ಗ್ರಾಮಾಂತರ ಪ್ರದೇಶಕ್ಕೆ ಆದ್ಯತೆ ನೀಡಿ

7

ಗ್ರಾಮಾಂತರ ಪ್ರದೇಶಕ್ಕೆ ಆದ್ಯತೆ ನೀಡಿ

Published:
Updated:

ವಿರಾಜಪೇಟೆ: ದಂತ ವೈದ್ಯಕೀಯ ಚಿಕಿತ್ಸೆ ನಗರ ಪ್ರದೇಶಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಗ್ರಾಮಾಂತರದಲ್ಲಿ ದಂತ ಚಿಕಿತ್ಸೆಯ ಸೌಲಭ್ಯ ಹಾಗೂ ಬೆಳವಣಿಗೆ ಕುಂಠಿತಗೊಂಡಿದೆ. ದಂತ ವೈದ್ಯಕೀಯ ಸೇವೆಯಲ್ಲಿ ಗ್ರಾಮಾಂತರ ಪ್ರದೇಶಕ್ಕೂ ಆದ್ಯತೆ ನೀಡಬೇಕು ಎಂದು ಆಲ್ ಇಂಡಿಯಾ ಡೆಂಟಲ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಡಿಬೆಂದು ಮಜುಮ್‌ದಾರ್ ಸಲಹೆ ನೀಡಿದರು.ಅಖಿಲ ಭಾರತ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಮುನ್ನೆಚ್ಚರಿಕೆ ಘಟಕ ಸಂಸ್ಥೆ (ಇಂಡಿಯನ್ ಸೊಸೈಟಿ ಆಫ್ ಪೆಡೊಡೊಂಟಿಕ್ಸ್ ಅಂಡ್ ಪ್ರಿವೆಂಟಿವ್ ಡೆಂಟಿಸ್ಟ್ರಿ) ವತಿಯಿಂದ ಮಗ್ಗುಲದ ಕೊಡಗು ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ದಂತ ಚಿಕಿತ್ಸಾ ತಜ್ಞರ ಹಾಗೂ ಸ್ನಾತಕೊತ್ತರ ಪದವೀಧರರ ತರಬೇತಿ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿ ಆಯ್ದ ಗ್ರಾಮಾಂತರ ಪ್ರದೇಶದಲ್ಲಿ ದಂತ ವಿದ್ಯಾಲಯಗಳ ಸ್ಥಾಪನೆಯಾಗಬೇಕು. ವಿದ್ಯಾರ್ಥಿಗಳಿಗೆ ಸೌಲಭ್ಯದೊಂದಿಗೆ ತರಬೇತಿ ದೊರೆಯಬೇಕು ಎಂದರು. ದಂತ ವೈದ್ಯ ಪದವೀಧರರು ನಿರುದ್ಯೋಗಿಗಳಾಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಗಾ ವಹಿಸಬೇಕು. ಗ್ರಾಮಗಳ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು ಎಂದು ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ದಂತ ಕೌನ್ಸಿಲ್‌ನಿಂದ ಮನವಿ ಸಲ್ಲಿಸಿದ್ದು, ಸ್ನಾತಕೊತ್ತರ ಪದವೀಧರರು ಅಧಿವೇಶನದಲ್ಲಿ ಭಾಗಿಯಾಗಿ ತರಬೇತಿ, ಅಗತ್ಯ ಮಾಹಿತಿಗಳನ್ನು ಪಡಯಬೇಕು.

 

ದಂತ ವೈದ್ಯಕೀಯ ಉದ್ಯೋಗಕ್ಕಾಗಿ ಪದವಿಯಲ್ಲ. ಸಮಾಜದ ಪ್ರತಿಷ್ಠೆಯ ಪದವಿ. ಇದರಿಂದ ದಂತ ತಜ್ಞರಾಗಿಯೂ ಸಮಾಜ ಸೇವೆ ಸಲ್ಲಿಸಬಹುದು ಎಂದರು. ಅಖಿಲ ಭಾರತ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಮುನ್ನೆಚ್ಚರಿಕೆ ಘಟಕ ಸಂಸ್ಥೆಯ ಅಧ್ಯಕ್ಷೆ ಅಮಿತಾ ಹೆಗ್ಗಡೆ ಮಾತನಾಡಿ ದಂತ ವೈದ್ಯಕೀಯ ವಿಭಾಗದಲ್ಲಿ ಮಕ್ಕಳ ದಂತ ರೋಗದ ಲಕ್ಷಣಗಳು, ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಾಯೋಗಿಕ ತರಬೇತಿ ಪಡೆಯುವುದು.ಸ್ನಾತಕೊತ್ತರ ಪದವೀಧರರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗುವುದರಿಂದ ದಂತ ರೋಗ ಚಿಕಿತ್ಸೆಯ ಸಂಶೋಧನಾತ್ಮಕ ವಿಷಯಗಳನ್ನು ಅರಿತು ಉತ್ತಮ ಸೇವೆ ಸಲ್ಲಿಸಬೇಕು ಎಂಬುದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.ದಂತ ತಜ್ಞರಾದ ಡಾ.ನಂದಲಾಲ್, ಡಾ.ಸುಬ್ಬಾರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಸಿಕ್ವೇರಾ ಮತ್ತಿತರು ಉಪಸ್ಥಿತರಿದ್ದರು. ಡಾ.ವಿರೇಂದ್ರ ಗೋಯೆಲ್ ಅಧಿವೇಶನ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕೊಡಗು ದಂತ ಮಹಾ ವಿದ್ಯಾಲಯದ ಅಧ್ಯಕ್ಷ ಕೆ.ಕೆ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.ಅಧಿವೇಶನದಲ್ಲಿ 13ಮಂದಿ ದೇಶ ವಿದೇಶಗಳ ದಂತ ತಜ್ಞರು, 80ಮಂದಿ ಹಿರಿಯ ದಂತ ವೈದ್ಯರು, 400 ಮಂದಿ ಸ್ನಾತಕೊತ್ತರ ದಂತ ಪದವೀಧರರು ಭಾಗವಹಿಸಿದ್ದರು. ಅಧಿವೇಶನ ಸಮಿತಿಯ ಅಧ್ಯಕ್ಷೆ ಡಾ.ಶಾಂತಲಾ ಸ್ವಾಗತಿಸಿದರು. ಕಾರ್ಯದರ್ಶಿ ಟಿ.ಪಿ.ಚಂದ್ರು ವಂದಿಸಿದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry