ಗ್ರಾಮಗಳಲ್ಲೂ ಕಾಲ್ಕೀಳುತ್ತಿದೆ ಕನ್ನಡ

7

ಗ್ರಾಮಗಳಲ್ಲೂ ಕಾಲ್ಕೀಳುತ್ತಿದೆ ಕನ್ನಡ

Published:
Updated:

ಮಧುಗಿರಿ: ಗ್ರಾಮೀಣ ನೆಲದಲ್ಲಿ ಬೇರೂರಿರುವ ಕನ್ನಡ ಭಾಷೆ ನಗರೀಕರಣದ ಅವಾಂತರದಿಂದಾಗಿ ಅಲ್ಲಿಂದಲೂ ಕಾಲ್ಕೆಳುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಮ.ಲ.ನ ಮೂರ್ತಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ನಿರ್ಮಿಸಲಾಗಿರುವ ಕಲಾತಪಸ್ವಿ ಎಂ.ಎಸ್.ನಂಜುಂಡರಾವ್ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪೀಠ ಅಲಂಕರಿಸಿ ಮಾತನಾಡಿದ ಅವರು, ಕನ್ನಡವನ್ನು ಉಳಿಸುವ ಜರೂರತು ನಮ್ಮ ರಾಜಕಾರಣಿಗಳಲ್ಲಿ ಇಲ್ಲವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಇಂಗ್ಲೀಷ್ ಕಲಿತರೆ ಮಾತ್ರ ಕೈತುಂಬ ಸಂಬಳ ಎನ್ನುವ ಭ್ರಮೆ ಜನತೆ ಕೈಬಿಡಬೇಕು, ಹಾಗೆಯೇ ಕನ್ನಡವನ್ನು ನಂಬಿ ಬದುಕುತ್ತಿರುವವರಿಗೆ ಮಾತ್ರ ಉದ್ಯೋಗ ಎಂಬ ಭರವಸೆ ಸರ್ಕಾರ ಮೂಡಿಸಿದಾಗಲೇ ಕನ್ನಡ ಬಾಷೆ ಬಳಕೆ ಆಗುತ್ತದೆ. ಕನ್ನಡ ಕೇವಲ ಬಡಾಯಿ ಭಾಷೆಯಾಗದೆ ತಿನ್ನುವ ಅನ್ನದ ಪ್ರಶ್ನೆಯಾದಾಗ ಮಾತ್ರ ಕನ್ನಡ ಉಳಿದೀತು ಎಂದರು. ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾಗಬೇಕು ಎಂದು ಎಲ್ಲರೂ ಹೇಳಿಕೆ ನೀಡುವವರೇ ಆಗಿದ್ದಾರೆ. ಆದರೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸುತ್ತಾರೆ.ಕನ್ನಡ ಶಾಲೆಗೆ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳ ಮಕ್ಕಳು ಮಾತ್ರವೇ ಬರುತ್ತಿದ್ದಾರೆ. ಕೇವಲ ಬಡವರಷ್ಟೇ ಕನ್ನಡ ಕಲಿಯಿರಿ ಎಂಬ ಸರ್ಕಾರದ ವಾದ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ನಾಡಿನಲ್ಲಿ ಬದುಕುತ್ತಿರು ಎಲ್ಲರೂ ಕನ್ನಡ ಕಲಿಯಬೇಕು, ಕನ್ನಡ ಕಲಿತರೆ ಮಾತ್ರ ಉದ್ಯೋಗ ಮತ್ತು ಸವಲತ್ತು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು, ಗಡಿನಾಡಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಇಂತಹ ಒಂದು ಸಂಕಲ್ಪಕ್ಕೆ ಸಾಕ್ಷಿಯಾಗಲಿ ಎಂದರು. ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯನ್ನು ಕಂದಾಯ ಜಿಲ್ಲೆಯಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry