ಗ್ರಾ.ಪಂ: ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ದಿನಾಂಕ ವಿಸ್ತರಣೆ

7

ಗ್ರಾ.ಪಂ: ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ದಿನಾಂಕ ವಿಸ್ತರಣೆ

Published:
Updated:

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು  ಜೂನ್‌ 15ರ ಒಳಗೆ ನಿಗದಿಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು. ಆದರೆ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಗಳು ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ  ಮೀಸಲಾತಿ ನಿಗದಿ ದಿನವನ್ನು ಜೂನ್‌ 18ರವರೆಗೆ ವಿಸ್ತರಿಸಲಾಗಿದೆ.ಆರು   ಅಥವಾ ಅದಕ್ಕಿಂತ ಕಡಿಮೆ ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಗಳು ಜೂನ್‌ 15ರ ಒಳಗೆ, ಏಳು ಅಥವಾ ಎಂಟು ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಗಳು ಜೂನ್‌ 17ರ ಒಳಗೆ ಹಾಗೂ ಎಂಟಕ್ಕಿಂತ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆಗಳು ಜೂನ್‌ 18ರ ಒಳಗೆ ಮೀಸಲಾತಿ ನಿಗದಿಪಡಿಸಬೇಕಿದೆ.‘ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲಿ  ಚುನಾಯಿತ ಸದಸ್ಯರ ಸಭೆ ಕರೆದು ಅವರ ಸಮ್ಮುಖದಲ್ಲೇ ಸರದಿ (ರೋಸ್ಟರ್‌) ಪ್ರಕಾರ ಮೀಸಲಾತಿಯನ್ನು ನಿಗದಿಗೊಳಿಸಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ–ಎ, ಹಿಂದುಳಿದ ವರ್ಗ–ಬಿ ಹಾಗೂ ಸಾಮಾನ್ಯ ವರ್ಗಕ್ಕೆ ಎಷ್ಟು ಸ್ಥಾನಗಳನ್ನು ಮೀಸಲು ಇಡ ಬೇಕೆಂಬ ಕುರಿತು ತಾಲ್ಲೂಕುವಾರು ಮಾಹಿತಿಯನ್ನು  ಆಯೋಗದ ವೆಬ್‌ ಸೈಟ್‌ನಲ್ಲಿ (http:// karsec. gov.inn) ಪ್ರಕಟಿಸಿದ್ದೇವೆ. ನಿರ್ದಿಷ್ಟ ಮಾನದಂಡ ಗಳ  ಆಧಾರದಲ್ಲೇ ಜಿಲ್ಲಾಧಿಕಾರಿಗಳು  ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ.  ಇಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ  ಅವಕಾಶ ಇಲ್ಲ’ ಎಂದು ರಾಜ್ಯ ಚುನಾವಣಾ ಆಯೋಗದ  ಕಾರ್ಯದರ್ಶಿ ಎಸ್‌. ಹೊನ್ನಾಂಬ  ‘ಪ್ರಜಾವಾಣಿ’ಗೆ ತಿಳಿಸಿದರು.ಮೀಸಲಾತಿ ನಿಗದಿ ಹೇಗೆ?: 1993,  2000, 2005 ಹಾಗೂ 2010ನೇ ಸಾಲಿನ   ಗ್ರಾಮ ಪಂಚಾಯಿತಿ ಚುನಾವಣೆಗಳ ನಂತರ ನಿಗದಿಪಡಿಸಲಾದ ಮೀಸಲಾತಿಗಳನ್ನು ಪರಿಗಣಿಸಿ 5 ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಹುದ್ದೆಗಳ ಮೀಸಲಾತಿ ನಿಗದಿಪಡಿಸಬೇಕು.*ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರ ಅನುಪಾತದಷ್ಟೇ ಪ್ರಮಾಣದಲ್ಲಿ ಅವರಿಗೆ ಮೀಸಲಾತಿ ನಿಗದಿಪಡಿಸಬೇಕು.*ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯ ಮೂರನೇ ಒಂದರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗಕ್ಕೆ ಮೀಸಲಿಡಬೇಕು.* ಪರಿಶಿಷ್ಟರಿಗೆ  ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಿಡಬೇಕಾದ ಹುದ್ದೆಗಳ  ಒಟ್ಟು ಸಂಖ್ಯೆ  ಗ್ರಾಮ ಪಂಚಾಯಿತಿಗಳ ಒಟ್ಟು ಸಂಖ್ಯೆಯ ಶೇಕಡ 50 ಅನ್ನು ಮೀರುವಂತಿಲ್ಲ.  ಅನಿವಾರ್ಯ ಸಂದರ್ಭಗಳಲ್ಲಿ ಮೀಸಲಾತಿ ಪ್ರಮಾಣ ಶೇ 50 ಅನ್ನು  ಮೀರಿದರೆ  ಪರಿಶಿಷ್ಟರಿಗೆ ನಿಗದಿಪಡಿಸಿದ ಹುದ್ದೆಗಳನ್ನು ಕಡಿತಗೊಳಿಸದೆ, ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ ಹುದ್ದೆಗಳನ್ನು ಕಡಿತಗೊಳಿಸಿ, ಮೀಸಲಾತಿಯನ್ನು ಶೇ 50 ಮೀರದಂತೆ ನಿಗದಿಗೊಳಿಸಬೇಕು.*ಹಿಂದುಳಿದ ವರ್ಗಗಳ ಮೀಸಲಾತಿ ಯಲ್ಲಿ ಪ್ರವರ್ಗ–ಎಗೆ ಶೇಕಡ 80 ಹಾಗೂ ಪ್ರವರ್ಗ–ಬಿಗೆ ಶೇಕಡಾ 20 ಹುದ್ದೆಗಳನ್ನು ನಿಗದಿಪಡಿಸಬೇಕು.*ಪ್ರತಿಯೊಂದು ಪ್ರವರ್ಗ ದಲ್ಲೂ ಶೇಕಡಾ 50ಕ್ಕಿಂತ ಕಡಿಮೆ ಇಲ್ಲದಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿ ಡಬೇಕು.*ಮಹಿಳೆಯರಿಗೆ ಮೀಸಲಿಟ್ಟ ಹುದ್ದೆಗಳ ಸಂಖ್ಯೆ ಒಟ್ಟು ಹುದ್ದೆಗಳ ಸಂಖ್ಯೆಯ ಶೇ 50ಕ್ಕಿಂತ ಹೆಚ್ಚು ಇದ್ದಲ್ಲಿ, ಹೆಚ್ಚುವರಿ ಹುದ್ದೆಯನ್ನು ಸಾಮಾನ್ಯ ವರ್ಗದ ಮಹಿಳೆ ನಿಗದಿಪಡಿಸಿದ ಸಂಖ್ಯೆಯಲ್ಲಿ ಕಡಿತಗೊಳಿ ಸುವ ಮೂಲಕ ಮೀಸಲಾತಿ ಪ್ರಮಾಣ ಶೇ 50 ಮೀರದಂತೆ ನೋಡಿ ಕೊಳ್ಳಬೇಕು.*ಪರಿಶಿಷ್ಟ ಜಾತಿಗೆ ಅಧ್ಯಕ್ಷ ಹುದ್ದೆ ಸಿಗಬೇಕಾದ ಪಂಚಾಯಿತಿಗಳನ್ನು ಮೊದಲು  ನಿಗದಿಪಡಿಸಬೇಕು. ನಂತರ ಅನುಕ್ರಮವಾಗಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ–ಎ, ಹಿಂದುಳಿದ ವರ್ಗ –ಬಿ, ಸಾಮಾನ್ಯ ಮಹಿಳೆಗೆ ಮೀಸ ಲಾತಿ ನಿಗದಿಪಡಿಸಬೇಕು. ಉಪಾಧ್ಯಕ್ಷ ಹುದ್ದೆ ನಿಗದಿಗೂ ಇದೇ ಕ್ರಮ ಅನುಸರಿಸಬೇಕು.*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಉಳಿದ ವರ್ಗಗಳ ಜನ ಸಂಖ್ಯೆಯ ಆಧಾರದಲ್ಲಿ  ಅವರೋಹಣ ಕ್ರಮದಲ್ಲಿ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಮೀಸಲಾತಿಯನ್ನು ನಿಗದಿಪಡಿಸಬೇಕು.*ಪರಿಶಿಷ್ಟರಿಗೆ ಹಾಗೂ ಇತರ ವರ್ಗಕ್ಕೆ ಸೇರಿದ ಮಹಿಳೆಯರ ಸಂಖ್ಯೆ ಹೆಚ್ಚು ಇರುವ ಗ್ರಾಮಗಳಲ್ಲೇ ಆಯಾ  ವರ್ಗದ ಮಹಿಳೆಯರ ಮೀಸಲಾತಿ ನಿಗದಿ ಪಡಿಸಬೇಕು.*ಪರಿಶಿಷ್ಟರಿಗೆ ಅಥವಾ ಇತರ ವರ್ಗಕ್ಕೆ ಸೇರಿದ ಅಧ್ಯಕ್ಷ ಸ್ಥಾನವನ್ನು ನಿಗದಿಪಡಿಸಿದರೆ, ಅದೇ  ವರ್ಗದವರಿಗೆ ಉಪಾಧ್ಯಕ್ಷ ಹುದ್ದೆ ನಿಗದಿಪಡಿಸಬಾರದು.*ಅಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಿದ ಬಳಿಕವಷ್ಟೇ ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಬೇಕು.ಗ್ರಾಮ ಪಂಚಾಯಿತಿ ಚುನಾವಣೆ­ಯಲ್ಲಿ 38,742 ಕಾಂಗ್ರೆಸ್‌ ಬೆಂಬಲಿತ, 27 ಸಾವಿರ  ಬಿಜೆಪಿ ಬೆಂಬಲಿತ ಹಾಗೂ       12 ಸಾವಿರ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ

ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry