ಶನಿವಾರ, ಮೇ 21, 2022
28 °C
ನೆನಗುದಿಗೆ ಬಿದ್ದ ತ್ಯಾಜ್ಯ ವಿಲೇವಾರಿ ಯೋಜನೆ

ಗ್ರಾಮಸ್ಥರ ಸಮಸ್ಯೆಗೆ ಕೊನೆ ಎಂದು?

ಪ್ರಜಾವಾಣಿ ವಾರ್ತೆ/ ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗ್ರಾಮಸ್ಥರ ಸಮಸ್ಯೆಗೆ ಕೊನೆ ಎಂದು?

ಗುಲ್ಬರ್ಗ: ತ್ಯಾಜ್ಯ ವಿಲೇವಾರಿಗೆ ಮಹಾನಗರ ಪಾಲಿಕೆ ಆರಂಭದಲ್ಲಿ ರೂಪಿಸಿದ್ದ ಯೋಜನೆ ಜಾರಿಯಾಗಿದ್ದರೆ ಪುಣೆ ಮೂಲದ `ಹಂಜಿರ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್' ಕಂಪೆನಿಯು ಉದನೂರು ಗ್ರಾಮದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕಿತ್ತು. ಆದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಈ ಯೋಜನೆ ನನೆಗುದಿಗೆ ಬಿದ್ದಿದೆ!`ನಿರ್ಮಿಸು ನಿರ್ವಹಿಸು ವರ್ಗಾಯಿಸು' (ಬಿಲ್ಡ್, ಆಪರೇಟ್, ಟ್ರಾನ್ಸ್‌ಫರ್- ಬಿಓಟಿ) ಆಧಾರದ ಮೇಲೆ ರೂ 16 ಕೋಟಿ ಬಂಡವಾಳ ಹೂಡಿ ಕಾರ್ಖಾನೆ ಸ್ಥಾಪಿಸುವ ಬಗ್ಗೆ ಕಂಪೆನಿ ಹಾಗೂ ಪಾಲಿಕೆ ನಡುವೆ 2008ರಲ್ಲೆ ಒಪ್ಪಂದ ಏರ್ಪಟ್ಟಿದೆ. ಸರ್ಕಾರದ ಅನುಮೋದನೆಗೆಂದು ರವಾನಿಸಿದ್ದ ಕಡತ ಧೂಳು ತಿನ್ನುತ್ತಿದೆ. ಜಿಲ್ಲೆಯ ಶಾಸಕರಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ಯೋಜನೆಗೆ ಒಪ್ಪಿಗೆ ಪಡೆಯುವ ಬಗ್ಗೆ ಗಂಭೀರವಾಗ ಯತ್ನಿಸಿಲ್ಲ.ರೂ 2 ಕೋಟಿವರೆಗಿನ ಯೋಜನೆಯನ್ನು ಮಹಾನಗರ ಪಾಲಿಕೆಯೇ ಮಂಜೂರು ಮಾಡುತ್ತದೆ. ಆದರೆ ರೂ 16 ಕೋಟಿ ಯೋಜನೆ ಆಗಿರುವುದರಿಂದ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಬೇಕಾಗುತ್ತದೆ ಎನ್ನುವುದು ಪಾಲಿಕೆ ಅಧಿಕಾರಿಗಳ ವಿವರಣೆ.

ತಾಂತ್ರಿಕವಾಗಿ ವಿಷಯ ದೊಡ್ಡದಲ್ಲವಾದರೂ, ಗುಲ್ಬರ್ಗ ತ್ಯಾಜ್ಯ ಉದನೂರು ಗ್ರಾಮದಲ್ಲಿ ಸೃಷ್ಟಿಸಿರುವ ಸಮಸ್ಯೆಗಳು ದೊಡ್ಡದಾಗುತ್ತಾ ಸಾಗಿವೆ.ಹಂಜಿರ್ ಬಯೋಟೆಕ್ ಕಂಪೆನಿಯು ತನ್ನದೇ ಬಂಡವಾಳ ಹಾಕಿ, ತ್ಯಾಜ್ಯ ಸಂಸ್ಕರಣೆ ಸ್ಥಾಪಿಸಬೇಕು.

25 ವರ್ಷಗಳ ನಂತರ ಸ್ಥಿರ ಆಸ್ತಿಯನ್ನೆಲ್ಲ ಪಾಲಿಕೆಗೆ ಬಿಟ್ಟುಕೊಡಬೇಕು ಎನ್ನುವ ಅಂಶ ಒಪ್ಪಂದದಲ್ಲಿದೆ.ಕಂಪೆನಿಗೆ ಏನು ಲಾಭ: ಉದನೂರಿನಲ್ಲಿರುವ ತ್ಯಾಜ್ಯ ನಿರ್ವಹಣೆ ಜಾಗಕ್ಕೆ ತ್ಯಾಜ್ಯವನ್ನು ತಲುಪಿಸುವುದು ಪಾಲಿಕೆ ಕೆಲಸ. ಕಸದಿಂದ ವಿವಿಧ ಉತ್ಪನ್ನಗಳನ್ನು ಕಂಪೆನಿ ತಯಾರಿಸಿಕೊಳ್ಳುತ್ತದೆ. `ಡೆವಲಪ್‌ಮೆಂಟ್ ಆಫ್ ಇಂಟಿಗ್ರೆಟೆಡ್ ಟ್ರಿಟ್‌ಮೆಂಟ್ ಆ್ಯಂಡ್ ಡಿಸ್ಪೊಜಬಲ್ ಫೆಸಿಲಿಟಿ ಆಫ್ ಸೊಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಇನ್ ಗುಲ್ಬರ್ಗ' ಕಂಪೆನಿ ಕೈಗೊಳ್ಳಲಿರುವ ಕಾರ್ಯದ ವಿವರ ಇದು.ನಗರದಿಂದ ಬರುವ ತ್ಯಾಜ್ಯವನ್ನು ಬೇರ್ಪಡಿಸುವ ಕೆಲಸವನ್ನು ಯಂತ್ರ ಮಾಡುತ್ತದೆ. ಇದರಲ್ಲಿ ಮರುಬಳಕೆ ಹಾಗೂ ಮರುಬಳಕೆಯಾಗದ ವಸ್ತುಗಳೆಂದು ಪ್ರತ್ಯೇಕಗೊಳ್ಳುತ್ತವೆ. ಪ್ಲಾಸ್ಟಿಕ್, ಗಾಜು, ಲೋಹ ಒಂದು ಕಡೆಯಾದರೆ ಕಾಗದ, ಬಟ್ಟೆ, ಕೊಳೆತ ವಸ್ತುಗಳೆಲ್ಲ ಇನ್ನೊಂದು ಕಡೆಗೆ ಸಾಗುತ್ತವೆ. ಜೈವಿಕ ವಸ್ತುಗಳನ್ನೆಲ್ಲ ಬಯೋಗ್ಯಾಸ್ ಉತ್ಪಾದನೆಗೆ ಬಳಸಿಕೊಂಡರೆ, ಬಟ್ಟೆ ಹಾಗೂ ಕಾಗದಗಳನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಬಾಯ್ಲರ್‌ಗಾಗಿ ಇಟ್ಟಿಗೆಗೆಗಳನ್ನು ನಿರ್ಮಿಸಲಾಗುತ್ತದೆ.ಪ್ಲಾಸ್ಟಿಕ್, ಗಾಜು ಹಾಗೂ ಲೋಹಗಳನ್ನು ಚಿಕ್ಕಚಿಕ್ಕದಾಗಿ ತುಂಡರಿಸಿ ಗೋಲಿಗಳನ್ನು ತಯಾರಿಸಿ ಮರುಬಳಕೆಗಾಗಿ ಸಂಬಂಧಿಸಿದ ಕಂಪೆನಿಗಳಿಗೆ ರವಾನಿಸಲಾಗುತ್ತದೆ. ಈ ವಸ್ತುಗಳಿಂದ ಸೂಸಿ ಬರುವ ಮಣ್ಣು, ಮರಳನ್ನು ಪ್ರತ್ಯೇಕಗೊಳಿಸಿ ಮಾರಾಟ ಮಾಡಲಾಗುತ್ತದೆ. ಶೇ 80ರಷ್ಟು ತಾಜ್ಯ ಮರು ಬಳಕೆಗೆ ಹೋಗುತ್ತದೆ. ಶೇ 20ರಷ್ಟು ಮಾತ್ರ ಮಲಿನವಾಗಿ ಉಳಿದುಕೊಳ್ಳುತ್ತದೆ.ಒಂದು ಟನ್ ಕಸವನ್ನು ಉದನೂರು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಲುಪಿಸಲು ಸದ್ಯ ರೂ 1,004 ಹಣವನ್ನು ಪಾಲಿಕೆ ಖರ್ಚು ಮಾಡುತ್ತಿದೆ. ತ್ಯಾಜ್ಯ ನಿರ್ವಹಣೆ ಕಂಪೆನಿ ಸ್ಥಾಪನೆಯಾದರೆ, ಪ್ರತಿ ಟನ್ ತ್ಯಾಜ್ಯ ಸಾಗಿಸಲು ಕಡಿಮೆ ಹಣವನ್ನು ಭರಿಸಬೇಕಾಗುತ್ತದೆ. `ಸಾರ್ವಜನಿಕ-ಖಾಸಗಿ ಸಹಭಾಗಿತ್ವ' ಈ ಯೋಜನೆಯು ಮಾದರಿಯಾಗಿದ್ದು, ಅನುಷ್ಠಾನವಾದರೆ ಅನುಕೂಲವಾಗುತ್ತದೆ.ಉದನೂರು ಗ್ರಾಮಕ್ಕೆ ಈಚೆಗೆ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ಕೊಟ್ಟು ಗ್ರಾಮಸ್ಥರ ಅಳಲು ಆಲಿಸಿದ್ದಾರೆ. ಈ ರೀತಿಯ ಯೋಜನೆ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿದೆ ಎಂದು ಪಾಲಿಕೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಿದ್ದಾರೆ.`ಗುಲ್ಬರ್ಗ ಜಿಲ್ಲೆಯಿಂದ ಏಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಉದನೂರು ಗ್ರಾಮದ ಸಮಸ್ಯೆ ಪರಿಹರಿಸುವುದು ನಮ್ಮೆಲ್ಲರ ಜವಾಬ್ದಾರಿ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹಾಗೂ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರೊಂದಿಗೆ ಚರ್ಚಿಸಿ ವೈಜ್ಞಾನಿಕ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗುವುದು' ಎಂದು ಪ್ರಿಯಾಂಕ್ ಖರ್ಗೆ ಉದನೂರು ಗ್ರಾಮದಲ್ಲಿನ ಕಸ ವಿಲೇವಾರಿ ತಾಣದಲ್ಲೆ ನಿಂತು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.`ಪ್ರಿಯಾಂಕ್ ಖರ್ಗೆ ಅವರ ಭರವಸೆಯನ್ನು ಪೂರ್ಣವಾಗಿ ನಂಬಿದ್ದೇವೆ. ಇದರಲ್ಲಿ ಪಕ್ಷಭೇದವಿಲ್ಲ. ಗ್ರಾಮದ ಸಮಸ್ಯೆ ಪರಿಹಾರವಾದರೆ ಸಾಕು' ಎಂದು ಉದನೂರು ಗ್ರಾಮಸ್ಥರ ಗುಂಪೊಂದು `ಪ್ರಜಾವಾಣಿ'ಗೆ ತಿಳಿಸಿತು.ವೈಜ್ಞಾನಿಕ ವಿಧಾನದ ಅರಿವು

ಪಾಲಿಕೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಸಂಸ್ಕರಿಸಲು ಖಾಸಗಿ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದವು ಸರ್ಕಾರದ ಮುಂದಿದೆ. ಈ ಸಲದ ಸಚಿವ ಸಂಪುಟದಲ್ಲಿ ಅದರ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ.

ವಿಲೇವಾರಿ ಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಉದನೂರಿನಲ್ಲಿ ಭಾರಿ ಪ್ರಮಾಣದ ಸಮಸ್ಯೆಗಳೇನು ಉಂಟಾಗಿಲ್ಲ. ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.

-ಎಸ್.ಬಿ. ಕಟ್ಟಿಮನಿ, ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.