ಗ್ರಾಮಾಭಿವೃದ್ಧಿಗೆ ಪ್ರಶಸ್ತಿ ಕಿರೀಟ

7

ಗ್ರಾಮಾಭಿವೃದ್ಧಿಗೆ ಪ್ರಶಸ್ತಿ ಕಿರೀಟ

Published:
Updated:
ಗ್ರಾಮಾಭಿವೃದ್ಧಿಗೆ ಪ್ರಶಸ್ತಿ ಕಿರೀಟ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿ ಪೆರು, ಇಂಡೋನೇಷ್ಯ, ಕಾಂಬೋಡಿಯಾ, ಆಫ್ರಿಕಾ ಮತ್ತು ಆಫ್ಘಾನಿಸ್ತಾನದ ಎಂಟು ಸಂಸ್ಥೆಗಳಿಗೆ ಈ ಸಲದ ಪ್ರತಿಷ್ಠಿತ ಆಶ್ಡನ್ ಪ್ರಶಸ್ತಿ ದೊರೆತಿದೆ. `ಹಸಿರು ಆಸ್ಕರ್~ ಎಂದೇ ಹೇಳಲಾಗುವ ಈ ಪ್ರಶಸ್ತಿಯನ್ನು ಸ್ಥಳೀಯ ಸುಸ್ಥಿರ ಇಂಧನ ಬಳಕೆ ಉತ್ತೇಜಿಸುವ ಸಂಸ್ಥೆಗಳಿಗೆ ನೀಡಲಾಗುತ್ತದೆ.ಪ್ರಸಿದ್ಧ ಯಾತ್ರಾಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಎಂಟು ಶತಮಾನಗಳ ಭವ್ಯ ಇತಿಹಾಸ ಇದೆ. ಸರ್ವಧರ್ಮ ಸಮನ್ವಯ ಕೇಂದ್ರವೆಂದೇ ಇದು ಹೆಸರುವಾಸಿ. ಅನ್ನದಾನ, ವಿದ್ಯಾದಾನ, ಅಭಯ ದಾನ ಮತ್ತು ಔಷಧಿ ದಾನ ಇಲ್ಲಿನ ನಿತ್ಯೋತ್ಸವಗಳು. ನ್ಯಾಯ ದಾನ, ಹೊಯಿಲು ಪದ್ಧತಿ, ಆಣೆ ಮಾತು ತೀರ್ಮಾನ ಇಲ್ಲಿನ ವಿಶಿಷ್ಟ ಸಂಪ್ರದಾಯಗಳು. ಈಗಿನ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು `ಹೆಗ್ಗಡೆ~ ಪರಂಪರೆಯಲ್ಲಿ ಇಪ್ಪತ್ತೊಂದನೆಯವರು.1982 ರಲ್ಲಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕದ ಸವಿ ನೆನಪಿಗಾಗಿ ಡಾ. ಹೆಗ್ಗಡೆಯವರು `ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ~ (ಎಸ್‌ಕೆಡಿಆರ್‌ಡಿಪಿ) ಆರಂಭಿಸಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು.ತಮ್ಮ ಸುತ್ತಲಿನ ನೆಲ, ಜಲ ಮತ್ತು ಪ್ರಾಕೃತಿಕ ಸಂಪತ್ತಿನ ಸದುಪಯೋಗ ಮಾಡಿ ಸ್ವಾವಲಂಬಿ ಜೀವನ ನಡೆಸಲು ರೈತರು, ಗ್ರಾಮೀಣ ಜನರಿಗೆ ನಿರಂತರ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವುದೇ ಯೋಜನೆಯ ಉದ್ದೇಶ. ಈ ಯೋಜನೆ ಇಂದು ರಾಜ್ಯದ 16 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಯಶಸ್ಸನ್ನೂ ಕಂಡಿದೆ. ಸಹಸ್ರಾರು ಜನರ ಬಾಳಿನಲ್ಲಿ ಬೆಳಕು, ಹರ್ಷ ತಂದಿದೆ.ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಸ್ಥಾಪನೆಯ ಮೌನಕ್ರಾಂತಿಯನ್ನು ಸದ್ದು ಗದ್ದಲವಿಲ್ಲದೆ ನಿರಂತರವಾಗಿ ನಡೆಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖ್ಯಾತಿ ನಾಡು, ದೇಶದ ಗಡಿ ದಾಟಿ ಸಾಗರದಾಚೆಗೂ ವಿಸ್ತರಿಸಿದೆ. ಅದಕ್ಕೆ ನಿದರ್ಶನ ಎಂಬಂತೆ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡ ಬ್ರಿಟನ್‌ನ ಪ್ರತಿಷ್ಠಿತ ಆಶ್ಡನ್ ಸಂಸ್ಥೆ 2012 ರ `ಆಶ್ಡನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ~ಗೆ ಆಯ್ಕೆಗೊಂಡಿದೆ. ನಾಳೆ (ಮೇ 30) ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಇಂಥ ಅಪರೂಪದ ಗೌರವವನ್ನು ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ಹಾಗೂ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ಸ್ವೀಕರಿಸಲಿದ್ದಾರೆ.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದುರ್ಬಲ ವರ್ಗದ ಕುಟುಂಬಗಳ ಇಂಧನ ಅಗತ್ಯಗಳಿಗೆ (ಅಡುಗೆ, ದೀಪ ಇತ್ಯಾದಿ ಅಗತ್ಯಗಳಿಗೆ) ನೆರವು ನೀಡುವ ಕಿರು ಆರ್ಥಿಕ ವ್ಯವಹಾರ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದೆ. ಯೋಜನೆ ಆಶ್ರಯದಲ್ಲಿ ಈ ವರೆಗೆ ಸ್ವ ಸಹಾಯ ಸಂಘಗಳ ಮೂಲಕ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಇಂಧನ ಸಾಲಗಳನ್ನು ನೀಡಲಾಗಿದೆ.ಕುಗ್ರಾಮಗಳ ವಿದ್ಯುತ್ ವಂಚಿತ ಕುಟುಂಬಗಳಿಗೆ ಸೋಲಾರ್ ದೀಪಗಳ ಪೂರೈಕೆ, ಕಿರು ಜಲವಿದ್ಯುತ್ ಯೋಜನೆಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಅಡುಗೆ ತಯಾರಿಗೆ ಗೋಬರ್ ಗ್ಯಾಸ್ ಬಳಕೆ, ಪರಿಸರ ಸಂರಕ್ಷಣೆ, ಗಿಡ - ಮರ ಬೆಳೆಸುವುದು, ಶಾಲಾ ವನ, ಹೂದೋಟ ನಿರ್ಮಾಣ, ಸೌರಶಕ್ತಿ ಬಳಕೆ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು, ಜಾಗೃತಿ ಮೂಡಿಸುತ್ತಿದೆ.ಜನರಲ್ಲಿ ಕಿರು ಆರ್ಥಿಕ ವ್ಯವಹಾರವನ್ನು ಉತ್ತೇಜಿಸುತ್ತ, ಜೀವನಾಧಾರ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡುತ್ತಿದೆ. ಫಲಾನುಭವಿಯ ವೈಯಕ್ತಿಯ ಆರ್ಥಿಕ ಪ್ರಗತಿ ಮತ್ತು ತನ್ಮೂಲಕ ಸಮುದಾಯ ಬಂಡವಾಳವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇದಕ್ಕೆಲ್ಲ ಮೂಲಾಧಾರ ಎಲ್ಲೆಡೆ ಹರಡಿಕೊಂಡ ಸ್ವಸಹಾಯ ಸಂಘಗಳ ಜಾಲ. ಬಡವರ ಬದುಕು ಹಸನು ಮಾಡುವ ಕಾರ್ಯದಲ್ಲಿ ಇವು ತೊಡಗಿಸಿಕೊಂಡಿವೆ.ಪ್ರಗತಿ ಬಂಧು ತಂಡ: ಐದರಿಂದ ಹತ್ತು ಸಣ್ಣ ರೈತರನ್ನು ಒಟ್ಟುಗೂಡಿಸಿ ಸ್ವ-ಸಹಾಯ ತಂಡಗಳನ್ನು `ಪ್ರಗತಿ ಬಂಧು~ ಎಂಬ ಹೆಸರಿನಲ್ಲಿ ರಚಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತರು ತಂಡದ ಸದಸ್ಯರಿಗೆ ಕೃಷಿ, ಹೈನುಗಾರಿಕೆ, ಬೇಸಾಯ ತಂತ್ರಜ್ಞಾನ, ನೈರ್ಮಲ್ಯ, ಬ್ಯಾಂಕ್ ವ್ಯವಹಾರಗಳ ಬಗ್ಗೆ ನಿರಂತರ ಮಾರ್ಗದರ್ಶನ ನೀಡುತ್ತಾರೆ.ಈ ವರೆಗೆ 1,48,442 ಸ್ವ ಸಹಾಯ ಸಂಘಗಳನ್ನು ರಚಿಸಿ 17,05,972 ಸದಸ್ಯರನ್ನು ಮಾಡಲಾಗಿದೆ. ಇದರಲ್ಲಿ 31,011 ಕೃಷಿಕರ ಸ್ವ ಸಹಾಯ ಸಂಘಗಳಿವೆ. ಈ ತಂಡಗಳು 45 ಕೋಟಿ ರೂಪಾಯಿ ಉಳಿತಾಯ ಮಾಡಿದ್ದು ತಮ್ಮಳಗೆ 347 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿವೆ. ಸಾಲ ನೂರಕ್ಕೆ ನೂರು ಮರುಪಾವತಿ ಆಗುತ್ತಿದೆ ಎನ್ನುವುದು ವಿಶೇಷ.ಇದರ ಹೊರತಾಗಿ ಅಗರಬತ್ತಿ, ರೆಕ್ಸಿನ್ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಉಪ್ಪಿನಕಾಯಿ, ಹಾಳೆತಟ್ಟೆ ತಯಾರಿಸಲು ಮಹಿಳೆಯರಿಗೆ ನೆರವು ನೀಡಿದ್ದು ಅವರಿಗೆ ಆರ್ಥಿಕ ಸ್ವಾವಲಂಬನೆ ದೊರೆತಿದೆ. ಯೋಜನೆಯ ಅಂಗಸಂಸ್ಥೆ `ಸಿರಿ~ ಮೂಲಕ ಗ್ರಾಮೀಣ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ.  ಮಹಿಳೆಯರ ಸಬಲೀಕರಣಕ್ಕಾಗಿ ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ನಡೆದಿದೆ. ಗೃಹ ಕಾರ್ಯ ನಿರ್ವಹಣೆ, ಸ್ವಚ್ಛತೆ, ಪೌಷ್ಟಿಕ ಆಹಾರ, ಕೈ ಕಸುಬು, ಕುಟುಂಬ ಯೋಜನೆ, ಸಣ್ಣ ಉಳಿತಾಯದ ಬಗ್ಗೆ ಮಹಿಳೆಯರಿಗೆ ನಿರಂತರ ಮಾಹಿತಿ - ಮಾರ್ಗದರ್ಶನ ನೀಡಲಾಗುತ್ತದೆ.ರೈತರು ವಾರದ ಶ್ರಮದಾನದಿಂದ ಮಾಡಿದ ಅಭಿವೃದ್ಧಿ ಕಾರ್ಯಗಳಂತೂ ಅನುಕರಣೀಯ. ಈ ಮೂಲಕ 8 ಲಕ್ಷ ಎಕರೆ ಪ್ರದೇಶದಲ್ಲಿ ಹೊಸ ತೋಟಗಳು ತಲೆಯೆತ್ತಿದ್ದು, 46,000 ಬಾವಿ ನಿರ್ಮಾಣ ಹಾಗೂ 13,376 ಜಲಾನಯನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಮಲ್ಲಿಗೆ, ಗುಲಾಬಿ, ಬಾಳೆ, ಮಾವು, ಗೇರು, ತೆಂಗು, ರಬ್ಬರ್ ಕೃಷಿಗೂ ಪ್ರೋತ್ಸಾಹ ದೊರೆತಿದೆ.

 

ವರ್ಷಕ್ಕೊಮ್ಮೆ ರಾಜ್ಯಮಟ್ಟದ ಕೃಷಿ ಮೇಳ ಏರ್ಪಡಿಸಿ ರೈತರಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.ಗ್ರಾಮ ಕಲ್ಯಾಣ ಯೋಜನೆಯಡಿ ಸಮುದಾಯ ಭವನ ನಿರ್ಮಾಣ, ಗ್ರಾಮೀಣ ಸಂಪರ್ಕ ರಸ್ತೆ, ಸಾರ್ವಜನಿಕ ಶೌಚಾಲಯ, ಪಶು ಆಸ್ಪತ್ರೆ ಕಟ್ಟಡ, ಅಂಗನವಾಡಿ ಕಟ್ಟಡ, ಕಿರು ಜಲವಿದ್ಯುತ್ ಯೋಜನೆಗೆ ಪೂರಕ ನೆರವು ನೀಡಲಾಗುತ್ತದೆ. ಈ ವರೆಗೆ 51.46 ಕೋಟಿ ರೂ ಮೌಲ್ಯದ 3617 ಕಾಮಗಾರಿಗಳಿಗೆ ಯೋಜನೆಯ ಮೂಲಕ 7.08 ಕೋಟಿ ರೂ. ಆರ್ಥಿಕ ಸಹಾಯ ದೊರೆತಿದೆ.ಪ್ರಶಸ್ತಿಯ ಮೂಲ ಉದ್ದೇಶ 

*  ಆಧುನಿಕ ಶಕ್ತಿಯ ಮೂಲಗಳ ಬಳಕೆ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು.*  ಇಂಧನಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು. ಈ ಮೂಲಕ ಅವುಗಳ ಬಳಕೆಯಲ್ಲಿ ಹೆಚ್ಚಿನ ದಕ್ಷತೆ ಸಾಧಿಸುವುದು.*  ವಿಶ್ವ ಮಟ್ಟದಲ್ಲಿ  ನವೀಕರಿಸಬಹುದಾದ ಶಕ್ತಿಯನ್ನು ದ್ವಿಗುಣಗೊಳಿಸುವುದು.
2030 ರೊಳಗೆ ಎಲ್ಲರಿಗೂ ಆಧುನಿಕ ಇಂಧನ ಮೂಲಗಳನ್ನು ಒದಗಿಸುವ ವಿಶ್ವಸಂಸ್ಥೆಯ ಗುರಿಯನ್ನು ತಲುಪಬೇಕಾದರೆ ಬಡವರಿಗೆ ಅಗತ್ಯ ಹಣಕಾಸಿನ ಬೆಂಬಲ ನೀಡಬೇಕು. ಈ ದಿಸೆಯಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಆಶ್ಡನ್ ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಸಾರಾ ಬಟ್ಲರ್ ಪ್ಲಾಸ್ ಅವರ ಶ್ಲಾಘನೆ.ಪ್ರಪಂಚದಾದ್ಯಂತ 140 ಕೋಟಿ ಜನ ಆಧುನಿಕ ಇಂಧನವನ್ನು ಮತ್ತು 300 ಕೋಟಿ ಜನರು ಪಾರಂಪರಿಕವಾಗಿ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಗೆ ಕಾರಣವಾಗುವ ಇಂಧನಗಳನ್ನು ಬಳಸುತ್ತಿದ್ದಾರೆ. ಇವರಿಗೆ ಆರ್ಥಿಕ ನೆರವು ನೀಡಿ ಪರಿಸರ ಸ್ನೇಹಿ ಮತ್ತು ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯತ್ನ  ಪರಿಣಾಮಕಾರಿ ಹಾಗೂ ಅನುಕರಣೀಯವಾಗಿದೆ ಎಂದು ಅವರು ಹೇಳುತ್ತಾರೆ.ಯೋಜನೆ ಕಾರ್ಯಾಲಯದ ವಿಳಾಸ: ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ, ಧರ್ಮಶ್ರೀ, ಧರ್ಮಸ್ಥಳ - 574 216 (ಮಾಹಿತಿಗೆ:  08256 277 215, 93148 89175. ಇ ಮೇಲ್: skdrdp@skdrdpindia.org

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry