ಗುರುವಾರ , ಡಿಸೆಂಬರ್ 12, 2019
17 °C

ಗ್ರಾಮದೇವಿ ಜಾತ್ರೆ: ದೇವರಿಗಾಗಿ ಒಂದು ದಿನದ ಬಂದ್ !

ನಾಗೇಂದ್ರ ಖಾರ್ವಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮದೇವಿ ಜಾತ್ರೆ: ದೇವರಿಗಾಗಿ ಒಂದು ದಿನದ ಬಂದ್ !

ಕಾರವಾರ: ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಜನ ಸಂಚಾರವೇ ಇರಲಿಲ್ಲ. ಕಿಟಕಿಗಳನ್ನು ಮುಚ್ಚಿ ಮನೆಗಳಿಗೆ ಬೀಗ ಹಾಕಲಾಗಿತ್ತು. ಅಂಗಡಿ, ಮುಂಗಟ್ಟುಗಳೂ ಬಂದ್ ಆಗಿದ್ದವು.ಯಾವ ಸಂಘಟನೆಯೂ ಬಂದ್‌ಗೆ ಕರೆ ನೀಡಿರಲಿಲ್ಲ. ಆದರೂ ಒಂದು ರೀತಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಇದೆಲ್ಲ ದೇವರಿಗಾಗಿ ಎನ್ನುವುದೇ ವಿಶೇಷ !ಯಲ್ಲಾಪುರ ಪಟ್ಟಣದಲ್ಲಿ ಗ್ರಾಮದೇವಿ ದೇವಸ್ಥಾನವಿದ್ದು ಕಾಳಮ್ಮ ಮತ್ತು ದುರ್ಗಮ್ಮ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವಿ (ಈ ಬಾರಿ ಫೆಬ್ರುವರಿ 15 ರಿಂದ 23ರವರೆಗೆ) ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ~ಹೊರ ಮಂಗಳವಾರ~ ಎನ್ನುವ ವಿಶಿಷ್ಟ ಆಚರಣೆ ತಲೆತಲಾಂತರಗಳಿಗೆ ನಡೆದುಬಂದಿದೆ. ಹೊರ ಮಂಗಳವಾರದಂದು ಬೆಳಿಗ್ಗೆ ಎಲ್ಲರೂ ಮನೆಯಿಂದ ಹೊರಗೆ ಹೋಗಿ ಸಂಜೆಗೆ ಮರಳುತ್ತಾರೆ.ಮಂಗಳವಾರ ದೇವಿಗೆ ಪ್ರಿಯವಾದ ದಿನವಾಗಿರುವುದರಿಂದ ಈ ದೇವಸ್ಥಾನಕ್ಕೆ ನಡೆದುಕೊಳ್ಳುವವರು ಜಾತ್ರೆ ಆರಂಭವಾಗುವುದಕ್ಕೂ ಮುನ್ನ ಮೂರು ಹೊರ ಮಂಗಳವಾರ ಆಚರಣೆ ಮಾಡುತ್ತಾರೆ. ಈ ಆಚರಣೆ ಪೂರ್ಣಗೊಂಡ ನಂತರವೇ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತದೆ.ಮಂಗಳವಾರ ಮನೆಮಂದಿಯೆಲ್ಲ ಬೆಳಿಗ್ಗೆಯೇ ಎದ್ದು ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಅಡುಗೆಯನ್ನು ಸಿದ್ಧಪಡಿಸಿ ಬುತ್ತಿ ಕಟ್ಟಿಕೊಂಡು, ಗ್ರಾಮದೇವಿ ದೇವಸ್ಥಾನಕ್ಕೆ ಬಾಗಿಲು ಹಾಕಿದ (ಬೆಳಿಗ್ಗೆ 10ಕ್ಕೆ) ನಂತರ ಕುಟುಂಬ ಸಮೇತರಾಗಿ ಊರ ಹೊರಗೆ ಹೋಗುತ್ತಾರೆ.ಮನೆಯ ಮುಂದೆ ರಂಗೋಲಿ ಹಾಕಿದ್ದರಿಂದ ಇಡೀ ಬೀದಿಯೇ ಸಿಂಗಾರಗೊಂಡಂತೆ ಕಾಣುತ್ತಿತ್ತು. ಹಿಂದೂಗಳೊಂದಿಗೆ ಮುಸ್ಲಿಮರು ಮತ್ತು ಕ್ರೈಸ್ತರು ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಮನೆಯನ್ನು ಸ್ವಚ್ಛಗೊಳಿಸಿ ನೈವೇದ್ಯ ಮಾಡಿ, ದೀಪ ಹಚ್ಚಿಟ್ಟು ಮನೆಯಿಂದ ಹೊರ ಹೋಗುತ್ತಾರೆ. ಈ ಸಂದರ್ಭದಲ್ಲಿ ದೇವಿ ಗ್ರಾಮದ ತುಂಬ ಸಂಚಾರ ಮಾಡಿ ಮನೆಯೊಳಗೆ ಬಂದು ನೈವೇದ್ಯ ಸ್ವೀಕರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ.~ಈ ಆಚರಣೆಯ ವೈಜ್ಞಾನಿಕ ಮಹತ್ವದ ಕುರಿತು ಇಲ್ಲಿಯವರೆಗೆ ಸಂಶೋಧನೆಗಳು, ಅಧ್ಯಯನಗಳು ನಡೆದಿಲ್ಲ. ಆದರೆ ಜನರು ಊರ ಹೊರಗೆ ಹೋದ ನಂತರ ದೇವಿ ಮನೆಗೆ ಬರುತ್ತಾಳೆ, ಕಷ್ಟಗಳನ್ನು ಪರಿಹರಿಸುತ್ತಾಳೆ ಎನ್ನುವ ನಂಬಿಕೆಯಿಂದ ಈ ಆಚರಣೆ ನಡೆಯುತ್ತಿದೆ~ ಎನ್ನುತ್ತಾರೆ ದೇವಸ್ಥಾನದ ಟ್ರಸ್ಟಿ ವೆಂಕಟರಾವ ಮಂತ್ರಿ.ವಯಸ್ಸಾದವರು, ವೃದ್ಧರು ಮನೆಗೆ ಬೀಗ ಹಾಕಿಕೊಂಡು ಮನೆಯ ಸುತ್ತಮುತ್ತ ಆಶ್ರಯ ಪಡೆದರೆ, ಉಳಿದವರು ಸಾತೊಡ್ಡಿ, ಮಾಗೋಡು ಜಲಪಾತ, ಕವಡಿಕೆರೆ ಸಮೀಪ ಹೋಗಿ, ಅಲ್ಲಿದ್ದು ನಂತರ ಹಿಂತಿರುಗುತ್ತಾರೆ. ಈ ಆಚರಣೆ ಪೊಲೀಸರಿಗೂ ಹೊರತಾಗಿಲ್ಲ.ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಂ.63ಕ್ಕೆ ಅಂಟಿಕೊಂಡಿರುವ ಪೊಲೀಸ್ ವಸತಿ ಗೃಹದ ಎಲ್ಲ ಮನೆಗಳಿಗೂ ಬೀಗ ಹಾಕಿರುವುದು ಸ್ಥಳಕ್ಕೆ ಭೇಟಿ ನೀಡಿದ   `ಪ್ರಜಾವಾಣಿ~ಗೆ ಕಂಡುಬಂತು.

ಪ್ರತಿಕ್ರಿಯಿಸಿ (+)