ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

7

ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Published:
Updated:

    

ಹಾವೇರಿ: ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿರುವ ಗ್ರಾಮ ಪಂಚಾಯಿತಿ ಕಾರ್ಯವೈಖರಿಗೆ ಬೇಸತ್ತು ತಾಲ್ಲೂಕಿನ ಆಲದಕಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯ ಸರಿಯಾಗಿಲ್ಲ. ನೀರು ಪೂರೈಕೆ ಮಾಡುವ ವಾಟರ್‌ಟ್ಯಾಂಕ್ ಸಹ ಗಲೀಜಾಗಿದ್ದು, ಅದನ್ನು ಸ್ವಚ್ಛಗೊಳಿಸಿಲ್ಲ. ಅದೇ ಟ್ಯಾಂಕಿನಿಂದ ಪೂರೈಕೆಯಾದ ನೀರನ್ನು ಗ್ರಾಮದಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಗ್ರಾಮದ ಜನರು ಅನಿವಾರ್ಯವಾಗಿ ಅದೇ ಗಲೀಜು ನೀರು ಕುಡಿದು ಡೆಂಗೆ, ಕಾಲರಾ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೂ ಕೂಡಾ ಗ್ರಾಮ ಪಂಚಾಯಿತಿಯವರು ಸ್ವಚ್ಛ ಹಾಗೂ ಶುದ್ಧ ನೀರನ್ನು ಪೂರೈಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.ಅದೇ ರೀತಿ ಗ್ರಾಮದಲ್ಲಿ ನೈರ್ಮಲೀಕರಣ ಇಲ್ಲದಾಗಿದೆ. ಗ್ರಾಮದಲ್ಲಿ ಚರಂಡಿ, ರಸ್ತೆ ಸರಿಯಾಗಿಲ್ಲ. ಎರಡು ತಿಂಗಳ ಹಿಂದೆ ಮಾಡಲಾದ ಡಾಂಬರ್ ರಸ್ತೆಗಳು ಆಗಲೇ ಕಿತ್ತುಹೋಗಿವೆ. ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಾ ದುರ್ವಾಸನೆ ಬೀರುತ್ತಿವೆ.

ಅವುಗಳನ್ನು ಸ್ವಚ್ಛಗೊಳಿಸಲು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಹೇಳುವ ಪ್ರತಿಭಟನಾಕಾರರು, ಗ್ರಾ.ಪಂ. ಸದಸ್ಯರು ಗ್ರಾಮದ ಅಭಿವೃದ್ಧಿಗಿಂತ ವೈಯಕ್ತಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಅದೇ ಕಾರಣಕ್ಕೆ ಗ್ರಾಮದ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂದು ಆಪಾದಿಸಿದರು.ಕೂಡಲೇ ತಾ.ಪಂ. ಹಾಗೂ ಜಿ.ಪಂ. ಮೇಲಧಿಕಾರಿಗಳು ಗ್ರಾಮಕ್ಕೆ ಹಾಗೂ ಗ್ರಾ.ಪಂ.ಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry