ಸೋಮವಾರ, ಮೇ 25, 2020
27 °C

ಗ್ರಾಮಾಭಿವೃದ್ಧಿಗೆ ಎತ್ತಿನಗಾಡಿ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರಾಭಿವೃದ್ಧಿ ಹೋರಾಟ ಸಮಿತಿ, ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಗ್ರಾಮಾಭಿವೃದ್ಧಿಗಾಗಿ ಜನ ಜಾಗೃತಿಯ ಎತ್ತಿನಗಾಡಿ ಯಾತ್ರೆಯನ್ನು ಜ. 17ರಿಂದ 22ರವರೆಗೆ ಹಮ್ಮಿಕೊಂಡಿದೆ ಎಂದು ಜಿ.ಪಂ. ಮಾಜಿ ಸದಸ್ಯ ಕೆ. ಅರುಣ್‌ಪ್ರಸಾದ್ ತಿಳಿಸಿದರು.ಗ್ರಾಮಗಳ ಅಭಿವೃದ್ಧಿಗೆ ಬರುವ ಹಣದ ವಿನಿಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎತ್ತಿನಗಾಡಿ ಯಾತ್ರೆ ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.17ರಂದು ಬೆಳಿಗ್ಗೆ ಆನಂದಪುರಂನ ಮುರುಘ ರಾಜೇಂದ್ರಸ್ವಾಮಿ ಮಠದಿಂದ ಆರಂಭವಾಗುವ ಯಾತ್ರೆಯನ್ನು ಕಾಗೋಡು ಸತ್ಯಾಗ್ರಹದ ನೇತಾರ ಎಚ್. ಗಣಪತಿಯಪ್ಪ ಉದ್ಘಾಟಿಸುವರು. 17ರಂದು ಆಚಾರಪುರ, ಯಡೇಹಳ್ಳಿ, ಆನಂದಪುರಂ, ಗೌತಮಪುರ, ತ್ಯಾಗರ್ತಿ, ಹಿರೇಬಿಲಗುಂಜಿ, ವೀರಾಮಠ ಮಠದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು.18ರಂದು ಅಡ್ಡೇರಿ, ಕಾಸ್ಪಾಡಿ, ಉಳ್ಳೂರು, ಸಾಗರ ಪೇಟೆ, ಯಡ ಜಿಗಳೆಮನೆ, ವರದಳ್ಳಿ ಶ್ರೀಧರಾಶ್ರಮದಲ್ಲಿ ವಾಸ್ತವ್ಯ. 19ರಂದು ಆವಿನಹಳ್ಳಿ, ಹುಲಿದೇವರ ಬನ, ಹೊಳೆಬಾಗಿಲು, ಸಿಗಂದೂರು ದೇವಾಲಯದಲ್ಲಿ ವಾಸ್ತವ್ಯ. 20ರಂದು ತುಮರಿ, ಬ್ಯಾಕೋಡು, ಕಬ್ಬದೂರು, ಹರೇಕೃಷ್ಣ ಆಶ್ರಮದಲ್ಲಿ ವಾಸ್ತವ್ಯ. 21ರಂದು ನಿಟ್ಟೂರು, ಸಂಪೆಕಟ್ಟೆ, ನಗರ, ಕಾರಣಗಿರಿ, ಜಯ ನಗರ, ರಾಮಚಂದ್ರಪುರದ ಮಠದಲ್ಲಿ ವಾಸ್ತವ್ಯ ಹೂಡಲಾಗುವುದು ಎಂದರು.22ರಂದು ಹೊಸನಗರ, ಕೋಡೂರು, ಜೇನಿ ಹಾಗೂ ರಿಪ್ಪನ್ ಪೇಟೆಯಲ್ಲಿ ಅಂತಿಮ ಗೊಳ್ಳುವುದು ಎಂದು ಹೇಳಿದರು.ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಭೀಮನೇರಿ ಶಿವಪ್ಪ, ತೀ.ನಾ. ಶ್ರೀನಿವಾಸ್, ಹೋರಾಟಗಾರ ಟಿ.ಆರ್. ಕೃಷ್ಣಪ್ಪ, ಬಿ.ಪಿ. ರಾಮಚಂದ್ರ ಮತ್ತಿತರರು ಪಾಲ್ಗೊಳ್ಳುವರು ಎಂದರು.ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಈ ವೇದಿಕೆ ರೂಪುಗೊಂಡಿದೆ. ಕಾಂಗ್ರೆಸ್‌ನಲ್ಲಿ ತೀ.ನಾ. ಶ್ರೀನಿವಾಸ್ ಅವರಂತಹ ಹೋರಾಟಗಾರರಿಗೆ ಬೆಲೆ ಇಲ್ಲ. ಕಾಗೋಡು ತಿಮ್ಮಪ್ಪ ಸ್ವಜಾತಿ ಯವರಿಗೆ ಮಣೆ ಹಾಕುತ್ತಿದ್ದಾರೆ. ಹಿಂದೆ ಪರಸ್ಪರ ಟೀಕಿಸಿಕೊಳ್ಳುತ್ತಿದ್ದ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಈಗ ಒಂದಾಗಿದ್ದಾರೆ. ಇದ್ಯಾವ ರಾಜಕೀಯ ಎಂದು ಪ್ರಶ್ನಿಸಿದರು.ಮುಂಬರುವ ಸಾಗರದ ಚುನಾವಣೆಗೆ ಇದು ಸಿದ್ಧತೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ಯಾಕಾಗಬಾರದು’ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.