ಗ್ರಾಮಸ್ಥರಿಂದಲೆ ರಸ್ತೆ ನಿರ್ಮಾಣ

7

ಗ್ರಾಮಸ್ಥರಿಂದಲೆ ರಸ್ತೆ ನಿರ್ಮಾಣ

Published:
Updated:
ಗ್ರಾಮಸ್ಥರಿಂದಲೆ ರಸ್ತೆ ನಿರ್ಮಾಣ

ಬಂಗಾರಪೇಟೆ: ಇಡೀ ಊರಿಗೆ ಊರೇ ಸಂಭ್ರಮದಲ್ಲಿದೆ. ಎಲ್ಲರ ಬಾಯಲ್ಲೂ ಅದೇ ಚರ್ಚೆ. ಇಷ್ಟು ವರ್ಷವಾದ ಮೇಲಾದರೂ ಬಯಸಿದ್ದು ಸಿಕ್ಕಿತಲ್ಲಾ ಎಂಬ ಖುಷಿ ಗ್ರಾಮಸ್ಥರಲ್ಲಿ ಎದ್ದು ಕಾಣುತ್ತಿದೆ. ಇವಕ್ಕೆಲ್ಲಾ  ಕಾರಣವಿಷ್ಟೆ. ತಾಲ್ಲೂಕಿನ ಐಮರಸಪುರಕ್ಕೆ ಸಂಪರ್ಕ ರಸ್ತೆ ನಿರ್ಮಾಣವಾಗುತ್ತಿದೆ.ರಸ್ತೆ ನಿರ್ಮಾಣ ಸಹಜವಾಗಿ ನಡೆಯುವ ಅಭಿವೃದ್ಧಿ ಕಾಮಗಾರಿ ಎಂದೆನಿಸಿದರೂ ಐಮರಸಪುರದ ಜನತೆಗೆ ರಸ್ತೆ ನಿರ್ಮಾಣ ಒಂದು ಐತಿಹಾಸಿಕ ಸಾಧನೆ. ದೊಡ್ಡಚಿನ್ನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಐಮರಸಪುರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸುಮಾರು 800 ವರ್ಷಗಳ ಹಿಂದಿನ ಶಿವನ ದೇವಾಲಯವಿದೆ. ವಿವಿಧ ವೃತ್ತಿಗಳನ್ನು ಅವಲಂಬಿಸಿರುವ ಜನರಿದ್ದಾರೆ. ಊರಿನಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೂ ಗ್ರಾಮಕ್ಕೆ ಪ್ರವೇಶಿಸಲು ರಸ್ತೆಯೇ ಇರಲಿಲ್ಲ.ಎಷ್ಟೋ ವರ್ಷಗಳಿಂದ ರಸ್ತೆಯ ಬೇಡಿಕೆ ಈಡೇರಿರಲಿಲ್ಲ. ದೊಡ್ಡಚಿನ್ನಹಳ್ಳಿಯಿಂದ ಕೇವಲ ಒಂದು ಕಿ.ಮೀ ದೂರದ ಐಮರಸಪುರಕ್ಕೆ ರಸ್ತೆ ಮಾರ್ಗ ಬಳಸಬೇಕಾದರೆ ಸುಮಾರು ಐದು ಕಿ.ಮೀ ಸುತ್ತಿ ಬರಬೇಕು. ದೊಡ್ಡವಲಗಮಾದಿ, ಸಿಂಗರಹಳ್ಳಿ ಮಾರ್ಗವಾಗಿ ಬರಬೇಕಾಗಿತ್ತು.ಚುನಾವಣೆ ವೇಳೆ ಗ್ರಾಮಕ್ಕೆ ಬರುವ ಸಹಜ ಅತಿಥಿಗಳಾದ ಅಭ್ಯರ್ಥಿಗಳಿಗೆ ಗ್ರಾಮಸ್ಥರು ಒಡ್ಡುವ ಮೊದಲ ಬೇಡಿಕೆಯೇ ರಸ್ತೆಯಾಗಿತ್ತು. ಗೆದ್ದ ನಂತರ ನಿಮ್ಮದೇ ಮೊದಲ ಕೆಲಸ ಎಂದು ಜನಪ್ರತಿನಿಧಿಗಳು ಸಹ ಆಶ್ವಾಸನೆ ನೀಡುತ್ತಿದ್ದರು. ಕ್ರಮೇಣ ಆಶ್ವಾಸನೆಯಾಗಿಯೇ ಮುಂದುವರಿಯುತ್ತಿತ್ತು.ಸುಮಾರು 350 ಜನಸಂಖ್ಯೆಯಿರುವ ಗ್ರಾಮಕ್ಕೆ ದೊಡ್ಡಚಿನ್ನಹಳ್ಳಿಯಿಂದ ಒಂದು ಕಾಲು ದಾರಿ ಮಾತ್ರ ಇತ್ತು. ಅದೂ ಕೇಂದ್ರ ಸಚಿವ ಎಂ.ವಿ.ಕೃಷ್ಣಪ್ಪ ಅವರ ಕಾಲದಲ್ಲಿ ಆಗಿದ್ದು ಎಂದು ಗ್ರಾಮದ ಹಿರಿಯರು ಜ್ಞಾಪಕ ಮಾಡಿಕೊಳ್ಳುತ್ತಾರೆ.ಜಿ.ಪಂ. ಕಳೆದ ಚುನಾವಣೆ ಸಮಯದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಹಾಲಿ ಜಿ.ಪಂ. ಸದಸ್ಯೆ ನಾರಾಯಣಮ್ಮ ಅವರಿಗೂ ಜನ ರಸ್ತೆ ನಿರ್ಮಾಣದ ಷರತ್ತನ್ನು ಒಡ್ಡಿಯೇ ಮತ ಚಲಾಯಿಸಿದ್ದರು.ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸದಸ್ಯೆ ಗ್ರಾಮಸ್ಥರ ಮನವೊಲಿಸಿ ಜಮೀನು ಬಿಡಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಅದಕ್ಕೆ ಪೂರಕವಾಗಿ ಗ್ರಾಮದ ಎಲ್ಲಾ ಪಕ್ಷಗಳ ಅನುಯಾಯಿಗಳು ಪಕ್ಷಬೇಧ ಮರೆತು ರಸ್ತೆ ನಿರ್ಮಾಣಕ್ಕೆ ಬೆಂಬಲ ಸೂಚಿಸಿದರು. ಗ್ರಾಮದ ಶ್ರೀರಾಮರೆಡ್ಡಿ, ಕೃಷ್ಣಾರೆಡ್ಡಿ, ನಾರಾಯಣರೆಡ್ಡಿ, ರಾಮರೆಡ್ಡಿ, ಚಂದ್ರಪ್ಪ ದೀಕ್ಷಿತ್ ಮೊದಲಾದವರು ತಮ್ಮ ಜಮೀನನ್ನು ರಸ್ತೆಗೆ ಬಿಟ್ಟು ಔದಾರ್ಯ ಮೆರೆದರು.ಕಳೆದ ಒಂದು ವಾರದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ 25 ಅಡಿಗಳ ರಸ್ತೆ ಭರದಿಂದ ನಿರ್ಮಾಣವಾಗುತ್ತಿದೆ. ಇಡೀ ಗ್ರಾಮದ ಜನತೆ  ಜೆಸಿಬಿ ಯಂತ್ರಗಳನ್ನೇ ನೋಡುತ್ತಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry