ಸೋಮವಾರ, ಜೂನ್ 21, 2021
30 °C

ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ­ಯಲ್ಲಿ ಅಸ್ವಾಭಾವಿಕ ರೀತಿ­ಯಲ್ಲಿ ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ಮೇಲಧಿಕಾರಿಗಳ ಸೂಚನೆ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರು­ವುದಕ್ಕೆ ತಾಲ್ಲೂಕಿನ ಮುದೇನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಕೃಷ್ಣ ಉದಪುಡಿ, ಯೋಜನೆ ಅನುಷ್ಠಾನದಲ್ಲಿ ಬೇಜವಾ­ಬ್ದಾರಿ ಮತ್ತು ಅಸಹಕಾರ ಮನೋ­ಭಾವ  ತೋರಿಸುತ್ತಿರುವುದು ಕಂಡು­ಬಂದಿ­ರುವ ಹಿನ್ನೆಲೆಯಲ್ಲಿ ಅಮಾನತು­ಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಪ್ರಸಕ್ತ ವರ್ಷದಲ್ಲಿ 11 ತಿಂಗಳಲ್ಲಿ 36,611ಮಾನವ ದಿನಗಳನ್ನು ಸೃಷ್ಟಿ­ಸಿರುವ ಅಭಿವೃದ್ಧಿ ಅಧಿಕಾರಿ ಚಂದ್ರ­ಶೇಖರ ಕಂದಕೂರು, ಇದೇ ಮಾರ್ಚ್‌ನ 12 ದಿನಗಳಲ್ಲಿ 17,333 ಮಾನವ ದಿನಗಳನ್ನು ಸೃಷ್ಟಿಸಿದ್ದಾರೆ. ಈ ಕುರಿತು ಮೇಲಧಿಕಾರಿಗಳು ನೀಡಿದ ಸೂಚನೆ­ಯನ್ನು ಕಡೆಗಣಿಸಿದ್ದಾರೆ ಎಂದು ತಿಳಿಸಲಾಗಿದೆ.ಇ.ಒ ಹೇಳಿಕೆ: ಮುದೇನೂರು ಗ್ರಾ.ಪಂ ಪಿಡಿಒ ಮಾ.12ರಂದು ಒಂದೇ ದಿನ 4,700 ಮಾನವ ದಿನಗಳನ್ನು ಸೃಷ್ಟಿಸಿ­ದ್ದಾರೆ. ಅದೇ ದಿನ  ತಾಲ್ಲೂಕಿ­­ನಲ್ಲಿ ಸೃಷ್ಟಿ­ಯಾಗಿರುವ ಮಾನವ ದಿನಗಳ ಸಂಖ್ಯೆ ಹತ್ತು ಸಾವಿರ. ಅಸ್ವಾಭಾವಿಕ­ವಾಗಿ ಮಾನವ ದಿನಗಳ ಸೃಷ್ಟಿಯಾಗ­ದಂತೆ ಎಚ್ಚರಿಕೆ ವಹಿಸಲು ಪದೇ ಪದೇ ಹೇಳುತ್ತ ಬರಲಾಗಿದೆ. ಅನೇಕ ಬಾರಿ ನೋಟಿಸ್‌ ನೀಡಲಾಗಿದೆ. ಆದರೂ ಕೆಲವರು ಸೂಚನೆ ನಿರ್ಲಕ್ಷಿಸಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾ ಪಂಚಾ­ಯಿತಿಗೆ ನೀಡುತ್ತೇವೆ ಎಂದು  ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ವಿ.­ಬದಿ ತಿಳಿಸಿದರು.ಖಾತರಿ ಯೋಜನೆ ಅನುಷ್ಠಾನದಲ್ಲಿ ವ್ಯತ್ಯಾಸ ಕಂಡು­ಬಂದಿದೆ ಅಲ್ಲದೇ ಕೆಲಸ ಕಾಮಗಾರಿಗಳು ಬೋಗಸ್‌ ಆಗುವು­ದನ್ನು ತಪ್ಪಿಸಲು ಕೂಲಿಕಾರರ ಪಟ್ಟಿ (ಎನ್‌ಎಂ­ಆರ್‌)­ಗಳನ್ನು ತೆಗೆಯುವು­ದನ್ನು ತಾತ್ಕಾಲಿಕ­ವಾಗಿ ಸ್ಥಗಿತಗೊಳಿ­ಸುವಂತೆ ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿರುವುದಾ­ಗಿಯೂ ಅವರು ಹೇಳಿದರು.ಆತಂಕ: ಈ ಮಧ್ಯೆ ಮಾ.12ರಂದು ದಾಖಲಾಗಿರುವ ಕೆಲಸ ಕಾಮಗಾರಿ­ಗಳನ್ನು ತಕ್ಷಣ ರದ್ದುಪಡಿಸುವಂತೆ ಆದೇಶಿಸಿರುವ ಜಿ.ಪಂ ಕ್ರಮಕ್ಕೆ ತಾಲ್ಲೂಕಿನಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಕೆಲ ಗುತ್ತಿಗೆದಾರರು ನರೇಗಾ ಯೋಜನೆಯ ಕೆಲಸ ಕಾಮಗಾರಿ ನಿರ್ವಹಿಸಿದ್ದು ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ. ಈಗ ಏಕಾಏಕಿ ಅವು ರದ್ದಾದರೆ ಗತಿ ಏನು ಎಂಬ ಚಿಂತೆ ವ್ಯಕ್ತವಾಗಿದೆ. ನಿಯಮಗಳ ಪ್ರಕಾರ ಕೆಲಸಗಳನ್ನು ಸ್ವತಃ ಗ್ರಾ.ಪಂ ನವರೇ ನಿರ್ವಹಿಸಬೇಕಿದ್ದರೂ ವಾಸ್ತವದಲ್ಲಿ ಎಲ್ಲ ಕೆಲಸ ಕಾಮಗಾರಿ­ಗಳನ್ನು ಗ್ರಾಮಾಂತರ ಪ್ರದೇಶಗಳ ಗುತ್ತಿಗೆದಾರರು, ರಾಜಕೀಯ ಹಿನ್ನೆಲೆ ಇರುವವರು, ಕೆಲ ಸಂಘಟನೆಗಳ ಹೆಸರಿನಲ್ಲಿ ಕೆಲವರು, ಸ್ವತಃ ಗ್ರಾ.ಪಂ ಸದಸ್ಯರೇ ಕೆಲಸಗಳನ್ನು ನಿರ್ವಹಿಸು ತ್ತಾ ರೆ ಎಂದು ಮೂಲಗಳು ತಿಳಿಸಿವೆ.ಒತ್ತಾಯ: ಜಿ.ಪಂ ಆದೇಶಕ್ಕೆ ಪ್ರತಿಕ್ರಿಯಿಸಿರುವ ತಾವರಗೇರಾ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ನಾಲತ್ವಾಡ, ಒಂದೇ ತಿಂಗಳಲ್ಲಿ ಕೋಟಿಗಟ್ಟಲೇ ಹಣದ ಕೆಲಸಗಳನ್ನು ನಿರ್ವಹಿಸಲು ಜಿ.ಪಂ ಮಂಜೂರಾತಿ ನೀಡಿರುವುದರಲ್ಲೇ ಲೋಪವಾಗಿದೆ. ಕಳಪೆ ಕೆಲಸ ಅಥವಾ ಬೋಗಸ್‌ ಬಿಲ್‌ಗಳನ್ನು ಸೃಷ್ಟಿಸಿದ ಪ್ರಕರಣ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಆಗಿರುವ ಕೆಲಸಗಳನ್ನೂ ರದ್ದುಪಡಿಸುವಂತೆ ಆದೇಶಿರುವುದು ಸರಿಯಲ್ಲ ಎಂದಿದ್ದಾರೆ.ತನಿಖೆಗೆ ಅಧಿಕಾರಿಗಳ ತಂಡ: ಸಿಇಒ

ಕುಷ್ಟಗಿ:
ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾ. 12ರಂದು ಎಂಐಎಸ್‌ನಲ್ಲಿ ಅಸ್ವಾಭಾವಿಕ ರೀತಿಯಲ್ಲಿ ದಾಖಲಾಗಿರುವ ಕೆಲಸ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿ ವರದಿ ಸಲ್ಲಿಸುವುದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದ್ದು ವರದಿ ಬಂದ ನಂತರ ಕಠಿಣ ಕ್ರಮ ಜರುಗಿಸು­ವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಕೃಷ್ಣ ಉದಪುಡಿ ತಿಳಿಸಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಶಂಕೆಗೆ ಕಾರಣವಾಗುವ ಅಂಶಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಸ್ವತಃ ಪರಿಶೀಲಿಸಿ ಪ್ರಾಥಮಿಕ ಮಾಹಿತಿ ನೀಡುವಂತೆ ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.