`ಗ್ರಾಮೀಣರತ್ತ ವೈದ್ಯರ ಕಾಳಜಿ ಅಗತ್ಯ'

7
ಯೇನೆಪೋಯ ವಿಶ್ವವಿದ್ಯಾಲಯ ಘಟಿಕೋತ್ಸವ

`ಗ್ರಾಮೀಣರತ್ತ ವೈದ್ಯರ ಕಾಳಜಿ ಅಗತ್ಯ'

Published:
Updated:
`ಗ್ರಾಮೀಣರತ್ತ ವೈದ್ಯರ ಕಾಳಜಿ ಅಗತ್ಯ'

ಉಳ್ಳಾಲ: `ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯೇನೆಪೋಯ ವಿಶ್ವವಿದ್ಯಾನಿಲಯ ಹಳ್ಳಿಗಳನ್ನು ದತ್ತು ಪಡೆದುಕೊಂಡು ಬಡ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಕಾರ‌್ಯ ಶ್ಲಾಘನೀಯ' ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಕೆ.ರೆಹಮಾನ್ ಖಾನ್ ಅಭಿಪ್ರಾಯಪಟ್ಟರು.ಬುಧವಾರ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಎನ್‌ಡ್ಯೂರೆನ್ಸ್ ಝೋನ್‌ನಲ್ಲಿ ಜರಗಿದ 2ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣವನ್ನು ಮಾಡಿದರು.`ದೇಶದ ವೈಜ್ಞಾನಿಕ ಹಾಗೂ ವೈದ್ಯಕೀಯ ವಿಭಾಗ ಮುಂಚೂಣಿಯಲ್ಲಿರುವುದರಿಂದ ದೇಶದ ಕೀರ್ತಿ ಹೆಚ್ಚಿದೆ. ಆದರೆ ಅನೇಕ ಗ್ರಾಮೀಣ ಪ್ರದೇಶಗಳಿಗೆ  ಇದರ ಲಾಭವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವೈದ್ಯರು ಗ್ರಾಮೀಣ ಜನರ ಮೇಲೆ ಹೆಚ್ಚಿನ ಕಾಳಜಿ ವಹಿಸಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಬೆಳೆದು ನಿಂತ ಶಾಪಿಂಗ್ ಮಾಲ್‌ಗಳಿಂದ ನಾಗರಿಕ ಸಮಾಜವನ್ನು ಬೆಳೆಸಲು ಸಾಧ್ಯವಿಲ್ಲ. ಬದಲಾಗಿ ಉತ್ತಮ ವಿದ್ಯೆಯನ್ನು ನೀಡುವ ವಿಶ್ವವಿದ್ಯಾನಿಲಯಗಳು ಬೆಳೆದು ನಿಂತರೆ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯ ಎಂದರು.ಯೇನೆಪೋಯ ವಿ.ವಿ. ಕುಲಾಧಿಪತಿ ವೈ.ಅಬ್ದುಲ್ಲ ಕುಂಞಿ ಅವರು ಎಂ.ಡಿ ಮತ್ತು ಎಂ.ಎಸ್.ನ 40, ಎಂಡಿಎಸ್‌ನ 40, ಎಂಎಸ್ಸಿ ನರ್ಸಿಂಗ್‌ನ 17, ಎಂಪಿಟಿಯ 2 ಹಾಗೂ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್‌ನ 22 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.ವಿದ್ಯೆಯಲ್ಲಿ ಹಿಂದುಳಿದ ಅಲ್ಪಸಂಖ್ಯಾತರು: ದೇಶದಲ್ಲಿ ಸುಮಾರು ಶೇ.14 ರಷ್ಟು ಮಂದಿ ಅಲ್ಪಸಂಖ್ಯಾತರು ಹಿಂದುಳಿದಿದ್ದಾರೆ. ಮುಸ್ಲಿಮರಲ್ಲಿ ಅನೇಕರು ಅವಿದ್ಯಾವಂತರು, ನಿರುದ್ಯೋಗಿಗಳು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳದೆ  ಹಿಂದುಳಿದಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ `ಸಾಚಾರ್ ಕಮಿಟಿ'  ನೀಡಿದಂತಹ ವರದಿ ಕಳವಳಕಾರಿ ಸಂಗತಿ.ಈ ನಿಟ್ಟಿನಲ್ಲಿ ಹಿಂದುಳಿದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಇವರ ಅಭಿವೃದ್ಧಿ ಸರ್ಕಾರದಿಂದ ಮಾತ್ರವಲ್ಲ ಖಾಸಗಿ ಸಂಸ್ಥೆಗಳಿಂದಲೂ ಆಗಬೇಕಿದೆ. ಅಲ್ಪಸಂಖ್ಯಾತ ಆಯೋಗ ಈಗಾಗಲೇ ಅವಿದ್ಯಾವಂತ ಮುಸ್ಲಿಮರಿಗೆಂದೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಸ್ಲಿಮರು ಇರುವ ಪ್ರದೇಶಗಳಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.ಯೇನೆಪೋಯ ವಿ.ವಿ. ಕುಲಸಚಿವ ಡಾ. ಜನಾರ್ದನ ಕೊಣಾಜೆ, ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಜಿಲಾನಿ ಅಬ್ದುಲ್ ಖಾದಿರಿ, ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮೂಸಬ್ಬ, ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಐ.ಸವದತ್ತಿ, ಕಣ್ಣೂರು ಹಾಗೂ ಕಲ್ಲಿಕೋಟೆ ವಿವಿ ವಿಶ್ರಾಂತ ಕುಲಪತಿ ಡಾ.ಅಬ್ದುಲ್ ರಹಿಮಾನ್, ಯೇನೆಪೋಯ ದಂತ ವಿದ್ಯಾಲಯದ ಪ್ರೊ.ಡಾ.ಗಣೇಶ್ ಶೆಣೈ ಪಂಚಮಾಲ್, ಯೇನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಾಂತ ಕುಮಾರಿ, ಯೇನೆಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಪದ್ಮಕುಮಾರ್, ಯೇನೆಪೋಯ ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಜಯರಾಜನ್, ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry