`ಗ್ರಾ.ಪಂ. ನೌಕರರಿಂದ `ಬೆಂಗಳೂರು ಚಲೋ'

7

`ಗ್ರಾ.ಪಂ. ನೌಕರರಿಂದ `ಬೆಂಗಳೂರು ಚಲೋ'

Published:
Updated:

ಧಾರವಾಡ: `ಜ 17 ರಂದು ಬೆಂಗಳೂರು ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ರಾಜ್ಯದ 50 ಸಾವಿರ ಜನ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ' ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಸಂಘದ ಜಿಲ್ಲಾ ಸಮಿತಿಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, `ವಿವಿಧ ರಾಜಕೀಯ ಪಕ್ಷಗಳ ಕಿತ್ತಾಟದಿಂದ ಪಂಚಾಯಿತಿ ನೌಕರರ ಪರಿಸ್ಥಿತಿ ಅತಂತ್ರವಾಗಿದೆ. ಈ ನೌಕರರ ಮರಣಾನಂತರ ಹಾಗೂ ನಿವೃತ್ತಿಯ ನಂತರ ಪಿಂಚಣಿ ದೊರೆಯುತ್ತಿಲ್ಲ. ಅಲ್ಲದೇ ಇತರ ಸರ್ಕಾರಿ ನೌಕರರಿಗೆ ದೊರೆಯುವ ಸೌಲಭ್ಯಗಳೂ ಇವರಿಗೆ ದೊರಕುತ್ತಿಲ್ಲ.ಆದ್ದರಿಂದ ಈ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಕಸಗೂಡಿಸುವ, ಬಿಲ್ ಸಂಗ್ರಹ ಮಾಡುವ ಹಾಗೂ ಸಿಪಾಯಿ ನೌಕರರು ಪಂಚಾಯಿತಿ ಆಡಳಿತದ ಒಂದು ಭಾಗವಾಗಿದ್ದಾರೆ. ಈ ನೌಕರರಿಗೆ ಸರ್ಕಾರಿ ಸೌಲಭ್ಯಗಳು ದೊರಕದೇ ಕಷ್ಟದ ಪರಿಸ್ಥಿತಿಯಲ್ಲಿ ದುಡಿಯುವಂತಾಗಿದೆ' ಎಂದು ವಿಷಾದಿಸಿದರು.`2008ರಲ್ಲಿಯೇ ಸರ್ಕಾರ ಇಪಿಎಫ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಈ ಯೋಜನೆ ಜಾರಿಗೆ ಬಂದಿದ್ದರೆ ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ ದೊರಕುತ್ತಿತ್ತು ಆದರೆ, ನಾಲ್ಕು ವರ್ಷಗಳಾದರೂ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಇಂದಿನ ರಾಜಕೀಯ ಪಕ್ಷಗಳ ಆಂತರಿಕ ಕಚ್ಚಾಟದ ನಡುವೆ ಎರಡು ಕೋಟಿ ಜನ ಅಸಂಘಟಿತ ಬಡ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ.ಬಡ ಕೂಲಿ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡದ ಎರಡೂ ಸರ್ಕಾರಗಳು ಶ್ರೀಮಂತ ಕಂಪೆನಿಗಳ ಆದಾಯವನ್ನು ಹೆಚ್ಚಳ ಮಾಡುತ್ತಿವೆ. ಇದರಿಂದಾಗಿ ಕಾರ್ಮಿಕರ ಬದುಕು ಕ್ಷೀಣಿಸುತ್ತಿದೆ. ಉದಾರಿಕರಣ ಹಾಗೂ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಬಡತನ ಹೆಚ್ಚಾಗುತ್ತಿದೆ. ಇಂಥ ಕಾರ್ಮಿಕ ವಿರೋಧಿ ನೀತಿಯನ್ನು ತಡೆಗಟ್ಟಲು ಪ್ರತ್ಯೇಕ ಕಾನೂನು ರಚನೆಯಾಗಬೇಕು ಮತ್ತು ಆಹಾರ ಭದ್ರತೆಗಾಗಿ ಹೊಸ ಕಾನೂನನ್ನು ಜಾರಿಗೆ ತಂದಾಗ ಮಾತ್ರ ಬಡತನ ಮತ್ತು ಆಹಾರದ ಸಮಸ್ಯೆಯನ್ನು ಬಗೆರಹರಿಸಲು ಸಾಧ್ಯ' ಎಂದರು.ಸಿಐಟಿಯು ಕಾರ್ಮಿಕ ಸಂಘಟನೆಯ ಅಧ್ಯಕ್ಷ ಆರ್.ಎಚ್.ಆಯಿ, `ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳಿಂದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದೇ ಒಂದು ಪ್ರಳಯದಂತಿದ್ದು, ಕಾರ್ಮಿಕರು ಇದರಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇಂಥ ಪ್ರಳಯದಿಂದ ಪಾರಾಗಿ ಬರಲು ವ್ಯವಸ್ಥಿತವಾದ ಸಂಘಟನೆ ಕಾರ್ಮಿಕರಲ್ಲಿ ಬಲಗೊಳ್ಳಬೇಕಿದೆ. ಗ್ರಾಮ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಪೂರೈಕೆ ಮಾಡುವ ಕಾರ್ಮಿಕರು ಹಾಗೂ ರೈತರು ಎಲ್ಲರೂ ಸೇರಿಕೊಂಡು ಸಂಘಟನೆಯನ್ನು ಕಟ್ಟಿಕೊಂಡು ಅಸ್ಥಿರ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆಯಲು ಹೋರಾಡಬೇಕು' ಎಂದರು.ಸಂಘದ ಜಿಲ್ಲಾ ಅಧ್ಯಕ್ಷ ಬಿ.ಐ.ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಬಿ.ನಾಡಗೌಡರ, ಎನ್.ಎಂ.ಪಾಟೀಲ, ಉದಯ ಗದಗಕರ, ವಿ.ಕೆ.ಬಾಳಿಕಾಯಿ ಹಾಗೂ ಕೆ.ಎಚ್.ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry