ಗ್ರಾಮಾಂತರ ಜಿಲ್ಲೆ: ಮೂಲ ಸೌಕರ್ಯ ಅಭಿವೃದ್ಧಿಗೆ ಅಧಿಕ ಹಣ

ಬುಧವಾರ, ಜೂಲೈ 17, 2019
25 °C

ಗ್ರಾಮಾಂತರ ಜಿಲ್ಲೆ: ಮೂಲ ಸೌಕರ್ಯ ಅಭಿವೃದ್ಧಿಗೆ ಅಧಿಕ ಹಣ

Published:
Updated:

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸರ್ವ ಶಿಕ್ಷಣ ಅಭಿಯಾನದಡಿ ಈ ವರ್ಷ 29.82 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ 14.88 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉದ್ದೇಶಿಸಿದೆ.ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನದ ಕಳೆದ ಸಾಲಿನ ಪ್ರಗತಿ ಪರಿಶೀಲನೆ, ಈ ವರ್ಷದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿಯ ಸಭೆಯು ನಗರದ ಶಿಕ್ಷಕರ ಸದನದಲ್ಲಿ ಇದೇ 7ರಂದು ನಡೆಯಲಿದೆ.ಗ್ರಾಮೀಣ ಶಾಲೆಗಳ ಮೂಲಸೌಕರ್ಯ ವೃದ್ಧಿ, ಆಡಳಿತಾತ್ಮಕ ವೆಚ್ಚ, ಶಿಕ್ಷಕರ ವೇತನ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅಭಿಯಾನದಲ್ಲಿ ಈ ಬಾರಿ 23 ಕೋಟಿ ರೂಪಾಯಿ ಮಂಜೂರು ಮಾಡಬೇಕು ಎಂದು ಗ್ರಾಮಾಂತರ ಉಪನಿರ್ದೇಶಕರ ಕಚೇರಿಯ ಅಧಿಕಾರಿಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

 

ಪ್ರಾಥಮಿಕ ಶಾಲೆಗಳಲ್ಲಿ ಎಂಟನೇ ತರಗತಿ ಆರಂಭವಾಗುತ್ತಿರುವುದರಿಂದ ಮೂಲ ಸೌಕರ್ಯ ಕಾಮಗಾರಿಗೆಂದು ಹೆಚ್ಚುವರಿಯಾಗಿ ಆರು ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಶೌಚಾಲಯ, ಆವರಣ ಗೋಡೆಗಳ ನಿರ್ಮಾಣಕ್ಕೆ ಈ ಮೊತ್ತ ಬಳಸುವಂತೆ ಸೂಚಿಸಲಾಗಿದೆ. 31 ಪ್ರಾಥಮಿಕ ಶಾಲೆಗಳಲ್ಲಿ ಎಂಟನೇ ತರಗತಿ ಆರಂಭಗೊಳ್ಳುತ್ತಿರುವ ಕಾರಣದಿಂದ 65 ಹೆಚ್ಚುವರಿ ಕೊಠಡಿಗಳ ನಿರ್ಮಿಸಲು ಹಾಗೂ 90 ಶಾಲೆಗಳಲ್ಲಿ ಆವರಣ ಗೋಡೆಗಳ ಕಟ್ಟಲು ಯೋಜಿಸಲಾಗಿದೆ. ವಾರ್ಷಿಕ ಕ್ರಿಯಾಯೋಜನೆಯಲ್ಲಿ ಶಿಕ್ಷಕರ ವೇತನಕ್ಕೆ 4.14 ಕೋಟಿ ರೂಪಾಯಿ, ನಿರ್ವಹಣಾ ಅನುದಾನಕ್ಕೆ 1.16 ಕೋಟಿ ರೂಪಾಯಿ, ಆಡಳಿತಾತ್ಮಕ ವೆಚ್ಚಕ್ಕೆ 1.67 ಕೋಟಿ ರೂಪಾಯಿ, ಶಿಕ್ಷಕರ ತರಬೇತಿಗೆ 1.36 ಕೋಟಿ ರೂಪಾಯಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು 18 ಲಕ್ಷ ರೂಪಾಯಿ ಮೀಸಲಿರಿಸಲಾಗಿದೆ.ಶೇ 98 ಪ್ರಗತಿ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅಭಿಯಾನದಲ್ಲಿ ಶೇ 98 ಪ್ರಗತಿ ಆಗಿತ್ತು. 2011-12ನೇ ಸಾಲಿನಲ್ಲಿ ಜಿಲ್ಲೆಗೆ 13.68 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 13.43 ಕೋಟಿ ರೂಪಾಯಿಯನ್ನು ಬಳಕೆ ಮಾಡಲಾಗಿದೆ.50 ಹೆಚ್ಚುವರಿ ಕೊಠಡಿಗಳು, 72 ಹೆಣ್ಣು ಮಕ್ಕಳ ಶೌಚಾಲಯ, 73 ಸಾಮಾನ್ಯ ಶೌಚಾಲಯ, 102 ಕಡೆ ಕುಡಿಯುವ ನೀರಿನ ವ್ಯವಸ್ಥೆ, 20 ಕಡೆ ವಿದ್ಯುತ್ ಸೌಕರ್ಯ, ವಿಶೇಷ ಅಗತ್ಯವುಳ್ಳ 81 ಮಕ್ಕಳಿಗೆ ಸಲಕರಣೆಗಳನ್ನು ನೀಡಲಾಗಿದೆ. ಉಳಿದ ಅನುದಾನವನ್ನು ಶಿಕ್ಷಕರ ವೇತನ, ತರಬೇತಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ ಬಳಸಲಾಗಿದೆ.105 ಮಕ್ಕಳಿಗೆ ಪ್ರಯಾಣ ಭತ್ಯೆ: `ಜಿಲ್ಲೆಯಲ್ಲಿ ಐದಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ 20 ಸರ್ಕಾರಿ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ಕಳೆದ ವರ್ಷ ವಿಲೀನಗೊಳಿಸಲಾಗಿತ್ತು. ವಿಲೀನಗೊಂಡ ಪಕ್ಕದ ಶಾಲೆ ಒಂದು ಕಿ.ಮೀ.ಗಿಂತ ದೂರ ಇದ್ದರೆ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ತಲಾ 300 ರೂಪಾಯಿ ಸಾರಿಗೆ ಭತ್ಯೆ ನೀಡಲು ಇಲಾಖೆ ತೀರ್ಮಾನಿಸಿತ್ತು.

 

ಇದೀಗ ಜಿಲ್ಲೆಯ 105 ಮಕ್ಕಳು ಪ್ರಯಾಣ ಭತ್ಯೆ ಪಡೆಯುತ್ತಿದ್ದು, ಇದಕ್ಕೆ ತಿಂಗಳಿಗೆ 3.15 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ವಿ. ವೆಂಕಟೇಶಪ್ಪ `ಪ್ರಜಾವಾಣಿ~ಗೆ ಶುಕ್ರವಾರ ತಿಳಿಸಿದರು.`ಶಾಲೆಯಿಂದ ಹೊರಗುಳಿದ 343 ಮಕ್ಕಳು~

ರಾಜಧಾನಿಯ ಪಕ್ಕದಲ್ಲೇ ಇದ್ದರೂ ಗ್ರಾಮಾಂತರ ಜಿಲ್ಲೆಯಲ್ಲಿ 343 ಚಿಣ್ಣರು ಶಾಲೆಯಿಂದ ದೂರ ಉಳಿದಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಇಲಾಖೆಯು ಆಂದೋಲನ ಹಮ್ಮಿಕೊಂಡಿದೆ.ಜಿಲ್ಲೆಯಲ್ಲಿ ಆರರಿಂದ 16 ವರ್ಷದ 1.21 ಲಕ್ಷ ಮಕ್ಕಳಿದ್ದು, ಈ ಪೈಕಿ 1.18 ಲಕ್ಷ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಸುಮಾರು ಮೂರು ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಸಾಧ್ಯತೆ ಇದೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಶಿಕ್ಷಣ ಇಲಾಖೆ ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಿಂದ 343 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry