ಗ್ರಾಮಸಭೆಗೆ ಬಾರದ ಅಧಿಕಾರಿಗಳು: ಆಕ್ರೋಶ

ಬುಧವಾರ, ಜೂಲೈ 17, 2019
23 °C

ಗ್ರಾಮಸಭೆಗೆ ಬಾರದ ಅಧಿಕಾರಿಗಳು: ಆಕ್ರೋಶ

Published:
Updated:

ಶನಿವಾರಸಂತೆ: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಸ್ಥಳೀಯ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಪಂಚಾಯಿತಿ ಅಧ್ಯಕ್ಷೆ ಜೈನಾಬಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.ಗ್ರಾಮಸ್ಥರಿಗೆ ಗ್ರಾಮಸಭೆಯ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಹಾಜರಾಗದೇ ಸಿಬ್ಬಂದಿ ಮಾತ್ರ ಹಾಜರಾಗಿದ್ದಾರೆ. ಆದ್ದರಿಂದ ಗ್ರಾಮಸಭೆಯನ್ನು ಮುಂದೂಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.ಜನಪ್ರತಿನಿಧಿಗಳು ಗ್ರಾಮಸ್ಥರ ಮನವೊಲಿಸಿದ ಬಳಿಕ ಸಭೆ ಆರಂಭವಾಯಿತು. ಸರ್ಕಾರದಿಂದ ಫಲಾನುಭವಿಗಳಿಗೆ ದೊರೆಯಬೇಕಾದ ಮನೆಗಳು ಅವರಿಗೆ ಸಿಗದೇ ಉಳ್ಳವರಿಗೆ ಸಿಗುತ್ತಿದೆ. ಕಾಜೂರು ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಊರುಡುವೆ ಜಾಗವನ್ನು ಖಾಸಗಿಯವರು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆ ಜಾಗವನ್ನು ತೆರವುಗೊಳಿಸಿ ಬಡವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಕೆ.ಟಿ. ಹರೀಶ್ ಆಗ್ರಹಿಸಿದರು.ದೊಡ್ಡಕೊಳತ್ತೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿದ್ದಾರೆ. ಬಿಸಿಯೂಟದ ಸಿಬ್ಬಂದಿಯೂ ಇದ್ದಾರೆ. ಕೇವಲ ಮೂವರು ಮಕ್ಕಳಿರುವ ಈ ಶಾಲೆ ಏಕೆ ಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ತಕ್ಷಣ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ ಕೋಮಲಾ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.ಹಾಲುಕೆನೆ ಗ್ರಾಮದ ರಸ್ತೆಯಲ್ಲಿ ಹೊಂಡಗಳಾಗಿದ್ದು ಪಂಚಾಯಿತಿ ಗಮನ ಹರಿಸುತ್ತಿಲ್ಲ. ರಸ್ತೆ ದುರಸ್ತಿ ಮಾಡಿಸಿ ಎಂದು ಗ್ರಾಮಸ್ಥ ರಂಗರಾಜ್ ಆಗ್ರಹಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಡಿ.ಪಿ. ಬೋಜಪ್ಪ, ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ನಡೆದಿವೆ. ಗ್ರಾಮಸ್ಥರು ಕಾರ್ಡ್ ಹೊಂದಿರದ ಕಾರಣ ಕೆಲಸ ಕುಂಠಿತಗೊಂಡಿದೆ ಎಂದರು.ಲಕ್ಕೆಹನಲು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆಯ ವ್ಯವಸ್ಥೆ ಚೆನ್ನಾಗಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂತು. ಕೃಷಿ ಇಲಾಖೆಯವರು ಬತ್ತದ ಬೀಜ ವಿತರಿಸಲು ರೈತರಿಂದ ಪಹಣಿ ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ. ಪಹಣಿ ಪಡೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜೆ.ಆರ್. ಫಾಲಾಕ್ಷ ಹಾಗೂ ಸವಿತಾ ಮಾತನಾಡಿದರು.   ಪಂಚಾಯಿತಿ ಉಪಾಧ್ಯಕ ಸುಬ್ರಹ್ಮಣ್ಯ, ಸದಸ್ಯರಾದ ಅಬ್ಬಾಸ್, ಪುರುಷೋತ್ತಮ್,  ಶುಭಾಂಗಿನಿ, ಹೂವಮ್ಮ, ಮುತ್ತಮ್ಮ, ಲಲಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಕಾರ್ಯದರ್ಶಿ ಹೂವಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶೀಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry