ಶುಕ್ರವಾರ, ಮೇ 14, 2021
30 °C

ಗ್ರಾ.ಪಂ. ಸದಸ್ಯೆ ಪತಿ ಮೇಲೆ ಹಲ್ಲೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲಿಗ್ರಾಮ: ಗ್ರಾಮ ಪಂಚಾಯಿತಿ ಸದಸ್ಯೆ ತನ್ನ ಮನೆ ಮುಂದೆ ಚರಂಡಿ ನಿರ್ಮಿಸಿಲ್ಲ ಎಂದು ವ್ಯಕ್ತಿಯೊಬ್ಬರು ಗೂಂಡಾಗಳಿಂದ ಆಕೆಯ ಪತಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಕೆ.ಆರ್. ನಗರ ತಾಲ್ಲೂಕಿನ ನಾಟನಹಳ್ಳಿಯಲ್ಲಿ ಗುರುವಾರ ನಡೆದಿದೆ.ತಾಲ್ಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರೂಪಾ ಅವರ ಪತಿ ಶೇಖರ್ ಹಲ್ಲೆಗೆ ಒಳಗಾದವರು. ನಾಟನಹಳ್ಳಿಯ ಮಲ್ಲೇಶ ಎಂಬುವರು ತಮ್ಮ ಮನೆ ಎದುರು ಚರಂಡಿ ನಿರ್ಮಿಸುತ್ತಿಲ್ಲ ಎಂದು ರೂಪಾ ಅವರ ಪತಿಯಾದ ಶೇಖರ್ ಅವರೊಡನೆ ಗ್ರಾಮದ ಬಸ್ ನಿಲ್ದಾಣದಲ್ಲಿ ಜಗಳ ತೆಗೆದರು.

ಜಗಳ ವಿಕೋಪಕ್ಕೆ ತಿರುಗಿದಾಗ ಎಚ್ಚೆತ್ತ ಗ್ರಾಮಸ್ಥರು ಇಬ್ಬರನ್ನು ಸಮಾಧಾನಪಡಿಸಿ ಜಗಳವನ್ನು ತಿಳಿಗೊಳಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಮಲ್ಲೇಶ್ ತಮ್ಮ ಭಾವಮೈದುನನಿಗೆ ಕರೆಮಾಡಿ ಹಾಸನ ಮೂಲದ 8 ಮಂದಿ ಗೂಂಡಾಗಳನ್ನು ಕರೆಸಿ ಶೇಖರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಭಯಗ್ರಸ್ಥರಾದ ಶೇಖರ್ ತಮ್ಮ ಮನೆಯಲ್ಲಿ ಆಶ್ರಯ ಪಡೆದರು. ಗೂಂಡಾಗಳು ಮನೆಯ ಬಾಗಿಲು ಮುರಿದು ಒಳನುಗ್ಗಲು ಮುಂದಾದಾಗ ಪಕ್ಕದ ಮನೆಯವರು ಹಿಂಬಾಗಿಲಿನಿಂದ ಅವರನ್ನು ತಪ್ಪಿಸಿ ತಮ್ಮ ಮನೆಯಲ್ಲಿ ರಕ್ಷಣೆ ನೀಡಿದರು.ಇದರಿಂದ ಕುಪಿತರಾದ ಗೂಂಡಾಗಳು ಹಾಸನ ಜಿಲ್ಲೆ ದೊಡ್ಡಹಳ್ಳಿಯಲ್ಲಿ ಸಂತೆಗೆ ತೆರಳಿದ್ದ ಶೇಖರ್ ಅವರ ತಂದೆ ರಾಮಶೆಟ್ಟಿ ಮೇಲೆ ಹಲ್ಲೆ ನಡೆಸಲು ದೊಡ್ಡಹಳ್ಳಿಗೆ ಕಾರಿನಲ್ಲಿ ತೆರಳಿದರು. ಶೇಖರ್ ಅವರು ಈ ಬಗ್ಗೆ ತಂದೆಗೆ ಮೊಬೈಲ್ ಮೂಲಕ ಮಾಹಿತಿ ನೀಡಿ ಜಾಗೃತರಾಗಿರುವಂತೆ ಎಚ್ಚರಿಸಿದರು.

ಗೂಂಡಾಗಳು ಹಾಗೂ ಮಲ್ಲೇಶ್ ಸಂತೆಗೆ ಬಂದಿರುವುದನ್ನು ಖಚಿತಪಡಿಸಿಕೊಂಡ ರಾಮ ಶೆಟ್ಟಿ ಅವರು ಭೇರ್ಯ ಉಪ ಪೊಲೀಸ್ ಠಾಣೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಜಾಗೃತಗೊಂಡ ಪೊಲೀಸರು ಗೂಂಡಾಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸಾಲಿಗ್ರಾಮ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಅವರು ಮಲ್ಲೇಶನೂ ಸೇರಿದಂತೆ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.