ಮಂಗಳವಾರ, ಜನವರಿ 28, 2020
21 °C

ಗ್ರಾಮಕ್ಕೆ ಮರಳಿ: ಸಂತ್ರಸ್ತರಿಗೆ ರಾಹುಲ್ ಗಾಂಧಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮಕ್ಕೆ ಮರಳಿ: ಸಂತ್ರಸ್ತರಿಗೆ ರಾಹುಲ್ ಗಾಂಧಿ ಸಲಹೆ

ಮಲಾಕ್‌ಪುರ, ಶಮ್ಲಿ (ಪಿಟಿಐ): ಮುಜಫ್ಫರನಗರದ ಕೋಮು ಗಲಭೆ ಸಂತ್ರಸ್ತರು ನಿರಾಶ್ರಿತರ ಶಿಬಿರಗಳಿಂದ ಸ್ವಂತ ಊರುಗ­ಳಿಗೆ ತೆರಳುವಂತೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಲಹೆ ಮಾಡಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲೇ ಉಳಿದುಕೊಂಡರೆ ಕೋಮು ಗಲಭೆಯನ್ನು ಪ್ರಚೋದಿಸಿದವರಿಗೆ ಇನ್ನಷ್ಟು ಲಾಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಯಾವುದೇ ಮುನ್ಸೂಚನೆ ನೀಡದೆ  ಬಿಗಿ ಭದ್ರತೆಯಲ್ಲಿ ರಾಹುಲ್‌ ಅವರು ಭಾನುವಾರ ಬೆಳಿಗ್ಗೆ ಶಮ್ಲಿ ಜಿಲ್ಲೆಯ ಮಲಾಕ್‌ಪುರ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದ ಹಿಂದೂ ಮತ್ತು ಮುಸ್ಲಿಮರ  ಜತೆ ಸಂವಾದ ನಡೆಸಿದರು. ‘ಕೋಮು ಗಲಭೆಯ ಕಿಡಿ ಹಚ್ಚಿದವರಿಗೆ ನೀವು (ನಿರಾಶ್ರಿತರು) ಊರಿಗೆ ವಾಪಸಾಗುವುದು ಬೇಕಾಗಿಲ್ಲ. ಆದರೆ ದೀರ್ಘಕಾಲ ನಿರಾಶ್ರಿತ ಶಿಬಿರಗಳಲ್ಲಿ ಉಳಿದುಕೊಳ್ಳುವುದು ಒಳ್ಳೆಯದಲ್ಲ’ ಎಂದು ರಾಹುಲ್‌ ತಿಳಿಸಿದ್ದಾರೆ.ಆದರೆ ಕೋಮು ಗಲಭೆ ಸಂತ್ರಸ್ತರು ತಾವು ಊರಿಗೆ ಮರಳಿದರೆ ಜೀವಕ್ಕೆ ಅಪಾಯವಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಅವರು ಶಮ್ಲಿ ನಿರಾಶ್ರಿತರ ಶಿಬಿರದಿಂದ ವಾಪಸ್‌ ಆಗುವಾಗ ಕೆಲವು ಮುಸ್ಲಿಂ ನಿರಾಶ್ರಿತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ಕೋಮು ಗಲಭೆಯ ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದೇ ಇರುವುದು ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.ಆರೋಪ: ಪ್ರತಿಭಟನೆಯಿಂದ ವಿಚಲಿತಗೊಂಡ ಕಾಂಗ್ರೆಸ್‌, ಸಮಾಜವಾದಿ ಪಕ್ಷದ ಕುಮ್ಮಕ್ಕಿನಿಂದ ಪ್ರತಿಭಟನೆ ನಡೆದಿದೆ ಎಂದು ಆರೋಪಿಸಿದೆ. ರಾಹುಲ್‌ ಅವರು ಹಿಂದೂ ಮತ್ತು ಮುಸ್ಲಿಂ ಸಮು­ದಾಯದ ಮಧ್ಯೆ ಸಾಮರಸ್ಯ ಮೂಡಿಸಲು ಮಾಡುತ್ತಿರುವ ಯತ್ನವನ್ನು ಸಹಿಸದ ಸಮಾಜವಾದಿ ಪಕ್ಷವು ಪ್ರತಿಭಟನೆಗೆ ಕುಮ್ಮಕ್ಕು ನೀಡಿದೆ ಎಂದು ಶಿಮ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಮುಖ್ಯಸ್ಥ ಅಯೂಬ್‌ ಜಂಗ್‌ ಆರೋಪಿಸಿದ್ದಾರೆ. ನಂತರ ರಾಹುಲ್‌ ಅವರು ಖುರ್ಗಾನ್‌ ನಿರಾಶ್ರಿತರ ಶಿಬಿರಕ್ಕೂ ಭೇಟಿ ನೀಡಿದರು. ಕಾಂಗ್ರೆಸ್‌ ಪಕ್ಷ ಅಲ್ಲಿ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದೆ.

ಪ್ರತಿಕ್ರಿಯಿಸಿ (+)