ಸೋಮವಾರ, ಏಪ್ರಿಲ್ 19, 2021
25 °C

ಗ್ರಾಮದಲ್ಲಿ ಬದಲಾವಣೆ ತರುತ್ತೇವೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: `ಮೊದಲು ನಾನು ಬದಲಾಗುತ್ತೇನೆ. ನಂತರ ನನ್ನ ಮನೆಯಲ್ಲಿ ಬದಲಾವಣೆ ತರುತ್ತೇನೆ. ನಾವೆಲ್ಲಾ ಸೇರಿ ನಮ್ಮ ಶಾಲೆ ಮತ್ತು ಗ್ರಾಮದಲ್ಲಿ ಬದಲಾವಣೆಗೆ ಕಾರಣರಾಗುತ್ತೇವೆ~ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ `ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ~ (ಸಿಎಂಸಿಎ) ಘಟಕವೊಂದನ್ನು ಪ್ರಾರಂಭಿಸಲಾಯಿತು. ಮಕ್ಕಳಲ್ಲಿ ಪೌರಪ್ರಜ್ಞೆಯನ್ನು ನಾಟಕ, ಆಟ ಹಾಗೂ ಪಾಠಗಳ ಮೂಲಕ ಕಲಿಸಿ ತಮ್ಮ ಸುತ್ತಲಿನ ಪರಿಸರ, ತಮ್ಮ ಆರೋಗ್ಯ ಹಾಗೂ ಗ್ರಾಮ ನೈರ್ಮಲ್ಯವನ್ನೆಲ್ಲಾ ಕಾಪಾಡಿಕೊಳ್ಳಲು ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. `ದಿವಂಗತ ಸಂಜಯ್‌ದಾಸ್‌ಗುಪ್ತ ಅವರ ಸ್ಮರಣಾರ್ಥ ಮುತ್ತರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಉಪಯುಕ್ತ ನಡೆಸುತ್ತಿರುವ `ಮುತ್ತೂರು ಮತ್ತು ಮಳ್ಳೂರಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ (ಸಿಎಸಿಎ) ಘಟಕಗಳನ್ನು ಸ್ಥಾಪಿಸಿದ್ದೆವು. ಇಲ್ಲಿ ಮಕ್ಕಳೇ ಗ್ರಾಮ ಸಭೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ತಮ್ಮ ಗ್ರಾಮಕ್ಕೆ ರಸ್ತೆ, ಶಾಲೆಗೆ ಆವರಣ ಗೋಡೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಮಳ್ಳೂರಿನ ವಿದ್ಯಾರ್ಥಿಗಳು ಕಸ ವಿಂಗಡನೆ ಮಾಡಿ ಗೊಬ್ಬರ ತಯಾರಿಸುತ್ತಿದ್ದಾರೆ. ಇದಕ್ಕಾಗಿ ಈ ಶಾಲೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದೆ~ ಎಂದು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು. `ಸಮಾಜದ ಪ್ರಗತಿಗಾಗಿ ತರಬೇತಿ ಹೊಂದಿದ ಮಕ್ಕಳು ಮುಂದೆ ಉತ್ತಮ ಪ್ರಜೆಗಳಾಗುತ್ತಾರೆ ಮತ್ತು ತಮ್ಮ ಸುತ್ತಲಿನ ಸಮಾಜವನ್ನು ಸರಿದಾರಿಯಲ್ಲಿ ನಡೆಸುತ್ತಾರೆ~ ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು. ಸಿಎಂಸಿಎ ಗ್ರಾಮಾಂತರ ಶಾಲಾ ಕಾರ್ಯಕ್ರಮಗಳ ಸಂಯೋಜಕ ಜಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲೆಯಲ್ಲಿ ಪ್ರಾರಂಭಿಸಿದ ಸಿಎಂಸಿಎ ಟಿಪ್ಪೂಸುಲ್ತಾನ್ ಸಿವಿಕ್ ಕ್ಲಬ್ ಸದಸ್ಯರಿಗೆ ಸಿಎಂಸಿಎ ಬ್ಯಾಡ್ಜ್ ವಿತರಿಸಲಾಯಿತು. ಮಕ್ಕಳು ಆರೋಗ್ಯ, ಸ್ವಚ್ಛತೆ, ಸಹಾಯಗುಣ ಹಾಗೂ ನಿಯಮ ಪಾಲನೆ ಕುರಿತಂತೆ ಅರಿವು ಮೂಡಿಸುವ ನಾಟಕವೊಂದನ್ನು ಪ್ರದರ್ಶಿಸಿದರು. ಸಿಎಂಸಿಎ ರಾಷ್ಟ್ರೀಯ ಸಂಯೋಜಕಿ ಪ್ರಿಯಾ ಕೃಷ್ಣಮೂರ್ತಿ, ಸರ್ಕಾರಿ ಶಾಲೆಗಳ ಸಂಯೋಜಕ ಮರುಳಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಮುಖ್ಯ ಶಿಕ್ಷಕಿಯರಾದ ಮಂಜುಳಾ, ಗೌರಮ್ಮ, ಶಿಕ್ಷಕರಾದ ಅಶ್ವತ್ಥನಾರಾಯಣ್, ವಿಜಯಲಕ್ಷ್ಮಿ, ಎ.ಶ್ರೀನಿವಾಸ್, ಮಂಗಳಾ, ಸ್ವಯಂಸೇವಕ ಶೇಖರ್ ಮತ್ತಿತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.