ಗ್ರಾಪಂ ಅನುದಾನ ಹೆಚ್ಚಳಕ್ಕೆ ಯತ್ನ

7

ಗ್ರಾಪಂ ಅನುದಾನ ಹೆಚ್ಚಳಕ್ಕೆ ಯತ್ನ

Published:
Updated:
ಗ್ರಾಪಂ ಅನುದಾನ ಹೆಚ್ಚಳಕ್ಕೆ ಯತ್ನ

ಬೆಳಗಾವಿ: `ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಒಂದೇ ಪ್ರಮಾಣದ ಅನುದಾನ ನೀಡುವ ಬದಲು ಅದರ ಜನಸಂಖ್ಯೆ ಆಧಾರದ ಮೇಲೆ ಅನುದಾನ ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ ತಿಳಿಸಿದರು.ಬೆಳಗಾವಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಒಕ್ಕೂಟದ ಪ್ರಥಮ ಸಭೆಯ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಸದ್ಯ ಮೂರು ಸಾವಿರ ಜನಸಂಖ್ಯೆಯಿಂದ 16 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗೂ ಒಂದೇ ಪ್ರಮಾಣದಲ್ಲಿ ಅನುದಾನ ನೀಡಲಾಗುತ್ತಿದೆ. ಹೀಗಾಗಿ ಅಲ್ಪ ಜನಸಂಖ್ಯೆ ಇರುವ ಗ್ರಾ.ಪಂ.ಗೆ 8 ಲಕ್ಷ, ಹೆಚ್ಚು ಜನಸಂಖ್ಯೆ ಗ್ರಾ.ಪಂ.ಗೆ 12 ಲಕ್ಷ ಹಾಗೂ ಅತಿ ಹೆಚ್ಚು ಜನಸಂಖ್ಯೆ ಗ್ರಾ.ಪಂ.ಗೆ 15 ಲಕ್ಷ ರೂಪಾಯಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಈ ಮೊದಲು ಇದ್ದ ಆರು ಲಕ್ಷ ರೂಪಾಯಿ ಅನುದಾನದ ಬದಲು ಎಲ್ಲ ಗ್ರಾಮ ಪಂಚಾಯಿತಿಗೆ 8 ಲಕ್ಷ ರೂಪಾಯಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ~ ಎಂದು ಹೇಳಿದರು.`3ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ. ಕೋಡ್ಗಿ ನೇತೃತ್ವದ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೆ ತರುತ್ತಿವೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಗೆ ರೂ. 1 ಕೋಟಿ ಅನುದಾನವನ್ನು ಈ ವರ್ಷದಿಂದ ನೀಡಲಾಗುತ್ತಿದೆ~ ಎಂದರು.`ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಟಾಸ್ಕ್‌ಫೋರ್ಸ್ ಸಮಿತಿಗಳಿಗೆ ಜಿ.ಪಂ. ಸದಸ್ಯರನ್ನು ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಇಲಾಖೆಯಿಂದಲೇ ನೇರವಾಗಿ 176 ತಾಲ್ಲೂಕು ಪಂಚಾಯಿತಿಗಳಿಗೆ ಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿಗೆ ಮಂಜೂರಾತಿ ಪಡೆಯಲಾಗಿದೆ. ಜಿಲ್ಲಾ ಯೋಜನಾ ಸಮಿತಿಗೆ ಕೆಲವು ಅಧಿಕಾರ ನೀಡಿ ಇನ್ನಷ್ಟು ಸಬಲಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಈರಣ್ಣ ಕಡಾಡಿ, 24 ಬೇಡಿಕೆಗಳಿರುವ ಮನವಿಪತ್ರವನ್ನು ಸಚಿವರಿಗೆ ಸಲ್ಲಿಸಿದರು. 3ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸು ಜಾರಿಗೆ ತಂದು ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಬಲಪಡಿಸಬೇಕು. ಜಿಲ್ಲಾ ಪಂಚಾಯಿತಿ ರಸ್ತೆಗಳ ನಿರ್ವಹಣೆಗಾಗಿ ಅನುದಾನ ನಿಗದಿಪಡಿಸಬೇಕು. ಪ್ರಕೃತಿ ವಿಕೋಪ ನಿಧಿ 1 ಲಕ್ಷದ ಬದಲು 50 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು. ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಸಂಪೂರ್ಣವಾಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ವಹಿಸಬೇಕು ಮತ್ತು ನಿರ್ವಹಣೆಯನ್ನು ಗ್ರಾ.ಪಂ.ಗೆ ನೀಡಬೇಕು. ಸಂಸತ್ ಸದಸ್ಯರಿಗೆ ಮತ್ತು ಶಾಸಕರಿಗೆ ಅನುದಾನ ನೀಡುವ ರೀತಿಯಲ್ಲಿ ಜಿ.ಪಂ. ಸದಸ್ಯರಿಗೂ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸಬೇಕು ಎಂದು ಈರಣ್ಣ ಕಡಾಡಿ ಸಚಿವರನ್ನು ಒತ್ತಾಯಿಸಿದರು.ಸಭೆಯಲ್ಲಿ 22 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಲ್ಗೊಂಡಿದ್ದರು. ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದರಾಜು, ಮಂಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಹಾಜರಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ ವಂದಿಸಿದರು.`ಗ್ರಾಮಸಭೆ ಸಬಲಗೊಳಿಸಿ~


`ಗ್ರಾಮ ಸಭೆಯು ಕಾಲ ಕಾಲಕ್ಕೆ ಪರಿಣಾಮಕಾರಿಯಾಗಿ ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ರಾಮ ಸಭೆಯಲ್ಲೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು~ ಎಂದು ಸಚಿವ ಜಗದೀಶ ಶೆಟ್ಟರ ಸೂಚಿಸಿದರು.`ಗ್ರಾಮ ಸಭೆಗಳಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ನಡೆದರೆ, ಬಹುತೇಕ ಸಮಸ್ಯೆ ಬಗೆಹರಿದಂತೆ. ಹೀಗಾಗಿ ಜಿ.ಪಂ. ಹಾಗೂ ತಾ.ಪಂ. ಅಧ್ಯಕ್ಷರು, ಅಧಿಕಾರಿಗಳು ತಪ್ಪದೇ ಸಭೆಯಲ್ಲಿ ಪಾಲ್ಗೊಳ್ಳಬೇಕು~ ಎಂದು ಸಲಹೆ ನೀಡಿದರು.`ಗ್ರಾಮ ಸಭೆಯಲ್ಲಿ ತಪ್ಪದೇ ವಿಡಿಯೋ ಚಿತ್ರೀಕರಣ ನಡೆಸಬೇಕು. ಸಭೆಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry