿ ನಡೆದ ಕಾಮಗಾರಿಗಳು. ಇವುಗಳನ್ನೆ 2010-11ನೇ ಸಾಲಿನಲ್ಲಿ ನಡೆದಂತೆ ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ದೂರಿನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.