ಗ್ರಾಮಕ್ಕೆ ಬೆಂಕಿ ಹಚ್ಚುವ ಬೆದರಿಕೆ!

7

ಗ್ರಾಮಕ್ಕೆ ಬೆಂಕಿ ಹಚ್ಚುವ ಬೆದರಿಕೆ!

Published:
Updated:

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿಯ ಬನವಾಸಿ ಗ್ರಾಮ ಪಂಚಾಯಿತಿಗೆ ಸೇರಿದ ವಡೇರಹಳ್ಳಿ ಗ್ರಾಮದ ಈರನಗುಡ್ಡೆ ಎಂಬಲ್ಲಿ ಭಾರಿ ಪ್ರಮಾಣದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದನ್ನು ವಿರೋಧಿಸಿದ ಸ್ಥಳೀಯರ ವಿರುದ್ಧವೇ ಪೊಲೀಸರು ಕ್ರಿಮಿನಲ್ ಕೇಸುಗಳನ್ನು ದಾಖಲಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.`ವಡೇರಹಳ್ಳಿ ವ್ಯಾಪ್ತಿಯಲ್ಲಿರುವ ಈರನಗುಡ್ಡೆಯ ಸುಮಾರು 10 ಎಕರೆ ಪ್ರದೇಶದಲ್ಲಿ ಬಂಡೆಗಳನ್ನು ಸಿಡಿಮದ್ದುಗಳಿಂದ ಸ್ಫೋಟಿಸಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಅಂತೆಯೇ ಹಾರೋಹಳ್ಳಿಯ ಭೀಮೇಶ್ವರಿ ಫರ್ಮ್ ಎಂಬ ಹೆಸರಿನ ಸಂಸ್ಥೆ ಇಲ್ಲಿ ಜಲ್ಲಿ ಕ್ರಷರ್ ಚಟುವಟಿಕೆ ನಡೆಸುತ್ತಿದೆ. ಈ ಪ್ರದೇಶದಲ್ಲಿನ ಅಕ್ರಮ ಚಟುವಟಿಕೆಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಇದೆ~ ಎಂದು ಗ್ರಾಮಸ್ಥರು ದೂರಿದ್ದಾರೆ.ಅಕ್ರಮ ಗಣಿಗಾರಿಕೆಯನ್ನು ನ್ಲ್ಲಿಲಿಸುವಂತೆ ವಡೇರಹಳ್ಳಿ ಗ್ರಾಮಸ್ಥರು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.  ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಅಕ್ರಮ ಗಣಿಗಾರಿಕೆಯ ವಿರುದ್ಧ ದೂರು ನೀಡಿದ್ದರು.ದೂರು ಸ್ವೀಕರಿಸಿದ ತಹಸೀಲ್ದಾರ್ ಡಾ.ದಾಕ್ಷಾಯಿಣಿ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿದ್ದರು.  ನಂತರ ಗಣಿಗಾರಿಕೆ ಪ್ರದೇಶಕ್ಕೆ ಹೋಗುವಂತಹ ರಸ್ತೆಯನ್ನು ತಕ್ಷಣವೇ ಬಂದ್ ಮಾಡಿಸಿದ್ದರು. ಆದರೆ ಮರುದಿನ ಬೆಳಿಗ್ಗೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಮುಚ್ಚಿಸಿದ್ದ ರಸ್ತೆಯನ್ನು ತೆರವುಗೊಳಿಸಿದರು.`ಗಣಿಗಾರಿಕೆ ನಡೆಸುತ್ತಿರುವವರಿಗೆ ತೊಂದರೆ ನೀಡುತ್ತಿದ್ದೀರಿ~ ಎಂದು ಪ್ರತಿಯಾಗಿ ಗ್ರಾಮದ ಆರು ಜನರ ವಿರುದ್ಧ  ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದ್ದಾರೆ. ಶೇಖರ್, ನವೀನ್, ಮಾದಯ್ಯ, ಕುಮಾರ್, ಕೆಂಪಯ್ಯ ಮತ್ತು ಅವರ ಮಗ ಅರುಣ್ ವಿರುದ್ಧ ಅತಿಕ್ರಮಣ ಪ್ರವೇಶ ಹಾಗೂ ಕ್ರಷರ್ ಮೇಲೆ ದಾಳಿ ನಡೆಸಿದ ಆರೋಪಗಳನ್ನು ಹೊರಿಸಲಾಗಿದೆ.ಏತನ್ಮಧ್ಯೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಬಾಡಿಗೆ ಜನರನ್ನು ಕರೆತಂದು ಗಣಿ ಪ್ರದೇಶದ ಕಡೆಗೆ ಅನ್ಯರು ಯಾರೂ ಕಾಲಿಡದಂತೆ ಕಾವಲು ಹಾಕಿದ್ದಾರೆ. `ಯಾರಾದರೂ ನಮ್ಮ ತಂಟೆಗೆ ಬಂದರೆ ಇಡೀ ಊರಿಗೇ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ~ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಈ ಬೆದರಿಕೆ ವಿಷಯವನ್ನು ತಹಸೀಲ್ದಾರ್ ಗಮನಕ್ಕೆ ತಂದಿದ್ದಾರೆ. ನಡೆದಿರುವ ಎಲ್ಲ ವಿದ್ಯಮಾನಗಳನ್ನು ಅವರಿಗೆ ಅರುಹಿದ್ದಾರೆ. ನಮಗೆ ರಕ್ಷಣೆ ನೀಡಿ. ಅಕ್ರಮ ಗಣಿಗಾರಿಕೆಯನ್ನು ತಡೆಯಿರಿ ಎಂದು ಪೊಲೀಸರಿಗೆ ಹೇಳಿದರೆ “ಗಣಿಗಾರಿಕೆ ನಡೆಸುತ್ತಿರುವವರು ತುಂಬಾ ಪ್ರಭಾವಿಗಳು. ಯಾರ‌್ಯಾರಿಂದಲೋ ನಮಗೆ ಒತ್ತಡ ಹಾಕಿಸುತ್ತಾರೆ.

 

ನಾವು ಏನೂ ಮಾಡಲು ಸಾಧ್ಯವಿಲ್ಲ. ಈ ವಿಷಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೇರಿದ್ದು ನೀವು ಅವರನ್ನೇ ಹೋಗಿ ಕಾಣಿ” ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು `ಪ್ರಜಾವಾಣಿ~ ಗೆ ತಿಳಿಸಿದರು. `ಜಲ್ಲಿ ಕ್ರಷರ್‌ನ ಶಬ್ದ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಬಂಡೆಗಳನ್ನು ಒಡೆಯಲು ಭಾರಿ ಗಾತ್ರದ ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿದೆ.ಇದರಿಂದ ಭಯಾನಕ ಶಬ್ದ ಹೊರಹೊಮ್ಮುತ್ತಿದ್ದು ಮನೆಗಳ ಗೋಡೆಗಳು ಅಲುಗಾಡುತ್ತಿವೆ. ರಾತ್ರಿ ವೇಳೆಯಲ್ಲಿ ಮನೆಯೊಳಗೆ ಮಲಗಲಿಕ್ಕೇ ಭಯವಾಗುತ್ತಿದೆ. ವಿರೋಧಿಸಿದ್ದಕ್ಕೆ ಗಣಿ ಕಾವಲು ಕಾಯುತ್ತಿರುವವರು ನಮ್ಮನ್ನೇ ಬೆದರಿಸುತ್ತಿದ್ದಾರೆ~ ಎಂದು ಗ್ರಾಮದ ಮಹಿಳೆಯರು ತಮ್ಮ ಆತಂಕಗಳನ್ನು ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry