ಸೋಮವಾರ, ಮೇ 23, 2022
21 °C

ಗ್ರಾಮಾಭಿವೃದ್ಧಿಯತ್ತ ಗಮನಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮಾಭಿವೃದ್ಧಿಯತ್ತ ಗಮನಹರಿಸಿ

ಕನಕಪುರ: `ಚುನಾವಣೆಗಳು, ರಾಜಕೀಯ ಪಕ್ಷಗಳು ಹಳ್ಳಿಗಳ ಸಮುದಾಯದ ಒಗ್ಗಟ್ಟನ್ನು ಒಡೆದರೆ, ಗುಂಪುಗಾರಿಕೆಯಿಂದ ಗ್ರಾಮೀಣಾಭಿವೃದ್ದಿಗೆ ಹಿನ್ನೆಡೆಯಾಗಿದೆ~ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕಬ್ಬಾಳೇಗೌಡ ಹೇಳಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ಸಂಘಟನೆಯ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಪಕ್ಷಗಳ ಹೆಸರಿನಲ್ಲಿ, ಚುನಾವಣೆ ಸಂದರ್ಭದಲ್ಲಿ ಅವಿಭಕ್ತ ಕುಟುಂಬಗಳಂತಿದ್ದ ಗ್ರಾಮಗಳು ಎರಡು-ಮೂರು ಗುಂಪುಗಳಾಗುತ್ತವೆ. ಒಂದೆರಡು ದಿನಗಳಲ್ಲಿ ಚುನಾವಣೆಯು ಮುಗಿಯುತ್ತದೆ. ಆದರೆ ಆಗ ಹುಟ್ಟುವ ಗುಂಪುಗಾರಿಕೆ ದ್ವೇಷ-ಅಸೂಯೆಗಳಿಗೆ ತಿರುಗಿ ಇಡೀ ಊರನ್ನೆ ಸುಡುತ್ತದೆ. ಆದ್ದರಿಂದ ಅಂಥ ಕಲಹಗಳಿಗೆ ಅವಕಾಶ ನೀಡದೇ, ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ಯುವ ಸಮಾಜ ಮಾಧ್ಯಮಗಳಲ್ಲಿನ ಜಾಹಿರಾತು, ಇತ್ಯಾದಿಗಳಿಂದ ಪ್ರಭಾವಿತರಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಯುವಶಕ್ತಿ ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದಲೇ ರಾಷ್ಟ್ರ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿಲ್ಲವೆಂದು ದೂರಿದರು. 

ಕರವೇ ನಾಡು-ನುಡಿಯ ಹೋರಾಟದ ಜೊತೆಗೆ ಗ್ರಾಮದಲ್ಲಿನ ಸಮಸ್ಯೆ, ಕಾನೂನು ಶಿಬಿರ, ಆರೋಗ್ಯ ಶಿಬಿರದಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಗ್ರಾಮಗಳಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸುತ್ತಿದೆ. ಸಂಘಟನೆಗೆ ಸೇರಿರುವ ಯುವಕರು ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿ ಗ್ರಾಮದ ಅಭಿವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು. 

ಗ್ರಾಮ ಶಾಖೆಯ ನೂತನ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಭೋದಿಸಿದ ಜಿಲ್ಲಾ ಸಂಘಟನಾ ಕಾರ್ದರ್ಶಿ ಸೋಮರಾಜು, ಕನ್ನಡ ನಾಡಿನಲ್ಲಿ ಕನ್ನಡವೇ ಸತ್ಯ, ಧರ್ಮ, ದೇವರು ಎಂಬ ಧ್ಯೇಯ ವಾಕ್ಯದೊಡನೆ ಕರ್ನಾಟಕ ರಕ್ಷಣಾ ವೇದಿಕೆ ಕೆಲಸ ಮಾಡುತ್ತಿದೆ. ಈ ನಾಡಿನಲ್ಲಿನ ಉದ್ಯೋಗ, ಸಂಪತ್ತು, ಅಧಿಕಾರ ಈ ಮಣ್ಣಿನ ಕನ್ನಡಿಗರಿಗೆ ಸಿಗಬೇಕು, ಆ ನಿಟ್ಟಿನಲ್ಲಿ ಸಂಘಟನೆಯ ಕಾರ್ಯಕರ್ತ ಮುಖಂಡರು ಜವಬ್ದಾರಿಯನ್ನು ನಿರ್ವಹಿಸುವಂತೆ  ಕರೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಎಸ್.ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸ್ಟುಡಿಯೋ ಚಂದ್ರು, ತಾಲ್ಲೂಕು ಉಪಾಧ್ಯಕ್ಷ ಮರಳವಾಡಿ ಚಂದ್ರು, ಜಿಲ್ಲಾ ಸಂಚಾಲಕ ಜಗದೀಶ್, ರವಿ, ಮರಳವಾಡಿ ಹೋಬಳಿ ಮುಖಂಡ ಶಿವಪ್ಪ, ಉಯ್ಯಂಬಳ್ಳಿ ಹೋಬಳಿ ಗೌರವಾಧ್ಯಕ್ಷ ಚಂದ್ರು, ಖಜಾಂಚಿ ಭದ್ರೇಶ್, ಗ್ರಾಮ ಶಾಖೆಯ ಅಧ್ಯಕ್ಷ ಮಹದೇವಯ್ಯ, ಸಿದ್ದರಾಜು, ಬಸವರಾಜು, ಕಾಂತರಾಜು, ಸಂದೀಪ್‌ಕುಮಾರ್, ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.