`ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ'

7

`ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ'

Published:
Updated:

ಕಮಲನಗರ: ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆಗೆ ಪಂಚಾಯಿತಿಗೆ ಬರುವ ಅನುದಾನದ ಸದ್ಬಳಕೆಯ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಠಾಣಾಕುಶನೂರ್ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದ ಸರಸ್ವತಿ ಜೀರ್ಗೆ ಹೇಳಿದರು.ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಿರಿಯರ ಮಾರ್ಗದರ್ಶನ ಪಡೆದು, ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.ಒಟ್ಟು 16 ಸದಸ್ಯ ಸ್ಥಾನ ಬಲದ ಠಾಣಾಕುಶನೂರ್ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗಾಗಿ ಅಧ್ಯಕ್ಷರಾಗಿ ಸರಸ್ವತಿ ಜೀರ್ಗೆ ಹಾಗೂ ಉಪಾಧ್ಯಕ್ಷರಾಗಿ ನಾಗಮ್ಮ ಹಣಮಂತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ  ಮೀಸಲಿದೆ.

ಔರಾದ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ಅಶೋಕಕುಮಾರ ಕಾಳಗಿ ಚುನಾವಣಾ ಅಧಿಕಾರಿಯಾಗಿದ್ದರು.ಜಿಲ್ಲಾ ಪಂಚಾಯಿತಿ ಸದಸ್ಯ ಧೂಳಪ್ಪ ಸುರಂಗೆ, ಶಿವಕುಮಾರ ಸಜ್ಜನಶೆಟ್ಟಿ, ಉಮೇಶ ಜೀರ್ಗೆ, ರಾಮಶೆಟ್ಟಿ ಪನ್ನಾಳೆ, ವೀರೇಂದ್ರ ರಾಜಾಪುರೆ, ಅರಹಂತ ಸಾವಳೆ, ಮಹೇಶ ಬೋಚರೆ, ಸತೀಶ ಜೀರ್ಗೆ, ವಸಂತ ಜೋಷಿ, ಜಗನ್ನಾಥ ಜೀರ್ಗೆ, ಕಾಶಪ್ಪಾ ಮುದ್ದಾ, ಪಿಡಿಒ ಶರತಕುಮಾರ ಆಲೂರೆ ಇದ್ದರು.

ಅವಿರೋಧ ಆಯ್ಕೆಯ ಪರಂಪರೆ: ಠಾಣಾಕುಶನೂರ್ ಗ್ರಾಮ ಪಂಚಾಯಿತಿಯು ಮೊದಲಿನಿಂದಲೂ ಉತ್ತಮ ಆಡಳಿತ, ಯೋಜನೆಗಳ ಅನುಷ್ಠಾನಕ್ಕೆ ಹೆಸರಾಗಿದೆ.ಗ್ರಾಮ ಪಂಚಾಯಿತಿ ಸದಸ್ಯರ ಒಗ್ಗಟ್ಟಿನಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಅವಿರೋಧವಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಕಳೆದ ಅವಧಿಯಲ್ಲಿ ಶಿವಕುಮಾರ ಸಜ್ಜನಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿ ಉತ್ತಮ, ಪಾರದರ್ಶಕ ಆಡಳಿತ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಇಂದಿನ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸದಸ್ಯರಿಗೆ ಹಣದ ಆಮೀಷ ಒಡ್ಡುವುದು, ಕುದುರೆ ವ್ಯಾಪಾರ, ಪಂಚಾಯಿತಿ ಸದಸ್ಯರನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗುವುದು ತೀರ ಸಾಮಾನ್ಯವಾದ ವಿದ್ಯಮಾನವಾಗಿ ಬಿಟ್ಟಿದೆ. ಆದರೆ ಠಾಣಾಕುಶನೂರ್ ಗ್ರಾಮ ಪಂಚಾಯಿತಿಯಲ್ಲಿ ಇದಕ್ಕೆಲ್ಲ ಆಸ್ಪದವೇ ಇಲ್ಲ. ಪ್ರಗತಿಪರ ಚಿಂತನೆಯುಳ್ಳ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗುತ್ತದೆ ಎಂದು ಮುಖಂಡ ಉಮೇಶ ಜೀರ್ಗೆ ತಿಳಿಸಿದ್ದಾರೆ.ತಾಲ್ಲೂಕಿನ ಇತರ ಗ್ರಾಮ ಪಂಚಾಯಿತಿಗಳಿಗೆ ಠಾಣಾಕುಶನೂರ್ ಗ್ರಾಮ ಪಂಚಾಯಿತಿಯು ಮಾದರಿಯಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry