ಸೋಮವಾರ, ಮೇ 16, 2022
27 °C

ಗ್ರಾಮಕ್ಕೆ ಬೇಕಿದೆ ಸ್ವಚ್ಛತೆ

ಪ್ರಜಾವಾಣಿ ವಾರ್ತೆ / ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಕೆ ಸ್ಥಳದಲ್ಲೇ ಹರಿಯುವ ಚರಂಡಿ ನೀರು. ಬಟ್ಟೆ, ಪಾತ್ರೆ, ಸ್ನಾನ  ತೊಳೆಯಲು ಅದೇ ನೀರು.  ಇನ್ನು ನಾಯಿಗಳಿಗೆ ಮತ್ತು ನೊಣಗಳಿಗೆ ಅದೇ ಅತ್ಯುತ್ತಮ ವಾಸಸ್ಥಳ. ಇಲ್ಲಿ ಶುದ್ಧ ಕುಡಿಯುವ ನೀರಿಲ್ಲ.ವರ್ಷಗಳಿಂದ ಇಲ್ಲಿ ಇದೇ ದುಸ್ಥಿತಿಯಿದ್ದು. ನಿವಾಸಿಗಳು ಇಂಥ ಅವ್ಯವಸ್ಥೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಮಾಲಿನ್ಯತೆಯಿಂದ ಕೂಡಿರುವ ಈ ಸ್ಥಳದ ವಿವರಣೆ ಕುಗ್ರಾಮದ್ದಲ್ಲ. ಗಡಿಯಂಚಿನದ್ದೂ ಅಲ್ಲ. ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ  ಮರಸನಹಳ್ಳಿ ಗ್ರಾಮದ ದೃಶ್ಯವಿದು.ಇದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಗ್ರಾಮದ ಬಹುತೇಕ ರಸ್ತೆಗಳು ಈವರೆಗೆ ಡಾಂಬರೀಕರಣ ಕಂಡಿಲ್ಲ. ಚಪ್ಪಡಿ ಕಲ್ಲು ಹಾಕಲಾಗಿದೆ ಹೊರತು ಸುವ್ಯವಸ್ಥೆಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿಲ್ಲ. ಚರಂಡಿ ವ್ಯವಸ್ಥೆಯೇ ಇಲ್ಲದಿರುವ ಈ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಪ್ರಾಣಿಗಳು ಮಾತ್ರ ಇರಬಲ್ಲ ಕಿರಿದಾದ ಮನೆಗಳಲ್ಲಿ ಮತ್ತು ಗುಡಿಸಲುಗಳಲ್ಲಿ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ.ಕೆಲ ವರ್ಷಗಳಿಂದ ನಿರ್ಮಿಸಲಾಗಿದ್ದ ಸಿಮೆಂಟ್ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಇಲ್ಲಿ ಸಂಚರಿಸಲು ಪ್ರಯಾಸಪಡಬೇಕು. ಅಲ್ಲಲ್ಲಿ ತಿಪ್ಪೆಗುಂಡಿಗಳಿದ್ದು, ಸ್ವಚ್ಛ ವಾತಾವರಣವೇ ಇಲ್ಲವಾಗಿದೆ. ಬಹುತೇಕ ಕೂಲಿಕಾರ್ಮಿಕರು ಮತ್ತು ರೈತರೇ ವಾಸಿಸುವ ಈ ಗ್ರಾಮದ ಸಮೀಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಹೊರತು ಅದಕ್ಕೆ ಹೊಂದಿಕೊಂಡಂತಿರುವ ಗ್ರಾಮದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.‘ಹಾರೋಬಂಡೆ ಗಾ. ಪಂ.ವ್ಯಾಪ್ತಿಯಲ್ಲಿ ಬರುವ ನಮ್ಮ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ ತೀವ್ರ ಸ್ವರೂಪದಲ್ಲಿದೆ.  ನಮ್ಮ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. 50 ಮನೆಗಳಿಗೂ ಒಂದೇ ಸಾರ್ವಜನಿಕನಲ್ಲಿ ಸೌಕರ್ಯ ಕಲ್ಪಿಸಲಾಗಿದೆ. ಆ ನಲ್ಲಿಯಲ್ಲಿ ಸುತ್ತಮುತ್ತ ಯಾವಾಗಲೂ ಗಲೀಜು ಇರುತ್ತದೆ. ಬೇರೆ ನಲ್ಲಿ ಸಂಪರ್ಕ ಇರದಿರುವ ಕಾರಣ ನಾವು ಅಲ್ಲೇ ಸಾಲಲ್ಲಿ ನಿಂತುಕೊಂಡು ಕೊಡ ಅಥವಾ ಬಕೆಟ್‌ಗಳಲ್ಲಿ ಕುಡಿಯುವ ನೀರನ್ನು ತುಂಬಿಸಿಕೊಳ್ಳಬೇಕು’ ಎಂದು ಗ್ರಾಮದ ನಿವಾಸಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.‘ನಮಗೆ ಮನೆ ನಿರ್ಮಿಸಿಕೊಡಿ ಎಂದು ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಮಾಡಿದರೆ,  ಭರವಸೆ ನೀಡುತ್ತಾರೆ ಹೊರತು ಕ್ರಮ ತೆಗೆದುಕೊಳ್ಳುವುದಿಲ್ಲ.  ಪಿಂಚಣಿ ಸೌಲಭ್ಯ, ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ನಿತ್ಯವೂ ಕಚೇರಿಗೆ ಅಲೆದಾಡಬೇಕು.  ಹೊಸ ಯೋಜನೆಯಿಂದ ಸೌಲಭ್ಯ ನಮಗೆ ದೊರೆಯುತ್ತದೆ ಎಂಬ ಆಶಾಭಾವನೆ  ಕೆಲಸ ಬಿಟ್ಟು  ಹೋಗುತ್ತೇವೆ. ನಮ್ಮ ಗ್ರಾಮದ ಅಂಗವಿಕಲ ಚಿಕ್ಕದಾಸಪ್ಪರಿಗೆ ವೃದ್ಧರ ಪಿಂಚಣಿ ದೊರೆತಿಲ್ಲ. ಸೌಲಭ್ಯ ಪಡೆದುಕೊಳ್ಳಲು  ಸಾವಿರ ರೂಪಾಯಿ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಕೃಷಿಕ ಮಂಜುನಾಥ್. .‘

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.