ಗ್ರಾಮಸಭೆ, ದಾಖಲೀಕರಣ: ಕಳಪೆ ಸಾಧನೆ

7
ಜಿಲ್ಲೆಯಲ್ಲಿ ತೆವಳುತ್ತಿರುವ ಪಂಚಾಯತ್ ರಾಜ್ ಆಡಳಿತ

ಗ್ರಾಮಸಭೆ, ದಾಖಲೀಕರಣ: ಕಳಪೆ ಸಾಧನೆ

Published:
Updated:

ಕೋಲಾರ: ಜಿಲ್ಲೆಯ ಗ್ರಾಮ ಪಂಚಾ­ಯತಿ­ಗಳಲ್ಲಿ ಗ್ರಾಮಸಭೆಗಳನ್ನು ನಡೆಸುವುದು, ಸಭೆಗಳ ದಾಖಲೀಕರಣ ಮಾಡುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಮುಖ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯತಿಗಳು ಮತ್ತು ಉಸ್ತುವಾರಿ ವಹಿಸಬೇಕಾಗಿ­ರುವ ತಾಲ್ಲೂಕು ಪಂಚಾಯತಿಗಳಲ್ಲಿ ಉದಾಸೀನ ಮನೋಭಾವ ಹೆಚ್ಚಾಗಿದೆ. ಗ್ರಾಮಸಭೆಗಳನ್ನು ನಡೆಸಿಯೇ ಪ್ರಮುಖ ತೀರ್ಮಾನ ಕೈಗೊಳ್ಳಬೇಕಾದ ಜವಾ­ಬ್ದಾರಿ ನಿರ್ವಹಣೆಯೂ ಅಸಮ­ರ್ಪಕವಾಗಿದೆ. ಆಸ್ತಿ ತೆರಿಗೆ ಮತ್ತು ನೀರಿನ ದರ ಪರಿಷ್ಕರಣೆಯಲ್ಲಿ ಮೂರು ತಾಲ್ಲೂಕು ಶೂನ್ಯ ಸಾಧನೆ ಮಾಡಿವೆ.ಇಂಥ ‘ಶೂನ್ಯ ಮಾಸ’ದಲ್ಲಿ ಗ್ರಾಮೀ­ಣಾ­­ಭಿವೃದ್ಧಿ ಸಚಿವ ಎಚ್.ಕೆ.ಪಾಟೀ­ಲ್ ಮಂಗಳವಾರ ಭೇಟಿ ನೀಡುತ್ತಿದ್ದಾರೆ. ನಿಗದಿಯಾದಂತೆ ಜಿಲ್ಲೆಯಲ್ಲಿ ಇದುವರೆಗೆ 423 ಗ್ರಾಮ ಸಭೆ ನಡೆಸ­ಬೇಕಿತ್ತು. ಆದರೆ 315 ಸಭೆಗಳ­ನ್ನಷ್ಟೇ ನಡೆಸಲಾಗಿದೆ. ಅವುಗಳ ದಾಖ­ಲೀ­ಕರಣದ ವಿಷಯದಲ್ಲಿ ಇನ್ನಷ್ಟು ಹಿನ್ನಡೆ ಕಂಡುಬಂದಿದೆ. ಸಭೆ ನಡೆ­ದಿದ್ದರೂ ದಾಖಲೀಕರಣ ಸಂಪೂರ್ಣ­ವಾಗಿ ನಡೆದಿಲ್ಲ. ಜೊತೆಗೆ ನಡಾವಳಿ­ಗಳನ್ನು ಸ್ಕ್ಯಾನ್ ಮಾಡಿ ಪಂಚತಂತ್ರ ತಂತ್ರಾಂಶ­ದಲ್ಲಿ ಅಳವಡಿಸುವ ಕೆಲಸ­ದಲ್ಲೂ ಜಿಲ್ಲೆ ಹಿಂದುಳಿದಿದೆ.ಕೋಲಾರ ತಾಲ್ಲೂಕಿನಲ್ಲಿ 144 ಸಭೆ­ಗಳನ್ನು ನಡೆಸಬೇಕಾಗಿದ್ದು, ಡಿಸೆಂ­ಬರ್ ಕೊನೆವರೆಗೆ 100 ಸಭೆ­ಗಳನ್ನಷ್ಟೇ ನಡೆಸಲಾಗಿದೆ. ಅವುಗಳ ಪೈಕಿ ಕೇವಲ ಐದು ಸಭೆಗಳ ವಿಡಿಯೋ­ಗ್ರಾಫ್ ಮತ್ತು ಸಿಡಿಗಳು ಲಭ್ಯವಿವೆ.  ಈ ಐದು ಸಭೆಗಳ ಮಾಹಿತಿಯನ್ನಷ್ಟೇ ಪಂಚ­ತಂತ್ರದಲ್ಲಿ ಅಳವಡಿಸಲಾಗಿದೆ.ಮಾಲೂರು ತಾಲ್ಲೂಕಿನಲ್ಲಿ 112 ಸಭೆಗಳ ಪೈಕಿ 99 ನಡೆಸಿ, 90 ಸಭೆಗಳ ದಾಖಲೀಕರಣ ಮಾಡಲಾಗಿದೆ. ಕೇವಲ 40 ಸಭೆಗಳ ಮಾಹಿತಿಯನ್ನಷ್ಟೇ ಪಂಚ­ತಂತ್ರದಲ್ಲಿ ಅಳವಡಿಸಲಾಗಿದೆ.ಬಂಗಾರಪೇಟೆ ತಾಲ್ಲೂಕಿನಲ್ಲಿ ಕೊಂಚ ಸಮಾಧಾನಕರ ಸನ್ನಿ­ವೇಶ­ವಿದ್ದು, ನಿಗದಿಯಾದ 37 ಸಭೆ­ಗಳನ್ನೂ ನಡೆಸಲಾಗಿದೆ. ಅಷ್ಟೂ ಸಭೆಗಳ ದಾಖ­ಲೀಕರಣವೂ ನಡೆದಿದೆ. ಆದರೆ ಕೇವಲ 16 ಸಭೆಗಳ ಮಾಹಿತಿಯನ್ನಷ್ಟೇ ಪಂಚ­ತಂತ್ರದಲ್ಲಿ ಅಳವಡಿಸಲಾಗಿದೆ. ಮುಳ­ಬಾಗಲು ತಾಲ್ಲೂಕಿನಲ್ಲಿ 30ರ ಪೈಕಿ 29 ಸಭೆ ನಡೆಸಿದ್ದು, 23ರ ದಾಖ­ಲೀ­ಕರಣ, 28 ಸಭೆಗಳ ಮಾಹಿತಿಯನ್ನು ಪಂಚತಂತ್ರದಲ್ಲಿ ಅಳವಡಿಸಲಾಗಿದೆ.ಶ್ರೀನಿವಾಸಪುರ ತಾಲ್ಲೂಕಿನಲ್ಲಿ 100 ಸಭೆಗಳ ಪೈಕಿ ಕೇವಲ 50 ಸಭೆಗಳನ್ನಷ್ಟೇ ನಡೆಸಲಾಗಿದೆ. ಅಷ್ಟೂ ಸಭೆಗಳ ದಾಖ­ಲೀಕರಣ ನಡೆದಿದ್ದರೂ ಕೇವಲ 2 ಸಭೆಗಳ ಮಾಹಿತಿಯನ್ನಷ್ಟೇ ಪಂಚತಂತ್ರ­ದಲ್ಲಿ ಅಳವಡಿಸಲಾಗಿದೆ. ಒಟ್ಟಾರೆ 423 ಸಭೆಗಳ ಪೈಕಿ ಕೇವಲ 205 ಸಭೆಗಳ ದಾಖಲೀಕರಣ ನಡೆ­ದಿದೆ. 333 ಆಯ್ದ ಸಭೆಗಳ ಪೈಕಿ ಕೇವಲ 91 ಸಭೆಗಳ ಮಾಹಿತಿಯನ್ನಷ್ಟೇ ಪಂಚತಂತ್ರದಲ್ಲಿ ಅಳವಡಿಸಲಾಗಿದೆ.ಬರಗಾಲವನ್ನೇ ಮರೆತ ಅಧಿಕಾರಿಗಳು...

ಗ್ರಾಮೀಣಾಭಿವೃದ್ಧಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಂಚಾಯತ್ ರಾಜ್ ಆಡಳಿತದ ಸ್ಥಿತಿ–ಗತಿ ಕುರಿತು ಮಂಡಿಸಲು ಪವರ್ ಪಾಯಿಂಟ್ ಪ್ರದರ್ಶನದಲ್ಲಿ ಜಿಲ್ಲೆಯ ಬರಗಾಲ ಪೀಡಿತ ಮೂರು ತಾಲ್ಲೂಕು­ಗಳ ಮಾಹಿತಿಯನ್ನೇ ಅಧಿಕಾರಿಗಳು ಕೈ ಬಿಟ್ಟಿದ್ದ ಸಂಗತಿಯೂ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಬೆಳಕಿಗೆ ಬಂತು.

ಆರಂಭದಲ್ಲೇ ಬರಗಾಲ ಪೀಡಿತ ತಾಲ್ಲೂಕುಗಳ ಮಾಹಿತಿಯನ್ನು ಸೇರಿಸಿರ­ಬೇಕು ಎಂದು ಈ ಮುಂಚೆ ಸ್ಪಷ್ಟ ಸೂಚನೆ ನೀಡಿದ್ದರೂ ಅದನ್ನು ಸೇರಿಸ­ದಿರುವುದು ದೊಡ್ಡ ಲೋಪ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆ ಎದು­ರಿಸುತ್ತಿರುವ ನೀರಿನ ಸಮಸ್ಯೆಯನ್ನು ಸಚಿವರಿಗೆ ಮನದಟ್ಟು ಮಾಡಿಸಲು ಬರಗಾಲದ ಉಲ್ಲೇಖವೇ ಇಲ್ಲದಿದ್ದರೆ ಹೇಗೆ ಎಂದು ಅವರು ಪ್ರಶ್ನಿಸಿದರು.ಆಸ್ತಿ ತೆರಿಗೆ, ನೀರು ದರ ಪರಿಷ್ಕರಣೆ: ಮೂರು ತಾಲ್ಲೂಕು ಶೂನ್ಯ ಸಾಧನೆ

ಜಿಲ್ಲೆಯ 156 ಗ್ರಾಮ ಪಂಚಾಯತಿಗಳ ಪೈಕಿ ಬಹುತೇಕ ಪಂಚಾಯತಿಗಳು ಆಸ್ತಿ ತೆರಿಗೆ ಮತ್ತು ನೀರಿನ ದರವನ್ನು ಪರಿಷ್ಕರಣೆ ಮಾಡಿಲ್ಲ. 2013–14ನೇ ಸಾಲಿನಲ್ಲಿ ಕೇವಲ 29 ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಈ ಪರಿಷ್ಕರಣೆ ಕಾರ್ಯ ನಡೆದಿದೆ. ಉಳಿದ ಕೆಲವು ಪಂಚಾಯತಿಗಳಲ್ಲಿ ಪ್ರಯತ್ನ ಶುರುವಾಗಿದ್ದರೂ ಗ್ರಾಮಸ್ಥರ ವಿರೋಧದ ನಡುವೆ ಕುಂಟುತ್ತಿದೆ. ಕೆಲವೆಡೆ ಈ ಪ್ರಯತ್ನ ಶುರುವಾಗಿಲ್ಲ.

ಕೋಲಾರ, ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಒಂದೇ ಒಂದು ಗ್ರಾಮ ಪಂಚಾಯತಿಯಲ್ಲೂ ಈ ಕೆಲಸ ನಡೆದಿಲ್ಲ.ಈ ಮೂರು ತಾಲ್ಲೂಕುಗಳದು ಶೂನ್ಯ ಸಾಧನೆ. ಮಾಲೂರು ತಾಲ್ಲೂಕಿನ ಎಲ್ಲ 28 ಗ್ರಾಮ ಪಂಚಾಯತಿಗಳಲ್ಲಿ ಮತ್ತು ಬಂಗಾರಪೇಟೆಯ ಒಂದು ಪಂಚಾಯತಿಯಲ್ಲಿ ಮಾತ್ರ ಆಸ್ತಿ ತೆರಿಗೆ, ನೀರಿನ ದರ ಪರಿಷ್ಕರಣೆ ಮಾಡಲಾಗಿದೆ. ಮಾಲೂರು ತಾಲ್ಲೂಕಿನ ಎಲ್ಲ 28 ಪಂಚಾ­ಯತಿಗಳಲ್ಲೂ ಪರಿಷ್ಕೃತ ದರ ಶೇ 60ರಷ್ಟು ಸಂಗ್ರಹವಾಗಿದೆ. ಬಂಗಾರಪೇಟೆಯಲ್ಲಿ ಆಗಿಲ್ಲ.ನಡೆಯದ ಜಮಾಬಂದಿ:

2012–13ನೇ ಸಾಲಿನ ಜಮಾಬಂದಿ ಕಾರ್ಯವೂ ಪೂರ್ಣವಾಗಿ ನಡೆದಿಲ್ಲ. 156 ಗ್ರಾಮ ಪಂಚಾಯತಿಗಳ ಪೈಕಿ 106 ರಲ್ಲಷ್ಟೇ ನಡೆದಿದೆ. 50 ಪಂಚಾಯತಿಗಳಲ್ಲಿ ಇನ್ನೂ ನಡೆದಿಲ್ಲ. ಜಮಾಬಂದಿ ನಿಯಮ 2004ರ ಪ್ರಕಾರ ಪ್ರತಿ ವರ್ಷ ಆ.16ರಿಂದ ಸೆ.15ರವರೆಗೆ ಕಡ್ಡಾಯವಾಗಿ ಜಮಾಬಂದಿ ನಡೆಸಬೇಕು. ಆದರೆ ಈ ನಿಯಮ ಪಾಲನೆ ಸರಿಯಾದ ರೀತಿಯಲ್ಲಿ ಆಗಿಲ್ಲ.3100 ಜಾನುವಾರು ಸಾವು

ಕಳೆದ ಜುಲೈನಿಂದ ಜಿಲ್ಲೆಯಲ್ಲಿ 3100 ಜಾನುವಾರುಗಳು (ಮಿಶ್ರತಳಿ ಹಸು, ದನ, ಎಮ್ಮೆ ಮತ್ತು ಕರು) ಕಾಲುಬಾಯಿ ಜ್ವರದಿಂದ ಸಾವಿಗೀಡಾಗಿವೆ. ರೂ. 1.44 ಕೋಟಿ ಪರಿಹಾರಧನ ಬಿಡುಗಡೆಯಾಗಿದ್ದು, 698 ಜಾನುವಾರುಗಳ ಮಾಲೀಕರಿಗೆ ರೂ. 1.35 ಕೋಟಿ ವಿತರಿಸಲಾಗಿದೆ. ರೂ. 45.47 ಲಕ್ಷ ಮೌಲ್ಯದ ಔಷಧಿ ಮತ್ತು ರಾಸಾಯನಿಕಗಳನ್ನು ಖರೀದಿಸಿ ರೋಗಪೀಡಿತ ಜಾನುವಾರುಗಳಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿ ಕೋಲಾರ ತಾಲ್ಲೂಕಿನಲ್ಲೇ ಹೆಚ್ಚು ಜಾನುವಾರುಗಳು ಸಾವಿಗೀಡಾಗುತ್ತಿವೆ. ಈ ತಾಲ್ಲೂಕಿನಲ್ಲಿ ಜ್ವರ ನಿಯಂತ್ರಣಕ್ಕೆ ಬಾರದ ಕಾರಣಗಳು ಕೂಡ ಅಧಿಕಾರಿಗಳಿಗೆ ಮತ್ತು ವಿಜ್ಞಾನಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ. ಸಚಿವ ಎಚ್.ಕೆ.ಪಾಟೀಲರ ಸಭೆಯಲ್ಲಿ ಈ ಅಂಶವೂ ಗಮನ ಸೆಳೆಯುವ ಸಾಧ್ಯತೆ ಇದೆ.ಕಳಪೆ ಸಾಧನೆ

ಜಿಲ್ಲೆಯ ಪಂಚಾಯತಿಗಳಲ್ಲಿ ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ. ಕಳಪೆ ಸಾಧನೆಯಾಗಿರುವುದನ್ನು ಮುಚ್ಚು ಮರೆ ಇಲ್ಲದೆ ಸಚಿವರ ಮುಂದೆ ಮಂಡಿಸಲೇಬೇಕಾಗಿದೆ. ಪವರ್ ಪಾಯಿಂಟ್ ಪ್ರದರ್ಶನದಲ್ಲಿ ಜಿಲ್ಲೆ ಕಾರ್ಯವೈಖರಿಯ ಎಲ್ಲ ಮಾಹಿತಿಗಳನ್ನೂ ಸೇರಿಸಲಾಗಿದೆ. ಇನ್ನು ಮುಂದೆ ಸಮರ್ಪಕವಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ಸಚಿವರಿಗೆ ನೀಡುವುದನ್ನು ಬಿಟ್ಟರೆ ಬೇರೆ ನಮಗೆ ದಾರಿ ಇಲ್ಲ.

–ಎಸ್.ಎಂ.ಝುಲ್ಫಿಕರ್ ಉಲ್ಲಾ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ

ಎಚ್.ಕೆ.ಪಾಟೀಲ ಭೇಟಿ ಇಂದು

ಜಿಲ್ಲೆಯ ಮುಳಬಾಗಲು, ಶ್ರೀನಿವಾಸಪುರ ಮತ್ತು ಬಂಗಾರಪೇಟೆಯನ್ನು ಬರಪೀಡಿತ ತಾಲ್ಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿ ಒಂದೂವರೆ ತಿಂಗಳ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮಂಗಳವಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.  ಬೆಳಿಗ್ಗೆ 10ಕ್ಕೆ  ಜಿಲ್ಲಾ ಪಂಚಾಯತಿಗೆ ಆಗಮಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಬೆಳಿಗ್ಗೆ 11.30ಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಇಲಾಖೆ ಪ್ರಗತಿ ಪರಿಶೀಲನೆ ಮಾಡುವರು. ಮಧ್ಯಾಹ್ನ -2 ಗಂಟೆಗೆ ಕ್ಷೇತ್ರ ಭೇಟಿ ಮಾಡುವರು ಮುಳಬಾಗಲು ತಾಲ್ಲೂಕಿನ ಹೆಬ್ಬಣಿ ಅಥವಾ ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಗೆ ಸಚಿವರನ್ನು ಕ್ಷೇತ್ರ ಭೇಟಿಗೆ ಕರೆದೊಯ್ಯಲು ಕಾರ್ಯಕ್ರಮ ರೂಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry